ಮನೆಯಲ್ಲಿ ಪಠ್ಯೇತ್ತರ ಕೌಶಲ್ಯಗಳು

Update: 2017-06-04 08:33 GMT

ಭಾವಕೌಶಲ್ಯವೆಂದಲ್ಲಿ ಕಲಿಯಬೇಕಾದ್ದು ಮತ್ತು ಕಲಿಸಬೇಕಾದ್ದೇನೆಂದರೆ; ಸಮೂಹ ಮತ್ತು ವ್ಯಕ್ತಿಗಳೊಡನೆ ಸಂವಹನ (ಕಮ್ಯುನಿಕೇಶನ್) ಮಾಡುವ ಮತ್ತು ಇತರರು ತಮಗೆ ತೋರುವ ಕ್ರಿಯೆ, ಕೊಡುವ ಪ್ರತಿಕ್ರಿಯೆಗಳು ಹೊಮ್ಮಿಸುವ ಭಾವುಕತೆಯನ್ನು ಗಮನಿಸುತ್ತಾ ವ್ಯವಹರಿಸುವ ಮತ್ತು ಸ್ಪಂದಿಸುವ ಕಲೆಯನ್ನು ಕಲಿಯಬೇಕಾಗಿದೆ.

ಮನೆಯಲ್ಲಿ ಇಕ್ಯೂ ತರಬೇತಿ

ಇತ್ತೀಚೆಗೆ ಖಾಸಗಿ ಬಹುರಾಷ್ಟ್ರೀಯ ಕಂಪೆನಿಯೊಂದು ವಿವಿಧ ದೇಶಗಳ 286 ಉದ್ಯೋಗಾಕಾಂಕ್ಷಿಗಳಲ್ಲಿ ಐಕ್ಯೂ ಮತ್ತು ಎಕ್ಯೂ ಈ ಎರಡನ್ನೂ ಬೇರೆ ಬೇರೆಯಾಗಿ ಮಟ್ಟಗಳಲ್ಲಿ ಗುರುತಿಸಿ ಕಾರ್ಮಿಕರನ್ನಾಗಿ ತೆಗೆದುಕೊಂಡು ಉದ್ಯೋಗ ಕೌಶಲ್ಯವನ್ನು ಮತ್ತು ಅದರ ಫಲವನ್ನು ಸಮೀಕ್ಷೆ ಮಾಡಿದರು. ಅದರಲ್ಲಿ ಇಕ್ಯೂ ಅಂದರೆ ಭಾವಕೌಶಲ್ಯವನ್ನು ಹೊಂದಿರುವಂತಹ ಉದ್ಯೋಗಿಗಳು ಸ್ಟಾರ್ ಪರ್ಫಾರ್ಮರ್ಸ್ ಎಂದು ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಇನ್ನೂ ಆಶ್ಚರ್ಯದ ವಿಷಯವೆಂದರೆ, ಎಮೋಶನಲ್ ಇಂಟಲಿಜೆನ್ಸ್ ಇರುವಂತಹ ಬಹಳಷ್ಟು ಜನರು ಯಾವುದೇ ನಿರ್ದಿಷ್ಟ ತರಬೇತಿಗಳಿಗೆ ಹೋಗದೇ ಮನೆಯಲ್ಲಿಯೇ ತಮ್ಮ ಕುಟುಂಬದ ಸದಸ್ಯರಿಂದ ಮತ್ತು ಸುತ್ತಮುತ್ತಲ ಪರಿಸರದಿಂದ ಸ್ವಾಭಾವಿಕವಾಗಿ ಕಲಿತಿದ್ದರು. ಆದರೆ, ಐಕ್ಯೂ ಅಂದರೆ ಬುದ್ಧಿ ಕೌಶಲ್ಯವನ್ನು ಹೊಂದಿದ್ದವರಲ್ಲಿ ಕುಟುಂಬದ ಕೊಡುಗೆ ಬಹಳ ಕಡಿಮೆ ಇದ್ದು, ಹೊರಗೆ ಅವರ ತರಬೇತಿಗಳನ್ನು ಉನ್ನತ ಸಂಸ್ಥೆಗಳಲ್ಲಿ ಪಡೆದವರಾಗಿದ್ದರು. ಇದರಿಂದ ತಿಳಿಯುವುದೇನೆಂದರೆ ಮಕ್ಕಳಿಗೆ ಮನೆಯಲ್ಲಿಯೇ ಪಠ್ಯೇತರ ಶಿಕ್ಷಣಗಳನ್ನು ಕೊಡಲೇಬೇಕೆಂಬುದು.

