ಸಾಮಾಜಿಕ ನ್ಯಾಯದಡಿ ಸಮಾಜ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರು

Update: 2017-06-04 11:11 GMT

ರಾಜದಂಡಕ್ಕೆ ಬದಲಾಗಿ ಮಾನದಂಡವನ್ನು, ಖಡ್ಗಕ್ಕೆ ಬದಲಾಗಿ ಲೇಖನಿಯನ್ನು, ರಾಜ್ಯ ವಿಸ್ತರಣೆಗಿಂತ ರಾಜ್ಯದ ಅಭಿವೃದ್ಧಿಯನ್ನು ಬಯಸಿ ಇಡೀ ಸಮಾಜವನ್ನು ಸಾಮಾಜಿಕ ನ್ಯಾಯದಡಿ ಕಟ್ಟಲು ಹೊರಟ ಅವರ ದಿಟ್ಟ ಕಾನೂನು ಕ್ರಮಗಳೇ ನಾಲ್ವಡಿಯನ್ನು, ಅವರ ಸಂಸ್ಥಾನವನ್ನು ಇತರ ಸಂಸ್ಥಾನಕ್ಕಿಂತ ವಿಭಿನ್ನವಾಗಿಸಿವೆ.

ಮರೆಯೋದು ಉಂಟೇ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ ಸಾವಿರಾರು ವರ್ಷ ಕಳೆದರೂ ಸವೆಯದಂತ ಸಾಧನೆಯ

ಎಂಬ ಹನಸೋಗೆ ಸೋಮಶೇಖರ ರವರು ನಾಲ್ವಡಿ ಕೃಷ್ಣರಾಜ ಒಡೆಯರ ಕುರಿತು ಬರೆದ ಸಾಲುಗಳು ನಾಡಿನಾ ದ್ಯಂತ ಅತ್ಯಂತ ಜನಪ್ರಿಯ. ಈ ಪದ್ಯದ ಕೊನೆಯ ಸಾಲಿಗೆ ಬಹುಶಃ ಯುಗಾಂತರಗಳು ಕಳೆದರೂ ಸಾವಿಲ್ಲ. ಏಕೆಂದರೆ ನಾಲ್ವಡಿ ಅವರು ಬದುಕಿದ್ದು ಅರಮನೆಯ ಆಸ್ಥಾನದಲ್ಲಲ್ಲ, ಶೋಷಿತರ ಬದುಕಿನಲ್ಲಿ. ಅವರ ದೂರದೃಷ್ಟಿ ಧನಪರವಲ್ಲ, ಜನಪರ. ಹಾಗಾಗಿ ಜನಪರ ನ್ಯಾಯ ಮತ್ತು ದೂರದೃಷ್ಟಿಯ ಅಭಿವೃದ್ಧಿಯ ಒಳಗೆ ನಾಲ್ವಡಿ ಎಂದೆಂದೂ ಅಮರ.

