ಇಲೆಕ್ಟ್ರಿಕ್ ಕಾರುಗಳು ಬರುತ್ತಿವೆ..ದಾರಿಬಿಡಿ
ಪಳೆಯುಳಿಕೆ ಇಂಧನ ಲಭ್ಯತೆ ಅಪರೂಪವಾಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ, ಇಂಧನ ಆಧರಿತ ಕಾರುಗಳ ನೈಜ ಕ್ಷಮತೆಯನ್ನು ಇನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವುದನ್ನು ಶೆಲ್‌ನಂಥ ಕಂಪೆನಿಗಳು ಸಾಬೀತುಪಡಿಸಿದ್ದರೂ, ಭವಿಷ್ಯದಲ್ಲಿ ಇಲೆಕ್ಟ್ರಾನಿಕ್ ಕಾರುಗಳು ಸಾರಿಗೆ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರಲಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಸ್ಟನ್‌ಫೋರ್ಡ್ ಅರ್ಥಶಾಸ್ತ್ರಜ್ಞ ಟೋನಿ ಸೆಬಾ ಅವರ ಅಂದಾಜಿನಂತೆ 2030ರ ವೇಳೆಗೆ ತೈಲ ವಹಿವಾಟು ಸಂಪೂರ್ಣವಾಗಿ ಕೊನೆಗೊಳ್ಳಲಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಅಧ್ಯಯನ ವರದಿಯೊಂದರಲ್ಲಿ, ಸಾರಿಗೆ ಕ್ಷೇತ್ರದ ವಿದ್ಯುದ್ದೀಕರಣ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ. ಸ್ಟನ್‌ಫೋರ್ಡ್ ವಿಶ್ವವಿದ್ಯಾನಿಲಯ ಈ ಅಧ್ಯಯನ ವರದಿ ಪ್ರಕಟಿಸಿದ್ದು, ಪಳೆಯುಳಿಕೆ ಇಂಧನ ಕಾರುಗಳು ಮುಂದಿನ ಎಂಟು ವರ್ಷಗಳಲ್ಲಿ ನಾಮಾವಶೇಷವಾಗಲಿವೆ ಎಂದು ಹೇಳಿದೆ. ಕಾರು ಖರೀದಿಸಲು ಇಚ್ಛಿಸುವವರಿಗೆ ಇಲೆೆಕ್ಟ್ರಿಕ್ ಕಾರು ಅಥವಾ ಸಣ್ಣ ತಂತ್ರಜ್ಞಾನ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಾರುಗಳ ಹೊರತಾಗಿ ಪರ್ಯಾಯ ಆಯ್ಕೆಗಳು ಇರುವುದಿಲ್ಲ ಎನ್ನುವುದು ತಜ್ಞರ ಅಭಿಮತ. ಇಲೆೆಕ್ಟ್ರಿಕ್ ಕಾರುಗಳ ವೆಚ್ಚ ಇದಕ್ಕೆ ಮುಖ್ಯ ಕಾರಣ; ಪಳೆಯುಳಿಕೆ ಇಂಧನ ಆಧರಿತ ಕಾರು, ಬಸ್ಸು ಹಾಗೂ ಟ್ರಕ್‌ಗಳು ಕಡಿಮೆಯಾಗಲಿದ್ದು, ಪೆಟ್ರೋಲಿಯಂ ಉದ್ಯಮ ಸಂಪೂರ್ಣವಾಗಿ ಕುಸಿಯಲಿದೆ.
ಭವಿಷ್ಯದ ಕಾರು
‘2020-2030ರ ಸಾರಿಗೆ ಕ್ಷೇತ್ರ ಮರುಚಿಂತನೆ’ ಎಂಬ ಶೀರ್ಷಿಕೆಯ ಅಧ್ಯಯನ ವರದಿಯಲ್ಲಿ, ಜನ ಹೇಗೆ ಸಾಂಪ್ರದಾಯಿಕ ವಾಹನಗಳಿಂದ ಸ್ವಯಂಚಾಲಿತ ಇಲೆೆಕ್ಟ್ರಿಕ್ ವಾಹನಗಳಿಗೆ ವರ್ಗಾವಣೆಯಾಗುತ್ತಾರೆ ಎನ್ನುವುದನ್ನು ವಿವರಿಸಲಾಗಿದೆ. ಈ ವಾಹನಗಳ ನಿರ್ವಹಣೆ ಸಾಮಾನ್ಯ ಪಳೆಯುಳಿಕೆ ಇಂಧನ ಬಳಸುವ ವಾಹನಗಳ ನಿರ್ವಹಣೆಗಿಂತ ಹತ್ತು ಪಟ್ಟು ಅಗ್ಗ. ಜತೆಗೆ ಇಂಧನ ವೆಚ್ಚ ಕೂಡಾ ನಗಣ್ಯ. ಇಲೆೆಕ್ಟ್ರಿಕ್ ವಾಹನಗಳ ಸರಾಸರಿ ಜೀವಿತಾವಧಿ ಸುಮಾರು 10 ಲಕ್ಷ ಮೈಲು ಅಂದರೆ ಸುಮಾರು 16,09,344 ಕಿಲೋಮೀಟರ್. ಸಾಂಪ್ರದಾಯಿಕ ಇಂಧನ ಆಧರಿತ ಕಾರುಗಳ ಬಾಳಿಕೆ ಅವಧಿ ಸುಮಾರು 2 ಲಕ್ಷ ಮೈಲು ಅಂದರೆ ಸುಮಾರು 3.21 ಲಕ್ಷ ಕಿಲೋಮೀಟರ್ ಎಂದು ತುಲನೆ ಮಾಡಿದೆ.
ಒಂದು ದಶಕದ ಒಳಗಾಗಿ, ಪೆಟ್ರೋಲ್‌ಪಂಪ್‌ಗಳು, ಬಿಡಿಭಾಗಗಳು ಹಾಗೂ ಆಂತರಿಕ ದಹಿಸುವಿಕೆ ಇಂಜಿನ್‌ಗಳ ಜ್ಞಾನ ಹೊಂದಿರುವ ಮೆಕ್ಯಾನಿಕ್‌ಗಳನ್ನು ಹುಡುಕುವುದು ಕೂಡಾ ಗ್ರಾಹಕರಿಗೆ ಕಷ್ಟವಾಗಲಿದೆ. ಅಂತಿಮವಾಗಿ, ದೀರ್ಘಾವಧಿ ತೈಲ ಬೆಲೆ ಬ್ಯಾರಲ್‌ಗೆ 25 ಡಾಲರ್‌ಗೆ ಕುಸಿದು ಆಧುನಿಕ ಯುಗದ ಕಾರು ಮಾರಾಟ ವ್ಯವಸ್ಥೆ 2024ರ ಒಳಗಾಗಿ ಕಣ್ಮರೆಯಾಗ ಲಿದೆ. ಹಾಲಿ ಇರುವ ವಾಹನಗಳು ಸಾಮೂಹಿಕವಾಗಿ ಮೂಲೆಗುಂಪಾ ಗುವ ಪ್ರಕ್ರಿಯೆ ಸಂಭವಿಸಲಿದೆ ಎನ್ನುವುದು ಅವರ ಅಂದಾಜು.
