ಇನ್ನಷ್ಟು ಮಾಗಬೇಕಾದ ಕತೆಗಳು
ಕಿರಣ್ ಕುಮಾರ್ ಹಳೇಹಳ್ಳಿ ಅವರ ಹದಿನೇಳು ಪುಟ್ಟ, ಮಧ್ಯಮ ಗಾತ್ರದ ಕಥೆಗಳ ಸಂಕಲನ ‘‘ಹಳೇ ಹಳ್ಳಿಯ ಹೊಸ ಕಥೆಗಳು’’. ಗ್ರಾಮೀಣ ಪರಿಸರದ ಹಿನ್ನೆಲೆಗಳೇ ಈ ಕತೆಯ ಹೆಗ್ಗಳಿಕೆಗಳು. ಸಂವೇದನಾಶೀಲ, ಉದಾರವಾದಿ ಮಾನವತಾ ವಾದವನ್ನು ನಂಬಿ ಬರೆದ ಕತೆಗಳು ಇವು. ಬೆನ್ನುಡಿ ಹೇಳುವಂತೆ ನವಿರು ಭಾವಗಳು, ಸಭ್ಯ ಭಾಷೆ ಹಾಗೂ ತೊಡಕಿಲ್ಲದ ನಿರೂಪಣೆಯು ಕೆಲವು ಸಲ ನವೋದಯ ಸಂದರ್ಭದ ಕಥೆಗಾರಿಕೆಯನ್ನು ನೆನಪಿಸುತ್ತವೆ. ಇಲ್ಲಿ ಒಟ್ಟು 18 ಕತೆಗಳಿವೆ. ಈಗಷ್ಟೇ ಕತಾ ಲೋಕಕ್ಕೆ ತೆರೆದುಕೊಂಡ ಮನಸ್ಸಿನ ಮುಗ್ಧತೆ ಪ್ರತೀ ಕತೆಗಳಲ್ಲೂ ಎದ್ದು ಕಾಣುತ್ತದೆ. ಜೀವಪರತೆ ಆತ್ಮೀಯವಾಗುತ್ತದೆ. ಲೇಖಕರು ಆಯ್ದುಕೊಳ್ಳುವ ವಸ್ತುಗಳೆಲ್ಲ ಇನ್ನಷ್ಟು ಅನು ಭವವನ್ನು, ತೀವ್ರತೆಯನ್ನು ಬೇಡುತ್ತವೆಯಾದರೂ, ಕತೆಗಾರನ ಕತೆ ಹೇಳುವ ಅವಸರ ಕೆಲವೊಮ್ಮೆ ಕತೆಯ ಆತ್ಮಕ್ಕೆ ಧಕ್ಕೆ ತರುತ್ತದೆ.
ಒಂದು ಹೆಣ್ಣಿನ ಬದುಕು ತಾಯ್ತನದಲ್ಲೇ ಅರ್ಥಪೂರ್ಣ ವಾಗುತ್ತದೆ ಎನ್ನುವ ಸಮಾಜಕ್ಕೆ ಸವಾಲೊಡ್ಡುವಂತೆ, ಮಕ್ಕಳಿಲ್ಲದ ತಾಯಿಯೊಬ್ಬಳು ಶಾಲೆಯೊಂದನ್ನು ತೆರೆದು ನೂರಾರು ಮಕ್ಕಳಿಗೆ ಅಮ್ಮನಾಗುವ ಬಗೆ ಅತ್ಯಂತ ಸುಧಾರಣ ಮನಸ್ಸಿನಿಂದ ಹೊರಹೊಮ್ಮಿದ ಕತೆ. ಮನುಷ್ಯ ಮತ್ತು ಪ್ರಾಣಿಯ ನಡುವಿನ ಸಂಬಂಧವನ್ನು ಹೇಳುವ ಇನ್ನೊಂದು ಸರಳ ಕತೆ ‘ಬೆಕ್ಕು’. ಇಂದಿನ ರಾಜಕೀಯ, ಕೋಮುಗಲಭೆಗಳ ನಡುವೆ ಶಾಂತಿಯ ಕನಸು ಕಾಣುವ ವಿಶ್ವ ಮತ್ತು ಆತನ ಮುಂದಿರುವ ವಾಸ್ತವವನ್ನು ‘ವಿಶ್ವ ಕಂಡ ಕನಸು’ ಕತೆ ಹೇಳುತ್ತದೆ. ‘ಅರಿವು’ ಕತೆ ಮನುಷ್ಯ ನೊಳಗಿನ ಪರಿವರ್ತನೆಯ ಕನಸುಗಳನ್ನು ಹೊಂದಿದೆ. ಛಾಯಾ ಸಾಹಿತ್ಯ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 94. ಬೆಲೆ 60 ರೂಪಾಯಿ. ಆಸಕ್ತರು 9845394184 ದೂರವಾಣಿಯನ್ನು ಸಂಪರ್ಕಿಸಬಹುದು.