ಪ್ರಯೋಗಶೀಲ ಪೀಳಿಗೆಗಳ ಸವಾಲುಗಳು

Update: 2017-05-19 13:38 GMT

‘‘ಮೊದಲು ಸ್ಪರ್ಧೆ ಎನ್ನುವುದೇ ನಮಗೆ ಸಮ್ಮತವಲ್ಲದ್ದು. ಆದರೂ ಸ್ಪರ್ಧೆಯ ಹೆಸರಿನಲ್ಲಿ ಪ್ರದರ್ಶಕ ಕಲೆಗಳನ್ನು ಪ್ರದರ್ಶಿಸಲು ಅವಕಾಶವಾಗುವುದೆಂದು ಮತ್ತು ವೇದಿಕೆಯ ಅನುಭವಗಳನ್ನು ಪಡೆಯಬಹುದೆಂದು ಭಾಗವಹಿಸುವುದು ಸರಿ. ಆದರೆ, ಸೋಲುವ ಭಯವಿದ್ದರೆ, ಸೋಲುವುದನ್ನು ಎದುರಿಸಲಾಗುವಂತಹ ಮನಸ್ಥಿತಿ ಇಲ್ಲದಿದ್ದರೆ ಸ್ಪರ್ಧೆಗೆ ಬರಲೇಬಾರದು. ಶತಾಯಗತಾಯ ಬಹುಮಾನವನ್ನು ಪಡೆಯುವುದೇ ನಿಮ್ಮ ಹಟವಾದರೆ, ನೀವು ಪ್ರದರ್ಶಿಸುವ ಕಲೆಯ ಬಗ್ಗೆ ನಿಮಗಿರುವ ಆಸ್ತೆಯ ಬಗ್ಗೆ, ಪ್ರಾಮಾಣಿಕ ಆಸಕ್ತಿಯ ಬಗ್ಗೆ ಅನುಮಾನವುಂಟಾಗುತ್ತದೆ’’.

ಅದೊಂದು ಖಾಸಗಿ ಚಾನೆಲ್, ವಂಡರ್ ಲಾ ನಂತಹ ದೊಡ್ಡ ವೇದಿಕೆಯಲ್ಲಿ ಡಾನ್ಸ್ ಫೆಸ್ಟ್ ಆಯೋಜಿಸಿತ್ತು. ವಿವಿಧ ಕಡೆಗಳಿಂದ ಬಂದಿರುವಂತಹ ಹಲವು ವಿದ್ಯಾರ್ಥಿಗಳ ತಂಡ ನೃತ್ಯ ಪ್ರದರ್ಶನ ಮಾಡುತ್ತಿತ್ತು. ಮೂವರು ಮುಖ್ಯ ತೀರ್ಪುಗಾರರಲ್ಲಿ ನಾನೂ ಒಬ್ಬ. ಒಂದು ಸುತ್ತಿನ ನೃತ್ಯ ಸ್ಪರ್ಧೆ ಮುಗಿದಾಗ ನಾವು ವಿರಮಿಸುತ್ತಿದ್ದೆವು. ಆಗ ಓರ್ವ ವ್ಯಕ್ತಿ ನಮ್ಮ ಬಳಿಗೆ ಬಂದರು. ಯಾವುದೋ ಒಂದು ನಿರ್ದಿಷ್ಟ ತಂಡವು ಬಹಳ ಕಷ್ಟಪಟ್ಟು ಮಾಡಿದೆ ಎಂದೂ, ಅವರು ಬೇರೆ ಯಾವುದೋ ಊರಿನಿಂದ ಬಂದಿದ್ದಾರೆಂದೂ ನಮ್ಮ ಬಳಿ ಹೇಳಿದರು. ನಾವು ಸುಮ್ಮನೆ ಕೇಳಿದೆವು.

ಎಲ್ಲಾ ಸುತ್ತುಗಳು ಮುಗಿದ ಮೇಲೆ ಯಾವುದೋ ಒಂದು ತಂಡವು ಬಹುಮಾನವನ್ನು ಗಳಿಸಿತು. ಅದನ್ನು ನಾನು ಮತ್ತು ಇತರ ತೀರ್ಪುಗಾರರು ವೇದಿಕೆಯ ಮೇಲೆ ಪ್ರಕಟಿಸಿ ಔಪಚಾರಿಕವಾಗಿ ಮಾತನಾಡಿ ಹೊರಡುವುದಕ್ಕೆ ಸಿದ್ಧವಾದಾಗ ನಮ್ಮನ್ನು ಸಂಪರ್ಕಿಸಲು ಯತ್ನಿಸಿದ ವ್ಯಕ್ತಿಯ ತಂಡದವರು ನಮ್ಮ ಬಳಿಗೆ ಬಂದರು. ಅವರು ಅಳುತ್ತಿದ್ದರು. ಒಂದು ಹುಡುಗಿಯಂತೂ ನಮ್ಮನ್ನು ಆಕ್ರಮಿಸುವಂತೆ ಕೇಳಿದರು.

‘‘ನಾವೆಷ್ಟು ಕಷ್ಟಪಟ್ಟು ಡಾನ್ಸ್ ಪ್ರಾಕ್ಟೀಸ್ ಮಾಡಿದ್ದೀವಿ. ಅಷ್ಟು ದೂರದಿಂದ ಬಂದಿದ್ದೀವಿ. ನಮ್ಮಪ್ಪ ರಸ್ತೆಯಲ್ಲಿ ತರಕಾರಿ ಮಾರುತ್ತಾರೆ’’, ಅವಳು ಇತರ ಹುಡುಗರ ಬಗ್ಗೆಯೂ ಹೇಳಿದಳು. ಆ ಮಕ್ಕಳೆಲ್ಲಾ ಬಹುಮಾನ ಬಂದಿಲ್ಲವೆಂದು ಅಳುತ್ತಿದ್ದರು.

ವೇದಿಕೆಯ ಮೇಲೆ ಅಷ್ಟೊಂದು ಹುರುಪಿನಿಂದ ನೃತ್ಯ ಮಾಡುತ್ತಿದ್ದ ಮಕ್ಕಳು, ಈಗ ಇಲ್ಲಿ ದೈನ್ಯವಾಗಿ ಅಳುತ್ತಿರುವುದನ್ನು ಕಂಡು ತೀರಾ ಕಸಿವಿಸಿಯಾಯಿತು. ನನಗೆ ಮೊದಲು ಕೋಪ ಬಂದಿದ್ದು ಅವರಿಗೆ ಇಂತಹ ವಿಚಾರಗಳನ್ನು ತಲೆಗೆ ತುಂಬಿದ್ದ ವ್ಯಕ್ತಿಯ ಬಗ್ಗೆ. ನಮ್ಮ ಬಳಿ ಮೊದಲು ಮಾತಾಡಿ ಅದು ವಿಫಲವಾದಾಗ ಈ ಮಕ್ಕಳನ್ನು ಅಸ್ತ್ರವಾಗಿ ಬಳಸಿದ್ದು ತೀರಾ ಮುಜುಗರಕ್ಕೆ ಕಾರಣವಾಗಿತ್ತು.

‘‘ನಿಮ್ಮಲ್ಲಿರುವ ಬಹುಮಾನದ ಆಸೆ ದೊಡ್ಡದೋ? ಡಾನ್ಸ್ ಮಾಡಿ ಅದನ್ನು ಪ್ರದರ್ಶಿಸುವ ಆಸೆ ದೊಡ್ಡದೋ?’’

‘‘ಡಾನ್ಸೇ ಮುಖ್ಯ. ಆದರೆ ಅಷ್ಟು ಕಷ್ಟಪಟ್ಟು ಮಾಡಿದ್ದೀವಲ್ಲಾ, ನಮಗೆ ಸಿಗಲಿಲ್ಲ ಎಂದೇ ನಮಗೆ ದುಃಖ ಬೇಜಾರು.’’

‘‘ಈಗ ಬಹುಮಾನ ಪಡೆದುಕೊಂಡವರು ಕಷ್ಟ ಪಟ್ಟಿಲ್ಲವಾ? ಅವರು ಸುಮ್ಮನೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರಾ?’’ ಎಂದು ಕೇಳಿದರೆ, ‘‘ಅವರು ಪಟ್ಟಣದವರು. ಅವರು ಶ್ರೀಮಂತರ ಮಕ್ಕಳು’’ ಎನ್ನುತ್ತಾರೆ.

ನಾನಿಷ್ಟೇ ಹೇಳಿದೆ.

