ಕೃಷ್ಣಪ್ಪನವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಇಂದಿನ ತುರ್ತು -ಇಂದಿರಾ ಕೃಷ್ಣಪ್ಪ
70ರ ದಶಕದ ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರು ದನಿ ಎತ್ತದ ಅಸಹಾಯಕತೆಗೆ ದೂಡಲ್ಪಟ್ಟಿದ್ದರು. ಅನಕ್ಷರತೆ, ಅಸ್ಪಶ್ಯತೆ ನಿವಾರಣೆಯಾಗುವ ಸನ್ನಿವೇಶ ಸೃಷ್ಟಿಯಾಗಲೇ ಇಲ್ಲ. ಇಂತಹ ಸಂದರ್ಭದಲ್ಲಿ ಭೂ ಹೋರಾಟಗಳನ್ನು ರೂಪಿಸಿದ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ, ಬಡವರು, ಕಾರ್ಮಿಕರು ಮತ್ತು ಮಹಿಳೆಯರ ಪರವಾಗಿ ಜನರನ್ನು ಸಂಘಟಿಸಿದ, ಡಿಎಸ್‌ಎಸ್‌ನಂತಹ ಪ್ರಬಲ ಸಂಘಟನೆಯ ಹುಟ್ಟಿಗೆ ಕಾರಣರಾದ ಕರ್ನಾಟಕದ ಅಂಬೇಡ್ಕರ್ ಪ್ರೊ.ಬಿ.ಕೃಷ್ಣಪ್ಪನವರು ಇಲ್ಲವಾಗಿ 20 ವರ್ಷಗಳೇ ಕಳೆದಿವೆ. ಇಂದು ಜೂನ್ 9 ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ
. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತಿರುವ ಅವರ ಪತ್ನಿ ಇಂದಿರಾ ಕೃಷ್ಣಪ್ಪನವರು, ಅಂದಿನ ಹೋರಾಟದ ಬದುಕನ್ನು, ಕೃಷ್ಣಪ್ಪನವರ ನಿಷ್ಠುರ ವ್ಯಕ್ತಿತ್ವವನ್ನು, ಚಿಂತನೆಯನ್ನು, ಮಾನವೀಯ ಮುಖವನ್ನಿಲ್ಲಿ ಪರಿಚಯಿಸಿದ್ದಾರೆ.
►ಪ್ರೊ.ಬಿ.ಕೃಷ್ಣಪ್ಪನವರ ಸಂಪರ್ಕಕ್ಕೆ ಬಂದಿದ್ದು ಹೇಗೆ?
ನಮ್ಮೂರು ಭದ್ರಾವತಿ, ನಮ್ಮದು ಸಂಪ್ರದಾಯಬದ್ಧ ಬ್ರಾಹ್ಮಣ ಕುಟುಂಬ, ನಾನು ಓದುವ ಕಾಲಕ್ಕೆ ನಮ್ಮೂರಿನಲ್ಲಿದ್ದದ್ದು ಪಿಯು ಕಾಲೇಜಷ್ಟೆ. ಡಿಗ್ರಿ ಕಾಲೇಜೂ ಇರಲಿಲ್ಲ, ಉನ್ನತ ವ್ಯಾಸಂಗಕ್ಕೆ ಹುಡುಗಿಯರನ್ನು ಕಳುಹಿಸುತ್ತಲೂ ಇರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಭದ್ರಾ ಪದವಿ ಕಾಲೇಜು ಶುರುವಾಯಿತು. ಮನೆ ಮುಂದಿನ ಕಾಲೇಜಿಗೆ ಹೋಗುತ್ತೇನೆಂದಾಗ, ನಮ್ಮ ಪೋಷಕರು ಅಡ್ಡಿಪಡಿಸಲಿಲ್ಲ. ಆ ನಮ್ಮ ಹೊಸ ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ಬಿ.