ಬರಲಿದೆ: ಕಾರ್ಮಿಕರ ಸದ್ದಡಗಿಸುವ ಹೊಸ ಸಂಹಿತೆ

Update: 2017-05-22 18:33 GMT

ಭಾಗ-1

ಮೋದಿ ಸರಕಾರ ಸಿದ್ಧಪಡಿಸಿರುವ ಹೊಸ ಕಾರ್ಮಿಕ ಸಂಹಿತೆಯ ಕರಡುಪ್ರತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರಲ್ಲಿ ಹತ್ತುಹಲವು ಕಾರ್ಮಿಕ ವಿರೋಧಿ ಅಂಶಗಳಿರುವ ವಿಚಾರ ಬಯಲಾಗುತ್ತದೆ. ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ನಿರಾಕರಿಸಲಿರುವ, ಕಾರ್ಮಿಕ ಸಂಘಗಳನ್ನು ಅಪ್ರಸ್ತುತಗೊಳಿಸಲಿರುವ ಈ ನೂತನ ಸಂಹಿತೆ ನಿಜಕ್ಕೂ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಬಂದೊದಗಿರುವ ಬಹು ದೊಡ್ಡ ಗಂಡಾಂತರವಾಗಿದೆ.

ಎಲ್ಲಾ ವಿಧದ ಪ್ರತಿರೋಧಗಳ ಹುಟ್ಟಡಗಿಸುವ ಅಪ್ಪಟ ಫ್ಯಾಸಿಸ್ಟ್ ತಂತ್ರವನ್ನು ಅನುಸರಿಸುತ್ತಿರುವ ಮೋದಿ ಸರಕಾರದ ಕಾರ್ಯಚಟುವಟಿಕೆಗಳು ಇಂದು ಸಮಾಜದ ಸಕಲ ಕ್ಷೇತ್ರಗಳಿಗೂ ವಿಸ್ತರಿಸಿವೆ. ನ್ಯಾಯಕ್ಕಾಗಿ, ಪರಿಸರ ಸಂರಕ್ಷಣೆಗಾಗಿ ಹೋರಾಡುತ್ತಿರುವ ಜನಪರ, ದಲಿತ, ದಮನಿತಪರ ಸರಕಾರೇತರ ಸಂಸ್ಥೆಗಳಿಗೆ ಹಣಕಾಸಿನ ಬರ ಉಂಟುಮಾಡುವ ಮೂಲಕ ಅವುಗಳ ಶಕ್ತಿಯನ್ನು ಉಡುಗಿಸಲಾಗುತ್ತಿದೆ. ಲವ್ ಜಿಹಾದ್, ಗೋಹತ್ಯಾ ನಿಷೇಧಗಳಂತಹ ಭಾವೋದ್ರೇಕಕಾರಿ ವಿಷಯಗಳ ಮೂಲಕ ಅಲ್ಪಸಂಖ್ಯಾತರನ್ನು ಮತ್ತು ದಲಿತರನ್ನು ಇನ್ನಷ್ಟು ಮೂಲೆಗುಂಪು ಮಾಡಲಾಗುತ್ತಿದೆ. ಇದರೊಂದಿಗೆ ಭಟ್ಟಂಗಿ ಸಮೂಹ ಮಾಧ್ಯಮಗಳು ಮತ್ತು ತನ್ನದೇ ಆದ ಹಲವಾರು ಸಾಮಾಜಿಕ ಜಾಲತಾಣಗಳು ಮತ್ತು ಬಾಡಿಗೆ ಟ್ರೋಲ್‌ಗಳ ಮೂಲಕ ಬುದ್ಧಿಜೀವಿಗಳ ಬಾಯ್ಮುಚ್ಚಿಸಲು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಹುಟ್ಟುತ್ತಿರುವ ಬಂಡಾಯ, ಪ್ರತಿರೋಧಗಳ ಕಿಚ್ಚನ್ನು ನಂದಿಸಲು ವಾಮಮಾರ್ಗಗಳನ್ನು ಬಳಸಲಾಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲೂ ಮೋದಿ ಸರಕಾರದ ಇನ್ನಿತರ ಕೆಲವು ಪ್ರಯತ್ನಗಳು ತೀವ್ರ ಹಿನ್ನಡೆ ಅನುಭವಿಸಿವೆ. ಆರಂಭದಲ್ಲಿ ಅದು ತನ್ನ ವಿವಾದಾತ್ಮಕ ಕಾರ್ಪೊರೇಟ್‌ಪರ, ರೈತವಿರೋಧಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸಲು ಹೊರಟು ಕೈಸುಟ್ಟುಕೊಂಡುದನ್ನು ಮರೆಯಲು