ಮಕ್ಕಳಿಗೆ ಇದೊಂದು ಭಾವಕೌಶಲ್ಯದ ತರಬೇತಿ ಎಂದು ಹೇಳದೆಯೇ ನಾವು ದಿನನಿತ್ಯದ ವ್ಯವಹಾರಗಳಲ್ಲಿ ಅಭ್ಯಾಸ ಮಾಡಿಸಬೇಕಾಗಿರುವುದು ಯಾವ್ಯಾವ ವಿಷಯಗಳೆಂದರೆ, ಪ್ರಜ್ಞೆಯಿಂದ ಕೂಡಿರುವುದು, ಸ್ವಯಂ ನಿಯಂತ್ರಣ, ಸ್ವಯಂ ಪ್ರೇರಣೆ ಹಾಗೂ ಸಾಂಘಿಕ ಕೌಶಲ್ಯದ ಜೊತೆಗೆ ಅನುಭೂತಿ ಶಕ್ತಿಯನ್ನು ನೀಡುವುದು.

ಶಾಲೆಯಲ್ಲಿ ಅಥವಾ ತರಬೇತಿ ಸಂಸ್ಥೆಗಳಲ್ಲಿ ಕಲಿಯುವ ಅನೇಕ ವಿಷಯಗಳ ಜೊತೆಜೊತೆಗೆ ಮಕ್ಕಳಿಗೆ ಶಿಕ್ಷಣದ ಜವಾಬ್ದಾರಿಯನ್ನು ಮನೆಯವರು ತೆಗೆದುಕೊಳ್ಳಬೇಕು ಎಂದು ಪದೇ ಪದೇ ನಾನಾ ಕಾರಣಗಳಿಗೆ ಉಲ್ಲೇಖವಾಗುತ್ತಿರುತ್ತದೆ. ಪಠ್ಯೇತರ ಶಿಕ್ಷಣದ ವ್ಯಾಪ್ತಿಯಲ್ಲಿಯೇ ಮತ್ತೊಂದು ಮಹತ್ತರ ಅಂಶ ಭಾವ ಕೌಶಲ್ಯ ಅಥವಾ ಎಮೋಶನಲ್ ಇಂಟಲಿಜೆನ್ಸ್.

