ಬರಲಿದೆ: ಕಾರ್ಮಿಕರ ಸದ್ದಡಗಿಸುವ ಹೊಸ ಸಂಹಿತೆ

Update: 2017-05-23 18:28 GMT

ಭಾಗ-2

ಹೆರಿಗೆ ಸೌಲಭ್ಯ ಕಾಯ್ದೆ 1961 ಇದರಡಿ ಇದುವರೆಗೆ ಎಲ್ಲಾ ಮಹಿಳೆಯರಿಗೂ ಸಿಗುತ್ತಿದ್ದ ಸೌಲಭ್ಯಗಳು ಇನ್ನು ಮುಂದೆ ಕೇವಲ ಎರಡು ಮಕ್ಕಳಿರುವವರಿಗೆ ಮಾತ್ರ ಎಂದಾಗಲಿದೆ. ಸಂಹಿತೆ ಒಂದು ಕಡೆ ಮಹಿಳೆಯರನ್ನು ಹೆರಿಗೆಗೆ ಮುನ್ನ ಮತ್ತು ನಂತರದಲ್ಲಿ ಉದ್ಯೋಗಕ್ಕೆ ಹಚ್ಚಬಾರದೆಂದು ಹೇಳುತ್ತದಾದರೂ ಇನ್ನೊಂದು ಕಡೆ ಹೆರಿಗೆಗೆ ಮುಂಚಿನ ಒಂದು ವರ್ಷದಲ್ಲಿ ಕನಿಷ್ಠ 80 ದಿನ ಕೆಲಸ ಮಾಡಿರಬೇಕು ಎಂಬ ನಿಬಂಧನೆಯನ್ನು ವಿಧಿಸುತ್ತದೆ! ಪ್ರಾಯೋಗಿಕವಾಗಿ ನೋಡಿದರೆ ಸ್ಥಾಯಿ ನೌಕರರಿಗಷ್ಟೆ ಅನ್ವಯಿಸುವ ಈ ನಿಯಮದಿಂದಾಗಿ ಸಾಮಾನ್ಯವಾಗಿ ಗುತ್ತಿಗೆಯಲ್ಲಿ ದುಡಿಯುವ ದೊಡ್ಡ ಸಂಖ್ಯೆಯ ಬಡ ಮಹಿಳೆಯರೆಲ್ಲ ಹೆರಿಗೆ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ.

ನೂತನ ಸಂಹಿತೆಯ ಪ್ರಕಾರ ಪ್ರತಿಯೊಬ್ಬ ಮಾಲಕ, ಕಾರ್ಮಿಕ ಮತ್ತು ಪ್ರತಿಯೊಂದು ಮಾಲಕ- ಕಾರ್ಮಿಕ ಸಂಬಂಧ ನೋಂದಣಿಯಾಗಬೇಕಾಗಿದೆ. ಆದರೆ ಇಲ್ಲಿ ಇಡೀ ಪ್ರಕ್ರಿಯೆಯಲ್ಲಿ ಅಸ್ಪಷ್ಟತೆ ಮಾತ್ರವಲ್ಲ, ಹಲವೊಂದು ಗೊಂದಲಗಳೂ ಇವೆ. ಅಸಂಘಟಿತ ಅಥವಾ ಅನೌಪಚಾರಿಕ ವಲಯಗಳಲ್ಲಿ ಒಂದಕ್ಕಿಂತ ಹೆಚ್ಚು ಮಾಲಕರನ್ನು ಹೊಂದಿರುವ ಕಾರ್ಮಿಕರಿಗೆ (ಉದಾ: ಕೃಷಿ, ಮನೆಕೆಲಸ ಇತ್ಯಾದಿಗಳಲ್ಲಿರುವವರು) ಸ್ವಯಂ ಘೋಷಣೆ ಮಾಡುವ ಅವಕಾಶ ನೀಡಲಾಗಿಲ್ಲ. ನೋಂದಣಿ ಪ್ರಾಧಿಕಾರದ ಅರ್ಹತೆ ಹಾಗೂ ಗುರುತು ಚಹರೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ಇಂತಹ ಬೃಹತ್ತಾದ ನೋಂದಣಿ ಕಾರ್ಯಾಚರಣೆಯಲ್ಲಿ ನಿಧಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ, ಸೇವೆ ಒದಗಿಸುವ ಕೆಲಸಕ್ಕೆ, ಹಣಕಾಸು ವಿತರಿಸುವ ಕೆಲಸಕ್ಕೆ, ದಾಖಲೆ ಇರಿಸುವ ಕೆಲಸಕ್ಕೆ ಮತ್ತು ಇನ್ನಿತರ ಕೆಲಸಗಳಿಗೆ ಖಾಸಗಿ ಸಂಸ್ಥೆಗಳನ್ನು ನೇಮಿಸುವ ಬಗ್ಗೆ ಬರೆಯಲಾಗಿದೆ. ಇದನ್ನು ನೋಡುವಾಗ ಸರಕಾರ ಇಲ್ಲಿ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿರುವ ಹಾಗೆ ಕಾಣುತ್ತಿದೆ. ಮತ್ತೊಂದು ವಿಷಯವೆಂದರೆ ಸಂಘಟಿತ, ಅಸಂಘಟಿತ ವಲಯಗಳೆರಡರಲ್ಲೂ ಮಹಿಳೆಯರ ಸಂಖ್ಯೆ ಗಣನೀಯ ಮಟ್ಟದಲ್ಲಿದ್ದರೂ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಏನೂ ಹೇಳಲಾಗಿಲ್ಲ.

