ಯಕ್ಷಗಾನ ಕುರಿತ ಹೊಸ ಚಿಂತನೆಗಳು

Update: 2017-05-30 18:36 GMT

ಕಳೆದ ಶತಮಾನದ ಕೊನೆಯ ದಶಕದಲ್ಲಿ ಯಕ್ಷಗಾನವು ಕಂಡ ಪುನರ್ ಹೊಂದಾಣಿಕೆಯ ಸಂದರ್ಭದಲ್ಲಿ ಅಮೃತ ಸೋಮೇಶ್ವರರು ನಿರ್ವಹಿಸಿದ ಹೊಣೆಗಾರಿಕೆಯು ಅನನ್ಯ ವಾದುದು. ಈ ಅನನ್ಯತೆಯ ನೆಲೆಯಿಂದಲೇ ಅಮೃತರ ‘ಯಕ್ಷ ತರು’ ಲೇಖನ ಸಂಚಯದ ಎಲ್ಲ ಲೇಖನಗಳನ್ನು ಪರಿಭಾವಿಸಬಹುದು. ಯಕ್ಷಗಾನದ ರಂಗನಿರ್ಮಿತಿ, ಪರಂಪರೆಯ ಮುಂದುವರಿಕೆಯ ವಿನ್ಯಾಸ ಮತ್ತು ವೌಲ್ಯಮಂಡನೆ-ಈ ಮೂರೂ ಆಯಾಮಗಳಿಗೆ ಅಮೃತರು ನೀಡಿರುವ ಮಹತ್ವದ ಧೋರಣೆಗಳಿಗೆ ಯಕ್ಷತರು ಕೃತಿ ಸೊಗಸಾದ ನಿದರ್ಶನವಾಗಿದೆ. ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅಮೃತರ ಈ ಕೃತಿಯನ್ನು ವಿಶ್ಲೇಷಿಸುವುದು ಹೀಗೆ. ಯಕ್ಷಗಾನದ ಇತಿಹಾಸ, ಸ್ವರೂಪ, ಪ್ರಸಂಗಸಾಹಿತ್ಯ, ಪ್ರದರ್ಶನ, ಸಂವಾದಿ ರಂಗಕಲೆ ಹೀಗೆ ಯಕ್ಷಗಾನಕ್ಕೆ ಸಂಬಂಧಪಟ್ಟ 23 ಲೇಖನ ಗಳನ್ನು ಈ ಕೃತಿ ಒಳಗೊಂಡಿದೆ. ಯಕ್ಷಗಾನದ ಕುರಿತ ಸಂಶೋಧನಾತ್ಮಕ ಅಧ್ಯಯನಗಳಿಗೆ ಆರೋಗ್ಯ ಪೂರ್ಣ ಕೈಮರವಾಗಬಲ್ಲ ಈ ಕೃತಿ, ಯಕ್ಷಗಾನದ ನಡೆ, ಕಳೆದ ಶತಮಾನದ ಯಕ್ಷಗಾನದ ಕುರಿತ ಬೀಸುನೋಟ, ಬಹುಗುಣಗರ್ಭಿತ ಯಕ್ಷಗಾನ ಸಾಹಿತ್ಯ, ನಾಟ್ಯಶಾಸ್ತ್ರದ ನೆರಳಲ್ಲಿ ಬಯಲಾಟದ ಕುರಿತ ಜಿಜ್ಞಾಸೆ, ಯಕ್ಷಗಾನದ ಗತವೈಭವ, ಯಕ್ಷಗಾನದ ಆಹಾರ್ಯ ಭಾಗ, ವಿವಿಧ ಯಕ್ಷಗಾನ ಪ್ರಸಂಗಗಳ ಕುರಿತ ವಿವರಣೆ, ಯಕ್ಷಗಾನ ಲೇಖಕರ ಅವಲೋಕನ, ಭೂತಾರಾಧನೆ ಮತ್ತು ಯಕ್ಷಗಾನದ ನಡುವಿನ ತುಲನೆ, ಜನಮಾನಸದಲ್ಲಿ ಉಳಿದಿರುವ ಯಕ್ಷಗಾನ ಕಲಾವಿದರ ಪರಿಚಯ, ಮಕ್ಕಳು ಮತ್ತು ಮಹಿಳೆಯರ ಯಕ್ಷಗಾನಗಳ ಅವಲೋಕನ, ಶಾಸ್ತ್ರೀಯತೆ ಮತ್ತು ದೇಸೀಯತೆಯ ನಡುವೆ ಯಕ್ಷಗಾನದ ಸ್ಥಿತಿ ಲಯಗಳ ವಿಶ್ಲೇಷಣೆಗಳನ್ನು ಈ ಲೇಖನಗಳಲ್ಲಿ ಕಾಣಬಹುದು. ಜೊತೆ ಜೊತೆಗೇ, ಹೇಗೆ ಸಾಮಾಜಿಕ ಒಳಸಂಘರ್ಷಗಳು ಈ ಕಲೆಯ ಜೊತೆಗೆ ತಳಕು ಹಾಕಿಕೊಂಡಿವೆೆ ಎನ್ನುವುದನ್ನೂ ಕೃತಿಯ ಹಲವು ಲೇಖನಗಳು ಹೊರಗೆಡಹುತ್ತವೆ. ಶಾಸ್ತ್ರೀಯ, ಜಾನಪದ, ಶೂದ್ರ, ಮೇಲ್ವರ್ಣೀಯ, ವರ್ಗ, ವರ್ಣ ಇತ್ಯಾದಿಗಳ ಸಂಘರ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಯಕ್ಷಗಾನದ ಮೇಲೆ ಪರಿಣಾಮ ಬೀರಿರುವುದನ್ನು ಇಲ್ಲಿರುವ ಲೇಖನಗಳು ಹೇಳುತ್ತವೆ. ಯಕ್ಷಗಾನದ ಅಧ್ಯಯನ ಪರೋಕ್ಷವಾಗಿ ಕರಾವಳಿಯ ಸಾಮಾಜಿಕ ಜನಜೀವನ, ಧಾರ್ಮಿಕ ಮನೋಧರ್ಮಗಳನ್ನೂ ಅಧ್ಯಯನ ಮಾಡಲು ಪ್ರೇರೇಪಿಸುತ್ತದೆ. ಸದ್ಯದ ದಿನಗಳಲ್ಲಿ ಯಕ್ಷಗಾನದೊಳಗೆ ವಾಣಿಜ್ಯ ಹಸ್ತಕ್ಷೇಪಗಳಲ್ಲದೆ ರಾಜಕೀಯ ಹಸ್ತಕ್ಷೇಪಗಳೂ ನಡೆಯುತ್ತಿರುವುದರಿಂದ, ಇನ್ನಷ್ಟು ಅಧ್ಯಯನಗಳಿಗೆ ಯಕ್ಷಗಾನ ಕಲೆ ನಮ್ಮನ್ನು ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ.
ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿವಿ ಈ ಕೃತಿಯನ್ನು ಹೊರತಂದಿದೆ.ಕೃತಿಯ ಮುಖಬೆಲೆ 90 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News