‘‘ಮೊದಲು ಸ್ಪರ್ಧೆ ಎನ್ನುವುದೇ ನಮಗೆ ಸಮ್ಮತವಲ್ಲದ್ದು. ಆದರೂ ಸ್ಪರ್ಧೆಯ ಹೆಸರಿನಲ್ಲಿ ಪ್ರದರ್ಶಕ ಕಲೆಗಳನ್ನು ಪ್ರದರ್ಶಿಸಲು ಅವಕಾಶವಾಗುವುದೆಂದು ಮತ್ತು ವೇದಿಕೆಯ ಅನುಭವಗಳನ್ನು ಪಡೆಯಬಹುದೆಂದು ಭಾಗವಹಿಸುವುದು ಸರಿ. ಆದರೆ, ಸೋಲುವ ಭಯವಿದ್ದರೆ, ಸೋಲುವುದನ್ನು ಎದುರಿಸಲಾಗುವಂತಹ ಮನಸ್ಥಿತಿ ಇಲ್ಲದಿದ್ದರೆ ಸ್ಪರ್ಧೆಗೆ ಬರಲೇಬಾರದು. ಶತಾಯಗತಾಯ ಬಹುಮಾನವನ್ನು ಪಡೆಯುವುದೇ ನಿಮ್ಮ ಹಟವಾದರೆ, ನೀವು ಪ್ರದರ್ಶಿಸುವ ಕಲೆಯ ಬಗ್ಗೆ ನಿಮಗಿರುವ ಆಸ್ತೆಯ ಬಗ್ಗೆ, ಪ್ರಾಮಾಣಿಕ ಆಸಕ್ತಿಯ ಬಗ್ಗೆ ಅನುಮಾನವುಂಟಾಗುತ್ತದೆ’’.

ಮತ್ತೊಬ್ಬ ತೀರ್ಪುಗಾರರು ಹೇಳಿದರು, ‘‘ಪ್ರತಿಯೊಬ್ಬರ ಆಸಕ್ತಿ, ಮಾಡಬಹುದಾದ ಸಾಮರ್ಥ್ಯ ಮತ್ತು ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಕಷ್ಟಗಳನ್ನು ತಿಳಿದುಕೊಂಡು ಅವಕಾಶಗಳನ್ನು ಮತ್ತು ತರಬೇತಿಗಳನ್ನು ನೀಡಬಹುದು. ಆದರೆ ಒಮ್ಮೆ ಅದು ವೇದಿಕೆಯ ಮೇಲೆ ಬಂತೆಂದರೆ ನಾವು ವೇಷಭೂಷಣಗಳನ್ನು, ನಿಮ್ಮ ನೃತ್ಯ, ಭಾವ ಭಂಗಿಗಳು ಮತ್ತು ಅದರಲ್ಲಿ ನೀವು ತೋರುವ ಪ್ರೌಢಿಮೆಯನ್ನು ಮಾತ್ರ ನೋಡುತ್ತೇವೆ. ಕಲಾಪ್ರದರ್ಶನದ ಸಮಯದಲ್ಲಿ ಅದರ ಪ್ರೌಢಿಮೆಯನ್ನು ಒಂದು ಕಲಾಪ್ರಕಾರದ ಮಾನದಂಡದಲ್ಲಿ ಅಳೆಯುವಾಗ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗಬಾರದು. ಅವರು ಬಡವರು, ದೂರದಿಂದ ಬಂದಿರುವವರು ಇತ್ಯಾದಿ ಗಳೆಲ್ಲವೂ ಕೂಡ ಪ್ರಾಮಾಣಿಕವಾಗಿ ತೀರ್ಪು ನೀಡಲು ತೊಡಕಾಗುತ್ತದೆ.’’

ಆ ಮಕ್ಕಳಿಗೆ ನಮ್ಮ ಯಾವ ಮಾತುಗಳೂ ಮನದಟ್ಟಾಗಲೇ ಇಲ್ಲ. ನಾವು ಶ್ರೀಮಂತರ ಪರ. ಪಟ್ಟಣಿಗರ ಪರ ಮತ್ತು ಪಕ್ಷಪಾತ ಮಾಡಿದ್ದೇವೆ ಎಂದುಕೊಂಡೇ ಅಲ್ಲಿಂದ ನಡೆದರು. ಒಬ್ಬ ಹುಡುಗನಂತೂ ‘‘ಒಳಗೊಳಗೆ ಡೀಲ್ ಮಾಡ್ಕೊಂಡಿರ್ತಾರೆ. ತಂಡದಿಂದ ದುಡ್ಡು ಇಸ್ಕೊಂಡು ಬಹುಮಾನ ಮುಂಚೆಯೇ ಫಿಕ್ಸ್ ಮಾಡಿರ್ತಾರೆ’’ ಎಂದು ಜೋರಾಗಿಯೇ ಹೇಳುತ್ತಾ ಹೋದ.

