ತರ್ಕಕ್ಕೆ ನಿಲುಕದ ವಕ್ಫ್ ನೋಡಲ್ ಅಧಿಕಾರಿಗಳ ನೇಮಕ

Update: 2017-05-24 18:11 GMT

ಕರ್ನಾಟಕ ವಕ್ಫ್‌ಬೋರ್ಡ್, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಚುನಾವಣೆ ನಡೆಸುವ ಬದಲು ಮಂಡಳಿಯ ಆಡಳಿತಾಧಿಕಾರಿ ಕಾನೂನುಬಾಹಿರವಾಗಿ 13 ಮಂದಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ಕರ್ನಾಟಕ ವಕ್ಫ್ ಬೋರ್ಡ್ ಇತ್ತೀಚೆಗೆ ಹಲವು ಮಂದಿ ನಿವೃತ್ತ ಮುಸ್ಲಿಂ ಅಧಿಕಾರಿಗಳನ್ನು ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿದೆ. ಮಂಡಳಿಯ ಯೋಜನೆಗಳ ಅನುಷ್ಠಾನದ ಮೇಲುಸ್ತುವಾರಿ ಇವರ ಜವಾಬ್ದಾರಿಯಾಗಿದೆ ಎಂದು ಅಧಿಕೃತ ಆದೇಶಪತ್ರ (ಸಂಖ್ಯೆ ಕೆಎಸ್‌ಬಿಎ/ಎಡಿಎಂ/ಇಎಸ್‌ಟಿ/44/2016-17) ಸ್ಪಷ್ಟಪಡಿಸುತ್ತದೆ.

ರಾಜ್ಯದ 26 ಜಿಲ್ಲೆಗಳಲ್ಲಿ ವಕ್ಫ್ ಮಂಡಳಿಯ ಯೋಜನೆಗಳ ಮೇಲ್ವಿಚಾರಣೆಗಳಿಗೆ 13 ಮಂದಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿರುವ ಸರಕಾರದ ಕ್ರಮ ಅಚ್ಚರಿಗೆ ಕಾರಣವಾಗಿದೆ. ದಶಕಗಳಿಂದ ಮಂಡಳಿಯ ಕಾರ್ಯವೈಖರಿಯನ್ನು ಗಮನಿಸುತ್ತಾ ಬಂದಿರುವ ವರ್ಗಕ್ಕಂತೂ ಸರಕಾರದ ಈ ದಿಢೀರ್ ನಿರ್ಧಾರ ದಿಗಿಲು ಹುಟ್ಟಿಸಿದೆ. ಅಚ್ಚರಿಗೆ ಮುಖ್ಯ ಕಾರಣವೆಂದರೆ, ಕಾಂಗ್ರೆಸ್ ಸರಕಾರದ ಆಡಳಿತಾವಧಿಯ ಕೊನೆಯ ವರ್ಷ ಈ ನೇಮಕ ಆಗಿರುವುದು. ಇದು ನಿವೃತ್ತ ಮುಸ್ಲಿಂ ಅಧಿಕಾರಿಗಳನ್ನು (ಮುಸ್ಲಿಮರನ್ನಲ್ಲ) ಓಲೈಸುವ ತಂತ್ರ ಎಂಬ ಗುಮಾನಿ ಸಹಜವಾಗಿಯೇ ಹುಟ್ಟುತ್ತದೆ. ಅಂತೆಯೇ ಸರಕಾರದ ನಿರ್ಧಾರ ದಿಗಿಲು ಹುಟ್ಟಿಸಲು ಕಾರಣವೆಂದರೆ, ಮಂಡಳಿ ಇಂದಿಗೂ, ಉದಾರೀಕರಣ ಪೂರ್ವ ಯುಗದಲ್ಲಿ ಮಂಡಳಿಗಳು ಹಾಗೂ ನಿಗಮಗಳು ಅನುಸರಿಸುತ್ತಿದ್ದ ರಾಜಕೀಯ ಸ್ವಜನಪಕ್ಷಪಾತದ ನೀತಿಯನ್ನೇ ಅನುಸರಿಸುತ್ತಿದೆ. ಈ ಧೋರಣೆಯಲ್ಲಿ ಯಾವ ಬದಲಾವಣೆಯೂ ಆದಂತೆ ಕಾಣುತ್ತಿಲ್ಲ. ಇದರ ಸ್ಪಷ್ಟ ಅರ್ಥವೆಂದರೆ, ನೈತಿಕತೆ ಹಾಗೂ ತತ್ವಸಿದ್ಧಾಂತಗಳಿಗೆ ಬದಲಾಗಿ ವಾಸ್ತವವಾಗಿ ರಾಜಕೀಯವೇ ಎಲ್ಲ ಮಂಡಳಿಗಳ ಮಾರ್ಗದರ್ಶಿ ಸೂತ್ರ.

