ಬಾಳೆ ತೋಟಗಳು ಶಿಶುಗಳ ಉಸಿರು ನಿಲ್ಲಿಸುತ್ತಿವೆಯೇ?

Update: 2017-06-14 10:57 GMT

ಕೇರಳದ ಅಟ್ಟಪಾಡಿಯ ಆದಿವಾಸಿಗಳು ತೋಟಗಳಲ್ಲಿ ಕೀಟನಾಶಕಗಳ ಬಳಕೆ ತಮ್ಮ ಮಕ್ಕಳಿಗೆ ಹಾನಿವುಂಟು ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಈಗ ಸರಕಾರದ ಅಧಿಕಾರಿಯೊಬ್ಬರು ಈ ಕುರಿತು ಒಂದು ವಿಚಾರಣೆ ನಡೆಯಬೇಕು ಎಂದಿದ್ದಾರೆ.

ಮೇ 14ರಂದು ಅವಧಿಗೆ ಮೊದಲೇ ಜನಿಸಿದ ಆಕೆ ಜನಿಸುವಾಗ ಆಕೆಯ ತೂಕ ಕೇವಲ 1.75 ಕೆಜಿ. ಜನಿಸುವಾಗಲೇ ಆ ಮಗು ಜೆಜುನಲ್ ಅಟ್ರೇಸಿಯಾ ಎಂಬ ದೋಷ ಹೊಂದಿದ್ದಳು. ಅಂದರೆ ಸಣ್ಣ ಕರಳನ್ನು ಜಠರದೊಂದಿಗೆ ಜೋಡಿಸುವ ಪೊರೆ ಭಾಗಶಃ ಅಥವಾ ಸಂಪೂರ್ಣವಾಗಿ ಇಲ್ಲದಿರುವುದು. ಮಗುವಿನ ಉಸಿರಾಟದ ತೊಂದರೆಯನ್ನು ಗಮನಿಸಿದ ವೈದ್ಯರು ಮಗುವನ್ನು ತುರ್ತಾಗಿ ತ್ರಿಶೂರ್ ಮೆಡಿಕಲ್ ಕಾಲೇಜಿಗೆ ಒಯ್ದರು. ಬೊಮ್ಮಿಯಂಪಾಡಿ ಹಳ್ಳಿಯ ಅನು ಮತ್ತು ಸೆಲ್ವರಾಜ್‌ರ ಆ ಮಗಳಿಗೆ ಒಂದು ಹೆಸರಿಡುವ ಮೊದಲೇ ಆಕೆ ಮೇ 25ರಂದು ತೀರಿಕೊಂಡಳು.

ಮೂರು ಗ್ರಾಮ ಪಂಚಾಯತ್‌ಗಳಲ್ಲಿ ವ್ಯಾಪಿಸಿರುವ ಅಟ್ಟಪಾಡಿ ಕೇರಳದ ಪಾಲಕ್ಕಾಡು ಜಿಲ್ಲೆಯಲ್ಲಿರುವ ಬೆಟ್ಟ ಪ್ರದೇಶಗಳ ಒಂದು ಬ್ಲಾಕ್. ಇಲ್ಲಿಯ 192 ‘ಊರು’ಗಳಲ್ಲಿ 30,658 ಆದಿವಾಸಿಗಳು ವಾಸಿಸುತ್ತಿದ್ದಾರೆ. ಅತ್ಯಂತ ಕಡಿಮೆ ಶಿಶು ಮರಣ 1,000 ಜನನಗಳಿಗೆ ಶೇ. 6ರಷ್ಟು ಇರುವ ಒಂದು ರಾಜ್ಯದಲ್ಲಿ ಅಟ್ಟಪಾಡಿ ಒಂದು ಅಪವಾದ. ಜನವರಿ ಮತ್ತು ಮೇ ತಿಂಗಳ ನಡುವೆ ಅಟ್ಟಪಾಡಿಯ ಆದಿವಾಸಿ ತಾಯಂದಿರು ಹೆತ್ತ 210 ಶಿಶುಗಳಲ್ಲಿ 7 ಶಿಶುಗಳು ಮರಣ ಹೊಂದಿದವು. ಇದು ಪ್ರತೀ 1000 ಜನನಗಳಿಗೆ ಶೇ. 33ರಷ್ಟು ಶಿಶು ಮರಣಕ್ಕೆ ಸಮನಾಗುತ್ತದೆ. ಮೇ ಒಂದೇ ತಿಂಗಳಿನಲ್ಲಿ 4 ಸಾವುಗಳು ಸಂಭವಿಸಿದವು.