ಇತ್ತೀಚೆಗಿನ ದಿನಗಳಲ್ಲಿ ಈ ಬಗೆಯ ಮನೆಯ, ಮನೆಯವರ ಸ್ಥಿತಿಗತಿಗಳನ್ನು ಮುಂದಿಡುತ್ತಾ ತಮ್ಮ ಸಾಧನೆಗಳನ್ನು ಮತ್ತಷ್ಟು ವೈಭವೀಕರಿಸಿಕೊಳ್ಳುವಂತಹ ಅಥವಾ ಗಮನಸೆಳೆಯುವಂತಹ ಪ್ರಯತ್ನಗಳು ಮಕ್ಕಳ ಹಂತಗಳಿಂದಲೇ ಪ್ರಾರಂಭವಾಗಿವೆ.

ಕಲಿಕೆಯ ಮಾನದಂಡ

ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ಮನಸ್ಥಿತಿಯದ್ದೊಂದು ದೊಡ್ಡ ವ್ಯಂಗ್ಯ ಮತ್ತು ಮೂರ್ಖತನವೆಂದರೆ ಒಂದು ಮಗುವಿನ ಕೆರಿಯರ್‌ಅನ್ನು ಆ ಮಗು ಪಡೆಯುವ ಅಂಕಗಳಿಂದ ಗುರುತಿಸುವ ಯತ್ನ ಮಾಡುವುದು. ಯಾರು ಎಷ್ಟು ಶೇಕಡಾವಾರು ಅಂಕಗಳನ್ನು ಪಡೆದಿದ್ದಾರೆ ಮತ್ತು ಒಟ್ಟು ಮೊತ್ತದಲ್ಲಿ ಅತ್ಯಧಿಕ ಶೇಕಡಾವಾರು ನೂರಕ್ಕೆ ಸಮೀಪವಾಗಿದ್ದಾರೆ ಎಂಬ ಅಳತೆಗೋಲಿನಿಂದಲೇ ಸಂಭ್ರಮ ಮತ್ತು ಸಡಗರವನ್ನು ಹಾಗೂ ಮಗುವಿನ ಸಾಮರ್ಥ್ಯವನ್ನು ನಿರ್ಧರಿಸುತ್ತಾರೆ.