ಹೊಸ ಸಂಹಿತೆಯಲ್ಲಿ ಅತ್ಯಧಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಅಸಂಘಟಿತ, ಅನೌಪಚಾರಿಕ ವಲಯದ ಕಾರ್ಮಿಕರನ್ನು ನಿರ್ಲಕ್ಷಿಸಲಾಗಿದೆ. ಸಂಹಿತೆ ರಚನೆಯ ಸಂದರ್ಭದಲ್ಲಿ ಮಾಡಲಾಗಿರುವ ಪೂರ್ವಕಲ್ಪನೆಗಳು ಸರಿಯಾಗಿಲ್ಲ. ಆ ಪೂರ್ವಕಲ್ಪನೆಗಳು ಈ ರೀತಿ ಇವೆ:

♦ ಎಲ್ಲಾ ಕಾರ್ಮಿಕರು ಸದಾ ನಿಯಮಿತವಾಗಿ ದುಡಿದು ಸಂಭಾವನೆ ಪಡೆಯುತ್ತಾರೆ. ಇದರಿಂದಾಗಿ ಅವರಿಗೆ ಪ್ರತೀ ತಿಂಗಳು ಕನಿಷ್ಠ ಆದಾಯ ಸಿಗುತ್ತಿದೆ.

♦ ಎಲ್ಲಾ ಕಾರ್ಮಿಕರೂ ತಮಗೆ ಸಿಗಬೇಕಿರುವುದಕ್ಕಾಗಿ ಯಾರದೇ ಸಹಾಯವಿಲ್ಲದೆ ವೈಯಕ್ತಿಕವಾಗಿ ಮಾತುಕತೆ ನಡೆಸಬಲ್ಲರು.

♦ ಸಂಘಟಿತ-ಅಸಂಘಟಿತ, ಔಪಚಾರಿಕ- ಅನೌಪಚಾರಿಕ ವಲಯಗಳಲ್ಲಿ ದುಡಿಯುವವರ ಮಧ್ಯೆ ಗುರುತಿಸಲು ಸಾಧ್ಯವಾಗುವಷ್ಟು ಭಿನ್ನತೆ ಇಲ್ಲ, ಎಲ್ಲಾ ಕಾರ್ಮಿಕರೂ ಏಕರೂಪವಾಗಿದ್ದಾರೆ.