ಸಾಧ್ಯವೇ? ಕಾರ್ಮಿಕರ ಭವಿಷ್ಯನಿಧಿ ನಿಯಮಗಳಿಗೆ ತನಗನುಕೂಲಕರವಾದ ತಿದ್ದುಪಡಿಗಳನ್ನು ಮಾಡಿದಾಕ್ಷಣ ಅದಕ್ಕೆ ಗಾರ್ಮೆಂಟ್ ವಲಯದಿಂದ ಅನಿರೀಕ್ಷಿತ ಹಾಗೂ ಅಭೂತಪೂರ್ವ ಪ್ರತಿರೋಧ ವ್ಯಕ್ತವಾದ ಮರುಗಳಿಗೆಯಲ್ಲೆ ತಿದ್ದುಪಡಿಗಳನ್ನು ಬಿಸಿತುಪ್ಪದಂತೆ ಉಗುಳಬೇಕಾಯಿತು! ಇಷ್ಟಾದರೂ ಪಾಠ ಕಲಿಯದ ಮೋದಿ ಸರಕಾರ ಈಗ ಹಟ ಬಿಡದ ತ್ರಿವಿಕ್ರಮನಂತೆ ತನ್ನ ತಂತ್ರಗಾರಿಕೆಯನ್ನು ಕಾರ್ಮಿಕ ವಲಯಕ್ಕೂ ವಿಸ್ತರಿಸುವ ಪ್ರಯತ್ನದಲ್ಲಿ ತೊಡಗಿದೆ. ಅದೀಗ ಸಿದ್ಧಪಡಿಸಿರುವ ಹೊಸ ಕಾರ್ಮಿಕ ಸಂಹಿತೆಯ ಕರಡುಪ್ರತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರಲ್ಲಿ ಹತ್ತುಹಲವು ಕಾರ್ಮಿಕ ವಿರೋಧಿ ಅಂಶಗಳಿರುವ ವಿಚಾರ ಬಯಲಾಗುತ್ತದೆ. ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ನಿರಾಕರಿಸಲಿರುವ, ಕಾರ್ಮಿಕ ಸಂಘಗಳನ್ನು ಅಪ್ರಸ್ತುತಗೊಳಿಸಲಿರುವ ಈ ನೂತನ ಸಂಹಿತೆ ನಿಜಕ್ಕೂ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಬಂದೊದಗಿರುವ ಬಹು ದೊಡ್ಡ ಗಂಡಾಂತರವಾಗಿದೆ.

ಮೋದಿ ಸರಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಇಂದು ಹೊಸ ಕಾರ್ಮಿಕ ಸಂಹಿತೆಯ ಭಾಗವಾಗಿ 4 ಶಾಸನಗಳನ್ನು ಮಾಡಲು ಉದ್ದೇಶಿಸುತ್ತಿದೆ. ತಾನು ಇದನ್ನು ಮಾಡುತ್ತಿರುವುದು ವೇತನ, ಔದ್ಯೋಗಿಕ ಸಂಬಂಧಗಳು, ಸಾಮಾಜಿಕ ಭದ್ರತೆ, ಸುರಕ್ಷಿತತೆ, ಆರೋಗ್ಯ ಮತ್ತು ದುಡಿಮೆಯ ಪರಿಸ್ಥಿತಿಗಳಿಗೆ ಸಂಬಂಧಪಟ್ಟ 44 ಕಾರ್ಮಿಕ ಕಾಯ್ದೆ ಮತ್ತು ಸಂಹಿತೆಗಳ ಸರಳೀಕರಣ, ಏಕೀಕರಣ ಹಾಗೂ ಸುಧಾರಣೆಗೋಸ್ಕರ ಎಂದು ಅದು ಹೇಳಿಕೊಂಡಿದೆ. ತರುವಾಯ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಗಳಿಗೆ ಸಂಬಂಧಪಟ್ಟ ಕಾರ್ಮಿಕ ಸಂಹಿತೆಯ ಕರಡನ್ನು ಸಿದ್ಧಪಡಿಸಿ ಅದನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಮೊದಲು ಸಲಹೆ ಸೂಚನೆಗಳಿಗೆ ಪೂರ್ತಿ ಒಂದು ತಿಂಗಳ ಸಮಯ ಕೂಡ ನೀಡದೆ ಅವೆಲ್ಲವನ್ನು ಎಪ್ರಿಲ್ 15ರ ಒಳಗಾಗಿ ಕಳುಹಿಸಬೇಕೆಂದು ತಾಕೀತುಮಾಡಿತ್ತು. ನಂತರದ ಬೆಳವಣಿಗೆಯಲ್ಲಿ ಕೊನೆ ದಿನಾಂಕವನ್ನು ಮೇ 15ರ ತನಕ ಮುಂದುವರಿಸಲಾಗಿದೆ.

