​ಕರ್ನಾಟಕದಲ್ಲಿ ದಲಿತರು: ಗ್ರಹಿಕೆ ಮತ್ತು ನಿರೀಕ್ಷೆಗಳು....

Update: 2017-05-15 18:20 GMT

‘‘ಕರ್ನಾಟಕದ ಸಮಗ್ರ ದಲಿತ ಚರಿತ್ರೆ’’ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಸಂಪಾದಿಸಿರುವ ಬೃಹತ್ ಸಂಶೋಧನಾತ್ಮಕ ಬರಹಗಳ ಸಂಕಲನವಾಗಿದೆ. 1900ರಿಂದ ಈವರೆಗಿನ ದಲಿತ ಚರಿತ್ರೆಯನ್ನು ಬಗೆಯುವ ಪ್ರಯತ್ನವನ್ನು ಈ ಕೃತಿ ಮಾಡಿದೆ. ಅಂದು ಇಂದಿನ ಕರ್ನಾಟಕದ ಭಾಗವೇ ಆಗಿದ್ದ ಮೈಸೂರು ಸಂಸ್ಥಾನ, ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳ ದಲಿತ ಪ್ರಜ್ಞಾ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಕರ್ನಾಟಕದ ದಲಿತ ಚರಿತ್ರೆಗೆ ಪ್ರೇರಣೆ ನೀಡಿದ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡಿನ ದಲಿತ ಚರಿತ್ರೆಯೂ ಈ ಕೃತಿಯಲ್ಲಿ ಮಹತ್ವದ ದಾಖಲೆಗಳೊಂದಿಗೆ ಉಲ್ಲೇಖಗೊಂಡಿದೆ.
ಈ ಬೃಹತ್ ಕೃತಿ ಎಂಟು ಭಾಗಗಳಾಗಿ ತೆರೆದುಕೊಳ್ಳುತ್ತದೆ. ಮೊದಲ ಭಾಗ ಮೈಸೂರು ಸಂಸ್ಥಾನದ ದಲಿತ ಚರಿತ್ರೆಯನ್ನು ಒಳಗೊಂಡಿದೆ. ಈ ಕಾಲಘಟ್ಟದಲ್ಲಿ ದಲಿತರ ಅಭಿವೃದ್ಧಿಗೆ ಪ್ರೇರಣೆಯಾದ ಘಟನೆಗಳ ವಿಶ್ಲೇಷಣೆ, ಬ್ರಾಹ್ಮಣೇತರ ಚಳವಳಿ, ಪಂಚಮರ ಆರ್. ಗೋಪಾಲಸ್ವಾಮಿ ಅವರ ಸಂವೇದನೆ, ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತರ ವಿವರ, ಆಧುನಿಕ ಮೈಸೂರು ಸಂಸ್ಥಾನದಲ್ಲಿ ಸಾಮಾಜಿಕ ಸುಧಾರಣಾ ಕಾನೂನುಗಳ ವಿವರಗಳು, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಲಿತರ ಸ್ಥಿತಿಗತಿಯನ್ನು ಈ ಭಾಗ ಒಳಗೊಂಡಿದ್ದು, ಬಹುತೇಕ ಲೇಖನಗಳನ್ನು ಚಿನ್ನಸ್ವಾಮಿ ಸೋಸಲೆಯವರೇ ಬರೆದಿದ್ದಾರೆ.
 ಭಾಗ ಎರಡರಲ್ಲಿ ಮುಂಬೈ ಕರ್ನಾಟಕದ ದಲಿತ ಚರಿತ್ರೆಯನ್ನು ಗುರುತಿಸಲಾಗಿದೆ. ಕನ್ನಡ-ಮರಾಠಿಯ ಮೊದಲ ದಲಿತರ ಲೇಖಕರ ಕುರಿತು ಸರಜೂ ಕಾಟ್ಕರ್ ಬರೆದಿದ್ದಾರೆ. ದೇವರಾಯ ಇಂಗಳೆ ಅವರ ಸಮಾಜಮುಖಿ ಹೋರಾಟಗಳ ಹೆಜ್ಜೆ ಗುರುತುಗಳನ್ನು ಡಾ. ಎಚ್. ಟಿ. ಪೋತೆ ಉಲ್ಲೇಖಿಸಿದ್ದಾರೆ. ಕುಮಾರಕಕ್ಕಯ್ಯ ಪೋಳ ಬಗ್ಗೆ ಡಾ. ಲಿಂಗಣ್ಣ ಗಾಣದಾಳ್ ಮತ್ತು ಡಾ. ಪೋತೆ ಅವರು ಬರೆದಿದ್ದಾರೆ. ವಿಠಲ್ ರಾಮ್ ಶಿಂಧೆ ಅವರ ಸಮಾಜಮುಖಿ ಕಾರ್ಯಗಳಲ್ಲಿ ದಲಿತ ಸಂವೇದನೆಯನ್ನು ಡಾ. ಲೀಲಾ ಬಿ. ಮುಂಬೈ ಗುರುತಿಸಿದ್ದಾರೆ. ಪದ್ಮಶ್ರೀ ಕಾಕಾ ಕಾರಖಾನೀಸ ಅವರ ಬಗ್ಗೆ ಡಾ. ಅಪ್ಪಗೆರೆ ಸೋಮಶೇಖರ್ ಬರೆದಿದ್ದಾರೆ. ಭಾಗ ಮೂರನ್ನು ಕರಾವಳಿ ಕರ್ನಾಟಕದ ದಲಿತ ಚರಿತ್ರೆಗೆ ಮೀಸಲಿರಿಸಲಾಗಿದೆ. ಕುದ್ಮಲ್ ರಂಗರಾವ್ ಬಗ್ಗೆ ಪಿ. ಕಮಲಾಕ್ಷ ಮತ್ತು ನಾರಾಯಣಗುರು ಕುರಿತು ಡಾ. ಅಪ್ಪಗೆರೆ ಅವರು ಬರೆದಿದ್ದಾರೆ.
