ಆಂಡ್ರಾಯ್ಡ್ ಸಹಸ್ಥಾಪಕನಿಂದ ಹೊಸ ಸ್ಮಾರ್ಟ್ ಫೋನ್

Update: 2017-05-31 07:35 GMT

ಹೊಸದಿಲ್ಲಿ, ಮೇ 31 : ಆಂಡ್ರಾಯ್ಡ್ ಸಹಸ್ಥಾಪಕನೆಂದೇ ಹೆಸರುವಾಸಿಯಾಗಿರುವ ಆ್ಯಂಡಿ ರುಬಿನ್ ಅವರು ಹೊಸ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿದ್ದಾರೆ. ‘ಎಸೆಂಶಿಯಲ್’ ಎಂಬ ಹೆಸರಿನ ಈ ಸ್ಮಾರ್ಟ್ ಫೋನನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8 ಹಾಗೂ ಐಫೋನ್ 7 ಪ್ಲಸ್ ಗೆ ಸಡ್ಡು ಹೊಡೆಯಲೆಂದೇ ಹೊರತರಲಾಗಿದೆಯೆಂದು ಹೇಳಲಾಗುತ್ತಿದೆ. ಎಸೆಂಶಿಯಲ್ ಒಂದು ಮೊಡ್ಯುಲರ್ ಫೋನ್ ಆಗಿದ್ದು ಹೆಚ್ಚುವರಿ ಅಟ್ಯಾಚ್ಮೆಂಟುಗಳಾದ 360 ಡಿಗ್ರಿ ಕ್ಯಾಮರಾ ಮತ್ತು ಚಾರ್ಜಿಂಗ್ ಡಾಕ್ ಹೊಂದಿರುತ್ತದೆ.

ಈ ಹೊಸ ಸ್ಮಾರ್ಟ್ ಫೋನಿಗೆ 5.7 ಇಂಚು ಕ್ಯೂಎಚ್‌ಡಿ (2560x1312) ಬೆಝೆಲ್-ಲೆಸ್ ಡಿಸ್ಪ್ಲೆ ಇದೆ. ಈ ಎಡ್ಜ್ ಟು ಎಡ್ಜ್ ಡಿಸ್ಪ್ಲೆ ನಲ್ಲಿ ಕೇವಲ ಒಂದು ಸೆಲ್ಫೀ ಶೂಟರ್ ಕಾಣಿಸುತ್ತದೆ.

ಡಿಸ್ಪ್ಲೇ ನಲ್ಲಿ ಹೋಂ ಬಟನ್ ಕೂಡ ಕಾಣಿಸುತ್ತಿಲ್ಲವಾಗಿದ್ದು ಅದರ ಬದಲು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹಿತ ಹೋಂ ಬಟನ್ ಫೋನಿನ ಹಿಂದುಗಡೆಯಿದೆ.

ಟಿಟಾನಿಯಂ ಹಾಗೂ ಸೆರಾಮಿಕ್ ಉಪಯೋಗಿಸಿ ತಯಾರಿಸಲಾಗಿರುವ ಈ ಫೋನ್ ಇತರ ಬ್ರ್ಯಾಂಡುಗಳ ಫೋನುಗಳಿಗಿಂತ ಹೆಚ್ಚಿಗೆ ಬಾಳಿಕೆ ಬರುವುದೆಂದು ಅದರ ತಯಾರಕರು ಹೇಳುತ್ತಿದ್ದಾರೆ. ಫೋನಿನ ಸ್ಪೆಸಿಫಿಕೇಶನ್ಸ್ ಕೂಡ ಅತ್ಯುತ್ತಮವಾಗಿದ್ದು ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್, 4 ಜಿಬಿ ರ‍್ಯಾಮ್ ಹಾಗೂ 128ಜಿಬಿ ಸ್ಟೋರೇಜ್ ಹೊಂದಿರುತ್ತದೆ.

ಎಸೆಂಶಿಯಲ್ ಫೋನಿನಲ್ಲಿ 13 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಎರಡು ಬ್ಯಾಕ್ ಕ್ಯಾಮರಾ ಇದ್ದರೆ, ಸೆಕೆಂಡರಿ ಲೆನ್ಸ್ ಒಂದು ಕಪ್ಪು ಬಿಳುಪಿನ ಸೆನ್ಸರ್ ಆಗಿದೆ. ಫ್ರಂಟ್ ಕ್ಯಾಮರಾ ಸಾಮರ್ಥ್ಯ 8 ಮೆಗಾ ಪಿಕ್ಸೆಲ್ ಸೆನ್ಸರ್ ಆಗಿರುತ್ತದೆ. ಇದರಲ್ಲಿ 4ಕೆ ವೀಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದೆ. ಆದರೆ ಎಸೆಂಶಿಯಲ್ ಫೋನಿನಲ್ಲಿ 3.55 ಎಂಎಂ ಹೆಡ್ ಫೋನ್ ಜ್ಯಾಕ್ ಇಲ್ಲವಾಗಿದ್ದು ಕಂಪೆನಿಯು ಫೋನಿನೊಂದಿಗೆ ಹೆಡ್ ಫೋನ್ ಡಾಂಗಲ್ ಕೂಡ ಗ್ರಾಹಕರಿಗೆ ನೀಡಲಾಗುವುದೆಂದು ಹೇಳಿಕೊಂಡಿದೆ.

ಎಸೆಂಶಿಯಲ್ ಫೋನಿನೊಂದಿಗೆ ಒದಗಿಸಲಾಗುವ 360 ಡಿಗ್ರಿ ಕ್ಯಾಮರಾ ಹಾಗೂ ವೈರ್‌ಲೆಸ್ ಡಾಕ್ ಅನ್ನು ಫೋನಿಗೆ ಮ್ಯಾಗ್ನೆಟಿಕ್ ಕನೆಕ್ಟರ್ ಮೂಲಕ ಸಿಕ್ಕಿಸಬಹುದಾಗಿದೆ.

ಆಂಡ್ರಾಯ್ಡ್ ಮೂಲಕ ಕಾರ್ಯಾಚರಿಸುವ ಈ ಫೋನ್ ಸದ್ಯ ಅಮೆರಿಕಾದಲ್ಲಿ ಪ್ರಿ-ಆರ್ಡರ್ ಮೂಲಕ ಲಭ್ಯವಿದ್ದು ಅದರ ಬೆಲೆ 699 ಡಾಲರ್ (ಅಂದಾಜು ರೂ. 45,202) ಆಗಿರುತ್ತದೆ. 360 ಡಿಗ್ರಿ ಕ್ಯಾಮರಾದೊಂದಿಗೆ ಈ ಫೋನಿನ ಬೆಲೆ 749 ಡಾಲರ್ (ಅಂದಾಜು ರೂ.48,437) ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News