‘ಕಾಳಿ ರಿವರ್ ಗಾರ್ಡನ್’ ಪ್ರವಾಸಿ ತಾಣವಾಗಿ ಅಭಿವೃದ್ಧಿ
ಕಾರವಾರ, ಮೇ 28: ವಿಶಾಲ ಉದ್ಯಾನವನ, ಪಕ್ಕದಲ್ಲಿಯೇ ಇರುವ ನದಿಯಲ್ಲಿ ಜಲಸಾಹಸ ಕ್ರೀಡೆಗಳು, ರಾತ್ರಿಯಾಗುತ್ತಿದ್ದಂತೆ ಚಿಮ್ಮುವ ಬಣ್ಣದ ಕಾರಂಜಿ ಹೀಗೆ ಪ್ರವಾಸಿಗರಿಗೆ ಹಾಗೂ ವಾಯುವಿಹಾರಿಗಳಿಗೆ ಮೈ ನವಿರೆಳಿಸುವ ತಾಣವೊಂದು ಇಲ್ಲಿನ ಕೋಡಿಭಾಗದ ಕಾಳಿನದಿತಟದಲ್ಲಿ ರೂಪುಗೊಂಡಿದೆ.
ಕಾರವಾರ ನಗರದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ‘ಕಾಳಿ ರಿವರ್ ಗಾರ್ಡನ್’ ಇದೀಗ ಪ್ರವಾಸಿಗರನ್ನು ಹಾಗೂ ಜಲಸಾಹಸಿಗರನ್ನು ಆಕರ್ಷಿಸುತ್ತಿದೆ. ಈಗ ತಾನೆ ಅಭಿವೃದ್ಧಿ ಪಡಿಸಿರುವ ಸುಂದರ ಗಾರ್ಡ್‌ನಲ್ಲಿ ಫುಟ್‌ಪಾತ್, ಕುಳಿತುಕೊಳ್ಳಲು ಆಸನ, ಮಕ್ಕಳ ಆಟಿಕೆಗಳು, ಬಗೆ ಬಗೆಯ ಆಲಂಕಾರಿಕ ಗಿಡಗಳು ಹಾಗೂ ವಿದ್ಯುತ್ ಅಳವಡಿಸಲಾಗಿದೆ. ಅಲ್ಲದೆ ವಿಶಾಲ ಜಾಗದಲ್ಲಿ ಹುಲ್ಲು ಹಾಸನ್ನು ಬೆಳೆಸಲಾಗುತ್ತಿದೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿ: ನಗರದಲ್ಲಿನ ಪ್ರವಾಸಿ ತಾಣಗಳ ಪಟ್ಟಿಗೆ ಇಲ್ಲಿನ ಉದ್ಯಾನ ಕೂಡ ಹೊಸದಾಗಿ ಸೇರ್ಪಡೆಗೊಳ್ಳಲಿದೆ. ಮಂಗಳೂರಿನ ಲೀಸರ್ ರೂಟ್ಸ್ ಎನ್ನುವ ಸಂಸ್ಥೆಯು ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ಇಲ್ಲಿನ 2 ಎಕರೆಯನ್ನು ಲೀಸರ್ ಸಂಸ್ಥೆಯು ಜಿಲ್ಲಾಡಳಿತದಿಂದ 10 ವರ್ಷಗಳ ಅವಧಿಗೆ ಭೋಗ್ಯ ಪಡೆದಿದೆ.
ಕಳೆದ 7 ತಿಂಗಳಿಂದ ನಡೆಯುತ್ತಿರುವ ಉದ್ಯಾನ ನಿರ್ಮಾಣ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಜಲಸಾಹಸಿ ಕ್ರೀಡೆಗಳು ಆಕರ್ಷಣೆ: ಕಾಳಿ ನದಿ ತಟತದಲ್ಲಿರುವ ಈ ಪ್ರದೇಶದಲ್ಲಿ ಕಳೆದ ವರ್ಷವೇ ಜಿಲ್ಲಾಡಳಿತ ಜಲಸಾಹಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲ ಕ್ರೀಡೆಗಳನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಿತ್ತು. ಅಲ್ಲದೆ ಇದು ಪ್ರವಾಸಿಗರಿಗೆ ನೆಚ್ಚಿನ ತಾಣವಾಗುತ್ತಿದ್ದಂತೆ ಇಲ್ಲಿ ಸುಂದರ ಉದ್ಯಾನವನ ತಲೆ ಎತ್ತಿದೆ. ಇದೀಗ ಇಲ್ಲಿ ಬನಾನಾ ಬೋಟ್, ಬಂಪ್ ರೈಡ್, ಸ್ಪೀಡ್ ಬೈಕ್ ರೈಡ್, ಜೆಟ್ ಸ್ಕೈ, ಕಯಾಕಿಂಗ್‌ನಂತಹ ಹೊಸ ಮಾದರಿಯ ಜಲ ಸಾಹಸ ಚಟುವಟಿಕೆಗಳು ಆರಂಭಗೊಂಡಿದ್ದು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆೆ.