ಇನ್ನೊಂದು ವ್ಯಂಗ್ಯವೆಂದರೆ, ಬಾಳೆಹಣ್ಣು ಮಾರುವವನ ಮಗಳು ಅಥವಾ ಗುಡಿಸಲಿನಲ್ಲಿರುವ ಹುಡುಗ ಅತ್ಯಧಿಕ ಅಂಕಗಳನ್ನು ಪಡೆದರು ಎಂದು ವಿಜೃಂಭಿಸುವುದು! ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗೆ ಯಾವುದೇ ಮಗುವೂ ಕಾರಣವಾಗಿರುವುದಿಲ್ಲ. ಉತ್ತಮ ಸ್ಥಿತಿಯಿರುವ ಮನೆಯ ಮಕ್ಕಳೂ ಕೂಡ ತಮ್ಮ ಓದಿಗೆ ಸಮಯವನ್ನು ಮತ್ತು ಶ್ರಮವನ್ನು ತೊಡಗಿಸಿರುತ್ತಾರೆ. ಆ ಒಂದು ಅಧ್ಯಯನ ಮತ್ತು ಶ್ರಮವನ್ನು ಮಕ್ಕಳು ಓದಿನಲ್ಲಿ ತೊಡಗಿಸುವಾಗ ಶ್ರೀಮಂತರ ಮಕ್ಕಳು ಮೋಜು ಮೇಜವಾನಿಗಳು ತಮ್ಮ ಕೆಲಸವನ್ನು ಕೆಡಿಸದೇ ಇರುವಂತೆ ನೋಡಿಕೊಳ್ಳುವುದು ಕೂಡ ಮುಖ್ಯ, ಹಾಗೆಯೇ ಉತ್ತಮ ಸ್ಥಿತಿವಂತರಲ್ಲದ ಮಕ್ಕಳು ಅವರ ಸಮಸ್ಯೆಗಳು ತಮ್ಮ ಓದಿಗೆ ತೊಡಕಾಗದಿರುವಂತೆ ನೋಡಿಕೊಳ್ಳುವುದೂ ಕೂಡ ಅವರದೇ ಸಾಮರ್ಥ್ಯ. ಉಳ್ಳವರು ಮತ್ತು ಒಂದು ಮೇಲ್ವರ್ಗದ ಹಾಗೂ ಮೇಲ್ವರ್ಣದ ಜನರು ಮಾತ್ರ ವಿದ್ಯಾಭ್ಯಾಸ ಪಡೆಯುವಂತಹ ಸಾಮಾಜಿಕ ಸ್ಥಿತಿ ಎಂದೋ ಸರಿದುಹೋಗಿರುವುದರಿಂದ ಈ ಕಾಲಕ್ಕಾದರೂ ರಸ್ತೆ ಬದಿಯ ಅಂಗಡಿಯವನ ಮಗ ಟಾಪರ್ ಬಂದ, ಜಾಡಮಾಲಿಯ ಮಗಳು ಅತ್ಯಧಿಕ ಅಂಕಗಳನ್ನು ಪಡೆದಳು ಎಂಬುದನ್ನೆಲ್ಲಾ ವಿಶೇಷವಾಗಿ ಕಾಣುವ ಅಗತ್ಯವಿಲ್ಲ. ಮತ್ತೂ ಕೆಲವೊಮ್ಮೆ ಪೋಷಕರು ಸಾಮಾಜಿಕವಾಗಿ ಹೊರನೋಟಕ್ಕೆ ಕಾಣುವಂತೆಯೇ ಅವರ ಒಳಗಿನ ಆರ್ಥಿಕ ಸ್ಥಿತಿಗತಿಗಳೂ ಹಾಗೆಯೇ ಇರುತ್ತದೆ ಎಂದೂ ನಂಬುವಂತಿಲ್ಲ. ಹಣಕಾಸು ಅದೆಷ್ಟೇ ಇದ್ದರೂ ತಮ್ಮ ಮನೆಯ ಸ್ಥಿತಿಗತಿಯನ್ನು ವೈಭವೋಪೇತವಾಗಿ ಉತ್ತಮಗೊಳಿಸಿಕೊಳ್ಳದೇ ಸರಳವಾಗಿ ತೋರ್ಪಡಿಸಿಕೊಳ್ಳುವವರಿದ್ದಾರೆ. ಕೆಲವೊಮ್ಮೆ ಆ ಸರಳತೆಯು ಸರಳತೆಯ ರೇಖೆಗಿಂತ ಕೆಳಗಿಳಿದು ದರಿದ್ರರೆನಿಸಿಕೊಳ್ಳುವಷ್ಟೂ ಕಾಣಿಸಿಕೊಳ್ಳುತ್ತಾರೆ. ಹಾಗೆಯೇ ಆರ್ಥಿಕವಾಗಿ ನಾನಾ ಸಂಕಷ್ಟಗಳನ್ನು ಎದುರಿಸುವಂತಹ ಕೆಲವು ಕುಟುಂಬಗಳು ತಮ್ಮ ಜೀವನ ಶೈಲಿಯನ್ನು ಕಡಿಮೆಯಾಗಿ ಕಾಣಿಸಿಕೊಳ್ಳದೇ ದೊಡ್ಡ ಮಹಲಿನಲ್ಲಿ ವಾಸವಿದ್ದು ತೊಳಲುತ್ತಿರುತ್ತಾರೆ.