ಸದರಿ ಕಲ್ಯಾಣ ಸಂಹಿತೆ ಮುಖ್ಯವಾಗಿ ಕಾರ್ಮಿಕರ, ಮಾಲಕರ, ಮಾಲಕತ್ವ ಸಂಸ್ಥೆಗಳ ನೋಂದಣಿ, ದೇಣಿಗೆ ಸಂಗ್ರಹ, ಕಾರ್ಯನೀತಿ, ಆಡಳಿತ ವ್ಯವಸ್ಥೆ ಮತ್ತು ಅತಿಯಾದ ನಿಯಂತ್ರಣ ಹಾಗೂ ದಂಡನೆಯ ವ್ಯವಸ್ಥೆಗಳ ಕುರಿತಾಗಿದೆ ಎಂದು ತಿಳಿದುಬರುತ್ತದೆ. ಈ ಉದ್ದೇಶಿತ ಸಂಹಿತೆಯ ಪರಿಣಾಮ ದೇಶದ ಒಟ್ಟು 70 ಕೋಟಿ ಕಾರ್ಮಿಕರ ಮೇಲಾಗಲಿದೆ. ಆದರೆ ಇವರಲ್ಲಿ ಶೇಕಡಾ 92ರಷ್ಟು ಮಂದಿ ಅಸಂಘಟಿತ ಮತ್ತು ಅನೌಪಚಾರಿಕ ವಲಯಗಳಲ್ಲಿ ದುಡಿಯುವವರು. ಆದುದರಿಂದಲೇ ಈ ಕಲ್ಯಾಣ ಸಂಹಿತೆಯ ಗುಣಾವಗುಣಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಗಣಿಸುವುದು ಅವಶ್ಯವಾಗಿದೆ.

‘ಕಾರ್ಮಿಕ’ ಪದಕ್ಕೆ 9 ವಿಭಿನ್ನ ಅರ್ಥ ನಿರೂಪಣೆಗಳಿರುವ ಅಸಲಿಯತ್ತನ್ನು ಈ ಸಂಹಿತೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಹೀಗಿದ್ದರೂ ಅದರ ಮುಖ್ಯ ವಿಭಾಗಗಳಲ್ಲಿ ಕಾರ್ಮಿಕರಿಗೆ ಸಂಬಂಧಿಸಿದ ವಿಚಾರಗಳನ್ನು ಉಲ್ಲೇಖಿಸುವ ಸಂದರ್ಭಗಳಲ್ಲಿ ಭಿನ್ನ ಭಿನ್ನ ಗುಂಪುಗಳನ್ನು ಗುರುತಿಸಲಾಗಿಲ್ಲ. ಭಾರತದಲ್ಲಿ ದುಡಿಯುವ ವರ್ಗ ಎಂದರೆ ಅದೊಂದು ನಾನಾ ಬಗೆಯ ಕೂಟಗಳ ಜಟಿಲ ಮಿಶ್ರಣ. ಇದರಲ್ಲಿ ಮನೆಕೆಲಸದವರಿದ್ದಾರೆ, ಗುತ್ತಿಗೆ ಕಾರ್ಮಿಕರಿದ್ದಾರೆ, ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುವ ಕಾರ್ಮಿಕರಿದ್ದಾರೆ ಅಥವಾ ಔಪಚಾರಿಕ ಮತ್ತು ಅನೌಪಚಾರಿಕ ಆರ್ಥಿಕ ಕ್ಷೇತ್ರಗಳಲ್ಲಿ ದುಡಿಯುವವರಿದ್ದಾರೆ. ಅಸ್ತಿತ್ವದಲ್ಲಿರುವ ಕಾಯ್ದೆಗಳನ್ನು ಸರಳೀಕರಿಸುವ ನೆಪದಲ್ಲಿ ಭಾರತೀಯ ಕಾರ್ಮಿಕರ ಅಗಾಧ ಪ್ರಭೇದಗಳನ್ನು ಮತ್ತು ಅವರ ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆಗಳನ್ನು ಮರೆಗೆ ಸರಿಸಲಾಗಿದೆ.

