ತೆರೆಯ ಹಿಂದಿನ ತಾರೆ ಪಾರ್ವತಮ್ಮ ರಾಜ್‌ಕುಮಾರ್

Update: 2017-05-31 18:33 GMT

ಈ ನೆಲಮೂಲ ಸಾಧಕಿಯ ಸಾಧನೆಯ ಹಿಂದೆ ಅಪಾರ ಅನುಭವವಿದೆ. ಸಹನೆ ಇದೆ. ಶ್ರಮವಿದೆ. ಹಳ್ಳಿಹೆಂಗಸಿನ ಧೈರ್ಯವಿದೆ. ಅಜ್ಜಿಯ ಜಿಗುಟುತನವಿದೆ. ಅವಮಾನವನ್ನು ನುಂಗಿಕೊಳ್ಳುವ ಗುಣವಿದೆ. ಇಲ್ಲದಿದ್ದರೆ, ರಾಜ್ ಎಂಬ ಮಹಾನ್ ತಾರೆಯ ಪತ್ನಿಯಾಗಿ, ಶಿವಣ್ಣ-ರಾಘಣ್ಣ-ಪುನೀತ್ ಎಂಬ ಸ್ಟಾರ್ ನಟರ ಅಮ್ಮನಾಗಿ, ರಾಜ್ ಕುಟುಂಬವನ್ನು ಕಾಪಾಡಿದ ರಾಜಮಾತೆಯಾಗಿ, ಗಾಂಧಿನಗರದ ಗಟ್ಟಿಗಿತ್ತಿಯಾಗಿ- ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿತ್ತೆ? ಆದಕಾರಣ ಅವರು ನಿಜವಾದ ಅರ್ಥದಲ್ಲಿ ತಾರೆ.

ಪಾರ್ವತಮ್ಮ ರಾಜ್‌ಕುಮಾರ್ ಸಿನೆಮಾದಲ್ಲಿ ನಟಿಸಲಿಲ್ಲ, ಸ್ಟಾರ್ ಅನಿಸಿಕೊಳ್ಳಲಿಲ್ಲ, ಬಿರುದು-ಬಾವಲಿಗಳನ್ನು ಪಡೆಯಲಿಲ್ಲ, ಅಭಿಮಾನಿ ಬಳಗವನ್ನು ಹೊಂದಿರಲಿಲ್ಲ. ಆದರೆ ಸ್ಟಾರ್‌ಗಳನ್ನು ಸೃಷ್ಟಿಸಿದರು. ಸ್ಟಾರ್‌ಗಳು ತೆರೆಯ ಮೇಲೆ ವಿಜೃಂಭಿಸಿದರೆ, ಇವರು ತೆರೆಯ ಹಿಂದಿನ ತಾರೆಯಾಗಿ ತಣ್ಣಗಿದ್ದರು. 80ಕ್ಕೂ ಹೆಚ್ಚು ಯಶಸ್ವಿ ಚಿತ್ರಗಳನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭಾನ್ವಿತ ನಟ-ನಟಿಯರನ್ನು, ತಂತ್ರಜ್ಞರನ್ನು ಕೊಡುಗೆಯಾಗಿ ಕೊಟ್ಟರು. ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ಕನ್ನಡ ಭಾಷೆಯ ಚಿತ್ರಗಳನ್ನು ಬೇರೆ ಭಾಷೆಯ ಜನ ಗಂಭೀರವಾಗಿ ಗಮನಿಸುವಂತೆ, ಮಾತನಾಡುವಂತೆ ಮಾಡಿದರು. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ನೆಲೆ-ಬೆಲೆ ತಂದರು.