ಬಾಳೆ ಮತ್ತು ಅಡಿಕೆ ತೋಟಗಳಲ್ಲಿ ರೈತರು ನಿಷೇಧಿತ ಕೀಟನಾಶಕ ಗಳನ್ನು ಬಳಸುತ್ತಿರುವ ಬೊಮ್ಮಿಯಂಪಾಡಿ-ಚೀರಕ್ಕದಾವು ಪ್ರದೇಶದಲ್ಲಿ ಅನು -ಸೆಲ್ವರಾಜ್ ವಾಸಿಸುತ್ತಿದ್ದಾರೆ. ಈ ಪ್ರದೇಶದಿಂದ ಬರುವ ಹಲವು ದಂಪತಿಗಳಿಗೆ ಜನಿಸಿದ ಮಕ್ಕಳಿಗೆ ಆಜನ್ಮ ಕಾಯಿಲೆ ಗಳಿದ್ದವು. ದೈಹಿಕ ನ್ಯೂನತೆಗಳಿದ್ದವು. ನವಜಾತ ಶಿಶುಗಳ ಆರೋಗ್ಯ ಸಮಸ್ಯೆಗೆ ಕೀಟನಾಶಕಗಳ ಬಳಕೆ ಕಾರಣವೇ ಎಂದು ಖಚಿತ ಪಡಿಸಿಕೊಳ್ಳಲು ಒಂದು ಸಮಗ್ರ ಅಧ್ಯಯನ ನಡೆಸಬೇಕಾಗಿದೆ ಎಂದು ಅಟ್ಟಪಾಡಿಯ ಆದಿವಾಸಿ ಆರೋಗ್ಯ ಅಧಿಕಾರಿ ಡಾ. ಪ್ರಭುದಾಸ್ ಮೇ 27ರಂದು ಹಕ್ಕೊತ್ತಾಯ ಮಾಡಿದರು.

ಸರಕಾರಿ ಅಧಿಕಾರಿಯೊಬ್ಬ ಆದಿವಾಸಿಗಳ ಆತಂಕಗಳಿಗೆ ಧ್ವನಿಗೂಡಿಸಿದ್ದು ಇದೇ ಮೊದಲ ಬಾರಿ. ಆ ಪ್ರದೇಶದ ಮಣ್ಣು ಹಾಗೂ ನೀರನ್ನು ಕೀಟನಾಶಕಗಳು ಮಲಿನಗೊಳಿಸುತ್ತಿವೆ ಎಂದು ಆದಿವಾಸಿಗಳು ಲಾಗಾಯ್ತಿನಿಂದ ಬಾಳೆ ತೋಟಗಳನ್ನು ಬೈಯುತ್ತಾ ಬಂದಿದ್ದಾರೆ. ಅವರು ಹೇಳುವಂತೆ ಗರ್ಭಪಾತ ಮತ್ತು ಶಿಶು ಮರಣಗಳ ಹೆಚ್ಚಳಕ್ಕೆ ಕೀಟನಾಶಕಗಳೇ ಕಾರಣ.

ಕೇರಳದಲ್ಲಿ ಕೀಟನಾಶಕಗಳ ಪರಿಣಾಮದ ಬಗ್ಗೆ ಯಾವುದೇ ಮುಖ್ಯ ಅಧ್ಯಯನ ನಡೆದಿಲ್ಲವಾದರೂ ಪರಿಸರವಾದಿಗಳ ಒಂದು ತಂಡವಾಗಿರುವ ಥಾನಲ್, ರಾಜ್ಯದ ಬಾಳೆ ತೋಟಗಳಲ್ಲಿ ಮೊನೊಕ್ರೊಟೊಫೋಸ್‌ನ ವ್ಯಾಪಕ ಬಳಕೆಯನ್ನು ಪತ್ತೆ ಹಚ್ಚಿದೆ. ಈ ರಾಸಾಯನಿಕವು ವಿಪರೀತ ವಿಷಕಾರಿ ಮತ್ತು ಪರಿಸರ ಮಾಲಿನ್ಯ ತಡೆಯಬೇಕಾದರೆ ಇದನ್ನು ತುಂಬಾ ಜಾಗರೂಕತೆಯಿಂದ ಬಳಸಬೇಕೆಂದು ಆಹಾರ ಮತ್ತು ಕೃಷಿ ಸಂಘಟನೆ ಎಚ್ಚರಿಕೆ ನೀಡಿದೆ. ತಮ್ಮ ಪ್ರದೇಶದಲ್ಲಿ ಜಲಶುದ್ಧೀಕರಣ ಇಲ್ಲದಿರುವುದರಿಂದ ತಾವು ಜಲಮಾಲಿನ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು ಎಂದು ಅಟ್ಟಪಾಡಿಯ ಆದಿವಾಸಿಗಳು ಹೇಳುತ್ತಾರೆ.

