ಜನಪ್ರಿಯ ಧಾಟಿಯ ಪದ್ಯಗಳು

Update: 2017-05-18 18:40 GMT

ತನ್ನ ಬೇರನ್ನು ತುಳುನಾಡಲ್ಲಿ ಇಳಿಸಿಕೊಂಡು ಮುಂಬೈ ಕನ್ನಡಿಗರಾಗಿ ಶಿಮಂತೂರು ಚಂದ್ರಹಾಸ ಸುವರ್ಣ ಅವರು ಬರೆದ ಕವನ ಸಂಕಲನ ‘ನಿರೀಕ್ಷೆ’. ಮುನ್ನುಡಿಯಲ್ಲಿ ವಸಂತಕುಮಾರ್ ಪೆರ್ಲ ಅವರು ಹೇಳುವಂತೆ ‘‘ಶಿಮಂತೂರು ಅವರ ಬರವಣಿಗೆ ನೇರ, ಸರಳ ಮತ್ತು ವಾಚ್ಯಾರ್ಥ ಪ್ರಧಾನವಾದದ್ದು. ಹಿತ್ತಾಳೆಯ ಪಾತ್ರೆಯಂತೆ ಗದ್ಯಾಧಿಕ್ಯದಿಂದ ಅದರ ವಾಸ್ತವಾಂಶವೂ, ಸೌಂದರ್ಯವೂ ಓದುಗನ ಹೃದಯಕ್ಕೆ ಲಗ್ಗೆಯಿಡುತ್ತದೆ...’’.

ಭಾದ್ರಪದ ಚೌತಿಯ ಗಣೇಶನ ನಿರೀಕ್ಷೆಯಲ್ಲಿರುವ ಕವಿಯ ಮನದಾಳ, ಆ ಮೂಲಕ ಶುದ್ಧ ಗಾಳಿ, ಶುದ್ಧ ಪರಿಸರದ ನಿರೀಕ್ಷೆಯಲ್ಲಿದೆ. ಅವರು ಆಹ್ವಾನಿಸುತ್ತಿರುವುದು ಮೂಷಿಕವಾಹನನ್ನೇ ಆಗಿದ್ದರೂ, ಆ ಆಹ್ವಾನದ ಹಿಂದಿರುವುದು ಭ್ರಷ್ಟಾಚಾರ, ಅಕ್ರಮ ರಹಿತವಾದ ಒಂದು ಸಮಾಜ. ಅವರ ಆಧ್ಯಾತ್ಮಿಕತೆ ಲೌಕಿಕತೆಯೊಂದಿಗೆ ತಳಕುಹಾಕಿಕೊಳ್ಳುವುದು ಹೀಗೆ. ಇರುವೆಯೊಂದನ್ನು ತಮ್ಮ ಕವಿತೆಗೆ ವಸ್ತುವಾಗಿಸಿಕೊಂಡು ಬರೆಯುವ ಕವಿ, ಅದರ ಸ್ವಾತಂತ್ರ, ಶ್ರಮ, ಶಿಸ್ತು, ಸಹಭಾಗಿತ್ವವನ್ನು ಬರೆಯುತ್ತಾ ಮನುಷ್ಯ ಸ್ವಾರ್ಥವನ್ನು ವ್ಯಂಗ್ಯ ಮಾಡುತ್ತಾರೆ. ಸಮಯದ ಜೊತೆಗೆ ಮಾತಿಗೆ ತೊಡಗುವ ಕವಿ, ಈ ಕ್ಷಣವಷ್ಟೇ ನಮ್ಮದು ಎನ್ನುವುದನ್ನು ಅರಿತುಕೊಂಡಿದ್ದಾರೆ. ಮಳೆ ಹನಿಯ ತುಂತುರನ್ನು ಬರೆಯುತ್ತಾ ಹೋದಂತೆ ಅದು ಕವಿಮನ ಘಾಸಿಗೊಂಡು ಇಳಿಯುವ ಕಣ್ಣೀರ ತುಂತುರುಗಳಾಗಿ ಬದಲಾಗುತ್ತದೆ. ರೋಚಕ ಮತ್ತು ಜನಪ್ರಿಯ ಧಾಟಿಯಲ್ಲಿ ಬರೆಯುವ ಶಿಮಂತೂರು ಚಂದ್ರಹಾಸ ಸುವರ್ಣ ಅವರ ಕವಿತೆಯ ರಾಜಕೀಯ ನಿಲುವುಗಳೂ ಸದ್ಯದ ಜನಪ್ರಿಯ ಧಾಟಿಯಿಂದಲೇ ಎದ್ದು ಬಂದವುಗಳು. ಪೂಜಾ ಪ್ರಕಾಶನ ಮುಂಬೈ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂಪಾಯಿ.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News