ಹಾಗೆ ನೋಡಿದರೆ ಪಾರ್ವತಮ್ಮನವರು ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ, ನಗರ ಪ್ರದೇಶದಿಂದ ಬಂದವರಲ್ಲ, ಶ್ರೀಮಂತ ಕುಟುಂಬದ ಹಿನ್ನೆಲೆಯೂ ಇಲ್ಲ. ಸಾಲಿಗ್ರಾಮದ ಸಾಮಾನ್ಯ ಮಹಿಳೆ. ತನ್ನ 13ನೆ ವಯಸ್ಸಿಗೆ ರಾಜ್‌ಕುಮಾರ್ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜ್‌ಕುಮಾರ್ ದೂರದ ಮದ್ರಾಸಿನ ಕೂಡಂಬಾಕಂನಲ್ಲಿ ಮನೆ ಮಾಡಿ, ವೃತ್ತಿ ರಂಗಭೂಮಿ, ಸಿನೆಮಾ ಅಂತೆಲ್ಲ ತಲೆತುಂಬಿಕೊಂಡಿದ್ದಾಗ, ತುಂಬು ಸಂಸಾರದ ನೊಗವನ್ನು ಹೆಗಲಿಗೇರಿಸಿಕೊಂಡು ಸಮರ್ಥವಾಗಿ ನಿಭಾಯಿಸಿದವರು ಪಾರ್ವತಮ್ಮನವರು. ಮದ್ರಾಸ್‌ನಲ್ಲಿ ಬೀಡುಬಿಟ್ಟ ಅವತ್ತಿನ ಅಣ್ಣಾವ್ರ ಕುಟುಂಬದ ಸ್ಥಿತಿಗತಿಯನ್ನು ಕಣ್ಣಾರೆ ಕಂಡವರು, ಕುಟುಂಬ ನಿರ್ವಹಣೆಯಲ್ಲಿ ಪಾರ್ವತಮ್ಮನವರ ಪಾತ್ರವನ್ನು ಸ್ಮರಿಸದೆ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅಂದಿನ ದಿನಗಳ ಪಾರ್ವತಮ್ಮನವರ ಓದಿನ ಆಸಕ್ತಿಯ ಬಗ್ಗೆ ಹಲವು ಕತೆಗಳನ್ನು ಹೇಳದೆ ಇರುವುದಿಲ್ಲ. ಇಂಥದ್ದೇ ಒಂದು ಕತೆಯನ್ನು ಕೆಲವು ವರ್ಷಗಳ ಹಿಂದೆ ಚಿತ್ರ ನಿರ್ದೇಶಕ ಪಿ.ಶೇಷಾದ್ರಿಯವರು ಹೇಳಿದ್ದರು. ಅದು ರಾಜ್‌ಕುಮಾರ್ ನಟಿಸಿದ ಸೂಪರ್ ಹಿಟ್ ಚಿತ್ರಗಳ ಪೈಕಿ ಒಂದಾದ ‘ಮಯೂರ’ಕ್ಕೆ ಸಂಬಂಧಿಸಿದ್ದು. ಮದ್ರಾಸಿನ ಪುಟ್ಟ ಮನೆಯಲ್ಲಿ ಮಕ್ಕಳನ್ನು ನೋಡಿ ಕೊಂಡು ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದ ಪಾರ್ವತಮ್ಮನವರಿಗೆ ಕನ್ನಡ ಎನ್ನುವುದು ಮನೆಗಷ್ಟೇ ಸೀಮಿತವಾಗಿತ್ತು.

ಆ ಸಮಯದಲ್ಲಿ ಪಾರ್ವತಮ್ಮನವರಿಗೆ ಕನ್ನಡ ಪತ್ರಿಕೆಗಳು, ಪುಸ್ತಕಗಳು ಸಿಕ್ಕರೆ ಅದು ನಿಧಿಗೆ ಸಮ. ಒಂದು ದಿನ ಹಳೆ ರದ್ದಿ ಪೇಪರ್ ಖರೀದಿಸುವವನೊಬ್ಬ ಮನೆ ಮುಂದೆ ಬಂದ. ಇವರು ತಮ್ಮಲ್ಲಿದ್ದ ಹಳೆ ಪೇಪರ್ ಮಾರಲು ಮುಂದಾದರು. ಆತ ತನ್ನ ಚೀಲದಲ್ಲಿ ರುವುದನ್ನು ಕೆಳಕ್ಕೆ ಸುರಿದು, ಇವರು ಕೊಟ್ಟ ಪೇಪರ್ ತುಂಬಿಕೊಳ್ಳಲು ಜಾಗ ಮಾಡಿಕೊಳ್ಳತೊಡಗಿದ. ಆ ಸುರಿದ ರಾಶಿಯಲ್ಲಿ ಕನ್ನಡದ ಪುಸ್ತಕವೊಂದಿತ್ತು. ರ್ಯಾಪರ್ ಹರಿದಿತ್ತು. ಅದನ್ನೆತ್ತಿ ಎದೆಗವುಚಿಕೊಂಡ ಪಾರ್ವತಮ್ಮನವರು, ತಮ್ಮ ಹಳೆ ಪೇಪರ್‌ಗಳನ್ನೆಲ್ಲ ಅದರ ಲೆಕ್ಕಕ್ಕೆ ಸಮ ಮಾಡಿ, ಆ ಒಂದೇ ಒಂದು ಪುಸ್ತಕವನ್ನು ಅವನಿಂದ ಕೇಳಿ ಪಡೆದಿದ್ದರು. ಅದು ದೇವುಡು ನರಸಿಂಹಶಾಸ್ತ್ರಿಗಳು ಬರೆದ ‘ಮಯೂರ’ ಪುಸ್ತಕ. ಆ ಪುಸ್ತಕವನ್ನು ಒಂದೇ ರಾತ್ರಿಗೆ ಓದಿ ಮುಗಿಸಿದ ಪಾರ್ವತಮ್ಮನವರಿಗೆ ಆ ಕತೆಯೊಳಗೆ ಬರುವ ಸಾಮಾನ್ಯ ನೊಬ್ಬ ರಾಜಕುಮಾರನಾಗುವ ಪರಿ, ಆ ರಾಜಕುಮಾರನಿಗಿದ್ದ ನೀಳ ಮೂಗು, ಉತ್ತಮ ಮೈಕಟ್ಟು, ಬುದ್ಧಿ, ಕಲೆ... ತಲೆ ತುಂಬಿಕೊಂಡಿತ್ತು. ಅದಕ್ಕಿಂತಲೂ, ಆ ಪಾತ್ರದಲ್ಲಿ ತಮ್ಮ ಪತಿಯನ್ನು ಕಲ್ಪಿಸಿಕೊಂಡು ನೋಡುವಂತೆ ಮಾಡಿತ್ತು. ಆ ರಾಜಕುಮಾರನೇ ಈ ರಾಜಕುಮಾರ ಎನಿಸಿತ್ತು. ಇದನ್ನು ಚಿತ್ರ ಮಾಡಿದರೆ ಹೇಗೆ ಎನ್ನುವ ಯೋಚನೆಗೆ ಹಚ್ಚಿತ್ತು.

ಆದರೆ ಅದಾವುದನ್ನೂ ಪತಿಗೆ ಹೇಳದ ಪಾರ್ವತಮ್ಮನವರು, ‘ಈ ಪುಸ್ತಕ ಚೆನ್ನಾಗಿದೆ, ಓದಿ’ ಎಂದಷ್ಟೇ ಹೇಳಿ ರಾಜ್‌ಗೆ ಕೊಟ್ಟರು. ಓದಿದ ರಾಜ್‌ಕುಮಾರ್ ತಲೆಯಲ್ಲಿಯೂ ಅದೇ. ಅದಕ್ಕೆ ತಕ್ಕಂತೆ ನಿರ್ದೇಶಕ, ನಿರ್ಮಾಪಕರೂ ಸಿಕ್ಕರು. ‘ಮಯೂರ’ ಬೆಳ್ಳಿತೆರೆಗೆ ಬಂತು, ಅತ್ಯುತ್ತಮ ನಟ ಪ್ರಶಸ್ತಿ ಪಡೆಯಿತು, ಸಾರ್ವಕಾಲಿಕ ಸೂಪರ್‌ಹಿಟ್ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿ ದಾಖಲಾಯಿತು. ರಾಜ್‌ಕುಮಾರ್ ಪತ್ನಿಯಾಗಿ ಪಾರ್ವತಮ್ಮನವರು ಮನೆ-ಮಕ್ಕಳಿಗಷ್ಟೇ ಸೀಮಿತವಾಗುಳಿದವರಲ್ಲ. ಪತಿಯ ಚಿತ್ರಗಳು, ಪಾತ್ರಗಳನ್ನು ಗಮನಿಸುತ್ತಲೇ ಬೆಳೆದವರು. ಬೆಳೆಯುತ್ತಲೇ ಬೆಳ್ಳಿತೆರೆಯ ಒಳ-ಹೊರಗನ್ನು ಒಡಲಿಗಿರಿಸಿಕೊಂಡವರು. ಕಥೆ, ಕಾದಂಬರಿ, ಕಲಾವಿದರು, ಚಿತ್ರೀಕರಣ, ನಿರ್ಮಾಣ, ವಿತರಣ, ಪ್ರದರ್ಶನ ಕ್ಷೇತ್ರಗಳನ್ನು ಅನುಭವದಿಂದಲೇ ಅರಗಿಸಿಕೊಂಡವರು. ಇದ್ದಕ್ಕಿದ್ದಂತೆ ಒಂದು ದಿನ ವಜ್ರೇಶ್ವರಿ ಕಂಬೈನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಇಳಿದರು. ಇಂದು ಆ ಸಂಸ್ಥೆ ಗಾಂಧಿನಗರದ ಹೆಡ್ ಆಫೀಸ್ ಆಗಿದೆ. ನಂಬರ್ ಒನ್ ಚಿತ್ರ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕನ್ನಡ ಚಿತ್ರರಂಗದ ಭಾಗವೇ ಆಗಿಹೋಗಿದೆ.