ಒಟ್ಟಾರೆ ಹೇಳಲಿಚ್ಛಿಸುವುದೇನೆಂದರೆ, ಮಗುವಿನ ಯಾವುದೇ ಶೈಕ್ಷಣಿಕ ಮತ್ತು ಕಲೆ ಹಾಗೂ ಸಾಂಸ್ಕೃತಿಕ ಸಾಧನೆಗಳನ್ನು ಗುರುತಿಸುವಾಗ ಆ ಮಗುವಿನ ವ್ಯಕ್ತಿಗತ ಆಸಕ್ತಿ, ಅದರ ತುಡಿತ, ಅದರ ಪರಿಶ್ರಮ ಮತ್ತು ತೊಡಗಿಸಿಕೊಂಡು ಪಡೆದುಕೊಂಡಿರುವ ಕೌಶಲ್ಯಗಳನ್ನು ಪರಿಗಣಿಸಬೇಕೇ ಹೊರತು ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೂ ಒಂದು ಮಾನದಂಡವಾಗಿ ತೆಗೆದುಕೊಳ್ಳುವುದರಿಂದ ಮಗುವಿಗೆ ತನ್ನ ಸಾಧನೆಯ ವಿಷಯದ ವೌಲ್ಯದ ಜೊತೆಗೆ ಇಂತಹ ಮಾನದಂಡಗಳನ್ನೂ ತಾನೇ ಎತ್ತಿ ಹಿಡಿಯಲು ಪ್ರಯತ್ನಿಸುತ್ತಾ ತನ್ನ ವ್ಯಕ್ತಿತ್ವವನ್ನು ದೀನಗೊಳಿಸಿಕೊಳ್ಳುವುದು, ಅಥವಾ ವಿಷಯಕ್ಕೆ ಮಿಗಿಲಾಗಿ ಗ್ರೇಸ್ ಮಾರ್ಕ್ಸ್ ಪಡೆಯಲು ಯತ್ನಿಸುತ್ತಿರುತ್ತದೆ. ಅಲ್ಲಿ ಮಗುವು ಬಹಳ ಮುಖ್ಯವಾಗಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನದಿಂದ ವಿಮುಖವಾಗು ವಂತಾಗುತ್ತದೆ.

ಮಕ್ಕಿಕಾಮಕ್ಕಿ ಗಿಳಿಪಾಠ ಮಾಡುವಂತಹ ಸಾಮರ್ಥ್ಯ ವಿರುವಂತಹ ಯಾವುದೇ ವಿದ್ಯಾರ್ಥಿಯು ಅಂಕವನ್ನು ಗಳಿಸಲು ಸಮರ್ಥನಾಗಿರುತ್ತಾರೆ. ಅವನು ಬಡವನೇ ಇರಲಿ, ಶ್ರೀಮಂತನೇ ಇರಲಿ. ಜೊತೆಗೆ ಕೌಶಲ್ಯ ಮತ್ತು ಬುದ್ಧಿಮತ್ತೆಯೆಂಬುದು ಮಕ್ಕಿಕಾಮಕ್ಕಿ ಓದುವುದರಲ್ಲಿ ಇರುವುದಿಲ್ಲ ಎಂಬ ಸಾಮಾನ್ಯ ಪ್ರಜ್ಞೆ ಸಾಧಾರಣ ಪೋಷಕರು ಮತ್ತು ಶಿಕ್ಷಕರು ಹೊಂದಬೇಕಾಗಿದೆ.

ತನ್ನ ಮನೆಯ ಸ್ಥಿತಿಗತಿ, ಪರಿಸರ ಮತ್ತು ಸಾಮಾಜಿಕ ವಾತಾವರಣದ ಬಗ್ಗೆ ಅರಿವು ಮತ್ತು ಪ್ರಜ್ಞೆ ಇರಬೇಕಾಗಿರುವುದು ಅಗತ್ಯವಾದರೂ ಅದನ್ನು ಮುಂದಿರಿಸಿಕೊಂಡು ತನ್ನ ಸಾಧನೆಯ ವೌಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು ವೌಲಿಕವಾಗಿ ಹಿನ್ನೆಡೆಯೆಂದೇ ನನ್ನ ಭಾವನೆ.

ಮುಂದೆ ಏನು ಮಾಡಬೇಕು?