2013 ಮತ್ತು 14ರ ಎರಡು ವರ್ಷಗಳ ಅವಧಿಯಲ್ಲಿ ಅಟ್ಟಪಾಡಿಯ ಕನಿಷ್ಠ 58 ಶಿಶುಗಳು ಮರಣ ಹೊಂದಿದವು. ಸರಕಾರ ಅಲ್ಲಿ ಆಸ್ಪತ್ರೆಯೊಂದನ್ನು ತೆರೆಯಿತು. ಆದಿವಾಸಿಗಳಿಗಾಗಿ ಕೈಗೊಂಡ ವಿಶೇಷ ಯೋಜನೆಗಳಲ್ಲಿ ಇದೂ ಒಂದಾಗಿತ್ತು. 2015-16ರಲ್ಲಿ ಸಾವುಗಳ ಸಂಖ್ಯೆ ಕಡಿಮೆಯಾಯಿತಾದರೂ ಈ ವರ್ಷದ ಮೊದಲ 5 ತಿಂಗಳುಗಳಲ್ಲಿ 7 ಶಿಶುಗಳು ಮರಣ ಹೊಂದಿದವು.

ಹೊಸ ನಗದು ಬೆಳೆಯ ಆಗಮನ ಒಂದು ಕಾಲದಲ್ಲಿ ಅಟ್ಟಪಾಡಿ ಆದಿವಾಸಿಗಳ ಭೂಮಿಯಾ ಗಿತ್ತು. 1951ರಲ್ಲಿ ಅಲ್ಲಿಯ ಜನಸಂಖ್ಯೆಯ ಶೇ. 90ರಷ್ಟು ಅವರೇ ಆಗಿದ್ದರು. ಆ ಬಳಿಕ ನೆರೆಯ ತಮಿಳುನಾಡು ಮತ್ತು ಕೇರಳದ ಇತರ ಭಾಗಗಳಿಂದ ಬಂದು ನೆಲೆಸಿದುದರ ಪರಿಣಾಮವಾಗಿ ಆದಿವಾಸಿಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಯಿತು. 2011ರ ಜನಗಣತಿಯ ಪ್ರಕಾರ ಅಲ್ಲಿನ ಜನಸಂಖ್ಯೆಯ ಶೇ. 34ರಷ್ಟು ಮಾತ್ರ ಆದಿವಾಸಿಗಳಿದ್ದಾರೆ.

ಆದಿವಾಸಿಗಳ ಬಳಿ ಭೂಮಾಲಕತ್ವದ ದಾಖಲೆಗಳಿಲ್ಲವಾದ್ದರಿಂದ, ಅವರು ಹೇಳುವಂತೆ, ಅಲ್ಲಿಗೆ ಬಂದು ನೆಲೆ ನಿಂತ ವಲಸಿಗರು ಆದಿವಾಸಿಗಳ ಜಮೀನನ್ನು ವಶಪಡಿಸಿಕೊಳ್ಳಲು ಸಮರ್ಥರಾದರು. ಆದಿವಾಸಿಗಳು ಜೋಳ, ರಾಗಿ, ದ್ವಿದಳ ಧಾನ್ಯ ಹಾಗೂ ಭತ್ತ ಬೆಳೆಯುತ್ತಿದ್ದರು. ವಲಸಿಗರು ಬಾಳೆ ಬೆಳೆಯಲಾರಂಭಿಸಿದರು.