ಗಾಂಧಿನಗರದ ಗಟ್ಟಿಗಿತ್ತಿ:

70ರ ದಶಕದಲ್ಲಿ ರಾಜ್‌ಕುಮಾರ್ ನಟಿಸಿದ ಚಿತ್ರಗಳು ಕನ್ನಡಿಗರ ಮನ ಗೆಲ್ಲುತ್ತಿದ್ದಾಗ, ರಾಜ್ ಜನಪ್ರಿಯ ನಾಯಕನಟನಾಗಿ ಹೊರಹೊಮ್ಮುತ್ತಿದ್ದಾಗ, ಹಣ ಗಳಿಕೆಯಲ್ಲಿ ಒಂದಕ್ಕಿಂತ ಒಂದು ಚಿತ್ರ ಪೈಪೋಟಿಗಿಳಿದಾಗ... ರಾಜ್ ಕುಟುಂಬದ ಆರ್ಥಿಕ ಸ್ಥಿತಿಗತಿಯೇನೂ ಸುಧಾರಿಸಿರಲಿಲ್ಲ. ಅದಕ್ಕೆ ಕಾರಣ ರಾಜ್‌ಕುಮಾರ್‌ರಿಗೆ ಸಿಗುತ್ತಿದ್ದ ಸಂಭಾವನೆ. ಸಂಭಾವನೆ ವಿಷಯವನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ್ದರಿಂದ, ನಿರ್ಮಾಪಕರ ಚಿಲ್ಲರೆ ಬುದ್ಧಿಯನ್ನು, ಮೋಸವನ್ನು ಸಹಿಸಿಕೊಂಡು ಸುಮ್ಮನಾದರು. ಆದರೆ ಪಾರ್ವತಮ್ಮನವರು ಸುಮ್ಮನಾಗಲಿಲ್ಲ. ಆ ಸಂದರ್ಭದಲ್ಲಿ ಪಾರ್ವತಮ್ಮನವರು ಜಾಗೃತರಾದರು. ಹೆಣ್ಣು ಹೆಂಗಸು ಎನ್ನುವುದನ್ನು ತೆಗೆದು ಪಕ್ಕಕ್ಕಿಟ್ಟು, ಗಟ್ಟಿ ಮನಸ್ಸು ಮಾಡಿ ಗಾಂಧಿನಗರಕ್ಕೆ ಕಾಲಿಟ್ಟರು. ವಜ್ರೇಶ್ವರಿ ಕಂಬೈನ್ಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದರು. 1975ರಲ್ಲಿ ರಾಜ್ ಅಭಿನಯದ ‘ತ್ರಿಮೂರ್ತಿ’ ಚಿತ್ರವನ್ನು ಮೊತ್ತ ಮೊದಲ ಬಾರಿಗೆ ಸ್ವಂತ ಬ್ಯಾನರಿನಡಿ ನಿರ್ಮಿಸಿದರು. ಮೂರು ಪಾತ್ರಗಳಲ್ಲಿ, ವಿಭಿನ್ನ ಗೆಟಪ್‌ಗಳಲ್ಲಿ ನಟಿಸಿದ್ದ ರಾಜ್‌ರ ‘ತ್ರಿಮೂರ್ತಿ’ ಹಣ ಗಳಿಕೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗತೊಡಗಿತು. ಪಾರ್ವತಮ್ಮನವರನ್ನು ನಿರ್ಮಾಪಕಿಯನ್ನಾಗಿ ಗಟ್ಟಿಯಾಗಿ ನೆಲೆ ನಿಲ್ಲಿಸಿತು. ಅಲ್ಲಿಂದ ಶುರುವಾದ ಅವರ ಚಿತ್ರನಿರ್ಮಾಣ ಕುಟುಂಬದ ಕಸುಬಾಗಿ, ಪ್ರತಿಷ್ಠಿತ ಸಂಸ್ಥೆಯಾಗಿ, ಉದ್ಯಮದ ಭಾಗವಾಗಿ ಬೆಳೆದು ನಿಂತಿದೆ. 