♦ ಏಕೀಕರಣದ ಕುರಿತು ವಿಚಾರಪೂರ್ಣ ಪುನರ್‌ಪರಿಶೀಲನೆ ನಡೆಸುವ ಅಗತ್ಯವಿದೆ

ಈ ನೂತನ ಸಂಹಿತೆ ಜಾರಿಗೆ ಬಂದರೆ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ಭದ್ರತೆ ದೊರೆಯಲಿದೆ ಎಂದು ಮೋದಿ ಸರಕಾರ ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ. ಆದರೆ ಸಂಹಿತೆಯ ಕರಡನ್ನು ಸೂಕ್ಷ್ಮ ಪರಿಶೀಲನೆಗೆ ಒಡ್ಡಿದಾಗಷ್ಟೆ ಇದರ ಅಸಲಿಯತ್ತೇನೆಂದು ತಿಳಿಯುತ್ತದೆ. ನೂತನ ಸಂಹಿತೆ ಪ್ರಕಾರ ಸಾಮಾಜಿಕ ಭದ್ರತಾ ಸೌಲಭ್ಯ ದೊರೆಯಬೇಕಿದ್ದರೆ ಪ್ರತಿಯೊಬ್ಬ ಕಾರ್ಮಿಕ ಕಡ್ಡಾಯವಾಗಿ ಸಾಮಾಜಿಕ ಭದ್ರತಾ ನಿಧಿಗೆ ದೇಣಿಗೆ ನೀಡಬೇಕು. ಆದರೆ ನೋಂದಣಿ ಪ್ರಕ್ರಿಯೆಯಲ್ಲಿರುವ ಅಸ್ಪಷ್ಟತೆ ಮತ್ತು ಜಟಿಲತೆಗಳ ಪರಿಣಾಮವಾಗಿ ಅಸಂಘಟಿತ, ಅನೌಪಚಾರಿಕ ವಲಯಗಳಲ್ಲಿ ದುಡಿಯುವ ದೊಡ್ಡ ಸಂಖ್ಯೆಯ ಕಾರ್ಮಿಕರು ಈ ಸಾಮಾಜಿಕ ಭದ್ರತೆಯ ವ್ಯಾಪ್ತಿಯಿಂದ ಹೊರಗುಳಿಯಲಿದ್ದಾರೆ. ಗಮನಾರ್ಹ ವಿಷಯವೆಂದರೆ ಕನಿಷ್ಠ ವೇತನದ ಕುರಿತು ನಿರ್ಧಾರ ತಳೆಯುವುದು ಆಯಾ ಕ್ಷೇತ್ರಗಳಲ್ಲಿ ಎಂದಾಗಲಿದೆ. ಆದರೆ ಕೆಲವೊಮ್ಮೆ ಒಂದೇ ಕ್ಷೇತ್ರದೊಳಗೆ (ಉದಾ: ಬೀಡಿ) ಕೂಡ ಭೌಗೋಳಿಕವಾಗಿ ವಿಭಿನ್ನ ಕನಿಷ್ಠ ವೇತನಗಳಿರುತ್ತವೆ. ಅನೌಪಚಾರಿಕ ವಲಯದಲ್ಲಿ ದುಡಿಯುವ ಹೆಚ್ಚಿನವರಿಗೆ ಕಾನೂನಿನ ಪ್ರಕಾರ ಕನಿಷ್ಠ ವೇತನ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಗಳು ಇರುವಾಗ ಇವರೆಲ್ಲರಿಂದ ನಿಯಮಿತವಾಗಿ ಸಾಮಾಜಿಕ ಭದ್ರತಾ ನಿಧಿಗೆ ದೇಣಿಗೆ ನೀಡಲು ಸಾಧ್ಯವಿಲ್ಲ. ಗೃಹಿಣಿಯರು, ನಿರುದ್ಯೋಗಿಗಳು, ಅಂಗವಿಕಲರು, ತೀರ ಕಮ್ಮಿ ವೇತನ ಪಡೆಯುವ ದಿನಗೂಲಿಗಳು ಮುಂತಾದವರಿಗೂ ದೇಣಿಗೆ ನೀಡುವ ಸಾಮರ್ಥ್ಯ ಇರುವುದಿಲ್ಲ. ಸಂದರ್ಭದಲ್ಲಿ ಉದಾಹರಣೆಯಾಗಿ ಗೋಶಾಲೆಗಳಲ್ಲಿ ದುಡಿಯುವ ಕಾರ್ಮಿಕರ ದುಸ್ಥಿತಿಯ ವಿಚಾರವನ್ನು ಎತ್ತಿಕೊಳ್ಳಬಹುದು. ವಾಸ್ತವ ಏನೆಂದರೆ ಗೋಹಕ್ಕುಗಳ ಬಗ್ಗೆ ಭಾರೀ ಕಾಳಜಿ ತೋರಿಸುವ ಮಾಲಕರು ಮಾನವ ಹಕ್ಕುಗಳನ್ನು ಪೂರ್ತಿ ಕಡೆಗಣಿಸುತ್ತಿದ್ದಾರೆ. ತಾವು ಮಹಾನ್ ಗೋಪ್ರೇಮಿಗಳೆಂದು ಹೇಳಿಕೊಳ್ಳುವ ಇವರು ಗೋವುಗಳನ್ನು ನೋಡಿಕೊಳ್ಳುವ ನೌಕರರನ್ನು ತೀರ ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಜೈಪುರದ ಹಿಂಗೊನಿಯ ಗೋಶಾಲೆ. ಇಲ್ಲಿರುವ 13,166 ಗೋವುಗಳನ್ನು ನೋಡಿಕೊಳ್ಳಲು ಕೇವಲ 240 ನೌಕರರನ್ನು ಇಟ್ಟುಕೊಳ್ಳಲಾಗಿದೆ. ಇಲ್ಲಿ ನೌಕರರಿಗೆ ಇಎಸ್‌ಐ ಸೌಲಭ್ಯ ಇಲ್ಲ. ಅಪಘಾತಕ್ಕೀಡಾಗಿ ಮನೆಯಲ್ಲೆ ಶುಶ್ರೂಷೆ ಪಡೆಯಬೇಕಾಗಿರುವವರಿಗೆ ಸಂಬಳ ನೀಡಲಾಗುತ್ತಿಲ್ಲ. ಇದಕ್ಕೆ ಇತ್ತೀಚಿನ ನಿದರ್ಶನವೆಂದರೆ ಗೋವಿನ ಏಟಿನಿಂದ ಕೈ ಮೂಳೆ ಮುರಿತಕ್ಕೊಳಗಾಗಿ ಕೆಲಸಕ್ಕೆ ಹೋಗಲಾರದೆ ಮನೆಯಲ್ಲಿರಬೇಕಾಗಿ ಬಂದಿರುವ ಮಹಿಳಾ ಕರ್ಮಚಾರಿಯೊಬ್ಬರ ಕತೆ.