ಕಾನೂನುಗಳ ಏಕೀಕರಣಕ್ಕೆ ಭಾರೀ ಅವಸರ ಮಾಡುತ್ತಿರುವ ಮೋದಿ ಸರಕಾರ ಕಾರ್ಮಿಕರನ್ನು ಈ ಪ್ರಕ್ರಿಯೆಯಿಂದ ಹೆಚ್ಚುಕಮ್ಮಿ ದೂರ ಇರಿಸಿದೆ. ಒಂದು ಕಡೆ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚುಕಮ್ಮಿ ಶೂನ್ಯ ಎಂದಾಗಿದ್ದರೆ ಮತ್ತೊಂದು ಕಡೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಎಂಬುದು ಬರೀ ಕಾಟಾಚಾರಕ್ಕೆ ಎಂದಾಗಿದೆ. ಕಾರಣವೇನೆಂದರೆ ಸಂಹಿತೆಯ ಕರಡುಪ್ರತಿ ಕೇವಲ ಜಾಲತಾಣದಲ್ಲಿ ಲಭ್ಯವಿದೆ ಮತ್ತು ಅದು ಕೇವಲ ಇಂಗ್ಲಿಷ್ ಭಾಷೆಯಲ್ಲಿದೆ. ಪರಿಣಾಮವಾಗಿ ಅಧಿಕಾಂಶ ಕಾರ್ಮಿಕರಿಗೆ ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡುವ ಅವಕಾಶ ಇಲ್ಲದಂತಾಗಿದೆ.

ಪ್ರಸ್ತಾಪಿತ ಸಂಹಿತೆಯಡಿ ಒಂದು ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲಾಗುವುದಂತೆ. ಇದರಲ್ಲಿ ಒಟ್ಟು 21 ಸದಸ್ಯರು ಕಾರ್ಯಾಚರಿಸಲಿದ್ದಾರಂತೆ. ಆದರೆ ಇವರ ಪೈಕಿ ಕಾರ್ಮಿಕರ ಪ್ರತಿನಿಧಿಗಳ ಸಂಖ್ಯೆ ಎಷ್ಟು ಗೊತ್ತೇ? ಬರೀ 3! ಅಷ್ಟೆ ಅಲ್ಲ, ಇವರ ನೇಮಕ ಮಾಡುವುದು ಕೂಡ ಕಾರ್ಮಿಕ ಸಂಘಗಳಲ್ಲ, ಸರಕಾರ ಅಂತೆ! ಈ ಮೂವರಲ್ಲಿ ಕನಿಷ್ಠ ಒಬ್ಬರಾದರೂ ಮಹಿಳೆ ಆಗಿರಬೇಕು ಎನ್ನುವಲ್ಲಿ ಲಿಂಗ ತಾರತಮ್ಯವೂ ಕಾಣಿಸುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸಮಿತಿಗಳಲ್ಲಿ ಇಷ್ಟೂ ಇಲ್ಲ. ನಿಜವಾಗಿ ಪ್ರತಿನಿಧಿಗಳನ್ನು ನೇಮಿಸುವುದು ಕಾರ್ಮಿಕ ಸಂಘಗಳ ಹಕ್ಕು. ಆದರೆ ಇಲ್ಲಿ ಆ ಅಧಿಕಾರವನ್ನು ಸರಕಾರಕ್ಕೆ ನೀಡಿರುವುದು ಅಥವಾ ಇನ್ನೂ ಸರಿಯಾಗಿ ಹೇಳುವುದಾದರೆ, ಸರಕಾರವೇ ವಹಿಸಿಕೊಂಡಿರುವುದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ಇದರಿಂದಾಗಿ ಬಹುದೊಡ್ಡ ಸಂಖ್ಯೆಯಲ್ಲಿರುವ ಅಸಂಘಟಿತ, ಅನೌಪಚಾರಿಕ ವಲಯಗಳ ಕಾರ್ಮಿಕರನ್ನು ಕೇಳುವವರಿಲ್ಲ ಎಂಬಂತಾಗಲಿದೆ.