ಬಹಳ ಸಮಯದಿಂದ ಭವಾನಿ ನದಿಯ ದಡಗಳಲ್ಲಿ ಬಾಳೆ ಬೆಳೆಯಲಾಗುತ್ತಿತ್ತು. ಆದರೆ ದಡಗಳ ಸಮೀಪ ಕೃಷಿಭೂಮಿ ಕಡಿಮೆಯಾದಾಗ ರೈತರು ಬೆಟ್ಟಗಳ ಕಡೆಗೆ ನಡೆದರು. ಜಮೀನಿಗೆ ನೀರಾವರಿ ಮಾಡಲು ಅವರು, ಹೆಚ್ಚು ಶಕ್ತಿಯ ಮೋಟಾರ್ ಪಂಪ್‌ಗಳನ್ನು ಹಾಕಿಸಿದರು. ಆದಿವಾಸಿಗಳು ಹೇಳುವಂತೆ ಈ ಪಂಪ್‌ಗಳು ನದಿ ನೀರನ್ನು ಖಾಲಿ ಮಾಡಿದವು.ಹೆಚ್ಚು ಬೆಳೆ ಬರುವುದಕ್ಕಾಗಿ ರೈತರು ಕೀಟನಾಶಕಗಳನ್ನು ಹಾಗೂ ಗೊಬ್ಬರಗಳನ್ನು ಬಳಸಿದರು. ಹಲವು ವರ್ಷಗಳ ಅವಧಿಯಲ್ಲಿ ಕೀಟನಾಶಕಗಳ ರಾಸಾಯನಿಕಗಳು ಮಣ್ಣಿನೊಂದಿಗೆ ಬೆರೆತು ತಮ್ಮ ನೀರಿನ ಮೂಲಗಳನ್ನು ವಿಷಮಯಗೊಳಿಸಿದವೆಂದು ಆದಿವಾಸಿಗಳು ಹೇಳುತ್ತಾರೆ.

ವೀಥಿಯೂರಿನ (ಹಳ್ಳಿಯ) ನಾಯಕ ರವೀಂದ್ರನ್, ‘‘ಧನದಾಹಿ ಬಾಳೆ ಬೆಳೆಯುವವರನ್ನು ‘ರೈತ’ರೆಂದು ಕರೆಯುವುದು ತಪ್ಪು. ಅವರು ಮಣ್ಣಿಗೆ ಮತ್ತು ನೀರಿಗೆ ಗೌರವ ಕೊಡುವುದಿಲ್ಲ. ಅವರ ಏಕೈಕ ಉದ್ದೇಶ ಲಾಭ ಗಳಿಸುವುದು’’ ಎನ್ನುತ್ತಾರೆ. ಒಂದು ಎಕರೆ ಜಮೀನಿನಲ್ಲಿ ಬೆಳೆಸುವ 1,000 ಬಾಳೆ ಗಿಡಗಳಿಂದ ಅವರು ಎರಡು ಲಕ್ಷ ರೂ. ಸಂಪಾದಿಸುತ್ತಾರೆ. ಭವಾನಿ ನದಿ ದಡದಲ್ಲಿರುವ ಕಾರಯೂರಿನಲ್ಲಿ 10 ಎಕರೆ ಬಾಳೆ ತೋಟದಲ್ಲಿ ಆದಿವಾಸಿ ಕೂಲಿಕಾರ್ಮಿಕನಾಗಿರುವ ನಂಜನ್ ‘‘ಆ ತೋಟದಲ್ಲಿ 10,000 ಬಾಳೆ ಗಿಡಗಳಿವೆ ಮತ್ತು ಮುಂದಿನ ತಿಂಗಳ ಅಂತ್ಯದ ವೇಳೆಗೆ ತೋಟದಿಂದ 15,000 ಕಿಲೊ ಬಾಳೆ ಬೆಳೆ ಬರಬಹುದು. ನನ್ನ ಮಾಲಕರು ಕನಿಷ್ಠ 25 ಲಕ್ಷ ರೂ. ಲಾಭ ಗಳಿಸಲಿದ್ದಾರೆ’’ ಎನ್ನುತ್ತಾರೆ.