1975ರಿಂದ ಇಲ್ಲಿಯವರೆಗೆ, ಆಯಾಯ ಕಾಲಮಾನಕ್ಕೆ ತಕ್ಕಂತೆ, ಪ್ರೇಕ್ಷಕರ ಬೇಡಿಕೆಗನುಗುಣವಾಗಿ ಎಂಬತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ಮುಂದುವರಿದಿದೆ. ಸದಭಿರುಚಿ ಚಿತ್ರನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ರಾಜ್ಯ, ರಾಷ್ಟ್ರ ಪ್ರಶಸ್ತಿ-ಪುರಸ್ಕಾರಗಳನ್ನೂ ಗಳಿಸಿದೆ. ವಜ್ರೇಶ್ವರಿ ಕಂಬೈನ್ಸ್, ಪೂರ್ಣಿಮಾ ಎಂಟರ್‌ಪ್ರೈಸಸ್ ಚಿತ್ರನಿರ್ಮಾಣ ಸಂಸ್ಥೆಗಳಿಂದ ರಾಜ್‌ಕುಮಾರ್ ಚಿತ್ರಗಳಷ್ಟೇ ಅಲ್ಲದೆ, ಅವರ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಪಾರ್ವತಮ್ಮನವರು ತಾವಷ್ಟೇ ಬೆಳೆಯಲಿಲ್ಲ, ತಮ್ಮ ಸಹೋದರರನ್ನೂ ಕನ್ನಡ ಚಿತ್ರರಂಗಕ್ಕೆ ಕರೆತಂದು ಬೆಳೆಸಿದ್ದಾರೆ. ಎಸ್.ಎ.ಚಿನ್ನೇಗೌಡ, ಎಸ್. ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್- ಇಂದು ಚಿತ್ರ ನಿರ್ಮಾಪಕರಾಗಿ, ಪ್ರದರ್ಶಕರಾಗಿ ಚಿತ್ರರಂಗದವರೇ ಆಗಿಹೋಗಿದ್ದಾರೆ.

ಇವರ ಸಂಸ್ಥೆ ಮುಖ್ಯವಾಗಿ ಕುಟುಂಬಸಮೇತ ಕೂತು ನೋಡುವ, ಸಂದೇಶ ಸಾರುವ ಸದಭಿರುಚಿಯ ಚಿತ್ರಗಳನ್ನೇ ನಿರ್ಮಿಸಿದೆ. ಇಲ್ಲಿ ವ್ಯಾಪಾರ-ವಹಿವಾಟು-ವಾಣಿಜ್ಯ ಮುಖ್ಯ ಉದ್ದೇಶವಾದರೂ, ಕನ್ನಡ ನೆಲ-ಜಲ-ಭಾಷೆ-ಸಂಸ್ಕೃತಿಯನ್ನು ಕಡೆಗಣಿಸಿಲ್ಲ. ಅದಕ್ಕೆ ಕಾರಣ ಡಾ.ರಾಜ್‌ರ ಒಲವು-ನಿಲುವು. ಕನ್ನಡದ ಬಗ್ಗೆ ಅವರಿಗಿದ್ದ ಅಪರಿಮಿತ ಪ್ರೀತಿ. ಅದನ್ನೇ ವೇದವಾಕ್ಯದಂತೆ ಪಾಲಿಸಿಕೊಂಡು ಬರುತ್ತಿದೆ ಅವರ ಕುಟುಂಬ. ಹಾಗಂತ ಇವರ ಚಿತ್ರನಿರ್ಮಾಣ ಸಂಸ್ಥೆಯ ಮೇಲೆ ಯಾವ ಆರೋಪಗಳು, ಅಪಸ್ವರಗಳು ಇಲ್ಲವೆಂದಲ್ಲ. ಅವರ ಅನುಕೂಲಕ್ಕೆ ತಕ್ಕಂತೆ ರಿಮೇಕ್ ಚಿತ್ರಗಳನ್ನೂ ನಿರ್ಮಿಸಿದೆ, ಪರಭಾಷಾ ನಟಿಯರನ್ನೂ ಕರೆತಂದಿದೆ. ವಾಣಿಜ್ಯ ಮಂಡಳಿ ಮತ್ತು ಇಂಡಸ್ಟ್ರಿಯನ್ನು ಬಳಸಿಕೊಂಡದ್ದೂ ಇದೆ.

