ಸತ್ಯಕ್ಕಾಗಿ ವೃತ್ತಿ ಬದುಕನ್ನೂ ಒತ್ತೆಯಿಟ್ಟವರು...

Update: 2017-06-16 18:08 GMT

ನಿರಂತರವಾಗಿ ಕಿರುಕುಳಕ್ಕೊಳಗಾದರೂ ಈ ಇಬ್ಬರೂ ಅಧಿಕಾರಿಗಳು ಎಂದೂ ಧೃತಿಗೆಡಲಿಲ್ಲ, ಎಲ್ಲ ವೈಯಕ್ತಿಕ ಹಾಗೂ ವೃತ್ತಿಸಂಬಂಧಿ ವಿಷಯಗಳಲ್ಲಿ ಬೆಲೆ ತೆತ್ತಾದರೂ, ತಮಗೆ ಸರಿ ಎನ್ನಿಸಿದ್ದನ್ನು ಮಾಡುತ್ತಲೇ ಬಂದರು. ತಾವು ಹಾಗೂ ಸತೀಶ್ ವರ್ಮಾ ಕೈಗೊಂಡ ತನಿಖೆಗಳು ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಸಮಾಧಾನ ತಂದ ಘಟನೆಗಳು ಎಂದು ರಜನೀಶ್ ಹೇಳುತ್ತಾರೆ.

ಅಸ್ಸಾಂನ ಚಿರಂಗ್ ಜಿಲ್ಲೆಯಲ್ಲಿ 2017ರ ಮಾರ್ಚ್ 30ರಂದು ನಡೆದ ಎನ್‌ಕೌಂಟರನ್ನು ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರಜನೀಶ್ ರಾಯ್ ಪ್ರಶ್ನಿಸಿ ವರದಿ ಸಲ್ಲಿಸಿದ್ದಾರೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ನನಗೆ ಅಚ್ಚರಿಯೇನೂ ಆಗಲಿಲ್ಲ. ಸೇನೆ, ಅಸ್ಸಾಂ ಪೊಲೀಸ್, ಸಿಆರ್‌ಪಿಎಫ್ ಹಾಗೂ ಎಸ್‌ಎಸ್‌ಬಿ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಧೈರ್ಯದಿಂದ ವರದಿ ಸಲ್ಲಿಸಿರುವ ರಜನೀಶ್ ರಾಯ್, ‘‘ಕಾರ್ಯಾಚರಣೆ ಬಗ್ಗೆ ಅಸ್ಸಾಂ ಪೊಲೀಸರು ಸಲ್ಲಿಸಿದ ಎಫ್‌ಐಆರ್ ಹಾಗೂ ಇತರ ವಿಶೇಷ ಪಡೆಗಳು ಸಿದ್ಧಪಡಿಸಿದ ವಿಶೇಷ ಸ್ಥಿತಿಗತಿ ವರದಿ, ಈ ಜಂಟಿ ಕಾರ್ಯಾಚರಣೆಯ ಕಾಲ್ಪನಿಕ ಚಿತ್ರಣವನ್ನು ನೀಡುತ್ತದೆ. ಕಸ್ಟಡಿಯಲ್ಲಿ ಈಗಾಗಲೇ ಮೃತಪಟ್ಟ ಇಬ್ಬರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ವೃತ್ತಿ ಸಾಧನೆಯಾಗಿ ಬಿಂಬಿಸುವ ಪೂರ್ವಯೋಜಿತ ಹತ್ಯೆ’’ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ‘‘ಆ ಇಬ್ಬರನ್ನು ಗ್ರಾಮದಿಂದ ಬಂಧಿಸಿ, ಸಮವಸ್ತ್ರದಲ್ಲಿರುವವರು ಹತ್ಯೆ ಮಾಡಿದ್ದಾರೆ. ಬಳಿಕ ಅವರ ದೇಹದ ಬಳಿ ಶಸ್ತ್ರಾಸ್ತ್ರಗಳನ್ನು ಇಡಲಾಗಿದೆ’’ ಎಂಬ ಅಭಿಪ್ರಾಯಕ್ಕೆ ಐಜಿಪಿ ಬಂದಿದ್ದಾರೆ.

ಬಹುಶಃ ರಜನೀಶ್ ರಾಯ್ ಅವರಂಥ ಸಾರ್ವಜನಿಕ ಸೇವಕರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುವ ದೃಷ್ಟಿಯಿಂದ ಈ ವರದಿಗೆ ವಿಶೇಷ ಮಹತ್ವವಿದೆ. ಸಮವಸ್ತ್ರದಲ್ಲಿರುವ ತಮ್ಮ ಸ್ವಂತ ಸಹೋದರ- ಸಹೋದರಿಯರ ವಿರುದ್ಧ ವರದಿ ಸಲ್ಲಿಸಿದರೂ ಸತ್ಯ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಸಲುವಾಗಿ ತಮ್ಮ ವೃತ್ತಿ ಹಾಗೂ ಭವಿಷ್ಯವನ್ನೇ ಒತ್ತೆ ಇಟ್ಟವರು. ಹತ್ತು ವರ್ಷ ಮುನ್ನ ಇದೇ ರಜನೀಶ್ ರಾಯ್ ಅವರಿಗೆ 2007ರಲ್ಲಿ ಗುಜರಾತ್‌ನಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಹತ್ಯೆ ಪ್ರಕರಣದ ಬಗೆಗಿನ ತನಿಖೆಗೆ ಸಹಕರಿಸುವ ಹೊಣೆಗಾರಿಕೆಯನ್ನು ವಹಿಸಲಾಗಿತ್ತು. ಅವರು ರಾಜ್ಯ ಪೊಲೀಸ್ ಇಲಾಖೆಯ ತಮ್ಮ ಮೇಲಧಿಕಾರಿಗಳನ್ನು ಹಾಗೂ ಸಹೋದ್ಯೋಗಿಗಳನ್ನು ಮತ್ತು ರಾಜಕೀಯ ವ್ಯವಸ್ಥೆಯನ್ನು ಸಂರಕ್ಷಿಸುತ್ತಾರೆ ಎಂದೇ ನಂಬಲಾಗಿತ್ತು.