 ಸರಕಾರದ ಆದೇಶಪತ್ರದ ಅನ್ವಯ, ನೋಡಲ್ ಅಧಿಕಾರಿಗಳಿಗೆ ಮಾಸಿಕ 25 ಸಾವಿರ ರೂಪಾಯಿಗಳ ಗೌರವಧನ ಪಾವತಿಸಲಾಗುತ್ತದೆ. ಜತೆಗೆ 25 ಸಾವಿರ ರೂಪಾಯಿಗಳನ್ನು ಕಾರು ಬಾಡಿಗೆಗೆ ಪಡೆಯಲು ನೀಡಲಾಗುತ್ತದೆ. ಸ್ವಂತ ವಾಹನಗಳನ್ನು ಹೊಂದಿದ್ದರೆ 15 ಸಾವಿರ ರೂಪಾಯಿ ಮಾಸಿಕ ಭತ್ತೆ ನೀಡಲಾಗುತ್ತದೆ. ಈ ನೇಮಕಾತಿಯು ಮೂರು ತಿಂಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ. ಅಂದರೆ ಇವರ ಅಧಿಕಾರಾವಧಿಯನ್ನು ರಾಜ್ಯ ಸರಕಾರದ ಅವಧಿ ಕೊನೆಗೊಳ್ಳುವ 2018ರ ಮೇ ತಿಂಗಳ ವರೆಗೂ ವಿಸ್ತರಿಸಲು ಅವಕಾಶ ಇರುತ್ತದೆ.

ಆದೇಶ ಪತ್ರದಲ್ಲಿ ಸ್ಪಷ್ಟಪಡಿಸಿರುವಂತೆ ನೋಡಲ್ ಅಧಿಕಾರಿಗಳ ಮುಖ್ಯ ಹೊಣೆಗಾರಿಕೆಗಳೆಂದರೆ, ವಕ್ಫ್ ಆಸ್ತಿಯ ಸಮೀಕ್ಷೆ, ವಕ್ಫ್ ಸಂಸ್ಥೆಗಳು ಅನುದಾನವನ್ನು ಬಳಕೆ ಮಾಡುವುದು, ಎಲ್ಲ ವಕ್ಫ್ ಆಸ್ತಿಗಳಿಗೆ ಖಾತೆಗಳನ್ನು ಮಾಡಿಸುವುದು, ವಕ್ಫ್ ಸಂಸ್ಥೆಗಳು ಕೈಗೆತ್ತಿಕೊಂಡ ಅಭಿವೃದ್ಧಿ ಚಟುವಟಿಕೆಗಳ ಬಗೆಗಿನ ಮಾಹಿತಿ, ವಕ್ಫ್ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಪ್ರತೀ ತಿಂಗಳು ಆಯಾ ಸಂಸ್ಥೆಯ ಮುತವಲ್ಲಿಗಳು ಆದಾಯ- ಖರ್ಚಿನ ಹೇಳಿಕೆಯನ್ನು ಪ್ರಕಟಿಸುವಂತೆ ನೋಡಿಕೊಳ್ಳುವುದು, ವಕ್ಫ್ ದೇಣಿಗೆಗಳ ವಸೂಲಾತಿಯ ಮೇಲ್ವಿಚಾರಣೆ, ಜಿಲ್ಲಾ ವಕ್ಫ್ ಸಲಹಾ ಸಮಿತಿಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ, ಅಗತ್ಯವಿದ್ದಾಗ ಮುತವಲ್ಲಿಗಳ ಸಭೆಗಳನ್ನು ಆಯೋಜಿಸುವುದು, ವಾಣಿಜ್ಯವಾಗಿ ಕಾರ್ಯಸಾಧು ಎನಿಸುವ ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಆಯ್ಕೆ ಮಾಡುವುದು ಮತ್ತು 2014ರ ವಕ್ಫ್ ಆಸ್ತಿ ಲೀಸ್ ನಿಯಮಾವಳಿಗಳ ಅನುಷ್ಠಾನ.