 ಹೆಚ್ಚಿನ ಬಾಳೆ ಬೆಳೆಗಾರರು ಅಟ್ಟಪಾಡಿಯಲ್ಲಿರುವುದಿಲ್ಲ. ಅವರು ತೋಟಗಳನ್ನು ಮಾಡಲು, ನಡೆಸಲು ಆದಿವಾಸಿಗಳನ್ನು ನೇಮಿಸಿಕೊಳ್ಳುತ್ತಾರೆ.

ಆದಿವಾಸಿಗಳಲ್ಲಿರುವ ವಿಪರೀತ ಮದ್ಯಪಾನದ ಸಮಸ್ಯೆ ನೀಗಿಸಲು 2001ರಲ್ಲಿ ರಚಿಸಲಾದ ಮಹಿಳೆಯರ ಸಂಘಟನೆಯಾಗಿರುವ ‘ತಾಯ್ ಕುಲ ಸಂಗಮ್’ನ ಕಾರ್ಯದರ್ಶಿ 57ರ ಹರೆಯದ ಮರುದಿ ಬಾಳೆ ತೋಟಗಳಿಂದ ಸುತ್ತುವರಿದಿರುವ ಸಂಬರ್ ಕುಡಿ ಎಂಬ ಹಳ್ಳಿಯ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಬಾಳೆ ತೋಟಗಳಲ್ಲಿ ಕೀಟನಾಶಕಗಳ ಬಳಕೆಯೇ ಗರ್ಭಿಣಿ ಸ್ತ್ರೀಯರ ಸಮಸ್ಯೆಗಳಿಗೆ ಮತ್ತು ನವಜಾತ ಶಿಶುಗಳ ಹಾಗೂ ಮಕ್ಕಳ ಸಾವಿಗೆ ಕಾರಣವೆಂದು ಆಕೆ ದೃಢವಾಗಿ ನಂಬಿದ್ದಾರೆ.

ಪಟ್ಟಿಮಲಂನಲ್ಲಿ ವಾಸಿಸುವ ಆದಿವಾಸಿ ಕಾರ್ಯಕರ್ತ ಹಾಗೂ ಶಿಕ್ಷಕ ಆರ್.ರಂಗನ್ ಕೂಡಾ ರೈತರು ಬೇಕಾಬಿಟ್ಟಿಯಾಗಿ ಕೀಟನಾಶಕಗಳನ್ನು ಬಳಸುತ್ತಾರೆ ಎಂದು ಹೇಳಿದ್ದರು. ‘‘ಹೆಚ್ಚಿನ ಬಾಳೆ ತೋಟಗಳು ನದಿದಡದ ಇಳಿಜಾರು ಪ್ರದೇಶದಲ್ಲಿವೆ. ಆದ್ದರಿಂದ, ಕೀಟನಾಶಕಗಳು ಹಾಗೂ ಗೊಬ್ಬರಗಳ ತ್ಯಾಜ್ಯಗಳು ನೀರಿನ ಸೆಲೆಗಳನ್ನು ಮಲಿನಗೊಳಿಸುತ್ತವೆ. ಆದಿವಾಸಿಗಳು ಕುಡಿಯಲು ನದಿ ನೀರನ್ನು ಬಳಸುವುದರಿಂದ, ಅದು ಗಂಭೀರ ಸ್ವರೂಪದ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನುಂಟು ಮಾಡುತ್ತದೆ’’ ಎನ್ನುತ್ತಾರವರು.

ಅಟ್ಟಪಾಡಿಯಲ್ಲಿ ಗೇಣಿಗೆ ಪಡೆದ ಜಮೀನಿನಲ್ಲಿ 1,500 ಬಾಳೆ ಗಿಡಗಳನ್ನು ಬೆಳೆಸುತ್ತಿರುವ ಕೊಯಮುತ್ತೂರಿನ ರೈತನೊಬ್ಬ ತಾನು ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತಿರುವುದು ನಿಜವೆಂದು ಒಪ್ಪಿಕೊಂಡ. ಅವನು ಹೇಳುವಂತೆ ‘‘ಬಾಳೆ ಗಿಡಗಳನ್ನು ನೆಡುವ ಹಂತದಿಂದಲೇ ಕೀಟನಾಶಕಗಳ ಬಳಕೆ ಆರಂಭವಾಗುತ್ತದೆ. ಅವುಗಳನ್ನು ಮತ್ತು ಗೊಬ್ಬರಗಳನ್ನು ಬಳಸದೇ ಇದ್ದಲ್ಲಿ ಬಾಳೆ ಬೆಳೆ ಲಾಭದಾಯಕವಾಗುವುದಿಲ್ಲ’’ ಎನ್ನುತ್ತಾನೆ.