ಲಾರ್ಡ್ ಸಾಂಕಿ ಎಂಬಾತ ಅಂದಿನ ಮೈಸೂರು ಸಂಸ್ಥಾನವನ್ನು ಕುರಿತು ಕೊಟ್ಟ ಮಾದರಿ ಸಂಸ್ಥಾನ ಎಂಬ ಹೆಗ್ಗಳಿಕೆ ಮತ್ತು ಭಾರತೀಯ ಸಂಸ್ಥಾನಕ್ಕೂ ಇಲ್ಲ. ಹಾಗೆಯೇ ಮೈಸೂರು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮಾದರಿಯಾದ ಸಂಸ್ಥಾನವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದ. ಕರ್ನಾಟಕ ಚರಿತ್ರೆಯಲ್ಲಿ ಮಾತ್ರವಲ್ಲದೇ ಭಾರತದ ಚರಿತ್ರೆಯಲ್ಲಿಯೇ ಮೈಸೂರು ಸಂಸ್ಥಾನಕ್ಕೆ ಒಂದು ವಿಶಿಷ್ಟ ಸ್ಥಾನ ದೊರಕಿದ್ದು ನಾಲ್ವಡಿಯವರು ಒಡೆಯರಾಗಿ ಬದುಕಿದ್ದುದ್ದರಿಂದಲ್ಲ. ಜನಸಾಮಾನ್ಯನ ಸಮಸ್ಯೆಗೆ ಹೊಣೆಗಾರರಾಗಿ ಬದುಕಿದ್ದ ಕಾರಣಕ್ಕಾಗಿ. ರಾಜದಂಡಕ್ಕೆ ಬದಲಾಗಿ ಮಾನದಂಡವನ್ನು, ಖಡ್ಗಕ್ಕೆ ಬದಲಾಗಿ ಲೇಖನಿಯನ್ನು, ರಾಜ್ಯ ವಿಸ್ತರಣೆಗಿಂತ ರಾಜ್ಯದ ಅಭಿವೃದ್ಧಿಯನ್ನು ಬಯಸಿ ಇಡೀ ಸಮಾಜವನ್ನು ಸಾಮಾಜಿಕ ನ್ಯಾಯದಡಿ ಕಟ್ಟಲು ಹೊರಟ ಅವರ ದಿಟ್ಟ ಕಾನೂನು ಕ್ರಮಗಳೇ ನಾಲ್ವಡಿಯನ್ನು, ಅವರ ಸಂಸ್ಥಾನವನ್ನು ಇತರ ಸಂಸ್ಥಾನಕ್ಕಿಂತ ವಿಭಿನ್ನವಾಗಿಸಿವೆ.

ಅಂದಿನ ಭಾರತೀಯ ಪರಿಸ್ಥಿತಿಯಲ್ಲಿ ರಾಜನೊಬ್ಬ ತನ್ನ ಸಾಮ್ರಾಜ್ಯ ವಿಸ್ತರಣೆಯ ಕನಸಿನೊಂದಿಗೆ ಸಿಂಹಾಸನವೇರುತ್ತಿದ್ದ. ಆದರೆ ಕೊಲ್ಹಾಪುರದ ಶಾಹು ಮಹಾರಾಜ, ಬರೋಡದ ಸಯ್ಯಾಜಿರಾವ್ ಗಾಯಕ್‌ವಾಡ್, ಮೈಸೂರಿನ ನಾಲ್ವಡಿ ಅವರು ಸಾಮ್ರಾಜ್ಯದ ವಿಸ್ತರಣೆಗೆ ಒತ್ತು ಕೊಡದೆ ಸಾಮಾಜಿಕ ನ್ಯಾಯದಡಿಯಲ್ಲಿ ಸಾಮ್ರಾಜ್ಯವನ್ನು ನಿರ್ಮಿಸಲು ಹೊರಟರು. ಈ ಮೂವರು ಸಮಕಾಲೀನರೂ ಹಾಗೂ ಸಹಪಾಠಿಗಳೂ ಕೂಡ. ಭಾರತದಲ್ಲಿ ಮೊತ್ತ ಮೊದಲ ಸಾಮಾಜಿಕ ಕ್ರಾಂತಿ ಸಂಸ್ಥಾನ ಬರೋಡ ಮಹಾರಾಜರದು. ಅದನ್ನು ಆದರ್ಶವಾಗಿಟ್ಟುಕೊಂಡ ಮೈಸೂರಿನ ನಾಲ್ವಡಿಯವರು ಮುಂದೊಂದು ದಿನ ಬರೋಡ ಸಂಸ್ಥಾನಕ್ಕೆ ಆದರ್ಶಪ್ರಾಯರಾದರು. ಇದನ್ನು ಪ್ರಶಂಶಿಸಿದ ಗಾಯಕ್‌ವಾಡರು ಬರೋಡದ ಮುಖ್ಯರಸ್ತೆಯೊಂದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರಿಟ್ಟಿದ್ದು ಅಮರ. ಇದಕ್ಕೆ ಕೃತಜ್ಞರಾಗಿ ಮೈಸೂರಿನ ಮುಖ್ಯರಸ್ತೆಯೊಂದಕ್ಕೆ ಸಯ್ಯೆಜಿರಾವ್ ರಸ್ತೆ ಎಂದು ನಾಮಕರಣ ಮಾಡಿದ್ದು ಕೂಡ ಅಮರ. ಇದರ ನಿದರ್ಶನವಾಗಿ ಈಗಿನ ಮೈಸೂರಿನ ಸಯ್ಯೆಜಿರಾವ್ ರಸ್ತೆಯೇ ಸಾಕ್ಷಿ. ಹಾಗೆಯೇ 1902ರಲ್ಲಿ ಕೊಲ್ಹಾಪುರ ಶಾಹು ಮಹಾರಾಜರು ಸಾಮಾಜಿಕ ನ್ಯಾಯದಡಿ ಹಿಂದುಳಿದ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 50ರಷ್ಟು ಮೀಸಲಾತಿ ನೀಡಿದರು. ಪ್ರತಿಯಾಗಿ 1920ರಲ್ಲಿ ನಾಲ್ವಡಿಯವರು ಶೇ 75ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲತ್ತದೆ. ತಮ್ಮ ಸಂಸ್ಥಾನದಲ್ಲಿ ಶೇ. 75ರಷ್ಟು ಮೀಸಲಾತಿಯನ್ನು ಜಾತಿ, ಜನಸಂಖ್ಯಾವಾರು ನೀಡಿದ ಭಾರತೀಯ ಏಕೈಕ ಸಂಸ್ಥಾನ ಮೈಸೂರು ಸಂಸ್ಥಾನ.

ಹಿಂದೆ ಇದ್ದ ಅರಗಿನ ಅರಮನೆ ಸುಟ್ಟು ಬೂದಿಯಾಗಿದ್ದು, ಸಂಕಷ್ಟದಲ್ಲಿದ್ದಾಗ ಹೊಸ ಅರಮನೆ ನಿರ್ಮಿಸಲು ತಗುಲಿದ ವೆಚ್ಚ 44,17,913 ರೂ. 1897ರಲ್ಲಿ ಆರಂಭವಾದ ಕೆಲಸ 1912ರಲ್ಲಿ ಮುಕ್ತಾಯವಾಯಿತು. ಬೊಕ್ಕಸ ಬರಿದಾಗಿದ್ದನ್ನು ಲೆಕ್ಕಿಸದೆ 2.40 ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾಣವನ್ನು 1911ರಲ್ಲಿ ಕೈಗೆತ್ತಿಕೊಂಡು ರಾಜ್ಯದ ಬೊಕ್ಕಸ ಬರಿದಾದಾಗ ಅಂತಪುರದಲ್ಲಿದ್ದ ಆಭರಣಗಳನ್ನು ಮಾರಿ ಅಣೆಕಟ್ಟೆಯನ್ನು ಪೂರ್ಣಗೊಳಿಸಿದರು. ಈ ನಿದರ್ಶನ ಭಾರತೀಯ ಅರಸರ ಯಾರ ಬದುಕಿನಲ್ಲೂ ಬಂದಿರಲಿಕ್ಕಿಲ್ಲ. ಬಹುಶಃ 1,20,000 ಎಕರೆ ಒಣ ಭೂಮಿಗೆ ನೀರುಣಿಸಿ ಅಲ್ಲಿ ಬೆಳೆಯುವ ಅನ್ನದಲ್ಲಿ ನಾಲ್ವಡಿಯವರ ಜೀವಂತಿಕೆಯನ್ನು ಇಂದು ನೆನೆಯಬೇಕಿದೆ. ಚಿಮಣಿ ದೀಪದಲ್ಲಿ ಬದುಕುತ್ತಿದ್ದ ಜನಕ್ಕೆ ಬೀದಿ ದೀಪದ ಕಲ್ಪನೆ ಮೂಡಿಸಿ ಮನೆ ಮನೆಯನ್ನು ವಿದ್ಯುತ್ ದೀಪದಿಂದ ಬೆಳಗಿದ ನಾಲ್ವಡಿ ಈ ನಾಡಿನ ಪ್ರತಿ ಮನೆಯ ದೀಪ. ಬೆಂಗಳೂರು 1902ರಲ್ಲಿ ಏಷ್ಯಾದಲ್ಲಿಯೇ ಬೆಳಕು ಕಂಡ ಮೊಟ್ಟ ಮೊದಲ ನಗರವಾಯಿತು. ಏಷ್ಯಾದ ಯಾವ ಸಾಮ್ರಾಟನಿಗೂ ಇರದ ಕಲ್ಪನೆ ನಾಲ್ವಡಿಯವರಿಗೆ ಮೂಡಿತ್ತು. ಇದು ಅವರ ದೂರದೃಷ್ಟಿಗೆ ಹಾಗೂ ಜೀವಂತಿಕೆಗೆ ಸಾಕ್ಷಿ. ಮೈಸೂರು ಇಂದು ಭಾರತದ ಸ್ವಚ್ಛನಗರಗಳಲ್ಲಿ ಒಂದು. ಜಗತ್ತಿನ ಸುಂದರ ನಗರಗಳಲ್ಲೂ ಕೂಡ. ಇಲ್ಲಿನ ಸುಂದರ ಕಟ್ಟಡಗಳು, ಅಗಲವಾದ ರಸ್ತೆ, ವಿಸ್ತಾರವಾದ ವೃತ್ತಗಳು, ಸುಂದರ ಉದ್ಯಾನವನಗಳು, ಅರಮನೆ, ವಿಶ್ವವಿದ್ಯಾನಿಲಯ, ಈ ನಗರದ ಅಂಗಾಂಗಳಾಗಿವೆ. ಈ ಸೌಂದರ್ಯಕ್ಕೆ ರೂಪ ನೀಡಿದ ನಾಲ್ವಡಿ ಹಾಗೂ ಮಿರ್ಜಾ ಇಸ್ಮಾಯೀಲ್ ಅವರ ಶ್ರಮ ಅಪಾರವಾದುದ್ದು. ಆದರೆ ಮೈಸೂರು ರಾಷ್ಟ್ರದ ಮೊದಲ ‘ಸ್ವಚ್ಛನಗರ’ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡ ಸಂದರ್ಭದಲ್ಲಿ ನಾಲ್ವಡಿಯವರನ್ನು ಮೈಸೂರಿಗರು ಮರೆತಿದ್ದು ವಿಪರ್ಯಾಸವಾಗಿದೆ. 1893ರ ಮಾರ್ಚ್ ತಿಂಗಳಲ್ಲಿ ವಿವೇಕಾನಂದರು ಮೈಸೂರಿಗೆ ಬಂದಿದ್ದರು. ಆಗ ನಾಲ್ವಡಿಯವರಿಗೆ ಕೇವಲ 9 ವರ್ಷ ವಯಸ್ಸು. 10ನೆ ಚಾಮರಾಜ ಒಡೆಯರು ವಿವೇಕಾನಂದರು ಮೈಸೂರಿಗೆ ಆಗಮಿಸುವಂತೆ ಆಹ್ವಾನ ನೀಡಿ, ಅವರು ಚಿಕಾಗೋ ಸಮ್ಮೇಳನದಲ್ಲಿ ಭಾಗವಹಿಸಲು ಧನಸಹಾಯವನ್ನು ಮಾಡಿದ್ದರು. ನಂತರದಲ್ಲಿ ಮೈಸೂರು ಸಂಸ್ಥಾನವನ್ನು ಉದ್ದೇಶಿಸಿ ವಿವೇಕಾನಂದರು ಪತ್ರ ಬರೆಯುತ್ತಾ, ಅಸ್ಪೃಶ್ಯರು ಮತ್ತು ಶೋಷಿತರ ಉದ್ಧಾರಕ್ಕೆ ಏನಾದರೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೆ ನಾನು ಅದನ್ನು ನೋಡಲು ಬಯಸುತ್ತೇನೆ. ಆಗ ಮಾತ್ರ ನಿಮ್ಮ ಆಹ್ವಾನವನ್ನು ನಾನು ಒಮ್ಮೆ ಒಪ್ಪುತ್ತೇನೆ ಎಂದಿದ್ದರು. ವಿವೇಕಾನಂದರ ಅಸ್ಪೃಶ್ಯರ ಬಗೆಗಿನ ಕಾಳಜಿ ಈ ದೇಶದ ಬಡತನ, ನಿರುದ್ಯೋಗ, ಮೂಢನಂಬಿಕೆ, ಕಂದಾಚಾರಗಳ ವಿವೇಕವಾಣಿಯು ನಾಲ್ವಡಿಯವರ ಮೇಲೆ ಪರಿಣಾಮ ಬೀರಿತು. ಅಲ್ಲದೇ ಸ್ವತಹ ಸಾಮಾಜಿಕ ನ್ಯಾಯದ ಪರ ಇದ್ದ ನಾಲ್ವಡಿ ಶೋಷಿತರಿಗಾಗಿ ಬುಡಕಟ್ಟು ಅರಣ್ಯವಾಸಿಗಳಿಗೆ ಮೊತ್ತ ಮೊದಲು ಶಾಲೆಯನ್ನು ತೆರೆಯಲು ನಿರ್ಧರಿಸಿ, 1921-22ರಲ್ಲಿ ಲಂಬಾಣಿಗಳಿಗೆ 32 ಶಾಲೆಗಳು, ಬಿಳಿಗಿರಿರಂಗನ ಬೆಟ್ಟದಲ್ಲಿ ಗಿರಿಜನರಿಗೆ 4 ಶಾಲೆಗಳು, ಕಾಕನಕೋಟೆಯಲ್ಲಿ ಜೇನುಕುರುಬರಿಗೆ 5 ಶಾಲೆಗಳು, ಕೋಲಾರದ ಬೋವಿ ಜನಾಂಗಕ್ಕೆ 3 ಶಾಲೆಗಳನ್ನು ಪ್ರಾರಂಭಿಸಿದರು. ಹೀಗೆ ಮುಂದುವರಿದು ನಾಲ್ವಡಿಯವರು ಆ ಕಾಲದಲ್ಲಿ ಅಸ್ಪೃಶ್ಯರಿಗಾಗಿ ಸುಮಾರು 800 ಶಾಲೆಗಳನ್ನು ಆರಂಭಿಸಿದ್ದರು.

1936 ಅಕ್ಟೋಬರ್ ತಿಂಗಳಲ್ಲಿ ಅಸ್ಪೃಶ್ಯರಿಗೆ ಅರಮನೆಯ ಪ್ರವೇಶ ನೀಡಿದರು. ಇದು ಅವರು ತೆಗೆದುಕೊಂಡ ಕ್ರಾಂತಿಕಾರಕ ನಿರ್ಧಾರವಾಗಿತ್ತು ಮತ್ತು ಭಾರತದ ಆಳ್ವಿಕೆ ನಡೆಸುತ್ತಿದ್ದ 500ಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಅರಮನೆ ಪ್ರವೇಶ ನೀಡಿದ ಮೊತ್ತ ಮೊದಲ ಸಂಸ್ಥಾನ ಮೈಸೂರು ಸಂಸ್ಥಾನ ಎಂದಾಯಿತು. ಈ ನಿರ್ಧಾರವು ಇಡೀ ಭಾರತದ ಸಂಸ್ಥಾನಗಳ ಅರಸರಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಲ್ಲಣಗಳನ್ನು ಸೃಷ್ಟಿಸಿತು. ಅರಗಿನ ಅರಮನೆಗೆ ಬೆಂಕಿ ಬಿದ್ದಾಗ ದಲಿತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಅರಮನೆಯ ಅಮೂಲ್ಯ ಸಾಮಗ್ರಿಗಳನ್ನು ರಕ್ಷಿಸಿದ ಸವಿ ನೆನಪಿಗಾಗಿ ದೊಡ್ಡ ಹೊಲಗೇರಿ ಅಶೋಕಪುರಂ ಆಗಿ ನಿರ್ಮಾಣವಾಯಿತು. ಈ ಕೃತಜ್ಞತೆಗಾಗಿ ನಾಲ್ವಡಿಯವರು ಅಶೋಕಪುರಂ ದಲಿತರಿಗೆ ನೀಡಿದ ಭೂಮಿ ‘ಎಲೆತೋಟ’ ಎಂದು ಪ್ರಸಿದ್ಧಿ ಪಡೆದು, ಎಲೆತೋಟದ ಜತೆಗೆ ದಲಿತರ ಎದೆಯಲ್ಲಿಯೂ ನಾಲ್ವಡಿಯವರು ಅರಳಿದರು. ಆದರೆ ಇಂದು ಆ ಭೂಮಿ ರಿಯಲ್‌ಎಸ್ಟೇಟ್ ದಂಧೆಗೆ ಸಿಲುಕಿರುವುದು ವಿಪರ್ಯಾಸ. ಹಿಂದೆಂದೂ ಕಂಡರಿಯದಿದ್ದ ಸಾಮಾಜಿಕ ಸುಧಾರಣೆ ನಾಲ್ವಡಿಯವರನ್ನು ಬಹು ಎತ್ತರಕ್ಕೇರಿಸಿತು. 1909ರಲ್ಲಿ ದೇವದಾಸಿ ಪದ್ಧತಿ ನಿಷೇಧಾಜ್ಞೆ ಕಾನೂನು ಜಾರಿ ಮಾಡಿದರು. ಅಮಾಯಕ ಹೆಣ್ಣು ಮಕ್ಕಳನ್ನು ಕಾಮತೃಪ್ತಿಗಾಗಿ ದೇವರ ಹೆಸರಿನಲ್ಲಿ ಭೋಗ ವಸ್ತುಗಳಾಗಿ ಬಳಸಿಕೊಳ್ಳುತ್ತಿದ್ದ ಹೇಯ ಪದ್ಧತಿಯನ್ನು ಧಿಕ್ಕರಿಸಿ ಮೇನಲ್ಲಿ ಎಲ್ಲ ವಿರೋಧಗಳ ನಡುವೆಯೂ ಆದೇಶ ಹೊರಡಿಸಿದರು. ಎಂದೆಂದು ಭಾರತೀಯ ಸಂಸ್ಥಾನ ಅರಸರನ್ನು ಶ್ಲಾಘಿಸಿದ ಬ್ರಿಟಿಷ್ ಅರಸರು ನಾಲ್ವಡಿಯವರನ್ನು ಹೃದಯಸ್ಪರ್ಶಿಯಾಗಿ ಮೆಚ್ಚಿಕೊಂಡರು. 1910ರಲ್ಲಿ ಮುಜರಾಯಿ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ಪೂರಕವಾಗಿದ್ದ ಗೆಜ್ಜೆಪೂಜೆ ಪದ್ಧತಿಯನ್ನು ನಿರ್ಬಂಧಿಸಿ, ಶಿವ, ವಿಷ್ಣು ಮತ್ತಿತರ ಗ್ರಾಮ ದೇವತೆಗಳ ಹೆಸರಿನಲ್ಲಿ ಸೇವೆಗಾಗಿ ಬಿಡುತ್ತಿದ್ದ ಬಸವಿ ಪದ್ಧತಿಯನ್ನು ಉಗ್ರವಾಗಿ ವಿರೋಧಿಸಿ ಅದನ್ನು ಮುಂದುವರಿಯದಂತೆ ತಡೆದರು. 1936ರ ಜುಲೈ 14ರಂದು ವೇಶ್ಯಾವೃತ್ತಿ ನಿಷೇಧಾಜ್ಞೆ ಕಾನೂನು ಜಾರಿಗೆ ತರಲು ಸಮಿತಿಯೊಂದನ್ನು ನೇಮಿಸಿ, ಮದ್ರಾಸ್, ಕೋಲ್ಕತಾ ಮಾದರಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ವೇಶ್ಯಾವೃತ್ತಿಯನ್ನು ನಿಷೇಧಿಸಿದರು. 