ಪ್ರಶ್ನಾರ್ಹ

ಮಂಡಳಿಯ ಯೋಜನೆಗಳು ಪ್ರಶ್ನಾರ್ಹ ಹಾಗೂ ರಾಜಕೀಯ ಪ್ರೇರಿತ ಎನ್ನುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಆದೇಶದಲ್ಲಿ ನಿಗದಿಪಡಿಸಿರುವ ಬಹುತೇಕ ಹೊಣೆಗಾರಿಕೆಗಳು ವಕ್ಫ್ ಅಧಿಕಾರಿಗಳ ಜವಾಬ್ದಾರಿಗೆ ಸಮಾನವಾಗಿರುತ್ತವೆ. ಕುತೂಹಲದ ವಿಚಾರವೆಂದರೆ ವಕ್ಫ್ ಆಸ್ತಿಗಳ ಸಮೀಕ್ಷೆಯು ಕಳೆದ ಒಂದು ದಶಕದಿಂದ ನಡೆಯುತ್ತಿದೆ. ಆದಾಗ್ಯೂ ಈ ಅಧಿಕಾರಿಗಳ ಅಧಿಕಾರಾವಧಿ ತೀರಾ ಅಲ್ಪಾವಧಿಯಾಗಿರುವುದರಿಂದ ಯಾವ ಸಾಧನೆಯನ್ನೂ ನಿರೀಕ್ಷಿಸಲಾಗದು. ಈ ಪೈಕಿ ಬಹುತೇಕ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ವಕ್ಫ್ ಮಂಡಳಿಯ ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವವರು. ಇಲ್ಲಿ ಸಹಜವಾಗಿಯೇ ಉದ್ಭವಿಸುವ ಪ್ರಶ್ನೆ ಎಂದರೆ, ಇಡೀ ವಕ್ಫ್ ವ್ಯವಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾಗಿ ಇದ್ದಾಗ ಸಾಧಿಸಲು ಸಾಧ್ಯವಾಗದ ಗುರಿಗಳನ್ನು ಈ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಮೂರು ತಿಂಗಳ ಅವಧಿಯಲ್ಲಿ ಸಾಧಿಸಲು ಸಾಧ್ಯವೇ ಎನ್ನುವುದು.

