ವಿಭಜನೆಯ ಗಾಯಗಳು

Update: 2017-06-04 18:41 GMT

ಭಾರತ ವಿಭಜನೆಯ ಸಂದರ್ಭದಲ್ಲಾದ ಗಾಯಗಳು ಇಂದಿಗೂ ಆಗಾಗ ಕಣ್ಣು ಪಿಳುಕಿಸುತ್ತಿರುತ್ತವೆ. ಮತ್ತು ಗಾಯಗಳನ್ನು ಸೃಜನಶೀಲ ಕಣ್ಣಿನಿಂದ ನೋಡಿದ ಹಲವು ಚಿಂತಕರು ಬೇರೆ ಬೇರೆ ರೀತಿಯಲ್ಲಿ ಅದನ್ನು ನಿರೂಪಿಸಿದ್ದಾರೆ. ಕವಿಗಳು, ಕತೆಗಾರರು ಈ ಸಂದರ್ಭದಲ್ಲಿ ತಮ್ಮ ಕತೆ, ಕವಿತೆಗಳ ಮೂಲಕ ಒಡೆದ ಹೃದಯಗಳನ್ನು ಸೇರಿಸಲು ಮಾಡಿದ ಪ್ರಯತ್ನ ಮತ್ತು ಆ ಸಂದರ್ಭವನ್ನು ವಿವರಿಸಲು ಬಳಸಿದ ರೂಪಕಗಳು ಅದ್ಭುತವಾದುದು. ಈ ನಿಟ್ಟಿನಲ್ಲಿ ಬೇರೆ ಬೇರೆ ಕತೆಗಾರರು ಕಟ್ಟಿಕೊಟ್ಟಿರುವ ಭಾರತ ವಿಭಜನೆಯ ದುರಂತ ಕಥೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ‘ಧರೆ ಹೊತ್ತಿ ಉರಿದಾಗ’ ಕೃತಿ ಮಾಡುತ್ತದೆ. ‘ಧರೆ ಹೊತ್ತಿ ಉರಿದಾಗ’ ಕೃತಿ ಮೂರು ಸಂಪುಟಗಳಲ್ಲಿ ಹೊರ ಬಂದಿದೆ. ಅಲೋಕ್ ಭಲ್ಲಾ ಈ ಕೃತಿಯನ್ನು ಸಂಪಾದಿಸಿದ್ದಾರೆ. ‘ರಾಹು’ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ಭಾಗ 1ರಲ್ಲಿ ಒಟ್ಟು 22 ಕತೆಗಳಿವೆ. ಇವುಗಳ ಉದ್ದೇಶ ಬರೀ ಹಿಂಸೆಯನ್ನು, ಮನುಷ್ಯನ ಕ್ರೌರ್ಯವನ್ನು ಕಟ್ಟಿಕೊಡು ವುದಲ್ಲ. ಅದರಾಚೆಗೆ ಮನುಷ್ಯ ಬೆಳೆದು ಸಾಗಬೇಕಾದ ಒಂದು ಹೊಸ ದಾರಿ ಯನ್ನು ಮಾಡಿಕೊಡುವ ಕತೆಗಳಿವು. ಅಂಧಕಾರವನ್ನು ಮೊಗೆದು ಬೆಳಕಿನ ಕಿರಣ ಗಳನ್ನು ಆಯುವ ಕೆಲಸವನ್ನು ಇಲ್ಲಿರುವ ಕತೆಗಾರರು ಮಾಡುತ್ತಾರೆ. ಹೆಚ್ಚಿನ ಕಥೆಗಳಲ್ಲಿ ಕೋಪ, ಅಸಹಾಯಕತೆಯ ಭಾವನೆಗಳೇ ಪ್ರಧಾನ ಲಕ್ಷಣಗಳಾಗಿವೆ. ಸಾದತ್ ಹಸನ್ ಮಂಟೋ, ಇಬ್ನ್ ಎ ಇನ್ಶಾ, ಕುಲವಂತ್ ಸಿಂಗ್, ಮೊದಲಾದವರ ಕತೆಗಳು ಮನುಷ್ಯನ ಕ್ರೌರ್ಯದ ಉತ್ಕಟತೆಯನ್ನು ತಮ್ಮ ವ್ಯಂಗ್ಯ ಧಾಟಿಯ ಮೂಲಕ ನಿರೂಪಿಸುತ್ತದೆ. ಸಾದತ್ ಹಸನ್ ಮಾಂಟೋ ಅವರ ಹಲವು ಕತೆಗಳು ವ್ಯಂಗ್ಯದ ಮೂಲಕವೇ ನಮ್ಮನ್ನು ಇರಿಯುತ್ತದೆ. ಕ್ರೌರ್ಯದ ಹಿಂದಿರುವ ಮನುಷ್ಯನ ಸೋಗಲಾಡಿತನವನ್ನು ಅವರು ಕೆಲವು ಸಾಲುಗಳಲ್ಲೇ ಬಯಲು ಗೊಳಿಸುತ್ತಾರೆ. ವಾತ್ಸಾಯನ ಅವರ ‘ಪ್ರತೀಕಾರ’, ಇಬ್ರಾಹೀಂ ಜಲೀಲ್‌ರ ‘ಮಸಣಕ್ಕೆ ಸಲ್ಲುವವರು’ ಉಮ್ಮು ಎ ಉಮರಾ ಅವರ ‘‘ನೆಲೆ ಹುಡುಕಿ ಹೋದರು ಬೆಳೆ ಕಳೆದುಕೊಂಡರು’, ಸಲೀಲ್ ಚೌಧರಿ ಅವರ ‘ಡ್ರೆಸ್ಸಿಂಗ್ ಟೇಬಲ್’ ತನ್ನ ತಾಯಿ ಬೇರು ಹರಿದು ಹೋಗುವವರ ಹತಾಶೆ ಮತ್ತು ಅಸಹಾಯಕತೆಯನ್ನು ಹೇಳುತ್ತದೆ. ಬುದ್ಧಿ ಮತ್ತು ನೈತಿಕ ಪ್ರತಿಭೆಯ ಸೋಲುಗಳನ್ನು ಈ ಕತೆಗಳು ಹೇಳುತ್ತವೆ. ಹಾಗೆಂದು ಎಲ್ಲ ಕತೆಗಳೂ ಗಾಯಗಳನ್ನೇ ಮುಟ್ಟಿ ನೋಡುವುದಿಲ್ಲ. ಕೆಲವು ಕತೆಗಳು ಸಾಂತ್ವನವನ್ನು ಹೇಳುತ್ತವೆ. ಸೈಯದ್ ಮುಹಮ್ಮದ್ ಅಶ್ರಫ್‌ರವರ ‘ಹಿಂಡನ್ನಗಲಿತ ಹಕ್ಕಿಗಳು’ ಅಂತಹದೇ ಒಂದು ಕತೆ. ವಿಭಜನೆಯ ಬಹಳ ದಿನಗಳ ಅನಂತರ ಇಬ್ಬರು ಗೆಳೆಯರ ಭೇಟಿಯಾಗುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಹಳೆಯ ಸ್ನೇಹದ ದಿನಗಳನ್ನು ಮೆಲುಕು ಹಾಕುತ್ತಾ, ವಾಸ್ತವದ ಗಾಯಗಳಿಗೆ ಮುಲಾಮು ಹಚ್ಚುತ್ತಾರೆ. ಇಲ್ಲಿರುವ ಎಲ್ಲ ಕತೆಗಳೂ ಒಂದಕ್ಕಿಂತ ಒಂದು ಹೃದಯ ಮಟ್ಟುವಂಥವುಗಳು. ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರಸ್ತುತವಾಗುವಂಥಹದು. ಈ ಕೃತಿಯನ್ನು ಬೆಳಕಿಗೆ ತಂದ ಸೃಷ್ಟಿ ಪಬ್ಲಿಕೇಶನ್ ಪ್ರಯತ್ನ ಅಭಿನಂದನಾರ್ಹ. ಮೊದಲ ಸಂಪುಟದ ಒಟ್ಟು ಪುಟಗಳು 392. ಮುಖಬೆಲೆ 400 ರೂಪಾಯಿ. ಆಸಕ್ತರು 98450 9668 ದೂರವಾಣಿಯನ್ನು ಸಂಪರ್ಕಿಸಬಹುದು. 

Writer - ಕಾರುಣ್ಯ

contributor

Editor - ಕಾರುಣ್ಯ

contributor

Similar News