ಕೃಷ್ಣಪ್ಪನವರು ಬಂದರು. ಹರಿಹರದವರು. ಸಿಕ್ಕಾಪಟ್ಟೆ ಸಿಟ್ಟಿನ, ಶಿಸ್ತಿನ, ಫುಲ್ ಸೂಟಿನ ಅಧ್ಯಾಪಕರು. ತುಂಬಾ ಚೆನ್ನಾಗಿ ಪಾಠ ಮಾಡೋರು. ಪಾಠವನ್ನಷ್ಟೇ ಅಲ್ಲದೆ, ಹಾಡು, ಆಟ, ನಾಟಕಗಳನ್ನೂ ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳಿಗೆ ಸಾಮಾಜಿಕ, ವೈಚಾರಿಕ ಪ್ರಜ್ಞೆಯನ್ನೂ ಪರಿಚಯಿಸಿದರು. ಆ ಕಾಲಕ್ಕೇ ‘ಪೂರ್ ಬಾಯ್ಸೆ ಫಂಡ್’ ಸ್ಥಾಪಿಸಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದರು. ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟು, ಮನೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು. ಶಿಸ್ತಿನ ಅಧ್ಯಾಪಕ. ಉತ್ತಮ ಹಾಡುಗಾರ. ಮಾನವೀಯ ವ್ಯಕ್ತಿ. ಇದು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಅದೇ ಸಮಯಕ್ಕೆ ಸರಿಯಾಗಿ ನಮ್ಮ ಕಾಲೇಜಿನೊಳಗಡೆ ಜಾತಿ ಮನಸ್ಸುಗಳು ಜಾಗೃತವಾಗಿ, ದಲಿತ ಕೃಷ್ಣಪ್ಪನವರ ವಿರುದ್ಧ ಮಸಲತ್ತು ಮಾಡತೊಡಗಿದವು. ಇದರಿಂದ ಬೇಸತ್ತ ಕೃಷ್ಣಪ್ಪನವರು, ಪಾಠ ಮಾಡುತ್ತಾ, ‘ಹಾರಾಡುವ ಹಕ್ಕಿಗೆ ಯಾವ ಹಣ್ಣಿನ ಮರವಾದರೇನು’ ಎಂಬರ್ಥ ಬರುವ ಮಾತಾಡಿದರು. ಅಂದರೆ, ಕಿರುಕುಳಕ್ಕೆ ಬೇಸತ್ತು, ಬೇರೆಡೆಗೆ ಹೋಗಲು ನಿರ್ಧರಿಸಿದಂತಿತ್ತು. ಆಗ ನಾನು ಅವರಿಗೆ, ನೀವು ಕಾಲೇಜು ಬಿಡಬಾರದು, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಒಂದು ಪತ್ರ ಬರೆದೆ. ಹೀಗೆ ಪತ್ರಗಳ ವಿನಿಮಯ ಶುರುವಾಯಿತು, ಅದು ಪ್ರೇಮಕ್ಕೆ ತಿರುಗಿತು.
►70 ರ ದಶಕದಲ್ಲಿಯೇ ನಿಮ್ಮದು ಅಂತರ್ಜಾತೀಯ ವಿವಾಹ, ಸಾಧ್ಯವಾಗಿದ್ದು ಹೇಗೆ?
ನನ್ನ ಅವರ ನಡುವೆ ಪತ್ರ ವ್ಯವಹಾರ ನಡೆಯುತ್ತಿದ್ದಾಗಲೇ, ನಮ್ಮಮ್ಮನ ಕೈಗೆ ನಮ್ಮ ಪ್ರೇಮಪತ್ರ ಸಿಕ್ಕು ರಾದ್ಧಾಂತವಾಯಿತು. ಆಗ ಭದ್ರಾವತಿಯಲ್ಲಿ ಆರೆಸ್ಸೆಸ್ ಸ್ಟ್ರಾಂಗ್ ಆಗಿತ್ತು. ಅಂತಹ ಊರಿನಲ್ಲಿ ಬ್ರಾಹ್ಮಣ ಹುಡುಗಿ ದಲಿತ ಹುಡುಗನನ್ನು ಪ್ರೇಮಿಸುವುದೆಂದರೇನು, ಪೋಷಕರು ವಿಷ ಕುಡಿಯುವ ಬೆದರಿಕೆ ಹಾಕಿದರು. ಗಲಾಟೆ, ಸಿಟ್ಟು, ಜಗಳಗಳಿಂದ ಮನೆ ರಣರಂಗವಾಯಿತು. ಬೇರೆ ವರನ ಹುಡುಕಾಟ ಆರಂಭಿಸಿ, ಮದುವೆ ಮಾಡಲು ನೋಡಿದರು. ಅಷ್ಟೇ ಅಲ್ಲ, ನನ್ನನ್ನು ನಮ್ಮ ಸಂಬಂಧಿಕರ ಮನೆಯಲ್ಲಿ ಕೂಡಿಹಾಕಿದರು. ನನಗೂ ಅವರಿಗೂ ಸಂಪರ್ಕವೇ ಇಲ್ಲದಂತಾಯಿತು. ಹಾಗೆಯೇ ಊರಿನಲ್ಲಿ ಗುಸು ಗುಸು, ನನ್ನ-ಅವರ ಬಗ್ಗೆ ಅಪಪ್ರಚಾರ ಶುರುವಾಯಿತು. ಈ ನಡುವೆ ನನ್ನ ನೋಡಲು, ಮದುವೆಯಾಗಲು ವರಗಳು ಬಂದುಹೋದವು. ನಾನು ಒಪ್ಪಲಿಲ್ಲ. ಪೋಷಕರಿಗೆ ಮನೆ ಮರ್ಯಾದೆಯ ಪ್ರಶ್ನೆ, ಊರಿನಲ್ಲರಡಿದ ಅಪಪ್ರಚಾರ... ಎಲ್ಲವೂ ಸೇರಿಕೊಂಡು ದಿಕ್ಕೇ ತೋಚದಂತಾಯಿತು. ನಮ್ಮ ತಂದೆಯ ಹೊಟೇಲ್ ಇತ್ತು, ಗಲ್ಲದ ಮೇಲೆ ಕೂರುತ್ತಿದ್ದೆ, ಹುಡುಗರೊಂದಿಗೆ ಬೆರೆಯುತ್ತಿದ್ದೆ. ಚಿಕ್ಕಂದಿನಿಂದಲೂ ಓದುವ ಅಭ್ಯಾಸವಿತ್ತು. ಗಾಂಧಿ, ಕಬೀರರನ್ನು ಓದಿದ್ದೆ. ನನ್ನ ಆಲೋಚನಾ ಕ್ರಮವೇ ಭಿನ್ನವಾಗಿತ್ತು. ಜಾತಿ, ಧರ್ಮ, ಮೇಲು-ಕೀಳುಗಳಲ್ಲಿ ನನಗೆ ನಂಬಿಕೆ ಇರಲಿಲ್ಲ. ಅವು ಮುಖ್ಯವೂ ಆಗಿರಲಿಲ್ಲ. ನನ್ನ ಪ್ರಕಾರ, ಹುಡುಗನಿಗೆ ಒಳ್ಳೆ ಕೆಲಸವಿದೆ, ತುಂಬಾ ಒಳ್ಳೆಯ ಮನಸ್ಸಿದೆ, ಇದಕ್ಕಿಂತ ಇನ್ನೆಂತಹ ವರ ಬೇಕು ಇವರಿಗೆ ಎಂದು ವಾದಿಸುತ್ತಿದ್ದೆ. ಆದರೆ ಅವರಿಗೆ ಜಾತಿ ಮುಖ್ಯವಾಗಿತ್ತು. ನಮ್ಮಕ್ಕನ ಮದುವೆ ದೊಡ್ಡ ಕಗ್ಗಂಟಾಗಿತ್ತು. ಕೊನೆಗೊಂದು ದಿನ ಪಕ್ಕದ ಮನೆಯವರ ಸಹಾಯದಿಂದ ಕೃಷ್ಣಪ್ಪನವರಿಗೆ ಒಂದು ಪತ್ರ ರವಾನಿಸಿದೆ. ಅಲ್ಲಿ, ಅವರಿಗೂ ಗೊಂದಲ. ಆದರೆ ಅವರು ವಿಚಲಿತರಾಗಿರಲಿಲ್ಲ. ನನ್ನ ಪತ್ರ ಸಿಕ್ಕಿದ ಮೇಲೆ, ನನ್ನನ್ನು ಸಂಪರ್ಕಿಸಿ ಮಹಾರುದ್ರ ಎಂಬ ಗೆಳೆಯನ ಸಹಾಯದಿಂದ ಕಡೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೇ 12, 1974ರಂದು ಮದುವೆಯಾದೆವು. ಸಮಾಜವಾದಿ ಯುವಜನ ಸಭಾದ ಪ್ರೊಫೆಸರ್ ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ, ಕಡಿದಾಳು ಶಾಮಣ್ಣ ಇನ್ನೂ ಅನೇಕ ಪ್ರಗತಿಪರ ಗೆಳೆಯರು ನಮಗೆ ಬೆಂಬಲವಾಗಿ ನಿಂತರು. ನಂತರ ತೇಜಸ್ವಿಯವರ ಮನೆಯಲ್ಲಿ ಎರಡು ದಿನ ಉಳಿದುಕೊಂಡೆವು.
► ಅಂತರ್ಜಾತಿ ವಿವಾಹಕ್ಕೆ ಸಮಾಜದ ಪ್ರತಿಕ್ರಿಯೆ ಹೇಗಿತ್ತು?
70ರ ದಶಕದಲ್ಲಿ ಭದ್ರಾವತಿಯಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆ ಕೂಡ ಆಗಿತ್ತು. ಅಂತಹ ಸಂದರ್ಭದಲ್ಲಿ ನಮ್ಮ ಅಂತರ್ಜಾತಿ ಮದುವೆಯಾಗಿತ್ತು. ಊರು ತುಂಬಾ ನಮ್ಮದೇ ಮಾತು. ಅಯ್ಯೋ ಆ ದಲಿತರೋನು ಬ್ರಾಹ್ಮಣ ಹುಡುಗಿಗೆ ದಿನಾ ಬಡಿತನಂತೆ, ಮಾಂಸ ತಿನ್ನು ಅಂತ ಒತ್ತಾಯಿಸುತ್ತಾನಂತೆ, ಬ್ರಾಹ್ಮಣರಿಗೆ ತೊಂದರೆ ಕೊಡಲಿಕ್ಕಾಗಿಯೇ ಮದುವೆಯಾಗಿದ್ದಾನಂತೆ, ಬ್ರಾಹ್ಮಣರ ನಾಶವೇ ಆತನ ಉದ್ದೇಶವಂತೆ... ಹೀಗೆ ಏನೇನೋ ರೂಮರ್‌ಗಳು. ಆದರೆ ಕೃಷ್ಣಪ್ಪನವರು ಅದಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ಜೊತೆಗೆ, ‘ನಮ್ಮ ಬದುಕೇ ಅವರಿಗೆ ಉತ್ತರ’ ಎಂದು ವೌನಕ್ಕೆ ಶರಣಾದರು. ನನ್ನನ್ನು ಅವರು ಮತ್ತವರ ಮನೆಯವರು ತುಂಬಾ ಚೆನ್ನಾಗಿ, ತವರು ಪ್ರೀತಿ ಕಾಡದಂತೆ, ತಾಯಿ ಮಮತೆ ಬಾಧಿಸದಂತೆ ನೋಡಿಕೊಂಡರು. ಒಂಟಿ ಎನ್ನುವ ಭಾವನೆಯೇ ಬರಲಿಲ್ಲ. ಭಾವಾವೇಶದ ಪ್ರಸಂಗ ಎದುರಾಗಲಿಲ್ಲ. ನನಗೂ ಕೂಡ, ದಲಿತರನ್ನು ಮದುವೆಯಾಗಿದ್ದೇನೆ ಎಂಬ ಕೀಳರಿಮೆಯೂ ಕಾಡಲಿಲ್ಲ. ವೈಭವೀಕರಿಸಿ ಪ್ರಚಾರ ಪಡೆಯಬೇಕೆಂಬ ಇರಾದೆಯೂ ಇರಲಿಲ್ಲ.
►ದಲಿತ ಸಂಘರ್ಷ ಸಮಿತಿ ಹುಟ್ಟಿದ್ದು ಹೇಗೆ?
ಬಿ. ಬಸವಲಿಂಗಪ್ಪನವರು ಮಂತ್ರಿಯಾಗಿದ್ದಾಗ ಕನ್ನಡ ಸಾಹಿತ್ಯ ಬೂಸಾ ಅಂದುಬಿಟ್ಟರು. ಅದು ಅವರ ಸಚಿವ ಸ್ಥಾನವನ್ನೇ ಕಿತ್ತುಕೊಂಡಿತು. ಆಗ ಅವರ ಪರ ನಿಂತಿದ್ದು ಬೆರಳೆಣಿಕೆಯಷ್ಟು ಜನ. ಸಮಾಜವಾದಿಗಳು, ಪ್ರಗತಿಪರರು ಯಾರೂ ಬಸವಲಿಂಗಪ್ಪನವರ ಬೆಂಬಲಕ್ಕೆ ಬರಲಿಲ್ಲ. ಮಲ ಹೊರುವ ಪದ್ಧತಿ ನಿಷೇಧ ಮಾಡಿದ ಒಬ್ಬ ದಲಿತ, ಬುದ್ಧಿವಂತ, ನಿಜ ನುಡಿದ ನಿಷ್ಠುರಿಗೆ ಇಂತಹ ಸ್ಥಿತಿ ಬಂತಲ್ಲ ಎಂದು ಕೊರಗಿದರು. ಇದಕ್ಕೆ ಪೂರಕವಾಗಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ದಲಿತರಿಗೆ ಬೇರೆ ಗ್ಲಾಸ್‌ನಲ್ಲಿ ಕಾಫಿ ಕೊಡುತ್ತಿದ್ದುದು, ವೇತನದಲ್ಲಿ ತಾರತಮ್ಯ ತೋರುತ್ತಿದ್ದುದು ಮತ್ತು ಅತ್ಯಂತ ಶ್ರಮದ ಕೆಲಸಗಳನ್ನು ಆಯ್ದು ದಲಿತರ ತಲೆಗೆ ಕಟ್ಟುತ್ತಿದ್ದುದು ಕೃಷ್ಣಪ್ಪನವರನ್ನು ಕಂಗೆಡಿಸಿತು. ಆಗ ಕೃಷ್ಣಪ್ಪನವರಿಗೆ, ದಲಿತರಿಗೆ ತಕ್ಷಣದ ತೊಂದರೆ ಮೇಲ್ಜಾತಿಯ ಜನರಿಂದಲ್ಲ, ಭೂ ಮಾಲಕರಾದ ಒಕ್ಕಲಿಗರು ಮತ್ತು ಲಿಂಗಾಯಿತರಿಂದ ಎನ್ನುವುದು ಅರ್ಥವಾಯಿತು. ‘ಏಕೆ ಇಷ್ಟು ದಿನ ಆದ್ರು ಹೀಗೆಯೇ ಇದೀವಿ, ಸಮಾಜ ಇನ್ನೆಷ್ಟು ದಿನ ನಮ್ಮನ್ನು ಹೀಗೆಯೇ ಇರಲಿಕ್ಕೆ ಬಯಸುತ್ತೆ’, ‘ನಮ್ಮ ಕಷ್ಟ ನೀಗಲಿಕ್ಕೆ ಕೃಷ್ಣ ಮತ್ತೆ ಮತ್ತೆ ಹುಟ್ಟಿ ಬರಲ್ಲ, ನಮಗೆ ನಾವೇ ಬೆಳಕು ಕಂಡುಕೊಳ್ಳಬೇಕು’ ಎಂದ ಕೃಷ್ಣಪ್ಪನವರು 13.10.1974ರಂದು, ದಲಿತರ ಸಾಮಾಜಿಕ ಸ್ಥಿತಿಗತಿಗಳ ಕುರಿತು ಚರ್ಚಿಸಲು ರಾಜ್ಯದ ದಲಿತರಿಗೆ ಕರೆ ಕೊಟ್ಟರು. ಆ ಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ದಲಿತ ಮುಖಂಡರು ಬಂದರು. ಆ ಸಭೆಯೇ ಡಿಎಸ್‌ಎಸ್ ಹುಟ್ಟಿಗೆ ಕಾರಣವಾಯಿತು. ಸಂಘಟನಾತ್ಮಕ ಸ್ವರೂಪಕ್ಕೆ ನಾಂದಿಯಾಡಿತು. ಅಂಬೇಡ್ಕರ್ ಚಿಂತನೆಗಳ ಅಡಿಯಲ್ಲಿ ಸಂಘಟನೆ ನೋಂದಣಿಯೂ ಆಯಿತು.
► ಕೃಷ್ಣಪ್ಪನವರ ಹೋರಾಟಗಳ ಬಗ್ಗೆ ..?
ಹೋರಾಟಕ್ಕೇ ಹುಟ್ಟಿದವರಂತಿದ್ದರು. ಸಿದ್ಲೀಪುರ ಭೂ ಹೋರಾಟ, ಚಂದ್ರಗುತ್ತಿ ಬೆತ್ತಲೆಸೇವೆ ವಿರುದ್ಧದ ಹೋರಾಟ, ಹಾವನೂರು ವರದಿ ಜಾರಿಗೆ ಹೋರಾಟ, ಬಿದರಕಾವಲು, ಕಾಳನಕಟ್ಟೆ, ಚಂದಗೋಡು, ಕ್ಯಾಸನಕೆರೆ, ದೇವಲಾಪುರಗಳ ಭೂ ಹೋರಾಟ, ನಾಗಸಂದ್ರ ಸತ್ಯಾಗ್ರಹ, ಶೇಷಗಿರಿಯಪ್ಪನ ಕೊಲೆ ವಿರುದ್ಧದ ಹೋರಾಟ, ಕರಡೂರು ವಸತಿಹೀನರಿಗಾಗಿ ಮನೆ ಚಳವಳಿ, ವಸತಿ ಶಾಲೆಗಳನ್ನು ತೆರೆಯಲು ಹೋರಾಟ, ಹುಣಸೇಕೋಟೆ ಅನಸೂಯಮ್ಮ, ಚಿಂತಾಮಣಿ ನಾಗಮ್ಮ, ಹಾಸನದ ತಾಯಮ್ಮರಂತಹ ಮಹಿಳೆಯರ ಸ್ವಾಭಿಮಾನ, ಸಮಾನತೆಗಾಗಿ ಹೋರಾಟ, ಮಂಡಲ್ ವರದಿ ಜಾರಿಗೆ ಚಳವಳಿ, ಹೊನ್ನಾಳಿಯ ದಲಿತರಿಗೆ ಕುಡಿಯುವ ಬಾವಿ ನೀರಿಗಾಗಿ ಹೋರಾಟ... ಅಯ್ಯೋ ಒಂದೇ ಎರಡೇ, ಲೆಕ್ಕವಿಲ್ಲದಷ್ಟು ಹೋರಾಟಗಳು, ಪ್ರತಿಭಟನೆಗಳು, ಧರಣಿಗಳು, ಚಳವಳಿಗಳಲ್ಲೇ ಅವರ ಜೀವನ ಸವೆದುಹೋಗಿದೆ. ಸಿದ್ಲೀಪುರ ಭೂ ಹೋರಾಟವಂತೂ ವರ್ಷಾನುಗಟ್ಟಲೆ ನಡೆಯಿತು. ಚಂದ್ರಗುತ್ತಿ ಬೆತ್ತಲೆಸೇವೆ ವಿರೋಧಿಸುವ ಭರಾಟೆಯಲ್ಲಿ ಅವರ ಬೆನ್ನಿಗೆ ಭಾರೀ ಪೆಟ್ಟು ಬಿತ್ತು. ಅವರನ್ನು ಮುಗಿಸಲು ಸಂಚು ಕೂಡ ಮಾಡಿದ್ದರು. ಸಿಓಡಿ ಪೊಲೀಸರೇ ಅವರನ್ನು ಬಚಾವು ಮಾಡಿದರು. ಬೆತ್ತಲೆಸೇವೆ ವಿರೋಧಿಸಲು ದೇಶವಿದೇಶಗಳಿಂದ ಜನ ಬಂದಿದ್ದರು. ಮೊದಲ ದಿನ ಏನೂ ಆಗಲಿಲ್ಲ. ಎರಡನೇ ದಿನ ದೊಡ್ಡ ಮಟ್ಟದ ಗಲಾಟೆಯಾಗಿ ಹಿಂಸೆಗೆ ತಿರುಗಿತು. ಕೃಷ್ಣಪ್ಪನವರಿಗೆ ಹೇಳದೆ ಖುದ್ದಾಗಿ ಭಾಗವಹಿಸಲು ನಾನೂ ಹೋಗಿದ್ದೆ. ಮರೆಯಲ್ಲಿ ನಿಂತು ನೋಡುತ್ತಿದ್ದೆ. ಹೆಣ್ಣುಮಗಳೊಬ್ಬಳು ಬೆತ್ತಲೆಯಾಗಿ, ಸನ್ನಿಗೆ ಒಳಗಾದಂತೆ ಸುಮ್ಮನೆ ಓಡುತ್ತಿದ್ದಳು. ಕಂಕುಳಲ್ಲಿದ್ದ ಹಸುಗೂಸು ಮೊಲೆ ಚೀಪುತ್ತಿತ್ತು. ಆ ದೃಶ್ಯವನ್ನು ನಾನು ಇಂದಿಗೂ ಮರೆಯಲಾರೆ. ಅಂತಹ ಅಮಾನವೀಯ ಭೀಕರ ಬೀಭತ್ಸ ನೋಡಿ ಗಾಬರಿಗೊಂಡಿದ್ದೆ. ವಿಶ್ವ ಹಿಂದೂ ಪರಿಷತ್ತಿನ ಜನ ಬೆತ್ತಲೆ ಸೇವೆಯಲ್ಲಿ ಪಾಲ್ಗೊಳ್ಳುವವರಿಗೆ ನೀರು-ಮಜ್ಜಿಗೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಕೃಷ್ಣಪ್ಪನವರು ಅದು ನಿಲ್ಲಬೇಕು ಎಂದು ಶಕ್ತಿಮೀರಿ ಶ್ರಮಿಸುತ್ತಿದ್ದರು. ಚೆನ್ನವೀರಪ್ಪನವರ ಆಯೋಗದ ಮುಂದೆ ಹಾಜರಾದರು, ಕೋರ್ಟ್ ಕಟಕಟೆ ಹತ್ತಿ ಸಾಕ್ಷಾಧಾರಗಳನ್ನು ನೀಡಿದರು. ಇವತ್ತು ಹಿಂದಿರುಗಿ ನೋಡಿದರೆ, ಬದುಕು ಸಾರ್ಥಕ, ಧನ್ಯಎನಿಸುತ್ತದೆ. ಅವರ ಆ ಹೋರಾಟಗಳಿಗೆ ಫಲ ಈಗ ಕಾಣುತ್ತಿದೆ.
►ದಲಿತ ಸಂಘರ್ಷ ಸಮಿತಿ ಚೂರಾಗಿದ್ದ ಬಗ್ಗೆ..?