ಭಾವಕೌಶಲ್ಯ ಎಂಬುದು ಬಹಳ ಮುಖ್ಯವಾದಂತಹ ಜೀವನ ಕೌಶಲ್ಯ. ಇದನ್ನು ತಿಳಿಯಲು ಸ್ವಲ್ಪ ಹೆಚ್ಚಿನ ಸಂಯಮ ಮತ್ತು ಮುಕ್ತತೆ ಬೇಕಾಗುತ್ತದೆ. ಇನ್ನು ಅಭ್ಯಾಸ ಮಾಡುವುದಂತೂ ತಪಸ್ಸೇ ಸರಿ. ಏನಿದು ಭಾವಕೌಶಲ್ಯವೆಂದರೆ, ಒಂದೆರಡು ಮಾತುಗಳಲ್ಲಿ ಹೇಳು ವುದಕ್ಕೆ ಕೊಂಚ ಕಷ್ಟವೇ ಆಗುತ್ತದೆ. ಆದರೆ ಮನುಷ್ಯನ ಮನಸ್ಸು, ದೇಹ ಮತ್ತು ಸಂಬಂಧಗಳನ್ನು ಇದು ಪ್ರಭಾವಿಸುವುದರಿಂದ ಇದು ವ್ಯಕ್ತಿಗತವೂ ಹೌದು, ಸಾಮಾಜಿಕವೂ ಹೌದು. ಆದ್ದರಿಂದ ಮಕ್ಕಳಿಗೆ ಹೇಳಿಕೊಡುವ ನೆಪದಲ್ಲಿ ದೊಡ್ಡವರೂ ಕೂಡ ಈ ಕೌಶಲ್ಯವನ್ನು ಹೊಂದುವಂತಾದರೆ, ತಮ್ಮ ಕುಟುಂಬದಿಂದಲೇ ಒಂದು ಒಳ್ಳೆಯ ಪ್ರಾರಂಭವೆಂದು ಯಾರಾದರೂ ಹೆಮ್ಮೆ ಪಟ್ಟುಕೊಳ್ಳಬಹುದು. ಮನಸ್ಸಿಗೂ ಮತ್ತು ದೇಹಕ್ಕೂ ಅವಿನಾಭಾವ ಸಂಬಂಧವಿದೆ. ಮಾನಸಿಕವಾದಂತಹ ಒಲವು ನಿಲುವುಗಳು ದೇಹದ ಮೇಲೆ ಪ್ರಭಾವ ವನ್ನು ಬೀರುತ್ತದೆ. ಅದರಂತೆಯೇ ಮೂಡುವ ಮತ್ತು ಅಭಿವ್ಯಕ್ತ ಗೊಳಿಸುವ ಭಾವನೆಗಳು ಮನಸ್ಸು ಮತ್ತು ದೇಹ, ಈ ಎರಡರ ಮೇಲೂ ಗಾಢವಾದಂತಹ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಭಾವನೆಗಳನ್ನು ಗಮನಿಸುವಂತಹ ಮತ್ತು ಅವುಗಳನ್ನು ಹತೋಟಿ ಯಲ್ಲಿಟ್ಟುಕೊಂಡು ತಮ್ಮ ದೃಷ್ಟಿಯ ಪರಿಧಿಯಲ್ಲಿಯೇ ಪರೀಕ್ಷೆಗೆ ಒಳಗಾಗುವಂತಹ ಅಭ್ಯಾಸ ಬೆಳೆದರೆ ಅದು ಬಹಳ ಸಂಯಮದ ಬದುಕನ್ನೂ ಮತ್ತು ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಸತ್ವಶಾಲಿಯಾದ ಪ್ರಾಮಾಣಿಕ ಸಂಬಂಧಗಳನ್ನು ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಈ ಭಾವ ಕೌಶಲ್ಯವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳಿಗೆ ಅಭ್ಯಾಸ ಮಾಡಿಸುವ ನೆಪದಲ್ಲಿ ನಮ್ಮ ಆತ್ಮಪರೀಕ್ಷೆಯೂ ಆಗುತ್ತದೆ, ಜೊತೆಗೆ ನಾವೂ ಕಲಿತುಕೊಂಡಂತಾಗುತ್ತದೆ. ಈ ಭಾವಕೌಶಲ್ಯಕ್ಕೇನೇ ಎಮೋಶನಲ್ ಇಂಟಲಿಜೆನ್ಸ್ ಎಂದು ಕರೆಯುವುದು. ಎಮೋಶನಲ್ ಇಂಟಲಿಜೆನ್ಸ್

ಭಾವಕೌಶಲ್ಯವೆಂದಲ್ಲಿ ಕಲಿಯಬೇಕಾದ್ದು ಮತ್ತು ಕಲಿಸಬೇಕಾ ದ್ದೇನೆಂದರೆ; ಸಮೂಹ ಮತ್ತು ವ್ಯಕ್ತಿಗಳೊಡನೆ ಸಂವಹನ (ಕಮ್ಯುನಿಕೇಶನ್) ಮಾಡುವ ಮತ್ತು ಇತರರು ತಮಗೆ ತೋರುವ ಕ್ರಿಯೆ, ಕೊಡುವ ಪ್ರತಿಕ್ರಿಯೆಗಳು ಹೊಮ್ಮಿಸುವ ಭಾವುಕತೆಯನ್ನು ಗಮನಿಸುತ್ತಾ ವ್ಯವಹರಿಸುವ ಮತ್ತು ಸ್ಪಂದಿಸುವ ಕಲೆಯನ್ನು ಕಲಿಯಬೇಕಾಗಿದೆ. ಈ ಕಲೆಯನ್ನು ಸಿದ್ಧಿಸಿಕೊಳ್ಳಲು ಹೊಂದಬೇಕಾದ ಅಂಶವೆಂದರೆ,

1.ತಮ್ಮದೇ ಆದಂತಹ ಭಾವುಕತೆಯನ್ನು ಗುರುತಿಸಬೇಕು. ತಮ್ಮದೇ ಭಾವನೆಗಳನ್ನು ಗಮನಿಸಬೇಕು.

2.ಇತರರ ಭಾವುಕತೆಯನ್ನು ಗುರುತಿಸುವಷ್ಟು ಮತ್ತು ಅದಕ್ಕೆ ಸ್ಪಂದಿಸುವಷ್ಟು ಸೂಕ್ಷ್ಮತೆಯನ್ನು ಹೊಂದುವುದು.

3.ತನಗೆ ಕೋಪ ಬಂದಾಗ ಶಮನ ಮಾಡಿಕೊಳ್ಳುವುದನ್ನು ಅಥವಾ ಬೇಸರವಾಗಿ ವ್ಯಗ್ರವಾದಾಗ ತನ್ನನ್ನು ತಾನು ಶಾಂತಪಡಿಸಿ ಕೊಳ್ಳುವುದನ್ನು ಕಲಿತುಕೊಳ್ಳುವುದು.

4.ಕೆಲವು ಸಂದರ್ಭಗಳಲ್ಲಿ ಏನನ್ನೂ ಹೇಳದೇ ಅಥವಾ ಏನನ್ನೂ ಮಾಡದೇ ತನ್ನನ್ನು ತಾನು ಅಂಕೆಯಲ್ಲಿರಿಸಿಕೊಳ್ಳುವುದು ಅಥವಾ ಆತ್ಮ ಸಂಯಮ ಹೊಂದುವಷ್ಟು ಜಾಣ್ಮೆಯನ್ನು ಹೊಂದುವುದು.

5.ಭಾವಕೌಶಲ್ಯ (ಎಮೋಷನಲ್ ಕೋಷಂಟ್-ಇಕ್ಯೂ), ಬುದ್ಧಿ ಕೌಶಲ್ಯ (ಇಂಟಲಿಜೆಂಟ್ ಕೋಷಂಟ್ -ಐಕ್ಯೂ) ಈ ಎರಡರಲ್ಲಿ ಭಾವಕೌಶಲ್ಯ ಉಳ್ಳವರೇ ಹೆಚ್ಚಿನ ಪರಿಣಾಮಕಾರಿಯಾದಂತಹ ಮತ್ತು ಫಲಕಾರಿಯಾಗುವಂತಹ ಕೆಲಸಗಳನ್ನು ಮಾಡುತ್ತಾರೆ. ಅನುಕಂಪಕ್ಕಿಂತ ಅನುಭೂತಿ ಶ್ರೇಷ್ಠ

