ಅಪರಾಧ ಕೃತ್ಯ ತಡೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ಕ್ರಮ

Update: 2017-05-28 17:15 GMT

ಶಿವಮೊಗ್ಗ, ಮೇ 28: ತಡರಾತ್ರಿಯ ನಂತರ ನಡೆಯುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಶಿವಮೊಗ್ಗ ನಗರದಲ್ಲಿ ಲರ್ಕಿಂಗ್ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಇದರಿಂದ ಇತ್ತೀಚೆಗೆ ನಗರದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ನಡೆಸುತ್ತಿದ್ದ ದುಷ್ಕೃತ್ಯಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.

ಏನಿದು ವ್ಯವಸ್ಥೆ: ಪೊಲೀಸ್ ಇಲಾಖೆಯಲ್ಲಿರುವ ಗಸ್ತು ವ್ಯವಸ್ಥೆಗಳಲ್ಲಿ ಲರ್ಕಿಂಗ್ ಬೀಟ್ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯಲ್ಲಿ ಪೊಲೀಸರು ರಾತ್ರಿ 12ಗಂಟೆಯಿಂದ ಮುಂಜಾನೆಯವರೆಗೂ ಆಯಕಟ್ಟಿನ ಪ್ರದೇಶಗಳಲ್ಲಿ ಮಫ್ತಿ ಬಟ್ಟೆ ತೊಟ್ಟು ಕಾರ್ಯನಿರ್ವಹಣೆ ಮಾಡುತ್ತಾರೆ. ಕಳ್ಳಕಾಕರಿಗೆ ತಾವು ಪೊಲೀಸರೆಂಬ ಅನುಮಾನ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಇದಕ್ಕೆ ಇಂಗ್ಲೀಷ್‌ನಲ್ಲಿ ಲರ್ಕಿಂಗ್ ಬೀಟ್ ಎಂದು ಕರೆಯಲಾಗುತ್ತದೆ.

ದುಷ್ಕೃತ್ಯ ನಡೆಸಲು ಹೊಂಚು ಹಾಕುವ ಕಳ್ಳಕಾಕರು-ಕಿಡಿಗೇಡಿಗಳು, ಪೊಲೀಸರು ಸಮವಸ್ತ್ರ ತೊಟ್ಟು ಓಡಾಡುವುದನ್ನು ಗಮನಿಸುತ್ತಾರೆ. ಕೆಲವೊಮ್ಮೆ ಪೊಲೀಸರು ಹೋಗುವದನ್ನೇ ಕಾದು, ನಂತರ ದುಷ್ಕೃತ್ಯ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಬೀಟ್‌ಗಳಲ್ಲಿ ಲರ್ಕಿಂಗ್ ಬೀಟ್ ಅತ್ಯಂತ ಮಹತ್ವದ ಬೀಟ್ ವ್ಯವಸ್ಥೆಯಾಗಿದೆ.

ಪೊಲೀಸರಿಲ್ಲವೆಂಬ ಕಾರಣದಿಂದ ಕಳ್ಳಕಾಕರು, ದುಷ್ಕರ್ಮಿಗಳು ದುಷ್ಕೃತ್ಯ ನಡೆಸಲು ಮುಂದಾಗುತ್ತಾರೆ. ಇಂತಹ ವೇಳೆ ಮಫ್ತಿ ಬಟ್ಟೆ ತೊಟ್ಟು, ಪೊಲೀಸರೆಂಬ ಅನುಮಾನ ಬಾರದ ರೀತಿಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ತಕ್ಷಣವೇ ಕಿಡಿಗೇಡಿಗಳ ದುಷ್ಕೃತ್ಯ ಪತ್ತೆ ಹಚ್ಚಿ ತಡೆಗಟ್ಟುತ್ತಾರೆ. ಜೊತೆಗೆ ದುಷ್ಕರ್ಮಿಗಳನ್ನು ಸುಲಭವಾಗಿ ಸೆರೆ ಹಿಡಿಯುತ್ತಾರೆ. ಇದರಿಂದ ಕಿಡಿಗೇಡಿಗಳು ಭಯಭೀತರಾಗಿ ದುಷ್ಕೃತ್ಯ ನಡೆಸಲು ಹಿಂಜರಿಯುತ್ತಾರೆ. ರಾತ್ರಿ ವೇಳೆ ರಸ್ತೆಗಿಳಿಯಲು ಅಂಜುತ್ತಾರೆ. ಇದರಿಂದ ಸರ್ವೇಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುವ ಅಪರಾಧ ಕೃತ್ಯಗಳು ಇಳಿಮುಖವಾಗುತ್ತವೆ ಎಂದು ಪೊಲೀಸ್ ಅಧಿಕಾರಿ ಯೋರ್ವರು ಲರ್ಕಿಂಗ್ ಬೀಟ್‌ನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾರೆ. ಶಿವಮೊಗ್ಗ ನಗರದ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಲರ್ಕಿಂಗ್ ಬೀಟ್‌ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ.

ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಕೆಲ ಠಾಣೆಗಳಲ್ಲಿ ಈ ಬೀಟ್ ವ್ಯವಸ್ಥೆಗೆ ನಿಯೋಜನೆ ಮಾಡಿರುವ ಸಿಬ್ಬಂದಿ ಸಂಖ್ಯೆ ಕಡಿಮೆಯಿದೆ. ಉಳಿದಂತೆ ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಈ ಬೀಟ್ ವ್ಯವಸ್ಥೆಗೆ ತೊಡಗಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾರೆ.

ಇಳಿಮುಖ: ಈ ಬೀಟ್ ವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಚಟುವಟಿಕೆಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಯಾವ ರೂಪದಲ್ಲಿ, ಎಲ್ಲಿ ಪೊಲೀಸರು ಬರುತ್ತಾರೋ ಎಂಬ ಆತಂಕದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.

ಗುಡ್ ಮಾರ್ನಿಂಗ್ ಬೀಟ್: ಮುಂಜಾನೆ ವೇಳೆ ಪೊಲೀಸರು ಹೆಚ್ಚಿ ನ ಸಂಖ್ಯೆಯಲ್ಲಿ ಕರ್ತವ್ಯದಲ್ಲಿರುವುದಿಲ್ಲ ಎಂಬುವುದನ್ನರಿತ ಕೆಲ ಕಿಡಿಗೇಡಿಗಳು ತಮ್ಮ ದುಷ್ಕೃತ್ಯಗಳಿಗೆ ಮುಂಜಾನೆಯ ಸಮಯವನ್ನೇ ಆಯ್ದುಕೊಳ್ಳುತ್ತಿದ್ದರು. ಈ ವೇಳೆಯೇ ಕೆಲವೊಮ್ಮೆ ಹೆಚ್ಚಿನ ಅಪರಾಧ ಕೃತ್ಯಗಳು ವರದಿಯಾಗುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ಗುಡ್ ಮಾರ್ನಿಂಗ್ ಬೀಟ್ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದೆ. ಮುಂಜಾನೆ 4 ಗಂಟೆಯಿಂದ ಬೆಳಿಗ್ಗೆ 8ಗಂಟೆವರೆಗೆ ಪೊಲೀಸರು ನಗರಾದ್ಯಂತ ಗಸ್ತು ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಅಪರಾಧಗಳ ಪ್ರಮಾನದಲ್ಲಿ ಇಳಿಕೆ ಕಂಡುಬಂದಿದೆ.
ಲರ್ಕಿಂಗ್ ಬೀಟ್
ಪೊಲೀಸ್ ಇಲಾಖೆಯಲ್ಲಿ ನಾನಾ ರೀತಿಯ ಗಸ್ತು ವ್ಯವಸ್ಥೆಗಳಿದ್ದು, ಇದರಲ್ಲಿ ಲರ್ಕಿಂಗ್ ಬೀಟ್ ಕೂಡ ಒಂದಾಗಿದೆ. ಈ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ.

ತಡರಾತ್ರಿಯ ನಿರ್ದಿಷ್ಟ ಸಮಯಗಳಂದು ಪೊಲೀಸರು ಮಫ್ತಿ ಬಟ್ಟೆಯಲ್ಲಿ ಬೀಡು ಬಿಟ್ಟು ಕಿಡಿಗೇಡಿಗಳ ಚಲನವಲನಗಳ ಮೇಲೆ ನಿಗಾ ಇಡಲಿದ್ದಾರೆ. ಈ ಬೀಟ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಡರಾತ್ರಿಯ ನಂತರ ನಡೆಯುತ್ತಿದ್ದ ಅಪರಾಧ ಕೃತ್ಯಗಳಲ್ಲಿ ಗಣನೀಯ ಇಳಿಮುಖ ಕಂಡುಬಂದಿದೆ ಎಂದು ಡಿವೈಎಸ್ಪಿ ಮಂಜುನಾಥ್ ಶೆಟ್ಟಿ ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News