ಮನುಷ್ಯನ ಒಳಹೊರಗಿಗೆ ಬೆಳಕು ಚೆಲ್ಲುವ ಕಂದೀಲು

Update: 2017-05-17 18:16 GMT

ನೆಲಮೂಲವಾದ ಮನಸ್ಸಿನ ಬಸಿರಿನಿಂದ ಹುಟ್ಟಿದ ಲೇಖನಗಳು ಬಸವರಾಜ ಹೂಗಾರ ಅವರ ‘ಬೀದಿ ಬೆಳಕಿನ ಕಂದೀಲು’ನಲ್ಲಿವೆ. ಇಲ್ಲಿ ಕಂದೀಲಿನ ಬೆಳಕನ್ನು ಮನುಷ್ಯನ ಹೊರಗಿಗೆ ಮಾತ್ರವಲ್ಲ, ಒಳಗಿಗೂ ಹಿಡಿದಿದ್ದಾರೆ. ವರ್ತಮಾನದ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಅವರು ಕಂದೀಲು ಹಿಡಿದಿದ್ದಾರೆ. ಇಲ್ಲಿ ಒಟ್ಟು 18 ಲೇಖನಗಳಿವೆ. ಕನ್ನಡ ಸಂಸ್ಕೃತಿ, ಬಾಹುಬಲಿ ಚಿಂತನೆಯ ದುರಂತ, ಹಳ್ಳಿನಗರಗಳ ಮನಸ್ಥಿತಿಯ ವಿಶ್ಲೇಷಣೆ, ಪೂಜಿಕ ಸಂಸ್ಕೃತಿ, ನಮ್ಮ ಶಿಕ್ಷಣದ ವರ್ತಮಾನದ ಸವಾಲುಗಳು, ಹೆಣ್ಣು ಮತ್ತು ಹೋರಾಟ, ಸುವರ್ಣ ಕರ್ನಾಟಕದ ಹೆಬ್ಬಾಗಿಲಲ್ಲಿ ನಿಂತ ಕನ್ನಡಿಗನ ಸವಾಲು, ಎಚ್. ಎಲ್. ಕೆ. ಚಿಂತನೆ, ಕರ್ನಾಟಕದ ಮುನ್ನಡೆ ಹೀಗೆ ಸಮಾಜವನ್ನು ಕಾಡುವ ಹಲವು ಸಮಸ್ಯೆಗಳ ಬಗ್ಗೆ ಅವರು ಬೆಳಕುಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಧಾರ್ಮಿಕ ಆಚರಣೆಗಳನ್ನು ವಿಶ್ಲೇಷಿಸುತ್ತಾ ಹೂಗಾರರು ಬರೆದ ‘ಬಾಹುಬಲಿ ಮತ್ತು ಡೋಲಿ’ ಲೇಖನ ಹರಿತವಾಗಿ ಬಾಹುಬಲಿಯ ಮಸ್ತಕಾಭಿಷೇಕವನ್ನು, ಅದನ್ನು ನೋಡಹೋಗುವ ಜನಸಮುದಾಯವನ್ನು ಟೀಕಿಸುತ್ತದೆ. ಸಂಕಲ್ಪ ಹಿಂಸೆಯನ್ನೂ ವಿರೋಧಿಸುವ ಜೈನ ಧರ್ಮದ ಅನುಯಾಯಿಗಳು ಗೊಮ್ಮಟನ ಬೆಟ್ಟ ಏರಲಾರದೆ ಯಾರದೋ ಹೆಗಲ ಮೇಲೆ ಡೋಲಿಯಲ್ಲಿ ಕುಳಿತು ಬಾಹುಬಲಿಯನ್ನು ನೋಡಿ ಪುಣ್ಯ ಕಟ್ಟಿಕೊಳ್ಳುವ ಔಚಿತ್ಯವನ್ನು ಕುರಿತು ಪ್ರಶ್ನಿಸುತ್ತದೆ. ಕನ್ನಡ ಸಂಸ್ಕೃತಿಯನ್ನು ವಿವರಿಸುತ್ತಾ, ಅಕಾಡಮಿಕ್ ಸಾಂಸ್ಕೃತಿಕ ಪಠ್ಯಗಳಾಚೆಗಿರುವ, ಜನಪದರು ಶ್ರದ್ಧೆಯಿಂದ ಕಟ್ಟಿರುವ ಸಂಸ್ಕೃತಿಯೇ ಕನ್ನಡದ ಸಂಸ್ಕೃತಿ ಎಂದು ಸ್ಪಷ್ಟಪಡಿಸುತ್ತಾರೆ. ಪಾದ ನಮಸ್ಕಾರ ಕೆಲವೊಮ್ಮೆ ಅರ್ಥಪೂರ್ಣವಾಗಿಯೂ, ಮಗದೊಮ್ಮೆ ಸಮೂಹಸನ್ನಿಯೂ ಆಗಿಬಿಡುವ ವಿಪರ್ಯಾಸಗಳನ್ನು ವಿವರಿಸುತ್ತಾರೆ. ಬದಲಾಗುವ ಬದುಕಿನಲ್ಲಿ ಎದುರಾಗುವ ಐಡೆಂಟಿಟಿ ಕ್ರೈಸಿಸ್ ಕುರಿತಂತೆ ಬೆಳಕು ಚೆಲ್ಲುತ್ತಾರೆ.
ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 60 ರೂಪಾಯಿ.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News