ಅಸಂಬದ್ಧ

ವಕ್ಫ್ ಮಂಡಳಿ 2015ರಲ್ಲಿ 150ಕ್ಕೂ ಹೆಚ್ಚು ಯುವ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಕ್ಫ್ ಕೇಡರ್ ಆರಂಭಿಸಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗಾಗಲೇ ಈ ವಕ್ಫ್ ಕೇಡರ್ ಅಧಿಕಾರಿಗಳಿಗೆ ನಿಯೋಜಿಸಿರುವ ಕಾರ್ಯಭಾರವನ್ನೇ ಹೋಲುವ ಹೊಣೆಗಾರಿಕೆಯನ್ನು ಮತ್ತೆ ಹೆಚ್ಚುವರಿ ನೋಡೆಲ್ ಅಧಿಕಾರಿಗಳಿಗೆ ವಹಿಸುವ ಅಗತ್ಯವಿದೆಯೇ? ಇದಕ್ಕೆ ವಕ್ಫ್ ಮಂಡಳಿ ನೀಡುವ ಸಮುಜಾಯಿಷಿ ಎಂದರೆ, ಜಿಲ್ಲಾಮಟ್ಟದಲ್ಲಿ ವಕ್ಫ್ ಅಧಿಕಾರಿಗಳು ಹಿರಿಯ ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವ ಅಗತ್ಯವಿರುತ್ತದೆ ಹಾಗೂ ಕಿರಿಯ ಅಧಿಕಾರಿಗಳು ಇಂಥ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಿಲ್ಲ ಎನ್ನುವುದು. ಈ ತರ್ಕವೇ ಅಸಂಬದ್ಧ ಮತ್ತು ನಿರಾಶಾದಾಯಕ. ಸರಕಾರಿ ಅಧಿಕಾರಿಗಳು ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿರಬೇಕೇ ವಿನಃ ಸೇವಾ ಜ್ಯೇಷ್ಠತೆ ಇದಕ್ಕೆ ಮಾನದಂಡವಾಗಿರಬಾರದು. ಅಧಿಕಾರಿಗಳಿಗೆ ಸಮರ್ಪಕವಾಗಿ ತರಬೇತಿ ನೀಡಿದರೆ, ಖಂಡಿತವಾಗಿಯೂ ಅವರು ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿರುತ್ತಾರೆ.

‘‘ವಕ್ಫ್ ಮಂಡಳಿಯ ಮುಖ್ಯಸ್ಥರಾಗಿ ಚುನಾಯಿತ ಅಧ್ಯಕ್ಷರೇ ಇಲ್ಲದಿರುವಾಗ ನೋಡಲ್ ಅಧಿಕಾರಿಗಳ ನೇಮಕ ತರ್ಕಕ್ಕೆ ನಿಲುಕದ್ದು’’ ಎನ್ನುವ ಸ್ಪಷ್ಟ ಅಭಿಪ್ರಾಯ ಮಂಡಳಿಯ ಮಾಜಿ ಅಧ್ಯಕ್ಷ ಡಾ. ಮುಹಮ್ಮದ್ ಯೂಸುಫ್ ಅವರದ್ದು. ‘‘ವಕ್ಫ್ ಸಚಿವರು ಹೊಸ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ ಅಥವಾ ಸೂಪರ್‌ಸೀಡ್ ಮಾಡಿಲ್ಲ. ಈಗಾಗಲೇ ಇದು ಆಡಳಿತಾಧಿಕಾರಿಯ ಸುಪರ್ದಿಯಲ್ಲಿದೆ. ಮಂಡಳಿಯ ದೈನಂದಿನ ಕಾರ್ಯನಿರ್ವಹಣೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಆದರೆ ಇವರಿಗೆ ಯಾವುದೇ ನೀತಿ ರೂಪಿಸುವ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಇಲ್ಲ. ವಾಸ್ತವ ಹೀಗಿರುವಾಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು 13 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವ ಆದೇಶ ಹೊರಡಿಸಲು ಹೇಗೆ ಸಾಧ್ಯ? ಅದು ಕೂಡಾ ನಿವೃತ್ತ ಅಧಿಕಾರಿಗಳಿಗೆ ಕೈತುಂಬಾ ಗೌರವಧನ ನೀಡಿ ನೇಮಕ ಮಾಡಲು ಸಾಧ್ಯವೇ? ಅವರಿಗೆ ನಿಯಮ ತಿಳಿದಿಲ್ಲವೇ?’’ ಎಂಬ ಪ್ರಶ್ನೆಯನ್ನು ಅವರು ಮುಂದಿಡುತ್ತಾರೆ. ನೋಡಲ್ ಅಧಿಕಾರಿಗಳಿಗೆ ನೀಡುವ ಗೌರವಧನದ ವೆಚ್ಚ, ಈಗಾಗಲೇ ದುರ್ಬಲ ಹಣಕಾಸು ಸ್ಥಿತಿ ಹೊಂದಿರುವ ಮಂಡಳಿಗೆ ಹೆಚ್ಚುವರಿ ಹೊರೆಯಾಗಲಿದೆ ಎಂಬ ಸ್ಪಷ್ಟ ಅಭಿಪ್ರಾಯ ಅವರದ್ದು. ದುರ್ಬಲ ಹಣಕಾಸು ಸ್ಥಿತಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ವಾಣಿಜ್ಯ ಆಸ್ತಿಗಳ ಅಭಿವೃದ್ಧಿ ಕಾರ್ಯವನ್ನು ವಕ್ಫ್ ಮಂಡಳಿ ಕೈಗೆತ್ತಿಕೊಳ್ಳುವುದು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ.