ಅನುಭೂತಿ ಶಕ್ತಿ ಭಾವಕೌಶಲ್ಯದ ಒಂದು ಉತ್ತಮಗುಣವಾಗಿದೆ. ಇದಕ್ಕೇ ಎಂಪತಿ ಎಂದು ಇಂಗ್ಲಿಷಿನಲ್ಲಿ ಹೇಳುವುದು. ಸಿಂಪತಿ ಅಥವಾ ಅನುಕಂಪ ಎಂದರೆ ಪರರ ಕಷ್ಟಕ್ಕೆ ಅಥವಾ ನೋವಿಗೆ ಮರುಕವನ್ನು ತೋರಿಸುವುದಾದರೆ, ಎಂಪತಿ ಅಥವಾ ಅನುಭೂತಿಯಲ್ಲಿ ಅವರ ಸ್ಥಾನದಲ್ಲಿ ನಾವೇ ನಿಲ್ಲುವುದಾಗಿರುತ್ತದೆ. ಸಿಂಪತಿ ಎಷ್ಟೋ ಬಾರಿ ಪ್ಯಾಸಿವ್ ಅಂದರೆ ಹೊರಾವರಣದ್ದಾಗಿರುವುದು. ಆದರೆ ಎಂಪತಿ ಅಥವಾ ಅನುಭೂತಿ ಕ್ರಿಯಾತ್ಮಕ ಮಾತ್ರವಲ್ಲದೇ ಪ್ರಾಮಾಣಿಕ ತೊಡಗುವಿಕೆ ಯಾಗಿರುವುದು. ಸಾಂಘಿಕವಾಗಿ ಮತ್ತು ವ್ಯಕ್ತಿಗತವಾಗಿ ಭಾವಕೌಶಲ್ಯವು ಪರಿಣಾಮ ಕಾರಿಯಾಗಿರುತ್ತದೆ ಎಂದ ಮೇಲೆ ಆ ವ್ಯಕ್ತಿಯ ಸ್ನೇಹ ಜೀವನ ಮತ್ತು ಪ್ರೇಮ ಸಂಬಂಧಗಳೂ ಕೂಡ ಸಮರ್ಪಕವೂ ಮತ್ತು ಉನ್ನತ ಮಟ್ಟದವೂ ಆಗಿರುತ್ತದೆ.

ಈ ಭಾವಕೌಶಲ್ಯ ಮಕ್ಕಳಿಗೇಕೆ ಬೇಕು?

ಮನೆ ಮತ್ತು ಶಾಲೆ; ಈ ಎರಡೂ ಕಡೆ ಮಕ್ಕಳಿಗೆ ಎಮೋಶನಲ್ ಇಂಟ ಲಿಜೆನ್ಸ್ ಅಭ್ಯಾಸ ಮಾಡುವ ಅಗತ್ಯವಿದೆ. ಏಕೆಂದರೆ, ವ್ಯಕ್ತಿಗತವಾಗಿ ಮತ್ತು ಕೌಟುಂಬಿಕವಾಗಿ ವ್ಯಕ್ತಿತ್ವವು ಮನೆಯಲ್ಲಿ ನಿರ್ಮಾಣವಾಗು ತ್ತಿದ್ದರೆ, ಶಾಲೆಯಲ್ಲಿ ಶೈಕ್ಷಣಿಕವಾಗಿ ಮತ್ತು ಸಾಂಘಿಕವಾಗಿ ಮಗುವು ವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತಿರುತ್ತದೆ. ಹಾಗಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳೆರಡರಲ್ಲೂ ಮಗುವು ಯಶಸ್ವಿಯಾಗಿ ವ್ಯಕ್ತಿತ್ವವನ್ನು ರೂಪುಗೊಳಿಸಿಕೊಳ್ಳುವುದಕ್ಕೆ ಮನೆ ಮತ್ತು ಶಾಲೆ ಎರಡೂ ಕೆಲಸ ಮಾಡಬೇಕಾಗುತ್ತದೆ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಪ್ರತ್ಯೇಕವಾಗಿ ಮಕ್ಕಳಿಗೆ ಭಾವ ಕೌಶಲ್ಯವನ್ನು ಅಭ್ಯಾಸ ಮಾಡುವ ಅಗತ್ಯವಿದ್ದರೂ, ಶಿಕ್ಷಕರು ಮತ್ತು ಪೋಷಕರಿಬ್ಬರಿಗೂ ಅನ್ವಯವಾಗುವಂತಹ ಕೆಲವು ಅಭ್ಯಾಸಗಳಿವೆ. ಉದಾಹರಣೆಗೆ: ಮನೆಯಲ್ಲಿನ ಯಾವುದೋ ವಿದ್ಯಮಾನದಿಂದ ಅಥವಾ ಘಟನೆಯಿಂದ ಮಗುವಿಗೆ ಬೇಸರ ಅಥವಾ ಕೋಪವೋ ಉಂಟಾಗುತ್ತದೆ. ಮಗುವು ಆಟವಾಡುತ್ತಾ ಯಾವುದೋ ವಸ್ತುವನ್ನು ಬೀಳಿಸುತ್ತದೆ. ಅದು ಒಡೆಯುತ್ತದೆ. ತಕ್ಷಣವೇ ತಾಯಿಯೋ ಅಥವಾ ಇನ್ನಾರೋ ತಕ್ಷಣವೇ ಜೋರಾಗಿ ಕೂಗಿ ಗದರುತ್ತಾರೆ. ಆ ವಸ್ತು ಬೀಳುವುದೇ ಒಂದು ಅನಿರೀಕ್ಷಿತವಾಗಿರುತ್ತದೆ. ಇನ್ನು ಬೈಯಿಸಿಕೊಳ್ಳುವುದು ಇನ್ನೂ ಅನಿರೀಕ್ಷಿತವಾಗಿರುತ್ತದೆ. ಸಂತೋಷದ ನಿರೀಕ್ಷೆಯಲ್ಲಿ ಆಟವಾಡುತ್ತಾ ಇರುವಾಗ ಎದುರಾಗುವ ಇಂತಹ ಅನಿರೀಕ್ಷಿತ ಘಟನೆಗಳು ಮಕ್ಕಳನ್ನು ತಬ್ಬಿಬ್ಬಾಗಿಸುತ್ತದೆ. ದಿಢೀರನೆ ಉಂಟಾಗುವ ತಮ್ಮದೇ ಭಾವನೆಯನ್ನು ತಾವೇ ಗುರುತಿಸಿಕೊಳ್ಳಲು ಸಣ್ಣ ಮಕ್ಕಳು ಶಕ್ತರಾಗಿರುವುದಿಲ್ಲ. ಇನ್ನೂ ಕೆಲವೊಮ್ಮೆ ದಿಢೀರನೆ ಎದುರಾಗುವ ಯಾವುದೋ ಸನ್ನಿವೇಶದಿಂದ ಮಗುವಿಗೆ ತಬ್ಬಿಬ್ಬಾ ಗುತ್ತದೆ. ಭಾವುಕತೆಯಲ್ಲಿ ಏರುಪೇರಾಗುತ್ತದೆ. ಅಂತಹ ಸಮಯದಲ್ಲಿ ಅದನ್ನು ಗುರುತಿಸುವಂತಹ ಹಿರಿಯರು ಸಂಯಮದಿಂದ ಮತ್ತು ಸಮಾಧಾನಿಸುವಂತಹ ರೀತಿಯಲ್ಲಿ ಮಾತಾಡಬೇಕು.