ಜಲಸಾಹಸಿ ಚಟುವಟಿಕೆಗಳಿಗೆ ಪೂರಕವಾಗಿರುವ ತಾಣವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಲೀಸರ್ ರೂಟ್ ಸಂಸ್ಥೆಯ ಮಾಲಕ ರೋಶನ್ ಪಿಂಟೋ ಮಾಹಿತಿ ನೀಡಿದರು.
ಕಾಳಿ ನದಿ ತಟದಲ್ಲಿ ನಡೆಯುವ ಜಲಸಾಹಸಿ ಚಟುವಟಿಕೆಗಳಲ್ಲಿ ಫ್ಲೈಯಿಂಗ್ ಫಿಶ್ ಎನ್ನುವ ನೂತನ ಜಲಸಾಹಸಿ ಕ್ರೀಡೆಯೊಂದನ್ನು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಪರಿಚಯಿಸ ಲಾಗುತ್ತಿದೆ. ರಾಜ್ಯದ ಹಾಗೂ ನೆರೆಯ ಗೋವಾದಲ್ಲಿಯೂ ಇಲ್ಲದಂತಹ ಈ ಜಲಸಾಹಸಿ ಕ್ರೀಡೆಯು ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
1,500 ಎಚ್‌ಪಿ ಸಾಮರ್ಥ್ಯದ ಜೆಟ್‌ಸ್ಕೈಗೆ ಮೂವರು ಕುಳಿತುಕೊಳ್ಳಬಹುದಾದ ಫಿಶ್ ಆಕೃತಿಯ ಬಲೂನ್ ಕಟ್ಟಲಾಗುತ್ತದೆ. ಇದರಲ್ಲಿ ಮೂವರು ಕುಳಿತುಕೊಂಡು, ಗಟ್ಟಿಯಾಗಿ ಹಿಡಿದುಕೊಳ್ಳಲು ಅನುಕೂಲ ವಾಗುವಂತೆ ಹಿಡುಪೊಂದನ್ನು ಬಲೂನಿಗೆ ಅಳವಡಿಸಲಾಗಿದೆ. ಅಲ್ಲದೆ ಸುರಕ್ಷತೆ ದೃಷ್ಟಿಯಿಂದ ಇದರಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಲೈಫ್ ಜಾಕೇಟ್ ನೀಡಲಾಗುತ್ತದೆ. ಜೆಟ್‌ಸ್ಕೈಯು ನೀರಿನಲ್ಲಿ ವೇಗವಾಗಿ ತೆರಳುತ್ತಿದ್ದಂತೆ ಹಿಂಬದಿ ಯಲ್ಲಿ ದಾರಕ್ಕೆ ಕಟ್ಟಿದ ಬಲೂನಿನ ಮುಖ ನೀರಿನಿಂದ ಸುಮಾರು 3 ಅಡಿಯಷ್ಟು ಮೇಲೆದ್ದು ಹಾರುತ್ತದೆ.
ಜೆಟ್‌ಸ್ಕೈ ವೇಗವಾಗಿ ಚಲಿಸಿದಂತೆ ಗಾಳಿಯ ಒತ್ತಡವನ್ನು ಸಿಳಿಕೊಂಡು ಮೇಲೆಳುವ ಫ್ಲೈಯಿಂಗ್ ಫಿಶ್ ಕ್ರೀಡೆ ರೋಮಾಂಚನಕಾರಿಯಾಗಿರುತ್ತದೆ. ಇದಕ್ಕೆ 3 ಜನರಿಗೆ 1 ಸಾವಿರ ರೂ. ಶುಲ್ಕ ವಿಧಿಸಲಾಗುತ್ತದೆ. ಇನ್ನೂ 6 ಜನರು ತೆರಳುವ ಫ್ಲೈಯಿಂಗ್ ಫಿಶ್ ಇಲ್ಲಿ ಅಳವಡಿಸಲಾಗುತ್ತಿದೆ. ಮಹಾರಾಷ್ಟ್ರದ ಅಲಿಬಾಗ್‌ದಲ್ಲಿ ಬಿಟ್ಟರೆ ರಾಜ್ಯದಲ್ಲಿ ಮಾತ್ರ ಸಿಗುವುದರಿಂದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎನ್ನುತ್ತಾರೆ ರೋಶನ್ ಪಿಂಟೋ.