ಆದರೆ ಆ ಆರೋಪ ಮನುಷ್ಯರು ಮಾಡುವ ಚಿಕ್ಕಪುಟ್ಟ ಲೋಪದೋಷದಂತೆ ಕಂಡು, ಉದ್ಯಮದ ಬೆಳವಣಿಗೆಗಾಗಿ ಇಡೀ ಕುಟುಂಬ ಅರ್ಪಿಸಿಕೊಂಡದ್ದರ ಮುಂದೆ ಗೌಣವಾಗುತ್ತದೆ. ಹಾಗೆಯೇ ಪಾರ್ವತಮ್ಮನವರು, ತಮ್ಮ ಮಕ್ಕಳು-ಸಂಬಂಧಿಕರನ್ನಷ್ಟೇ ಅಲ್ಲ, ಮಾಲಾಶ್ರೀ, ಸುಧಾರಾಣಿ, ಆಶಾರಾಣಿ, ಪ್ರೇಮಾ, ಅನುಪ್ರಭಾಕರ್, ರಕ್ಷಿತಾ ಮತ್ತು ರಮ್ಯಾರಂತಹ ಹೊಸ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು, ಇವತ್ತು ಇವರೆಲ್ಲ ದಶಕಗಟ್ಟಲೆ ಚಿತ್ರರಂಗವನ್ನು ಆಳಿದ, ಆಳುತ್ತಲೇ ಇರುವ ಸ್ಟಾರ್‌ಗಳಾಗಿದ್ದು-ದಾಖಲೆಗೆ ಅರ್ಹವಾದ ಸಂಗತಿಯಾಗಿದೆ. ಡಾ.ರಾಜ್ ಎಂದರೆ ಪಾರ್ವತಮ್ಮನವರು ‘ನಮ್ಮನೆ ದೇವರು’ ಎನ್ನುತ್ತಾರೆ. ಆದರೆ ಈ ದೇವರಿಂದ ಪಾರ್ವತಮ್ಮನವರಿಗೆ ಅನುಕೂಲ ಮತ್ತು ಅನನುಕೂಲ- ಎರಡೂ ಆಗಿದೆ. ರಾಜ್ ಎಂಬ ಚೈನಾ ವಾಲ್ ಮುಂದೆ ಎಲ್ಲವೂ ಸುರಕ್ಷಿತ, ಸುಭದ್ರ, ಸುಲಲಿತ ಎನ್ನುವಂತೆ ಕಂಡರೂ, ಅದರಿಂದಾದ ಕಷ್ಟ-ನಷ್ಟ ಅವರಿಗಷ್ಟೇ ಗೊತ್ತು. ರಾಜ್-ವಿಷ್ಣು ವಿವಾದ; ಇಂಡಸ್ಟ್ರಿಯನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆಂಬ ಆರೋಪ; ವೀರಪ್ಪನ್‌ನಿಂದ ರಾಜ್ ಅಪಹರಣವಾದಾಗ ಚಿತ್ರರಂಗ ಸ್ಥಗಿತಗೊಂಡಿದ್ದು; 2006ರಲ್ಲಿ ರಾಜ್ ನಿಧನರಾದಾಗ ಆದ ಗಲಭೆ- ಈ ಸಮಯದಲ್ಲಿ ಅನುಭವಿಸಿದ ನೋವು, ಯಾತನೆ... ಪಾರ್ವತಮ್ಮನವರಿಗಷ್ಟೇ ಗೊತ್ತು. ಆದರೆ ಈ ಎಲ್ಲ ಏರಿಳಿತಗಳನ್ನು ಅವರು ಸಂಸಾರದಷ್ಟೇ ಸರಾಗವಾಗಿ ನಿಭಾಯಿಸಿ, ಸಮರ್ಥವಾಗಿ ಎದುರಿಸಿ ಗಟ್ಟಿಗಿತ್ತಿ ಎನ್ನಿಸಿಕೊಂಡದ್ದೂ ಇದೆ. ಕನ್ನಡ ಚಿತ್ರರಂಗ ಎಂದಾಕ್ಷಣ ರಾಜ್‌ಕುಮಾರ್ ನೆನಪಾಗುತ್ತಾರೆ. ಅಷ್ಟರಮಟ್ಟಿಗಿನ ಜನಪ್ರಿಯ ವ್ಯಕ್ತಿ ಅವರು. ಆ ಜನಪ್ರಿಯತೆ, ಸಾಧನೆ ಮತ್ತು ಯಶಸ್ಸಿನ ಹಿಂದೆ ಪಾರ್ವತಮ್ಮನವರ ಸಹನೆ, ಔದಾರ್ಯವಿದೆ. ರಾಜ್ ಯಶಸ್ಸಿನಲ್ಲಿ ಅವರ ಪ್ರತಿಭೆ, ಸೃಜನಶೀಲತೆ, ಪರಿಶ್ರಮ ಎಷ್ಟಿದೆಯೋ ಅಷ್ಟೇ ಮಹತ್ತರವಾದ ಪಾತ್ರ ಪಾರ್ವತಮ್ಮನವರದೂ ಇದೆ.