ನಿನಗೆ ಬೇಜಾರಾಯ್ತು ಅಂತ ಅನ್ನಿಸತ್ತೆ. ಆಟವಾಡುವಾಗ ಅದು ಬಿದ್ದು ಹೋಗಿದ್ದಕ್ಕೆ ಆಶ್ಚರ್ಯ ಆಯ್ತೆ? ಅದು ಹೇಗೆ ಬಿತ್ತು ಅಂತ ಯೋಚನೆ ಮಾಡಿದಿಯಾ? ಅವರು ತಕ್ಷಣ ಗದರಿದ್ದಕ್ಕೆ ನಿನಗೆ ಗಾಬರಿ ಆಯ್ತೆ? ಅಳು ಬಂತಾ? ಒಂದು ವೇಳೆ ಮಗುವಿಗೆ ಅವರು ಗದರಿದ್ದಕ್ಕೆ ಕೋಪ ಬಂದಿದ್ದರೆ, ಕೋಪ ಬಂತಾ? ಎಂದೇ ಕೇಳುತ್ತಾ ಮಕ್ಕಳು ತಮ್ಮಲ್ಲಿ ಉಂಟಾಗಿರುವ ಭಾವನೆಗಳನ್ನು ಗುರುತಿಸಲು ಕಲಿಸಬೇಕು. ಆ ಭಾವ ನೆಗೆ ಏನೆಂದು ಹೆಸರಿಸುತ್ತಾರೆ ಎಂಬುದನ್ನೂ ಅದು ತಿಳಿಯಬೇಕು. ಆಟದಿಂದ ನನಗೆ ಸಂತೋಷ ಸಿಗುತ್ತಿತ್ತು. ಅದರಿಂದಾಗಿ ನಾನು ನಗುತ್ತಿದ್ದೆೆ. ಹಾಗೆ ಆಡುತ್ತಾ ಆಡುತ್ತಾ ಆ ವಸ್ತುವನ್ನು ತಗುಲಿಸಿದೆ. ಆ ವಸ್ತು ಬಿತ್ತು. ಆ ವಸ್ತುವು ಬೀಳುವುದಕ್ಕೆ ಕಾರಣ ನಾನು ತಗುಲಿಸಿದ್ದು. ನಾನು ತಗುಲಿಸಿದ್ದಕ್ಕೆ ಕಾರಣ ನಾನು ನೋಡದೇ ಇದ್ದದ್ದು. ನಾನು ನೋಡದೇ ಇದ್ದುದ್ದಕ್ಕೆ ಕಾರಣ ಆ ಕಡೆ ಹೋದಾಗ ನಾನು ಎಚ್ಚರದಲ್ಲಿ ಇರಲಿಲ್ಲ ಅಥವಾ ಗಮನ ಕೊಡಲಿಲ್ಲ. ವಸ್ತುವು ಬಿದ್ದಾಗ ಅದಕ್ಕೆ ಬೆಲೆ ಕೊಟ್ಟುತಂದಿದ್ದ ಅಥವಾ ಅಗತ್ಯವಾಗಿ ಬಳಸುತ್ತಿದ್ದ ಅವರಿಗೆ ಕೋಪ ಬಂತು. ಹಾಗಾಗಿ ಅವರು ನನ್ನ ಬೈದರು. ಅವರು ಬೈದುದಕ್ಕೆ ಕಾರಣ ಅವರ ಕೋಪ. ಅವರ ಕೋಪಕ್ಕೆ ಕಾರಣ ನಾನು ಆಡಿದ್ದಲ್ಲ. ಸಂತೋಷವಾಗಿದ್ದಲ್ಲ. ಎಚ್ಚರವಾಗಿರದಿದ್ದದ್ದು ಅಥವಾ ಗಮನದಿಂದ ಇರದಿದ್ದುದು. ಅವರು ತಕ್ಷಣ ಕಿರುಚಿ ಗದರಿದ್ದರಿಂದ ನನಗೆ ಭಯವಾಯ್ತು. ಇದರಿಂದ ನನಗೆ ಅಳು ಬಂತು. ಅಥವಾ ಕೋಪ ಬಂತು. ಇದರಿಂದ ನನಗೆ ಬೇಸರವಾಯ್ತು.