ಹೌದು. ಕೃಷ್ಣಪ್ಪನವರು ಡಿಎಸ್‌ಎಸ್ ಕಟ್ಟಿದಾಗ ರಾಜಕಾರಣದಿಂದ ದೂರವಿರಬೇಕೆಂದು ಬಯಸಿದ್ದರು. ಅದರಲ್ಲೂ ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರಭಾವಿತರಾದ್ದರಿಂದ ಕಾಂಗ್ರೆಸ್ ಪಕ್ಷದಿಂದ ಸಮಾನ ಅಂತರ ಕಾಪಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು. ಆದರೆ 1983ರಲ್ಲಿ ಅಧಿಕಾರಕ್ಕೇರಿದ ಜನತಾ ಪಕ್ಷದ ರಾಮಕೃಷ್ಣ ಹೆಗಡೆ, ದಲಿತರನ್ನು ಪಕ್ಷದತ್ತ ಸೆಳೆಯಲು ಕೆಲ ದಲಿತ ನಾಯಕರಿಗೆ ಸಣ್ಣಪುಟ್ಟ ಅಧಿಕಾರದ ರುಚಿ ಹತ್ತಿಸಿದರು. ಮುಂದುವರಿದು, 1996ರಲ್ಲಿ ಡಿಎಸ್‌ಎಸ್ ರಾಜಕೀಯ ಪಕ್ಷಕ್ಕೆ ಬಹಿರಂಗವಾಗಿಯೇ ಬೆಂಬಲಿಸುವ ಮೂಲಕ ಚೂರಾಯಿತು. ಆಗ ಕೃಷ್ಣಪ್ಪನವರು ಗಂಭೀರ ಚಿಂತನೆಗಿಳಿದು, ರಾಜಕೀಯ ಅಧಿಕಾರವಿಲ್ಲದಿದ್ದರೆ ದಲಿತರ ಉದ್ಧಾರ ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದರು. ಆದರೆ ಯಾವ ಪಕ್ಷಕ್ಕೆ ಹೋಗುವುದು ಎಂದಾಗ, ಕಾಂಗ್ರೆಸ್ ಮತ್ತು ಜನತಾ ಪಕ್ಷ ದಲಿತರಿಗೆ ಮೋಸ ಮಾಡಿವೆ, ಬೇಡವೆಂದು ನಿರ್ಧರಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಆರೆಸ್ಸೆಸ್ ಬೆಂಬಲವಾಗಿ ನಿಂತಿರುವಂತೆ, ಆ ಪಕ್ಷದ ರೂಪು-ರೇಷೆಯಲ್ಲಿ ಆರೆಸ್ಸೆಸ್‌ನ ಪಾತ್ರವಿರುವಂತೆ, ಬಿಎಸ್ಪಿಗೆ ಡಿಎಸ್‌ಎಸ್ ಬೆಂಬಲವಾಗಿ ನಿಲ್ಲುವುದು ರಾಜಕೀಯ ವಾಗಿ ಸರಿಯಾದ ನಡೆ ಎಂದು ಅಭಿಪ್ರಾಯಪಟ್ಟರು. ಮತ್ತು ವಿಧ್ಯುಕ್ತವಾಗಿ ಬಿಎಸ್ಪಿ ಸೇರಿದರು. ಕಾನ್ಶಿರಾಮ್ ಕರೆಸಿ ಸಮಾವೇಶ ಏರ್ಪಡಿಸಿದರು. 1997ರಲ್ಲಿ ಚುನಾವಣೆಗೆ ನಿಂತು ಸೋತರು. ಆಗ ಕೃಷ್ಣಪ್ಪನವರಿಗೆ ಚಳವಳಿ-ಹೋರಾಟವೇ ಬೇರೆ ಚುನಾವಣಾ ರಾಜಕಾರಣವೇ ಬೇರೆ ಎಂಬುದು ಅರ್ಥವಾಯಿತು. ಆನಂತರ ಅಹಿಂದ ಒಕ್ಕೂಟ ರಚಿಸಿ, ದೊಡ್ಡ ಮಟ್ಟದಲ್ಲಿ ಸಮಾವೇಶ ಸಂಘಟಿಸಿ ಜನರನ್ನು ಸಜ್ಜುಗೊಳಿಸಲು ನೋಡಿದರು.
► ಡಿಎಸ್‌ಎಸ್ ಹೀಗಾಗಿದ್ದರ ಬಗ್ಗೆ ವಿಷಾದವೇನಾದರೂ...?