1938ರಲ್ಲಿ ‘ದಿ ಮೈಸೂರ್ ಹಿಂದೂ ವಿಡೊ ರಿ ಮ್ಯಾರೇಜ್ ಆ್ಯಕ್ಟ್’ ಜಾರಿಗೆ ತಂದು ಆ ಮೂಲಕ ಪ್ರಾಣಿಗಳಂತೆ ಜೀವಿಸುತ್ತಿದ್ದ ಮಹಿಳಾ ಬದುಕಿನಲ್ಲಿ ಆಶಾಕಿರಣರಾದರು. 1933ರಲ್ಲಿ ‘ದಿ ಹಿಂದೂ ಲಾ ವುಮೆನ್ ರೈಟ್ ಆ್ಯಕ್ಟ್’ ಜಾರಿ ಮಾಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವಂತೆ ಆದೇಶ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಸರಕಾರ ಇಂದು ಧೂಮಪಾನ ನಿಷೇಧಿಸಿದೆ. 1911ರಲ್ಲಿಯೇ ನಾಲ್ವಡಿಯವರು ‘ದಿ ಪ್ರಿವೆನ್ಸನ್ ಆಫ್ ಜುವೆನೈಲ್ ಸ್ಮೋಕಿಂಗ್ ಆ್ಯಕ್ಟ್’ ಜಾರಿಗೆ ತಂದು ದೇಶದಲ್ಲಿ ಮೊದಲ ಬಾರಿಗೆ ಈ ಕಾನೂನು ಜಾರಿಗೆ ತಂದ ಕೀರ್ತಿಗೆ ಪಾತ್ರರಾದರು. ದೇಶದ ಮೊದಲ ಜನಪ್ರತಿನಿಧಿ ಸಭೆ ರೂಪಿಸಿ, ಹತ್ತಾರು ಸ್ಥಳಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ವಿಶ್ವವಿದ್ಯಾನಿಲಯ ಪ್ರಾರಂಭಿಸಿ ಕಲೆ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಮೈಸೂರು ದೇಶದಲ್ಲಿಯೇ ಅಗ್ರಗಣ್ಯವಾಗುವಂತೆ ಮಾಡಿದರು. ಇತರ ಭಾಗದಲ್ಲಿ ಇರುವಷ್ಟು ಮೌಢ್ಯ, ಅಂಧಾನುಕರಣೆ, ಅನಕ್ಷರತೆ, ಅಸಮಾನತೆ, ವೇಶ್ಯಾವಾಟಿಕೆ, ಬಸವಿ ಪದ್ಧತಿ, ದೇವದಾಸಿ ಪದ್ಧತಿ, ಅನಾಚಾರ, ಬಡತನ, ಭೂಹೀನತೆ, ಅವೈಚಾರಿಕತೆ, ಬರ, ಅಶಿಸ್ತು ಮೈಸೂರಿನಲ್ಲಿ ಇಲ್ಲ. ಇದಕ್ಕೆ ಮೂಲ ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ ಶ್ರಮ, ದೂರದೃಷ್ಟಿ, ವೈಚಾರಿಕತೆ ಚಿಂತನೆಯ ಪ್ರತಿಫಲ ಎಂಬುದನ್ನು ಮೈಸೂರಿಗರು ಎದೆತಟ್ಟಿ ಶ್ಲಾಘಿಸಬೇಕು. ಹಾಗೆಯೇ ಆಧುನಿಕ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರು ಎಂಬುದನ್ನು ಸಾರಿ ಹೇಳಬೇಕಿದೆ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News

ಜಗದಗಲ
ಜಗ ದಗಲ