ಪಾರ್ವತಮ್ಮನವರು ತಮಗೆ ತಾವೇ ಹಾಕಿಕೊಂಡ ಕಟ್ಟುಪಾಡೋ ಅಥವಾ ಅವರ ಸಹಜ ಗುಣವೋ..ಅವರೆಂದೂ ಮುಖ್ಯಭೂಮಿಕೆಗೆ ಬರಲೇ ಇಲ್ಲ. ತೆರೆಯ ಹಿಂದಿದ್ದೇ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು, ನಿಭಾ ಯಿಸಿದರು. ಸಾಧಕಿ ಎನಿಸಿಕೊಂಡಾಗಲೂ, ಆ ಸಾಧನೆಗೆ ಘನತೆವೆತ್ತ ವಿಶ್ವವಿದ್ಯಾನಿಲಯವೊಂದು ಡಾಕ್ಟರೇಟ್ ಪುರಸ್ಕಾರ ನೀಡಿದಾಗಲೂ ಸುದ್ದಿ ಮಾಧ್ಯಮಗಳಿಂದ ದೂರವೇ ಉಳಿದವರು. ಪತ್ರಕರ್ತರನ್ನು ಕೊಂಚ ಅನುಮಾನದಿಂದಲೇ ನೋಡುತ್ತಿದ್ದರು. ಆದರೆ ತೋರಿಸಿಕೊಳ್ಳುತ್ತಿರಲಿಲ್ಲ. ದೂರದಿಂದಲೇ ನೋಡಿ, ನಕ್ಕು, ಆ ಆತ್ಮೀಯತೆಯನ್ನು ಅಷ್ಟಕ್ಕೇ ಸೀಮಿತಗೊಳಿಸಿಕೊಂಡಿದ್ದರು. ಅದಕ್ಕೆ ರಾಜ್ ಮತ್ತವರ ಕುಟುಂಬ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳಿಂದ ಸಿಕ್ಕ ‘ಬೆಂಬಲ’ವೂ ಕಾರಣವಿರಬಹುದು!

ಪಾರ್ವತಮ್ಮನವರು ಹೆಣ್ಣುಮ್ಕಕಳ ಬಗ್ಗೆ ಅತೀವ ಕಾಳಜಿ, ಕಳಕಳಿ ಇಟ್ಟುಕೊಂಡಿದ್ದರು. ಅವರು ಸ್ತ್ರೀವಾದಿಯಲ್ಲ, ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಬಿಗಿಯಲಿಲ್ಲ. ಆದರೆ ಅನಾಥ ಮಹಿಳೆಯರಿಗಾಗಿ ಮೈಸೂರಿನಲ್ಲಿ ‘ಶಕ್ತಿಧಾಮ’ ಎಂಬ ಆಶ್ರಮ ಸ್ಥಾಪಿಸಿದ್ದಾರೆ. ಅಲ್ಲೀಗ ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ 40 ಹೆಂಗಸರು, 14 ಮಕ್ಕಳಿದ್ದಾರೆ. ಅವರಿಗೆ ಉಚಿತ ಊಟ, ವಸತಿ, ರಕ್ಷಣೆ ಒದಗಿಸಿ, ಅವರ ಬದುಕಿಗೆ ಆಸರೆಯಾಗಿದ್ದಾರೆ. ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಜನ ನಿರ್ಮಾಪಕರು ಬಂದುಹೋಗಿರಬಹುದು. ಆದರೆ ಪಾರ್ವತಮ್ಮನವರ ಚಿತ್ರ ನಿರ್ಮಾಣಕ್ಕೊಂದು ವಿಶೇಷ ಸ್ಥಾನವಿದೆ. ಅವರು ಒಂದು ಚಿತ್ರ ನಿರ್ಮಿಸಲು ಮುಂದಾದರು ಎಂದರೆ, ಅಲ್ಲೊಂದು ಪಕ್ಕಾ ಲೆಕ್ಕಾಚಾರವಿರುತ್ತದೆ. ಶಿಸ್ತು, ಶ್ರದ್ಧೆ ಎದ್ದು ಕಾಣುತ್ತದೆ. ಅದಕ್ಕೆ ಪೂರಕವಾಗಿ ಉತ್ತಮ ಕಥೆ, ತಾರಾಗಣ, ಹೊರಾಂಗಣ ಚಿತ್ರೀಕರಣ, ತಂತ್ರಜ್ಞರು, ಅದ್ದೂರಿತನ, ಪ್ರಿಂಟ್ ಆ್ಯಂಡ್ ಪಬ್ಲಿಸಿಟಿ, ಹಂಚಿಕೆ, ಬಿಡುಗಡೆ ... ಹೀಗೆ ಪ್ರತಿ ಹಂತದಲ್ಲೂ ಅವರೆ ಖುದ್ದು ಕೂತು ಫೈನಲೈಸ್ ಮಾಡುವ ಕ್ರಮವಿದೆ. ಹಾಗಾಗಿ ಚಿತ್ರ ಸರ್ವರೀತಿಯಿಂದಲೂ ಸಮೃದ್ಧವಾಗಿದ್ದು, ಹಣ ಗಳಿಸುವ ಹಾದಿಯಲ್ಲಿ ಸದಾ ಮುಂದಿರುತ್ತದೆ. ಚಿತ್ರನಿರ್ಮಾಣವೆಂದರೆ ಹಣ ಕಳೆದುಕೊಳ್ಳುವ ಕೆಲಸ ಎಂದೇ ಎಲ್ಲರೂ ಭಾವಿಸಿರುವ ಇತ್ತೀಚಿನ ‘ರಿಯಲ್ ಎಸ್ಟೇಟ್ ನಿರ್ಮಾಪಕ’ರ ಕಾಲದಲ್ಲಿ, ಪಾರ್ವತಮ್ಮನವರ ಚಿತ್ರನಿರ್ಮಾಣ ಹೊಸಬರಿಗೆ ಅಧ್ಯಯನಯೋಗ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅವರ ವ್ಯಾವಹಾರಿಕ ಜ್ಞಾನ ಮುಂದಿನ ಪೀಳಿಗೆಗೆ ಮಾದರಿ. ಹಾಗೆ ನೋಡಿದರೆ, ಪಾರ್ವತಮ್ಮನವರು ಸಾಮಾನ್ಯರಲ್ಲಿ ಸಾಮಾನ್ಯ ಮಹಿಳೆ. ಇಂದು ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿದ್ದಾರೆ. ತಾವು ಬೆಳೆಯುತ್ತಲೇ ಹಲವರನ್ನು ಬೆಳೆಸಿದ್ದಾರೆ. ಕನ್ನಡ ಚಿತ್ರರಂಗವನ್ನು ಬೆಳೆಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ಕೊಟ್ಟ ಕೊಡುಗೆ, ಸಲ್ಲಿಸಿದ ಸೇವೆ ಸ್ಮರಣೀಯ. ಈ ನೆಲದ ಮಹಿಳೆಯ ಸಾಧನೆಯ ಹಿಂದೆ ಅಪಾರ ಅನುಭವವಿದೆ. ಸಹನೆ ಇದೆ. ಶ್ರಮವಿದೆ. ಹಳ್ಳಿಹೆಂಗಸಿನ ಧೈರ್ಯವಿದೆ. ಅಜ್ಜಿಯ ಜಿಗುಟುತನವಿದೆ. ಅವಮಾನವನ್ನು ನುಂಗಿಕೊಳ್ಳುವ ಗುಣವಿದೆ. ಇಲ್ಲದಿದ್ದರೆ, ರಾಜ್ ಎಂಬ ಮಹಾನ್ ತಾರೆಯ ಪತ್ನಿಯಾಗಿ, ಶಿವಣ್ಣ-ರಾಘಣ್ಣ-ಪುನೀತ್ ಎಂಬ ಸ್ಟಾರ್ ನಟರ ಅಮ್ಮನಾಗಿ, ರಾಜ್ ಕುಟುಂಬವನ್ನು ಕಾಪಾಡಿದ ಗೃಹಿಣಿಯಾಗಿ, ಗಾಂಧಿನಗರದ ಗಟ್ಟಿಗಿತ್ತಿಯಾಗಿ, ಶಕ್ತಿಧಾಮದ ಮಾನವೀಯ ಮಹಿಳೆಯಾಗಿ- ಈ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ, ಅಲ್ಲವೇ?

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