ಅದೃಶ್ಯ ಲೋಕದ ಅಗೋಚರ ಜೀವಿಗಳ ಬೆನ್ನು ಹತ್ತಿ

Update: 2017-05-29 18:24 GMT

ಈ ಜಗತ್ತು ಗೋಚರ ಜೀವಿಗಳಿಗೆ ಸೀಮಿತವಾಗಿರುವುದಲ್ಲ. ಅಥವಾ ತನ್ನ ಕಣ್ಣಿಗೆ ಗೋಚರವಾಗುವುದಷ್ಟೇ ಅಸ್ತಿತ್ವದಲ್ಲಿದೆ ಎಂದು ನಂಬುವ ಕಾಲ ಇಂದು ಇಲ್ಲವಾಗಿದೆ. ಕಣ್ಣಿಗೆ ಅಗೋಚರವಾದ ಜೀವಜಗತ್ತು ಮನುಷ್ಯನಿಗಿಂತ ಪ್ರಬಲವಾಗಿ, ಸಂಘಟಿತವಾಗಿ ಬದುಕು ನಡೆಸುತ್ತಿರುವುದು ಅವನ ಗಮನಕ್ಕೆ ಬಂದಿದೆ. ಅದನ್ನು ಎದುರಿಸಿದಷ್ಟು ಅದು ಇನ್ನಷ್ಟು ಪ್ರಬಲವಾಗುತ್ತಿವೆ. ಅಥವಾ ಅದು ಮತ್ತೊಂದು ರೂಪದಲ್ಲಿ ಅವನ ಮೇಲೆ ಎರಗುತ್ತಿವೆ. ಈ ಅದೃಶ್ಯಲೋಕದ ಅಗೋಚರ ಜೀವಿಗಳ ಬಗ್ಗೆ ಸರಳ ಭಾಷೆಯಲ್ಲಿ, ಕುತೂಹಲಕರವಾಗಿ ಬರೆದಿದ್ದಾರೆ ಡಾ. ನಾ. ಸೋಮೇಶ್ವರ. ವೈದ್ಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಇವರು ಈಗಾಗಲೇ ‘ಮನಸ್ವಿ’ ‘ನಮ್ಮ ಆಹಾರ ಹೇಗಿರಬೇಕು?’ ‘ನೆಮ್ಮದಿಯ ಬದುಕಿಗೆ ಲೈಂಗಿಕ ಸ್ವಚ್ಛತೆ’ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇಲ್ಲಿ ಮನುಷ್ಯನ ದುರಹಂಕಾರ ಮತ್ತು ಅವನ ಮುಂದೆ ಸವಾಲಾಗಿರುವ ರೋಗಕಾರಕ ಅಗೋಚರ ಶಕ್ತಿಗಳ ಬಗ್ಗೆ ಇವರು ಬರೆದಿದ್ದಾರೆ. ‘ಅದೃಶ್ಯ ಲೋಕದ ಅಗೋಚರ ಜೀವಿಗಳು’ ಕೃತಿ ಮನುಷ್ಯನಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಜೊತೆ ಜೊತೆಗೇ ತನ್ನ ಪರಿದಿಯಾಚೆಗಿರುವ ಜಗತ್ತೊಂದನ್ನು ತೆರೆದುಕೊಡುತ್ತದೆ ಮತ್ತು ಅದರ ಸಂಶೋಧನೆಗಳ ಇತಿಹಾಸ, ವರ್ತಮಾನಗಳನ್ನು ವಿವರಿಸುತ್ತದೆ.
ಇದು ಕೇವಲ ರೋಗಾಣುಗಳ ಕುರಿತಂತೆ ಚರ್ಚಿಸುವ ಕೃತಿಯಲ್ಲ. ಒಟ್ಟು ಜೀವರಾಶಿ ಮತ್ತು ಅದರ ನಿಗೂಢತೆಗಳನ್ನು ಅನ್ವೇಶಿಸುವ ಕೃತಿ. ಆದುದರಿಂದಲೇ ಭೂಮಿ ಮತ್ತು ಜೀವರಾಶಿಯ ಹುಟ್ಟಿನಿಂದ ಅವರು ಆರಂಭಿಸುತ್ತಾರೆ. ಈ ವಿಶ್ವದ ಅಗಣಿತ ಜೀವರಾಶಿ, ಜೀವಜಗತ್ತಿನ ಅಲಿಖಿತ ನಿಯಮಗಳು, ಸೂಕ್ಷ್ಮ ಜೀವಿಗಳ ಅನಾವರಣ, ಪ್ರಾಚೀನ ಜೀವಿಗಳ ಸಾಮ್ರಾಜ್ಯ, ವೈರಸ್‌ಗಳ ವಿಭಿನ್ನ ಲೋಕ, ಶಿಲೀಂಧ್ರಗಳ ಸಾಮ್ರಾಜ್ಯ, ವಿಶೇಷ ಅಗೋಚರ ಜೀವಿಗಳು...ಹೀಗೆ ಬೇರೆ ಬೇರೆ ಮಗ್ಗುಲುಗಳ ಕುರಿತಂತೆ ಲೇಖನದಲ್ಲಿ ಚರ್ಚಿಸುತ್ತಾರೆ. ಈ ಭೂಮಿಯ ಮೇಲೆ ಬದುಕುವ ಏಕೈಕ ಅಧಿಕಾರ ನಮಗಿದೆ ಎಂಬ ಭಾವನೆಯನ್ನು ಮನುಷ್ಯ ತೊರೆಯಬೇಕು ಎಂದು ಈ ಕೃತಿ ಒತ್ತಾಯಿಸುತ್ತದೆ. ಇಲ್ಲಿ ಬದುಕಲು ನಮಗೆಷ್ಟು ಅಧಿಕಾರವಿದೆಯೋ ಅಷ್ಟೇ ಅಧಿಕಾರವು ಪ್ರತಿಯೊಂದು ಕ್ರಿಮಿ, ಕೀಟ, ಸಸ್ಯ, ಪ್ರಾಣಿಗಳಿಗಿವೆ. ಇದನ್ನು ನಾವು ಗೌರವಿಸುತ್ತಿಲ್ಲ. ಈ ಜೀವಜಾಲದ ಒಂದು ಕೊಂಡಿ ಮುರಿಯಿತೆಂದರೆ, ಅದರ ದುಷ್ಪರಿಣಾಮ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಈ ಪ್ರಕೃತಿಯ ಮೇಲಾಗುತ್ತದೆ ಎಂದು ಕೃತಿ ಎಚ್ಚರಿಸುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News