ಇಲ್ಲ... ನಾನು ಇದನ್ನು ಪಾಸಿಟಿವ್ ಮತ್ತು ನೆಗಟಿವ್... ಎರಡೂ ದೃಷ್ಟಿಕೋನದಿಂದ ನೋಡಲು ಇಷ್ಟಪಡುತ್ತೇನೆ. ಡಿಎಸ್‌ಎಸ್ ಸಂಘಟನೆ ನಮ್ಮಂಗೆ. ಅಂದರೆ ನಮಗೆ ಯೌವನ, ಮಧ್ಯವಯಸ್ಸು, ವೃದ್ಧಾಪ್ಯದಂತೆಯೇ, ಸಂಘಟನೆ ಕೂಡ ಯೌವನಾವಸ್ಥೆಯಲ್ಲಿ ಮೆರೆದು, ಮಧ್ಯವಯಸ್ಸಿನಲ್ಲಿ ಸ್ವಲ್ಪ ಕಳೆಗುಂದಿ, ಈಗ ಸುಸ್ತಾದಂತೆ ಕಾಣುತ್ತಿರಬಹುದು. ಮತ್ತೊಂದು ರೀತಿಯಲ್ಲಿ ಡಿಎಸ್‌ಎಸ್ ಒಂದು ಬೃಹತ್ ಆಲದ ಮರದಂತೆ. ದಿನ ಕಳೆದಂತೆ ಮರ ಬೆಳೆದಂತೆ, ಕೊಂಬೆಗಳಾಗಿ ಟಿಸಿಲೊಡೆದು, ಹಲವಾರು ರೆಂಬೆ ಕೊಂಬೆಗಳಾಗಿ ಹರಿದು ಹಂಚಿಹೋಗಿರಬಹುದು. ಆ ರೆಂಬೆ ಕೊಂಬೆಗೊಬ್ಬರಂತೆ ನಾಯಕರು ಹುಟ್ಟಿಕೊಂಡು, ಸ್ವಲ್ಪ ಸ್ವಾರ್ಥ ಇಣುಕಿರಬಹುದು. ಅದರಿಂದ ನಾಯಕರು ಬಚಾವಾಗಿ ಸಮುದಾಯ ಸೊರಗಿರಬಹುದು. ಇದು ಎಲ್ಲ ಸಂಘಟನೆಗಳಲ್ಲೂ ಸಹಜ. ನಾನಂತೂ ಕೃಷ್ಣಪ್ಪನವರ ಆಶಯಗಳನ್ನಿಟ್ಟುಕೊಂಡ ಎಲ್ಲ ಸಂಘಟನೆಗಳೊಂದಿಗೂ ಇದ್ದೇನೆ. ಅಲ್ಲಿ ದಲಿತ ಸಮುದಾಯಕ್ಕೆ ಒಳ್ಳೆಯದು ಆಗುತ್ತದೆಯೆಂದಾಗ ಅದನ್ನು ಬೆಂಬಲಿಸಿದ್ದೇನೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈಗ ಕೆಲವು ಸಭೆ, ಸಮಾರಂಭಗಳಲ್ಲಿ ಎಲ್ಲ ಸಂಘಟನೆಗಳನ್ನು ಒಂದುಗೂಡಿಸಬೇಕು, ಸಮನ್ವಯ ಸಮಿತಿ ರಚಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಒಳ್ಳೆಯದು, ನೋಡೋಣ.
► ಕೃಷ್ಣಪ್ಪನವರಿಲ್ಲದ ಈಗ...?
ಅವರ ಆಶಯದಂತೆಯೇ ಎಲ್ಲ ಜಾತಿಯ ಬಡವರ ಪರವಾಗಿ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರ ಅನುಪಸ್ಥಿತಿ ಬಾಧಿಸುವುದಿಲ್ಲ. ಸ್ವಂತಕ್ಕಾಗಿ ಏನಾದರೂ ಮಾಡ್ಕೋಬೇಕು ಅಂತ ಆಗಲೂ ಅನಿಸಲಿಲ್ಲ, ಈಗಲೂ ಇಲ್ಲ. ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ನಮ್ಮಿಂದ ಆಗಬೇಕಿದೆ. ಈ ಸಮಾಜ ಎಲ್ಲವನ್ನು ಕೊಟ್ಟಿದೆ, ಇರು ವಷ್ಟು ದಿನ ಈ ಸಮಾಜದ ಋಣ ತೀರಿಸುವಷ್ಟು ಶಕ್ತಿ ಕೊಟ್ಟರೆ ಸಾಕು.
ಡಿಎಸ್‌ಎಸ್ ಒಂದು ಬೃಹತ್ ಆಲದ ಮರದಂತೆ. ದಿನ ಕಳೆದಂತೆ ಮರ ಬೆಳೆದಂತೆ, ಕೊಂಬೆಗಳಾಗಿ ಟಿಸಿಲೊಡೆದು, ಹಲವಾರು ರಂಬೆ ಕೊಂಬೆಗಳಾಗಿ ಹರಿದು ಹಂಚಿಹೋಗಿರಬಹುದು. ಆ ರಂಬೆ ಕೊಂಬೆಗೊಬ್ಬರಂತೆ ನಾಯಕರು ಹುಟ್ಟಿಕೊಂಡು, ಸ್ವಲ್ಪ ಸ್ವಾರ್ಥ ಇಣುಕಿರಬಹುದು. ಅದರಿಂದ ನಾಯಕರು ಬಚಾವಾಗಿ ಸಮುದಾಯ ಸೊರಗಿರಬಹುದು. ಇದು ಎಲ್ಲ ಸಂಘಟನೆಗಳಲ್ಲೂ ಸಹಜ. ನಾನಂತೂ ಕೃಷ್ಣಪ್ಪನವರ ಆಶಯಗಳನ್ನಿಟ್ಟುಕೊಂಡ ಎಲ್ಲ ಸಂಘಟನೆಗಳೊಂದಿಗೂ ಇದ್ದೇನೆ. ಅಲ್ಲಿ ದಲಿತ ಸಮುದಾಯಕ್ಕೆ ಒಳ್ಳೆಯದು ಆಗುತ್ತದೆಂದಾಗ ಅದನ್ನು ಬೆಂಬಲಿಸಿದ್ದೇನೆ.