thewire.in ನೂತನ ಸಂಹಿತೆ ಎಲ್ಲಾ ಕಾರ್ಮಿಕರಿಗೂ ಭದ್ರತೆ ಒದಗಿಸಲು ಪ್ರಯತ್ನಿಸುತ್ತದೆ ಎಂಬ ಸಾಮಾನ್ಯ ಗ್ರಹಿಕೆಯೊಂದನ್ನು ಬಿತ್ತಲಾಗಿದ್ದು ಅದನ್ನು ಪ್ರಶ್ನಿಸುವ ಅಗತ್ಯವಿದೆ. ನಿರ್ಧಾರ ಪ್ರಕ್ರಿಯೆಯಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ತಿಲಾಂಜಲಿ ನೀಡಲಾಗಿರುವುದನ್ನೂ ಪ್ರಶ್ನಿಸಬೇಕಾಗಿದೆ. ವಿಶೇಷವಾಗಿ ಸಂಹಿತೆಯಲ್ಲಿ ಕಾರ್ಮಿಕರ ಹಕ್ಕುಗಳ ಬದಲು ಕಾರ್ಮಿಕರ ಸೌಲಭ್ಯಗಳು ಎಂಬ ಪದಬಳಕೆ ಗಮನಾರ್ಹವಾಗಿದ್ದು ಇದೆಲ್ಲವೂ ಸರಕಾರ ಕೊಡಮಾಡುವ ಬಕ್ಷೀಸು ಎಂಬ ಭಾವನೆಯನ್ನು ಬಿತ್ತುವಂತಿವೆ. ಇನ್ನು ತ್ರಿಪಕ್ಷೀಯ ಮಾತುಕತೆಗಳನ್ನು ಇಲ್ಲವಾಗಿಸುವುದೆಂದರೆ ಕಾರ್ಮಿಕ ಸಂಘಗಳನ್ನು ನಾಶಪಡಿಸುವುದು ಎಂದರ್ಥ. ಇದರ ಹಿಂದೆ ಕಾರ್ಮಿಕರ ಹಕ್ಕುಗಳನ್ನು ದಮನಿಸುವ ಮತ್ತು ಇಡೀ ಕಾರ್ಮಿಕ ಚಳವಳಿಯನ್ನೇ ಕೊನೆಗೊಳಿಸುವ ಹುನ್ನಾರವೊಂದು ಅಡಗಿರುವಂತೆ ತೋರುತ್ತದೆ. (ಆಧಾರ: 12-5-17ರ ನಲ್ಲಿ ಪ್ರೇಮ್‌ದಾಸ್ ಪಿಂಟೊ, ಶ್ರುತಿ ಜೈನ್ ಲೇಖನಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