‘‘ಸಾರಿಗೆ ಇತಿಹಾಸದಲ್ಲೇ ಅತ್ಯಂತ ಕ್ಷಿಪ್ರ, ಆಳವಾದ, ಪರಿಣಾಮ ಬೀರುವಂಥ ಬದಲಾವಣೆಯ ಹರಿತ ಅಲುಗಿನ ತುದಿಯಲ್ಲಿ ಇಂದು ನಾವಿದ್ದೇವೆ. ಆಂತರಿಕವಾಗಿ ದಹಿಸುವ ಇಂಜಿನ್‌ಗಳು ಇಂದು ಹೆಚ್ಚುತ್ತಿರುವ ವೆಚ್ಚದ ವಿಷವರ್ತುಲದಲ್ಲಿವೆ. ವೆಚ್ಚ ನಕ್ಷೆಗೆ ಅನುಗುಣವಾಗಿ 2025ರೊಳಗಾಗಿ ಹೊಸ ಇಲೆೆಕ್ಟ್ರಿಕ್ ವಾಹನಗಳು ಸಾಂಪ್ರದಾಯಿಕ ವಾಹನಗಳ ಸ್ಥಾನವನ್ನು ಆಕ್ರಮಿಸಿಕೊಳ್ಳಲಿವೆ. ಎಲ್ಲ ಹೊಸ ಬಸ್ಸುಗಳು, ಹೊಸ ಕಾರುಗಳು, ಹೊಸ ಟ್ರ್ಯಾಕ್ಟರ್‌ಗಳು, ಹೊಸ ವ್ಯಾನ್‌ಗಳು ಹೀಗೆ ಜಾಗತಿಕವಾಗಿ ಚಕ್ರದಿಂದ ಚಲಿಸುವ ಎಲ್ಲ ವಾಹನಗಳೂ ಇಲೆೆಕ್ಟ್ರಿಕ್ ವಾಹನಗಳಾಗಿರುತ್ತವೆ ಎನ್ನುವುದು ಸೆಬಾ ಅವರ ಸ್ಪಷ್ಟ ಅಭಿಮತ,
ಬೆಂಝ್ ಸ್ವಯಂಚಾಲನೆ ಪರಿಕಲ್ಪನೆ
ಮರ್ಸಿಡಿಸ್ ಬೆಂಝ್ ಹಾಗೂ ಇತರ ವಾಹನ ಉತ್ಪಾದನಾ ಕಂಪೆನಿಗಳು ಸ್ವಯಂಚಾಲಿತ ಇಲೆೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಯಲ್ಲಿ ನಿರತವಾಗಿವೆ. ಆಂತರಿಕ ದಹಿಸುವಿಕೆ ಇಂಜಿನ್‌ಗಳು 1910ರಿಂದಲೂ ಜಾಗತಿಕ ಮಟ್ಟದಲ್ಲಿ ಬೆಳೆದುಬಂದಿವೆ. ಆದರೆ ಇಂದು ನಮ್ಮೆದುರು ಇರುವ ಅತಿದೊಡ್ಡ ಸವಾಲು ಎಂದರೆ, ವಾಯು ಗುಣಮಟ್ಟವನ್ನು ನಿಯಂತ್ರಿಸುವುದು. ಇಂಗಾಲದ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ ಮಟ್ಟ ಹಾಗೂ ಹೈಡ್ರೋ ಕಾರ್ಬನ್ ಮಟ್ಟ ಹೆಚ್ಚುತ್ತಿರುವುದು, ಹೊಸ ಅನ್ವೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದರಿಂದಾಗಿ ಇಂಜಿನಿಯರ್‌ಗಳು ಕೇವಲ ಇಂಧನ ಕ್ಷಮತೆಯ ವಾಹನ ಮಾತ್ರವಲ್ಲದೇ ಪರಿಸರ ಸ್ನೇಹಿ ವಾಹನಗಳ ಬಗ್ಗೆ ಗಮನ ಹರಿಸಿದ್ದಾರೆ.
‘‘ನಮ್ಮ ಸಂಶೋಧನೆ ಮತ್ತು ಮಾಡೆಲಿಂಗ್‌ನಿಂದ ತಿಳಿದುಬರುವಂತೆ, 10 ದಶಸಹಸ್ರ ಕೋಟಿ ರೂ. ವಾರ್ಷಿಕ ಆದಾಯ ಇರುವ ಪ್ರಸ್ತುತ ವಾಹನ ಮತ್ತು ತೈಲ ಸರಬರಾಜು ಸರಣಿ ನಾಟಕೀಯವಾಗಿ ಕುಗ್ಗಲಿದೆ. ನಿರ್ದಿಷ್ಟವಾದ ಅತ್ಯಧಿಕ ವೆಚ್ಚದ ದೇಶಗಳು, ಕಂಪೆನಿಗಳು ಹಾಗೂ ತೈಲಕ್ಷೇತ್ರಗಳ ತೈಲ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಎಕ್ಸಾಣ್ ಮೊಬಿಲ್, ಶೆಲ್ ಹಾಗೂ ಬಿಪಿಯಂಥ ದೈತ್ಯ ಕಂಪೆನಿಗಳ ಆಸ್ತಿಗಳು ಶೇ. 40ರಿಂದ ಶೇಕಡ 50ರಷ್ಟು ಕಡಿಮೆಯಾಗಲಿವೆ ಎಂದು ಪ್ರೊ. ಸೆಬಾಸ್ಟಿಯನ್ ತಮ್ಮ ವರದಿಯಲ್ಲಿ ಪ್ರತಿಪಾದಿಸಿದ್ದಾರೆ.
