ವಾಸ್ತವಕ್ಕೆ ಮುಖಾಮುಖಿಯಾಗುವ ಕತೆಗಳು...

Update: 2017-06-12 18:27 GMT

ದು. ಸರಸ್ವತಿ ಬರಹಗಳು ಚಳವಳಿ, ಹೋರಾಟದ ಮೂಲಕ ಹುಟ್ಟಿದವುಗಳು. ನಗರ ಪ್ರದೇಶದ ತಳಸ್ತರದ ಕಾರ್ಮಿಕರ ಬದುಕನ್ನು ಅದರಲ್ಲೂ ಮಹಿಳಾ ಕಾರ್ಮಿಕರ ಬದುಕನ್ನು ಹತ್ತಿರದಿಂದ ಬಲ್ಲ ಸರಸ್ವತಿ ಕತೆಗಳನ್ನು ಬರೆದಾಗ ಆ ಪಾತ್ರಗಳು ಮಾತುಗಳಾಗಿ ಒಂದಲ್ಲ ಒಂದು ಕತೆಗಳಲ್ಲಿ ಪ್ರವೇಶಿಸಿದರೆ ಅದು ಅವರ ತಪ್ಪಲ್ಲ. ಆದುದರಿಂದಲೇ ಕಲೆಗಾಗಿ ಕಲೆ ಎನ್ನುವುದರಿಂದ ಸರಸ್ವತಿ ಅವರ ಕತೆಗಳು ದೂರ. ಅವೇನಿದ್ದರೂ ವಾಸ್ತವದೊಂದಿಗೆ, ವರ್ತಮಾನದ ರಾಜಕೀಯದೊಂದಿಗೆ ಜನರ ಬದುಕನ್ನು ಮುಖಾಮುಖಿ ಮಾಡುವಂತಹದು. ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಇಲ್ಲಿರುವ ಕತೆಗಳು ದಲಿತ ಸಂವೇದನೆಯನ್ನು ಹೊಂದಿದೆಯೋ ಅಥವಾ ನಗರಗಳಲ್ಲಿ ದಲಿತರ, ಶೋಷಿತರ ಸಮಸ್ಯೆಗಳನ್ನು ಭಿನ್ನವಾಗಿ ನೋಡುವ ಮೂಲಕ ಹೊಸತೊಂದು ನಗರ ಕಾರ್ಮಿಕ ಸಂವೇದನೆಯನ್ನು ಕಟ್ಟಿ ಕೊಡುತ್ತದೆಯೋ ಎಂಬ ಅನಿಸಿಕೆ ನಮ್ಮನ್ನು ಕಾಡುತ್ತದೆ. ಸಿದ್ರಾಮ ಮತ್ತು ಯಲ್ಲಮ್ಮ ಅವರ ಪ್ರೇಮವನ್ನು ಕೇಂದ್ರ ವಾಗಿಟ್ಟುಕೊಂಡ ‘ಗುರುತಿಲ್ಲದ ವಿಳಾಸ’ ಕತೆಯು, ಜಾತಿಯ ಪೇಡಂಭೂತವನ್ನಿಟ್ಟುಕೊಂಡು ಬರೆದಿರುವುದು. ನಗರ ಮತ್ತು ಹಳ್ಳಿ ಬದುಕುಗಳ ಸಂಕೀರ್ಣ, ಎರಡೂ ಕಡೆಗಳಲ್ಲೂ ಶೋಷಣೆಯ ಬೇರೆ ಬೇರೆ ಮುಖಗಳು ಹೇಗೆ ಸುತ್ತಿಕೊಂಡಿವೆ ಎನ್ನುವುದನ್ನು ಹೇಳುತ್ತದೆ. ಹಾಗೆಯೇ ನಗರ ಪ್ರದೇಶದ ಪೌರಕಾರ್ಮಿಕರ ಪಾಡನ್ನು ‘ಬಚ್ಚೀಸು’ ಮತ್ತು ‘ಹೊನ್ನಹೇಲು’ ಕತೆಗಳು ತೆರೆದಿಡುತ್ತವೆ. ಪೌರಕಾರ್ಮಿಕರ ಹೋರಾಟದಲ್ಲೂ ಸಕ್ರಿಯರಾಗಿರುವ ಲೇಖಕಿಗೆ ಆ ಬದುಕನ್ನು ಅವರ ವೈಯಕ್ತಿಕ ನೋವು ನಲಿವುಗಳನ್ನು ಕತೆಯಲ್ಲಿ ಕಟ್ಟಿಡಲು ಸಾಧ್ಯವಾಗಿದೆ. ಈ ಎರಡೂ ಕತೆಗಳು ಒಂದಕ್ಕೊಂದು ಬೆಸೆದುಕೊಂಡಂತಿದೆ. ಪುಟ್ಟ ಬಾಲಕಿಯ ಮೂಲಕ ಅಸೃಶ್ಯತೆಯ ಆಳವನ್ನು ಕಟ್ಟಿಕೊಡಲು ‘ನಮ್ಮನೆ ಗೌರಮ್ಮನೆ ಇಷ್ಟ’ ಕತೆಯ ಮೂಲಕ ಸರಸ್ವತಿ ಪ್ರಯತ್ನಿಸುತ್ತಾರೆ. ಕವಿ ಪ್ರಕಾಶನ ಹೊನ್ನಾವರ ಇವರು ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು ಸಂಕಲನಕ್ಕಾಗಿ 94826 42147 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News