ಪರಿಸರ, ಅಭಿವೃದ್ಧಿಯ ಕುರಿತಂತೆ ಇಸ್ಲಾಮ್
ಯಾವುದೇ ಧರ್ಮ ಒಣ ವೇದಾಂತ ಮತ್ತು ಅರ್ಥವಾಗದ ಮೋಕ್ಷಗಳ ಬಗ್ಗೆ ಮಾತನಾಡುತ್ತಾ ವಾಸ್ತವದಿಂದ ದೂರವಿದ್ದರೆ ಅದು ಜನಸಾಮಾನ್ಯರಿಂದಲೂ ದೂರವಿರಬೇಕಾಗುತ್ತದೆ. ಇಂದು ಜಗತ್ತಿನ ಹಲವು ಧರ್ಮಗಳು ಕುಸಿತವಾಗಲು ಮುಖ್ಯ ಕಾರಣ, ಅದು ಮನುಷ್ಯನ ಮತ್ತು ಭೂಮಿಯ ನಿಜವಾದ ಸಮಸ್ಯೆಗಳಿಗೆ ವಿಮುಖವಾಗಿರುವುದು. ಈ ನಿಟ್ಟಿನಲ್ಲಿ ಇಸ್ಲಾಂ ಧರ್ಮ ಜಗತ್ತಿನಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣ, ಅದು ವರ್ತಮಾನದ ಸಮಸ್ಯೆಗಳಿಗೆ ಮುಖಾಮುಖಿಯಾಯಿತು ಎನ್ನುವುದನ್ನು ಹಲವು ಚಿಂತಕರು ಬೊಟ್ಟು ಮಾಡಿ ತೋರಿಸಿದ್ದಾರೆ. ಬಡವರು, ದುರ್ಬಲರು, ಮಹಿಳೆಯರ ಕುರಿತಂತೆ ಅದು ಹೊಂದಿದ್ದ ಧನಾತ್ಮಕ ಅಂಶಗಳು ಇಸ್ಲಾಂ ಧರ್ಮವನ್ನು ಜನಪ್ರಿಯಗೊಳಿಸಿತು ಎಂದು ಗಾಂಧೀಜಿ ಒಂದೆಡೆ ಹೇಳುತ್ತಾರೆ. ಇಸ್ಲಾಮ್‌ನ ಸಹೋದರತ್ವವನ್ನು ವಿವೇಕಾನಂದರು ಮೆಚ್ಚಿ ಮಾತನಾಡುತ್ತಾರೆ. ಇಸ್ಲಾಮ್ ಕೇವಲ ಮನುಷ್ಯನ ಅಗತ್ಯಗಳನ್ನಷ್ಟೇ ಮಾತನಾಡಿರುವುದಲ್ಲ, ಅವನಿಗೆ ಪೂರಕವಾಗಿರುವ ಪ್ರಕೃತಿಯ ಹಿರಿಮೆಯನ್ನು, ಮನುಷ್ಯನಿಗೆ ಅದರೊಡನೆ ಇರುವ ಹೊಣೆಗಾರಿಕೆಯನ್ನು ಆದ್ಯತಯ ಮೇಲೆ ಮಾತನಾಡುತ್ತದೆ. ಇಸ್ಲಾಮ್ ಧರ್ಮ ಪರಿಸರದ ಬಗ್ಗೆ ಯಾವ ಧೋರಣೆಯನ್ನು ತಾಳಿದೆ ಎನ್ನುವುದನ್ನು ವಿವರಿಸುವ ಪುಟ್ಟ ಕೃತಿ ಇ. ಅಬೂಬಕರ್ ಕಲೀಮ್ ಅವರ ‘ಪರಿಸರ, ಅಭಿವೃದ್ಧಿ, ಇಸ್ಲಾಮ್’. ಇದನ್ನು ಅಬ್ದುಲ್ ರಝಾಕ್ ಕೆಮ್ಮಾರ ಅನುವಾದಿಸಿದ್ದಾರೆ. ಇಸ್ಲಾಮ್ ಧರ್ಮದಲ್ಲಿ ಪರಿಸರದ ಬಹುಮುಖ್ಯ ಭಾಗವಾಗಿ ಮನುಷ್ಯನನ್ನು ಸೇರ್ಪಡೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಮನುಷ್ಯನ ಏಳಿಗೆಯ ಜೊತೆಗೇ ಪ್ರಕೃತಿಯ ಮೇಲೆ ಅವನಿಗಿರುವ ಹೊಣೆಗಾರಿಕೆಯನ್ನು ಎಚ್ಚರಿಸುತ್ತದೆ. ಲೇಖಕರು ಈ ಹಿನ್ನೆಲೆಯಲ್ಲಿ ಕುರ್‌ಆನಿನ ಬೇರೆ ಬೇರೆ ಅಧ್ಯಾಯಗಳಲ್ಲಿರುವ ಶ್ಲೋಕಗಳನ್ನು ಮುಂದಿಡುತ್ತಾರೆ. ಹಾಗೆಯೇ ಭೌತಿಕ ಲೋಲುಪತೆ ಗಾಗಿ ಪ್ರಕೃತಿಯ ಮೇಲೆ ನಡೆಸುವ ದೌರ್ಜನ್ಯವನ್ನು ಇಸ್ಲಾಮ್ ಹೇಗೆ ವಿರೋಧಿಸುತ್ತದೆ ಎನ್ನುವುದನ್ನೂ ಕೃತಿಯಲ್ಲಿ ಚರ್ಚಿಸುತ್ತಾರೆ. ‘‘ಒಂದು ಬೀಜವನ್ನು ಬಿತ್ತುವುದು ಅಥವಾ ಸಸಿಯನ್ನು ನೆಡುವುದು ಅತ್ಯಂತ ದೊಡ್ಡ ಪ್ರತಿಫಲಾರ್ಹ ಕರ್ಮವಾಗಿದೆ. ಒಂದು ಪಕ್ಷಿ, ಮನುಷ್ಯ ಅಥವಾ ಮೃಗಗಳು ಅದರ ಫಲಗಳನ್ನು ತಿಂದರೂ ಅದರ ಪ್ರತಿಫಲವು ಆತನಿಗೆ ಲಭಿಸದೇ ಇರದು’’ ಎಂಬ ಪ್ರವಾದಿ ವಚನವನ್ನು ಲೇಖಕರು ನೆನಪಿಸುತ್ತಾರೆ. ಇಂತಹ ಹತ್ತುಹಲವು ವಚನಗಳನ್ನು ಮುಂದಿಡುತ್ತಾ ಪರಿಸರ ರಕ್ಷಣೆಯ ಅಗತ್ಯವನ್ನು ಲೇಖಕರು ಹೇಳುತ್ತಾರೆ. ಪರಿಸರ ರಕ್ಷಣೆಯೆಂದರೆ ಸ್ವತಃ ಮನುಷ್ಯ ತನಗೆ ತಾನೇ ಮಾಡಿಕೊಳ್ಳುವ ಉಪಕಾರ ಎನ್ನುವುದನ್ನು ಸರಳವಾಗಿ ಲೇಖಕರು ವ್ಯಾಖ್ಯಾನಿಸುತ್ತಾರೆ. ಪರಿಸರದ ದುರಂತಕ್ಕೆ ಮನುಷ್ಯನ ಅತೀ ಭೋಗಾಸಕ್ತಿಯೇ ಕಾರಣ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಸ್ತುತಿ ಪಬ್ಲಿಕೇಶನ್ಸ್ ಆ್ಯಂಡ್ ಇನ್ಫಾರ್ಮೇಶನ್ ಟ್ರಸ್ಟ್ ಹೊರತಂದಿರುವ ಈ ಕಿರು ಕೃತಿಯ ಮುಖಬೆಲೆ 30 ರೂ.