ಮಗು ಭಾವನೆಗಳನ್ನು ಗುರುತಿಸಲಿ

ಮಗುವಿನ ಇಡೀ ಘಟನೆಯನ್ನು ಮಗುವೇ ಪರಾಮರ್ಶಿಸಿ ನೋಡಲು ಸಹಾಯ ಮಾಡಿದರೆ, ಸಂತೋಷ, ಪ್ರಜ್ಞೆ, ಆಘಾತ, ಕೋಪ, ಭಯ, ದುಃಖ ಇತ್ಯಾದಿ ಎಲ್ಲಾ ಭಾವಗಳನ್ನೂ ತಾನೇ ಗುರುತಿಸಲು ಸಾಧ್ಯವಾಗುತ್ತದೆ.

ಹಾಗಾಗಿ ಯಾವುದೇ ಘಟನೆ ನಡೆದಾಗ, ಅದು ಮಗುವನ್ನು ತಟ್ಟಿದಾಗ, ಅದನ್ನುಗಮನಕ್ಕೆ ತಂದುಕೊಂಡು, ಮಗುವಿನ ಗಮನಕ್ಕೂ ತರುವುದು ಹಿರಿಯರ ಕೆಲಸ. ಹಾಗೂ ಪ್ರತಿಯೊಂದು ಭಾವಕ್ಕೂ ಹೆಸರಿಸುವುದನ್ನು ಮರೆಯಬಾರದು. ಈ ಹೆಸರಿಸುವಿಕೆಯಿಂದಾಗಿ ಇಂತಹ ಭಾವಗಳು ಪ್ರತಿಯೊಬ್ಬರಲ್ಲಿಯೂ ಇರುವುದು ಎಂಬ ಸಾಧಾರಣ ತಿಳುವಳಿಕೆಯು ಬರುವುದು. ಹಾಗೆಯೇ ಅದರಿಂದ ತಪ್ಪಿಸಿಕೊಳ್ಳಲು ಅಥವಾ ಅದಕ್ಕೆ ಬೇರೆಯೇ ವಿವರಣೆ ನೀಡಲು ಮಕ್ಕಳು ವೃಥಾ ಶ್ರಮಪಡುವಷ್ಟಿರುವುದಿಲ್ಲ ಮತ್ತು ಸುಳ್ಳುಗಾರರಾಗುವಷ್ಟಿರುವುದಿಲ್ಲ.

ದಿನನಿತ್ಯವೂ ನಡೆಯುವ ಘಟನೆಗಳ ಸರಮಾಲೆಯಲ್ಲಿ ಮತ್ತು ಒಂದೇ ವ್ಯಕ್ತಿಯಲ್ಲಿಯೂ ಸಂತೋಷ, ದುಃಖ, ಕೋಪ, ಬೇಸರ, ಅನುಕಂಪ ಇತ್ಯಾದಿ ಭಾವನೆಗಳು ಉಂಟಾಗುತ್ತಿರುತ್ತವೆ. ಹಾಗೂ ಅವುಗಳಿಗೆ ಪ್ರತಿಕ್ರಿಯಿಸುವುದರಿಂದ ಅಥವಾ ಸ್ಪಂದಿಸುವುದರಿಂದ ಮತ್ತೊಂದಷ್ಟು ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಅಂತಹ ಸನ್ನಿವೇಶಗಳ ನಿರ್ಮಾಣದ ಹೊಣೆಗಾರರು ನಾವಾಗುತ್ತೇವೆ ಎಂಬ ಎಚ್ಚರಿಕೆ ಮಕ್ಕಳಲ್ಲಿ ಮೊದಲಿನಿಂದಲೇ ಬಂದರೆ ಅದೆಷ್ಟು ಚೆನ್ನ. ಇಂತಹ ಭಾವಕೌಶಲ್ಯವನ್ನು ವಿವಿಧ ವಯೋಮಾನದ ಮಕ್ಕಳಿಗೆ ವಿವಿಧ ರೀತಿಯ ಅಭ್ಯಾಸಗಳಿಂದ ರೂಢಿಸುವುದಕ್ಕೆ ಹಲವಾರು ತರಬೇತಿಗಳಿವೆ. ಅವುಗಳನ್ನು ಮುಂದೆ ಗಮನಿಸೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News