ಕೀಟನಾಶಕಗಳಲ್ಲಿ ವಿಷಕಾರಿಯಾದ ಮೊನೊಕ್ರೊಟೊಪೊಸ್ ಹಾಗೂ ಪೋರೇಟ್ಸ್‌ಗಳಿರುವುದನ್ನು ಥಾನಲ್ ನಡೆಸಿದ ಅಧ್ಯಯನ ದೃಢಪಡಿಸಿದೆ.

 2013ರಲ್ಲಿ ಬಿಹಾರದ ಸಾರನ್ ಜಿಲ್ಲೆಯ ಚಾಪ್ರಾದಲ್ಲಿ ಅನ್ನ ಮತ್ತು ಬಟಾಟೆ ಸಾಂಬಾರ್ ಸೇವಿಸಿದ ಶಾಲೆಯ ಮಕ್ಕಳಲ್ಲಿ ಊಟದ ಬಳಿಕ ಕನಿಷ್ಠ 23 ಮಕ್ಕಳು ಮೃತಪಟ್ಟರು. ಮೊನೊಕ್ರೊಟೊಫೊಸ್ ಇದ್ದ ಅಡುಗೆ ಎಣ್ಣೆಯನ್ನು ಬಳಕೆ ಮಾಡಿದ್ದೇ ಮಕ್ಕಳ ಸಾವಿಗೆ ಕಾರಣವೆಂದು ತಿಳಿದು ಬಂತು.

ಕೀಟನಾಶಕವೊಂದನ್ನು ಎಷ್ಟು ಬಾರಿ ಸಿಂಪಡಿಸಲಾಗುತ್ತದೆ ಮತ್ತು ಅದು ಮಣ್ಣು, ನೀರು ಹಾಗೂ ಸಸ್ಯಗಳ ಜತೆ ಬೆರೆಯಲು ಎಷ್ಟು ಸಮಯ ತಗಲುತ್ತದೆ ಎಂಬುದು ಕೀಟನಾಶಕ ಎಷ್ಟು ವಿಷಕಾರಿ ಎಂಬುದನ್ನು ನಿರ್ಧರಿಸುತ್ತದೆ. ಅಗಳಿಯ ಕೃಷಿ ಅಧಿಕಾರಿ ದೀಪಾ ಜಯನ್ ಕೀಟನಾಶಕಗಳನ್ನು ಬಳಸಿ ಎಂದು ತನ್ನ ಇಲಾಖೆ ಎಂದೂ ಹೇಳಿಲ್ಲ ಎನ್ನುತ್ತಾರೆ. ‘‘ನಾವು ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತೇವೆ. ಆದರೆ ಶೀಘ್ರವಾಗಿ ಸುಲಭದಲ್ಲಿ ಹಣ ಸಂಪಾದನೆಗಾಗಿ ರೈತರು ಕೀಟ ನಾಶಕಗಳಿಗೆ ಮೊರೆ ಹೋಗುತ್ತಾರೆ’’ ಎನ್ನುತ್ತಾರವರು.

ಶಿಕ್ಷಕ ರಂಗನ್‌ರ ಅಭಿಪ್ರಾಯದಂತೆ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕು. ‘‘ಇಲ್ಲವಾದಲ್ಲಿ ಈ ಸ್ಥಳದ ಮೂಲನಿವಾಸಿಗಳಾದ ಆದಿವಾಸಿಗಳಿಗೆ ಅಟ್ಟಪಾಡಿ ವಾಸಕ್ಕೆ ಯೋಗ್ಯವಲ್ಲದ ಒಂದು ಊರಾಗುತ್ತದೆ’’

ಕೃಪೆ: scroll.in

Writer - ಟಿ.ಎ. ಅಮೀರುದ್ದೀನ್

contributor

Editor - ಟಿ.ಎ. ಅಮೀರುದ್ದೀನ್

contributor

Similar News

ಜಗದಗಲ
ಜಗ ದಗಲ