ಬಾಲ್ಯದಿಂದ ಕಿಶೋರಾವಸ್ಥೆಗೆ ಬಂದಿರುವ ಯಾವುದೇ ಮಗುವಿಗೆ ಬಹಳಷ್ಟು ಮಂದಿ ಪೋಷಕರು ಹತ್ತನೆ ತರಗತಿ ಮುಗಿದ ಮೇಲೆ ಸಾಮಾನ್ಯವಾಗಿ ಕೇಳುತ್ತಾರೆ. ನನ್ನ ದೃಷ್ಟಿಯಲ್ಲಿ ಹೊರಗಿನವರಾರೋ ಈ ಮಾತನ್ನು ಮಕ್ಕಳಿಗೆ ಕೇಳಿದರೆ ಪರವಾಗಿಲ್ಲ. ಆದರೆ ಮನೆಯವರೇ ಹಾಗೆ ಕೇಳುವುದು ಕೊಂಚ ಅಸಮಂಜಸವೆಂದೇ ನನ್ನ ಭಾವನೆ. ತಮ್ಮ ಮನೆಯ ಮಗುವಿಗೆ ಯಾವುದರಲ್ಲಿ ಆಸಕ್ತಿ ಇದೆ? ಯಾವ ಸಾಮರ್ಥ್ಯವಿದೆ? ಯಾವುದರಲ್ಲಿ ಪರಿಣತಿಯನ್ನು ಪಡೆಯಬಹುದು? ಯಾವ ವಿಷಯದಲ್ಲಿ ಈ ಮಗು ಒಳನೋಟಗಳನ್ನು ಹೊಂದಲು ಸಾಧ್ಯ? ಹೀಗೆ ಹಲವು ವಿಷಯಗಳು ಒಂದು ವೇಳೆ ಮಗುವು ನೇರವಾಗಿ ಶಬ್ದಗಳಲ್ಲಿ ವ್ಯಕ್ತಪಡಿಸದಿದ್ದರೂ ಪೋಷಕರಿಗೆ ಗೊತ್ತಾಗಿರಬೇಕು. ಮಗುವು ಹತ್ತನೆ ತರಗತಿಗೆ ಬಂದರೂ ಆ ಪೋಷಕರು ಇನ್ನೂ ಗೊತ್ತು ಪಡಿಸಿಕೊಂಡಿಲ್ಲವೆಂದರೆ ಖಂಡಿತವಾಗಿ ಅವರು ತಮ್ಮ ಮಗುವಿನ ಬೆಳವಣಿಗೆ, ಅದರ ಮೇಲಾಗುತ್ತಿರುವ ಪ್ರಭಾವ, ಅದು ತೋರುತ್ತಿರುವ ಆಸಕ್ತಿ ಮತ್ತು ಮಗುವಿಗೆ ಇರುವಂತಹ ಶಕ್ತಿ; ಇದನ್ನೆಲ್ಲಾ ನೋಡುವಷ್ಟು ಸಂವೇದನಾ ಶೀಲರಾಗಿಲ್ಲ ಎಂದೇ ಅರ್ಥ. ಜೊತೆಗೆ ಪೋಷಕ ಮತ್ತು ಶಿಕ್ಷಕರಲ್ಲಿ ಮತ್ತಷ್ಟು ವೌಢ್ಯಗಳಿವೆ.

ಜಾಣ ವಿದ್ಯಾರ್ಥಿ ಮತ್ತು ಹೆಚ್ಚು ಅಂಕಗಳನ್ನು ಗಳಿಸಿಕೊಳ್ಳುವ ವರು ಮಾತ್ರ ವಿಜ್ಞಾನ ಮತ್ತು ಗಣಿತಗಳಿಗೆ ಹೋಗಲು ಸಮರ್ಥರು. ಅವರಿಗಿಂತ ಕೊಂಚ ಕಡಿಮೆ ಅಂಕ ಗಳಿಸಿರುವವರು ವಾಣಿಜ್ಯದಂತಹ ವಿಷಯಗಳಿಗೆ ಹೋಗಬಹುದು. ಇನ್ನು ಜಸ್ಟ್ ಪಾಸ್ ಆಗಿರುವವರು, ಅತೀ ಕಡಿಮೆ ಅಂಕ ತೆಗೆದುಕೊಳ್ಳುವಂತಹ ವಿದ್ಯಾರ್ಥಿಗಳು ಕಲೆ (ಆರ್ಟ್ಸ್) ತೆಗೆದುಕೊಳ್ಳುವುದು ಸರಿ.