ಭಾಗ ನಾಲ್ಕನ್ನು ಹೈದರಾಬಾದ್ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಬಿ. ಶ್ಯಾಮಸುಂದರ್ ಅವರ ದಲಿತ ಹೋರಾಟ, ಚಿಂತನೆ, ಗೋಪಿನಾಥ ಮಹಾರಾಜರ ಸಮಾಜಮುಖಿ ಕಾರ್ಯ ಮೊದಲಾದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಭಾಗ ಐದರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿರುವ ದಲಿತರ ಕುರಿತು ಚರ್ಚಿಸಲಾಗಿದೆ. ಮತಾಂತರದ ಸರಿತ್ಪುಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮತಾಂತರಗಳನ್ನು ಬೇರೆ ಬೇರೆ ದೃಷ್ಟಿಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ವಿವಿಧ ಲೇಖಕರು ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರು ದಲಿತರ ಸಮಸ್ಯೆಗಳ ನಿವಾರಣೆಗೆ ಎಷ್ಟು ಪ್ರಸ್ತುತ ಎನ್ನುವುದನ್ನೂ ಒಂದು ಲೇಖನ ಚರ್ಚಿಸುತ್ತದೆ. ಭಾಗ ಆರರಲ್ಲಿ ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ದಲಿತರ ಬದುಕು ಹೇಗೆ ಚಿತ್ರಿತವಾಗಿದೆ ಎನ್ನುವುದನ್ನು ಬೇರೆ ಬೇರೆ ಬರಹಗಳಲ್ಲಿ ವಿವರಿಸಲಾಗಿದೆ. ಕಾದಂಬರಿ, ಕಾವ್ಯ, ಕಥೆ, ನಾಟಕ, ಆತ್ಮಕಥೆ ಮೊದಲಾದ ಪ್ರಕಾರಗಳನ್ನು ಆರಿಸಿಕೊಳ್ಳಲಾಗಿದೆ. ಭಾಗ ಏಳರಲ್ಲಿ ಸಮಕಾಲೀನ ಕರ್ನಾಟಕದಲ್ಲಿ ದಲಿತರ ಬದುಕಿನ ಸಾಧಕ ಬಾಧಕಗಳ ಚಿತ್ರಣವಿದೆ. ಭಾಗ ಎಂಟರಲ್ಲಿ ಕರ್ನಾಟಕದ ನೆರೆ ರಾಜ್ಯಗಳಲ್ಲಿನ ದಲಿತ ಸಾಧಕರುಗಳ ಚರಿತ್ರೆಗಳನ್ನು ತೆರೆದಿಡಲಾಗಿದೆ. ನೂರಕ್ಕೂ ಹೆಚ್ಚು ಪರಾಮರ್ಶನ ಗ್ರಂಥಗಳಿಂದ ಮಾತ್ರವಲ್ಲದೆ ಒಂಬತ್ತಕ್ಕೂ ಹೆಚ್ಚು ನಿಯತಕಾಲಿಕೆಗಳಿಂದ ಮತ್ತು ಹತ್ತು ಹಲವು ದಿನಪತ್ರಿಕೆಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ಸಂಪಾದಕರು ಸಾಕಷ್ಟು ಶ್ರಮವಹಿಸಿರುವುದು, ಈ ಕೃತಿಯ ಪುಟಪುಟಗಳಲ್ಲೂ ವ್ಯಕ್ತವಾಗುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 900. ಮುಖಬೆಲೆ 890 ರೂ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News