ಹೊರವಲಯದ ಗಾಳಿಯ ತಂಪು-ಕಂಪು

Update: 2017-05-20 18:23 GMT

ಕನ್ನಡ ಸಾಹಿತ್ಯ ಲೋಕದಲ್ಲಿ ‘ಮಾನವ್ಯ ಕವಿ’ ಎಂದು ಗುರುತಿಸಲ್ಪಟ್ಟವರು ಬಿ. ಎ. ಸನದಿ. ಇವರನ್ನು ‘ಮಾನವ್ಯ ಕವಿ’ ಎಂದು ಕರೆದವರು ಹಿರಿಯ ವಿಮರ್ಶಕ ಗೌರೀಶ ಕಾಯ್ಕಿಣಿಯವರು. ಸನದಿಯ ಕುರಿತಂತೆ ಬರೆದ ಕಿರು ಕೃತಿಗೆ ಈ ಹೆಸರನ್ನೇ ಅವರು ಇಟ್ಟಿದ್ದಾರೆ. ಅಂದರೆ ಎರಡು ಅರ್ಥವನ್ನು ಇದು ಒಳಗೊಂಡಿದೆ. ಮನವೀಯತೆಯನ್ನು ಕೇಂದ್ರವಾಗಿಟ್ಟುಕೊಂಡು ಕವಿತೆ ಬರೆದವರು ಮಾತ್ರವಲ್ಲ, ನವ್ಯದ ಅಂತರ್ಮುಖೀ ಭಾವಕ್ಕೆ ಸಿಲುಕಿಕೊಳ್ಳದೆ ನವೋದಯದಿಂದ ಸಂಪೂರ್ಣ ಕಳಚಿಕೊಳ್ಳದೆ ಬರೆಯುತ್ತಾ ಬಂದವರು. ತಮ್ಮ ಬರಹದ ಮೂಲಕವೇ ಹೊಸತೊಂದು ಕಾವ್ಯಪರಂಪರೆಯ ಸೂಚನೆ ಯನ್ನು ಕೊಟ್ಟವರು. ಸನದಿ ಹೊರನಾಡ ಕನ್ನಡಿಗರು. ತಾವು ಇದ್ದಲ್ಲೇ ಹಲವು ಭಾಷೆಗಳನ್ನು ತಮ್ಮದಾಗಿಸಿಕೊಂಡವರು. ಮರಾಠಿ, ಹಿಂದಿಯ ಜೊತೆಗೂ ಅವಿನಾ ಭಾವ ಸಂಬಂಧವನ್ನು ಹೊಂದಿದವರು. ಆದುದರಿಂದಲೇ ಇವರ ಹಲವು ಕವನ ಸಂಕಲನಗಳಲ್ಲಿ ಅನುವಾದಿತ ಕವನಗಳು ಕೆಲವಾದರೂ ಇರುತ್ತವೆ. ‘ಹೊರವಲಯದ ಗಾಳಿ’ ಕವನ ಸಂಕಲನ ಮಾತ್ರ ಇದಕ್ಕೆ ತುಸು ವಿಶಿಷ್ಟವಾದುದು. ಇಲ್ಲಿರುವ ಪದ್ಯಗಳೆಲ್ಲವೂ ಅನುವಾದಿತ ಕವಿತೆಗಳು. ಸಾಧಾರಣವಾಗಿ ಹಿಂದಿ, ಮರಾಠಿ, ಉರ್ದು ಕವಿತೆಗಳನ್ನು ಈ ಹಿಂದೆ ಹೆಚ್ಚು ಆಸಕ್ತಿಯಿಂದ ಅನುವಾದ ಮಾಡಿರುವ ಸನದಿಯವರು ಈ ಕೃತಿಯಲ್ಲಿ ಭಾರತೀಯ ಭಾಷೆಯ ಎಲ್ಲೆಯನ್ನು ದಾಟಿದ್ದಾರೆ. ಇಂಗ್ಲಿಷ್, ಅರಬಿ, ಚೀನಾ ಕವಿತೆಗಳ ಅನುವಾದಗಳು ಗಮನ ಸೆಳೆಯುತ್ತವೆ.
ಬಿಟ್ಟ ಬಾಣ ಮತ್ತು ಸುರಿದ ಹಾಡಿನ ವ್ಯತ್ಯಾಸ ವನ್ನು ಹೇಳುವ ಕವಿ ಹೆನ್ರಿ ಅವರ ‘ಆ್ಯರೋ ಎಂಟ್ ಸಾಂಗ್’, ಎಳೆತನ, ಹಕ್ಕಿಗಳ, ಹೂವುಗಳ ಹಾಡಿನಲ್ಲಿರುವ ಕೇಡು ರಹಿತ ಬದುಕಿನ ಭರವಸೆಯನ್ನು ಹೇಳುವ ಡೇವಿಸ್ ಅವರ ಕನ್‌ಫೆಶನ್ ‘ಒಪ್ಪಿಗೆ’ಯಾಗಿ ಕನ್ನಡಕ್ಕಿಳಿದಿದೆ. ‘ಹಿಮದೊಂದು ಸಂಜೆ ಕಾಡಂಚಿನಲಿ ನಿಂತಾಗ’ ರಾಬರ್ಟ್ ಫ್ರಾಸ್ಟ್ ಅವರ ಕವಿತೆ. ಕಾಡಿನ ರಮ್ಯತೆ, ಗಾಢತೆ, ನಿಗೂಢತೆಯನ್ನು ಹೇಳುವ ಕವಿತೆ ಇದು. ಹತ್ತಕ್ಕೂ ಅಧಿಕ ಚೀನಾದ ಕವಿತೆಗಳ ಅನುವಾದಗಳು ಇಲ್ಲಿವೆ. ಚೀನಾ ಎಂದಾಗ ಕೆಂಪು ರೂಪಕಗಳೇ ಆಗಬೇಕಾಗಿಲ್ಲ. ಅಲ್ಲಿನ ಪ್ರೇಮ ಮತ್ತು ರಮ್ಯತೆಗಳೂ ಸನದಿಯ ಲಯದಲ್ಲಿ ಹೃದಯವನ್ನು ಸ್ಪರ್ಶಿಸುತ್ತವೆ. ಹಾಗೆಯೇ ಅರಬಿ ಕವಿತೆಗಳು, ನಿಗ್ರೋಗಳ ಕಪ್ಪು ವರ್ಣದಿಂದ ಪುಟಿದೆದ್ದ ಧ್ವನಿಗಳೂ ಇಲ್ಲಿವೆ. ನವೋದಯದ ಲಯವನ್ನು ಇಟ್ಟುಕೊಂಡು ಎಲ್ಲ ಪದ್ಯಗಳೂ ರೂಪ ತಾಳಿವೆ. ಸನದಿಯ ಕೈಯಲ್ಲಿ ಎಲ್ಲ ಕವಿತೆಗಳೂ ಹೊಸದಾಗಿ ಜನ್ಮತಾಳಿವೆ. ನಮ್ಮದೇ ನೆಲದ ಕವಿತೆಗಳಾಗಿ ನಮ್ಮನ್ನು ಆಕರ್ಷಿಸುತ್ತವೆ. ಸುಂದರ ಪುಸ್ತಕ ಪ್ರಕಾಶನ ಧಾರವಾಡ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 96. ಮುಖಬೆಲೆ 70 ರೂ. ಆಸಕ್ತರು 9448556458 ದೂರವಾಣಿಯನ್ನು ಸಂಪರ್ಕಿಸಬಹುದು.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News