ಪ್ರಸಕ್ತವಾಗಿ ಕಾರ್ಮಿಕರ ಹಕ್ಕುಗಳ ವಿಚಾರದಲ್ಲಿ ತ್ರಿಪಕ್ಷೀಯ ಮಾತುಕತೆಗಳಿಗೆ ಅವಕಾಶ ಇದೆ. ಆದರೆ ಅತ್ಯಂತ ತಿರೋಗಾಮಿಯಾಗಿರುವ ಈ ಹೊಸ ಸಂಹಿತೆ ಕಾರ್ಮಿಕ ಸಂಘಗಳಿಗೆ ಮಾತುಕತೆಗಳಲ್ಲಿ ಯಾವ ಪಾತ್ರವೂ ಇಲ್ಲದಂತೆ ನೋಡಿಕೊಳ್ಳುತ್ತದೆ. ಅದರಲ್ಲಿ ಹರಿಬಿಡಲಾಗಿರುವ ಹೊಸ ಚಿಂತನೆಯ ಪ್ರಕಾರ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದ ನೀತಿ ಮತ್ತು ನಿಯಂತ್ರಣಗಳ ಕಾರ್ಯವನ್ನು ರಾಷ್ಟ್ರೀಯ ಸಾಮಾಜಿಕ ಭದ್ರತಾ ಮಂಡಳಿ, ರಾಷ್ಟ್ರೀಯ ಸಮಿತಿ ಮತ್ತು ರಾಜ್ಯ ಸಮಿತಿಗಳಂತಹ ಸಾಮಾಜಿಕ ಭದ್ರತಾ ಸಂಸ್ಥೆಗಳ ಕೈಗೊಪ್ಪಿಸಲಾಗುವುದು. ಇಲ್ಲಿ ಕಾರ್ಮಿಕ ಸಂಘಗಳಿಗೆ ಯಾವ ಪಾತ್ರವನ್ನೂ ನೀಡದಿರುವುದನ್ನು ಗಮನಿಸಬೇಕಾಗಿದೆ. ಪ್ರಧಾನಮಂತ್ರಿಯ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ಮಂಡಳಿಗೆ ಅಪಾರ ಆಡಳಿತಾತ್ಮಕ, ನಿಯಂತ್ರಕ ಮತ್ತು ಆರ್ಥಿಕ ಅಧಿಕಾರಗಳನ್ನು ನೀಡಲಾಗಿದ್ದು ಅದರಲ್ಲಿ ಪ್ರಾವಿಡೆಂಟ್ ಫಂಡ್ ಮತ್ತು ನಿಧಿಗಳ ನಿಯಂತ್ರಣ, ಸಂಬಂಧಪಟ್ಟ ನಿಯಮಗಳ ರಚನೆ ಮುಂತಾದವು ಸೇರಿವೆ. ಅರ್ಥಾತ್ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಅತಿಯಾದ ಕೇಂದ್ರೀಕರಣಕ್ಕೆ ತುತ್ತಾಗಲಿದೆ. ಒಟ್ಟಾರೆಯಾಗಿ ಕಾರ್ಮಿಕರ ಪ್ರಜಾತಾಂತ್ರಿಕ ಹಕ್ಕುಗಳಿಗೆ ಭಾರೀ ಅಪಾಯ ಕಾದಿದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