ಇದು ಅತಿದೊಡ್ಡ ಪ್ರತಿಪಾದನೆಯಾದರೂ, ಅಂಕಿ ಅಂಶಗಳಿಂದ ಕೂಡಿರುವಂಥದ್ದು. ನಾರ್ವೆಯಂಥ ದೇಶಗಳು ಈಗಾಗಲೇ ಆಂತರಿಕ ದಹಿಸುವಿಕೆ ಇಂಜಿನ್‌ಗಳ ಕಾರುಗಳನ್ನು ಮಾರುಕಟ್ಟೆಯಿಂದ ಮುಂದಿನ ದಶಕದ ಒಳಗಾಗಿ ತೆಗೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಭಾರತ ಕೂಡಾ, 2032ರ ಒಳಗಾಗಿ ಹಂತಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಚಿಂತನೆಯಲ್ಲಿದೆ. ಇಡೀ ಪ್ರಕ್ರಿಯೆ ಎಷ್ಟು ಕ್ಷಿಪ್ರವಾಗಲಿದೆ ಎಂದರೆ, ಡಿಜಿಟಲ್ ಕ್ಯಾಮರಾಗಳು ಸಾಂಪ್ರದಾಯಿಕ ಫಿಲ್ಮ್ ಕ್ಯಾಮರಾಗಳ ಜಾಗವನ್ನು ಆಕ್ರಮಿಸಿದಂತೆ ವಾಹನಗಳ ವಿಚಾರದಲ್ಲೂ ಆಗಲಿದೆ. ಡಿಜಿಟಲ್ ಕ್ಯಾಮರಾ ಮಾರುಕಟ್ಟೆಗೆ ಲಗ್ಗೆ ಇಟ್ಟ ತಕ್ಷಣ ಸಾಂಪ್ರದಾಯಿಕ ಫಿಲ್ಮ್ ಕ್ಯಾಮರಾಗಳು ತೆರೆಮರೆಗೆ ಸರಿದವು. ಇದು ಅತ್ಯಂತ ಕ್ಷಿಪ್ರ ಹಾಗೂ ಕ್ರೂರ ವರ್ಗಾಂತರವಾಗಿದ್ದು, ಇಂಥದ್ದೇ ಪ್ರಕ್ರಿಯೆ ಕಾರು ಉದ್ಯಮದಲ್ಲೂ ಸಂಭವಿಸುತ್ತದೆ ಎನ್ನುವುದು ಅವರ ಪ್ರತಿಪಾದನೆ. ಫೋಕ್ಸ್‌ವ್ಯಾಗನ್, ಮರ್ಸಿಡಿಸ್ ಬೆಂಝ್ ಹಾಗೂ ವೋಲ್ವೋ ಕೂಡಾ ಸ್ವಯಂಚಾಲಿತ ತಂತ್ರಜ್ಞಾನ ಮತ್ತು ಇಲೆಕ್ಟ್ರಿಕ್ ಕಾರುಗಳ ನಿರ್ಮಾಣ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಬಹುಶಃ ಯಾವುದೇ ಅಂತರಿಕ ದಹಿಸುವ ಇಂಜಿನ್ ಚಿತ್ರಣದ ಬಗ್ಗೆ ಅವರು ಈಗ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಕ್ತವಾಗಿ ಯೋಚಿಸಿದರೆ ನಮಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಏಕೆಂದರೆ ನಾವೆಲ್ಲರೂ ಪೆಟ್ರೋಲ್ ವ್ಯಸನಿಗಳಾಗಿದ್ದೇವೆ. ಇಲೆೆಕ್ಟ್ರಿಕ್ ಕಾರುಗಳು ರಂಗಕ್ಕೆ ಬಂದಾಗ, ನಮ್ಮಂಥ ವ್ಯಕ್ತಿಗಳಿಗೆ ಕೂಡಾ ಹೊಸ ಪದ ಕಂಡುಹಿಡಿಯಬೇಕಾಗಬಹುದು.