ಪರಿಣಾಮ ಶೂನ್ಯ

ಮತ್ತೊಬ್ಬ ಮಾಜಿ ಅಧ್ಯಕ್ಷ ಹಾಗೂ ವಕೀಲ ಅಬ್ದುಲ್ ರಿಝಾ ಖಾನ್, ನೋಡಲ್ ಅಧಿಕಾರಿಗಳ ನೇಮಕಾತಿಯನ್ನು ಸ್ವಾಗತಿಸಿದರೂ, ‘‘ಇದುವರೆಗೆ ವಕ್ಫ್ ಆಸ್ತಿಗಳ ಪೈಕಿ ಶೇ. 2ರಷ್ಟು ಆಸ್ತಿಯ ಸಮೀಕ್ಷೆ ಕಾರ್ಯ ಮಾತ್ರ ಪೂರ್ಣಗೊಂಡಿದೆ’’ ಎಂದು ಹೇಳುತ್ತಾರೆ. ‘‘ಕೇವಲ ಮೂರು ತಿಂಗಳ ಅವಧಿಗೆ ನೇಮಕಗೊಂಡಿರುವ ನಿವೃತ್ತ ಅಧಿಕಾರಿಗಳಿಂದ ಆಸ್ತಿಗಳ ಸರ್ವೇ ವಿಚಾರದಲ್ಲಿ ಯಾವ ಸಾಧನೆಯೂ ಸಾಧ್ಯವಿಲ್ಲ. ಆದ್ದರಿಂದ ನೋಡಲ್ ಅಧಿಕಾರಿಗಳ ನೇಮಕದ ಪರಿಣಾಮ ಶೂನ್ಯ’’ ಎನ್ನುವುದು ಅವರ ಅಭಿಮತ. ವಕ್ಫ್ ಆಸ್ತಿಗಳ ಸರ್ವೇ ಎಂದರೆ ಕೇವಲ ಸರ್ವೇಯರ್ ವರದಿ ನೀಡುವುದಲ್ಲ. ಇದರ ದಾಖಲೀಕರಣ ಮತ್ತು ಇದಕ್ಕೆ ತಹಶೀಲ್ದಾರ್ ಅವರ ಅನುಮೋದನೆ ಬೇಕಾಗುತ್ತದೆ ಜತೆಗೆ ಗಜೆಟ್ ಅಧಿಸೂಚನೆಯೂ ಅಗತ್ಯ. ಈ ವ್ಯಾಖ್ಯೆಗೆ ಅನುಗುಣವಾಗಿ ಇದುವರೆಗೆ ಶೇ. 2ರಷ್ಟು ವಕ್ಫ್ ಆಸ್ತಿಗಳ ಸರ್ವೇ ಮಾತ್ರ ಪೂರ್ಣಗೊಂಡಿದೆ.