ವಾಸ್ತವವಾಗಿ ವಿಜ್ಞಾನ ಮತ್ತು ಗಣಿತ; ಈ ಎರಡನ್ನು ಓದುವ ವಿದ್ಯಾರ್ಥಿ ಗಳಿಗೆ ಪ್ರಯೋಗಶೀಲತೆಗೆ ಎಷ್ಟೇ ಅವಕಾಶವಿದ್ದರೂ ಸಿದ್ಧಸೂತ್ರ ಮತ್ತು ನಿಶ್ಚಿತ ಪ್ರಯೋಗಗಳಿರುತ್ತವೆ. ಹಾಗೆಯೇ ವಾಣಿಜ್ಯವೂ ಕೂಡ ಒಂದು ಹಳಿಯನ್ನು ಹೊಂದಿರುತ್ತದೆ. ಆದರೆ ಕಲೆಯಲ್ಲಿ ಸಿದ್ಧ ಪಾಠಗಳಿಂದಾಚೆಗೆ ನೋಡುವ ಚಾತುರ್ಯ ವಿರಬೇಕು. ಕಲೆ ಎಂಬ ವಿಷಯ ಹೆಚ್ಚಿನ ಕೌತುಕ ಅಥವಾ ಕುತೂಹಲ ಪ್ರವೃತ್ತಿಯನ್ನು ಬೇಡುತ್ತದೆ. ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರೀಯ ಅಧ್ಯಯನಗಳೆಲ್ಲವೂ ಅತೀ ಹೆಚ್ಚಿನ ಅಧ್ಯಯನವನ್ನು ಬೇಡುತ್ತವೆ. ಯಾವುದೇ ಸಿದ್ಧ ಪಠ್ಯಗಳೆಲ್ಲವೂ ಸಂಶೋಧನೆಗಳಿಗೆ, ಮರುಸಂಶೋಧನೆಗಳಿಗೆ ಒಳಗಾದಂತೆ ಒಪ್ಪಿತವಿಚಾರಗಳೆಲ್ಲವೂ ಬುಡಮೇಲಾಗುವಂತಹ ಸಾಧ್ಯತೆಗಳಿರುತ್ತವೆ.

ಹಾಗಾಗಿ ಕಡಿಮೆ ಬುದ್ಧಿವಂತರು, ಸರಾಸರಿ ಕಲಿಕೆಯ ಸಾಮರ್ಥ್ಯ ಹೊಂದಿರುವವರು ಆರ್ಟ್ಸ್ ತೆಗೆದುಕೊಳ್ಳಬೇಕೆನ್ನುವ ಅಪ್ರಬುದ್ಧ ಮನಸ್ಥಿತಿಯನ್ನು ನಿವಾರಿಸಿಕೊಳ್ಳಬೇಕಾಗಿರುವುದು ಈ ಹೊತ್ತಿನ ಅಗತ್ಯ. ಹಾಗೆಯೇ ವಿಜ್ಞಾನ ಮತ್ತು ಗಣಿತಗಳನ್ನು ಓದುವವರು ಸರ್ವಶ್ರೇಷ್ಠ ಅಧ್ಯಯನ ಶೀಲರೆಂಬ ಭ್ರಾಂತಿಯನ್ನೂ ಮತ್ತು ಮೇಲರಿಮೆಯನ್ನೂ ಹೊಂದುವಂತಹ ಅಗತ್ಯವಿಲ್ಲ. ಎಲ್ಲಾ ವಿಷಯವಸ್ತುಗಳಿಗೂ ಅದರದರದೇ ಆದಂತಹ ವೌಲ್ಯವೂ ಇರುತ್ತದೆ ಮತ್ತು ಪರಿಶ್ರಮ ಪೂರ್ಣ ಅಧ್ಯಯನವನ್ನು ಬಯಸುತ್ತದೆ ಎಂಬ ಅರಿವಿರಬೇಕು.ಇನ್ನು ಮಕ್ಕಳ ಕೆರಿಯರ್‌ಗೆ ಸಹಾಯವಾಗುವಂತೆ ಪೋಷಕರು ಮತ್ತು ಶಿಕ್ಷಕರು ಕೆಲವು ಅಂಶಗಳನ್ನು ಗಮನಿಸಬೇಕು. ತಮ್ಮ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿ, ಕುತೂಹಲ, ಡಿಸ್ಕವರಿ ಮತ್ತು ಇನ್ವೆಂಷನ್ ವ್ಯತ್ಯಾಸಗಳು, ಭಾಷೆ ಮತ್ತು ಪರಿಭಾಷೆಗಳ ವಿಸ್ತಾರ, ಇತ್ಯಾದಿ ಹಲವು ವಿಷಯಗಳನ್ನು ಮೊದಲಿನಿಂದಲೂ ಗಮನಿಸಿಕೊಂಡು ಬಂದಿದ್ದೇ ಆದರೆ ಅವರ ಉನ್ನತ ಅಧ್ಯಯನ ಮತ್ತು ಉದ್ಯೋಗ ಇವುಗಳನ್ನು ಆಯ್ದುಕೊಳ್ಳುವ ವಿಷಯಗಳಲ್ಲಿ ಪ್ರಬುದ್ಧರೀತಿಯಲ್ಲಿ ಸಹಕರಿಸಬಹುದು. ಅದು ಹೇಗೆಂದು ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News