ಅಧಿಕ ಉದ್ಯೋಗಿಗಳು

ದೇಶದಲ್ಲೇ ಅತ್ಯಂತ ದಕ್ಷ ರಾಜ್ಯ ವಕ್ಫ್ ಮಂಡಳಿ ಎಂಬ ಹೆಗ್ಗಳಿಕೆ ಕರ್ನಾಟಕ ವಕ್ಫ್ ಮಂಡಳಿಯದ್ದು. ಆದರೆ ಇದರ ಜತೆ ಜತೆಗೇ ಅಸಮರ್ಪಕ ನಿರ್ವಹಣೆ ಹಾಗೂ ಆಲಸ್ಯದ ಜತೆಗೂ ಮಂಡಳಿಯ ಹೆಸರು ಥಳಕು ಹಾಕಿಕೊಂಡಿದೆ. 2015ರಲ್ಲಿ ವಕ್ಫ್ ಮಂಡಳಿ, ಮೂರು ಪ್ರಮುಖ ಸ್ಥಿರಾಸ್ತಿಗಳ ವಾಣಿಜ್ಯ ಅಭಿವೃದ್ಧಿ ಯೋಜನೆಯನ್ನು ಘೋಷಿಸಿತು. ಅವುಗಳೆಂದರೆ ಇನ್‌ಫ್ಯಾಂಟ್ರಿ ರಸ್ತೆಯ ಗುಲಿಸ್ತಾನ್ ಶಾದಿಮಹಲ್, ಮಾವಳ್ಳಿ ಮಸೀದಿಗೆ ಲಗತ್ತಾಗಿರುವ ಜಮೀನು ಹಾಗೂ ಮಾವಳ್ಳಿ ಬಡಾ ಮಕಾನ್ ಜಮೀನು. ಇದಕ್ಕೆ ರಾಷ್ಟ್ರೀಯ ವಕ್ಫ್ ಅಭಿವೃದ್ಧಿ ನಿಗಮದಿಂದ ಸಾಲ ಪಡೆಯಲು ನಿರ್ಧರಿಸಲಾಗಿತ್ತು. ಆದರೆ ಇದು ಯಾವುದೂ ಕಾರ್ಯಗತಗೊಳ್ಳಲಿಲ್ಲ. ರಾಷ್ಟ್ರೀಯ ವಕ್ಫ್ ಅಭಿವೃದ್ಧಿ ನಿಗಮದಲ್ಲಿ ಹಣ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬಳಿಕ ಇದು 160 ಮಂದಿ ಯುವಕರನ್ನು ಹೊಸದಾಗಿ ಸೃಷ್ಟಿಸಲಾದ ವಕ್ಫ್ ಕೇಡರ್‌ನಡಿ ನೇಮಕ ಮಾಡಿಕೊಂಡಿತು. ಈ ಪೈಕಿ ಅರ್ಧದಷ್ಟು ಮಂದಿ, ನೇಮಕಾತಿ ಪತ್ರ ನೀಡಿಕೆಯಲ್ಲಿ ವಿಳಂಬ, ವೇತನ ಪಾವತಿ ಮತ್ತಿತರ ಕಾರಣಗಳಿಂದ ಇತರ ಉದ್ಯೋಗಗಳಿಗೆ ವಲಸೆ ಹೋಗಿದ್ದಾರೆ ಎನ್ನಲಾಗಿದೆ. ಡಾ.ಯೂಸುಫ್ ಅವರ ಪ್ರಕಾರ, ವಕ್ಫ್ ಮಂಡಳಿ ಕಚೇರಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಆದ್ದರಿಂದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಸಮರ್ಥಿಸುವುದು ಪ್ರಶ್ನಾರ್ಹ ಎಂಬ ಅಭಿಪ್ರಾಯ ಅವರದ್ದು. ನೇಮಕಾತಿಯನ್ನು ರಾಜ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರೆ ನೇಮಕಾತಿಗೆ ನ್ಯಾಯಾಂಗದಲ್ಲೂ ಮಾನ್ಯತೆ ಸಿಗುವ ಸಾಧ್ಯತೆ ಇಲ್ಲ. ಆದ್ದರಿಂದ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಹೀಗೆ ಓಲೈಕೆಗೆ ಮುಂದಾಗುವ ಬದಲು ವಕ್ಫ್ ಇಲಾಖೆ ಈ ನೇಮಕಾತಿಯನ್ನು ರದ್ದುಪಡಿಸಿ, ಅಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಲು ಇದು ಸಕಾಲ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