ಆದರೆ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರಾ, ರಾಜ್‌ಕುಮಾರ್ ಪಾಂಡ್ಯನ್ ಹಾಗೂ ಎಂ.ಎನ್.ದಿನೇಶ್ ಅವರನ್ನು 2007ರಲ್ಲಿ ನಕಲಿ ಎನ್‌ಕೌಂಟರ್ ಆರೋಪದಲ್ಲಿ ಬಂಧಿಸುವ ಮೂಲಕ ತಮ್ಮ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ನಿಬ್ಬೆರಗುಗೊಳಿಸಿದರು. ಈ ಎನ್‌ಕೌಂಟರ್‌ನಲ್ಲಿ ಸೊಹ್ರಾಬುದ್ದೀನ್, ಪತ್ನಿ ಕೌಸರ್‌ಬಿ ಹಾಗೂ ನಿಕಟವರ್ತಿ ತುಳಸೀರಾಂ ಪ್ರಜಾಪತಿ ಹತ್ಯೆಗೀಡಾಗಿದ್ದರು. ಪಾಂಡ್ಯನ್, ರಾಯ್ ಅವರ ಬ್ಯಾಚ್‌ಮೇಟ್ ಹಾಗೂ ಆಪ್ತ ಸ್ನೇಹಿತರು. ಪರಸ್ಪರರ ಮನೆಗಳಲ್ಲಿ ಸಮಯ ಕಳೆದವರು. ಆದರೆ ತಮ್ಮ ಪ್ರಾಣ ಸ್ನೇಹಿತ ಪಾಂಡ್ಯನ್, ಕಸ್ಟಡಿ ಹತ್ಯೆಯ ಘೋರ ಅಪರಾಧ ಎಸಗಿದ್ದಾರೆ ಎನ್ನುವುದು ರಾಯ್‌ಗೆ ಮನವರಿಕೆಯಾಗಿತ್ತು. ಅಂದಿನ ಗೃಹಸಚಿವರು ಮತ್ತು ಅವರಿಗೆ ನಿಷ್ಠರಾಗಿದ್ದ ಪೊಲೀಸ್ ಅಧಿಕಾರಿಗಳು, ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣವನ್ನು ಮುಚ್ಚಿಹಾಕಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ ಎಂದೂ ರಾಯ್ ಆಪಾದಿಸಿದ್ದರು. ತುಳಸೀರಾಂ ಪ್ರಜಾಪತಿ ಹತ್ಯೆ ಕೂಡಾ, ಈ ಪಿತೂರಿಯ ಅಂಗ. ಏಕೆಂದರೆ, ಸೊಹ್ರಾಬುದ್ದೀನ್ ಹಾಗೂ ಕೌಸರ್‌ಬಿ ಅವರನ್ನು ಪೊಲೀಸರು ಅಪಹರಿಸಿದ್ದಕ್ಕೆ ಪ್ರಜಾಪತಿ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎಂದು ರಾಯ್ ಪ್ರತಿಪಾದಿಸಿದ್ದರು.

ಮತ್ತೊಬ್ಬ ಗುಜರಾತ್ ಪೊಲೀಸ್ ಅಧಿಕಾರಿ ಸತೀಶ್ ವರ್ಮಾ, ಹೈಕೋರ್ಟ್‌ನಲ್ಲಿ ಅಫಿಡವಿತ್ ಸಲ್ಲಿಸಿ, ‘‘19 ವರ್ಷದ ಇಶ್ರತ್ ಜಹಾನ್ ಅವರ ಹತ್ಯೆಯನ್ನು ಎನ್‌ಕೌಂಟರ್ ಎಂದು ಬಿಂಬಿಸಲಾಗಿದ್ದು, ಇದು ಕೂಡಾ ಅಸಲಿಯಲ್ಲ’’ ಎಂದು ಸ್ಪಷ್ಟಪಡಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳಾದ ಸತೀಶ್ ವರ್ಮಾ ಹಾಗೂ ರಜನೀಶ್ ರಾಯ್ ಅವರ ಪ್ರಾಮಾಣಿಕ ತನಿಖೆಗಳು, ಹಲವು ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಅಂದಿನ ಗೃಹಸಚಿವರ ಬಂಧನಕ್ಕೆ ಮತ್ತು ಆರೋಪಪಟ್ಟಿ ಸಲ್ಲಿಕೆಗೆ ಕಾರಣವಾದವು.

ಆದರೆ 2014ರ ಮೇ ತಿಂಗಳಲ್ಲಿ ಬಿಜೆಪಿ ನೇತೃತ್ವದ ಸರಕಾರ ದಿಲ್ಲಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಗಾಳಿ ಬದಲಾಯಿತು. ಒಬ್ಬ ಪೊಲೀಸ್ ಅಧಿಕಾರಿ ಜೈಲಿನಿಂದ ಬಿಡುಗಡೆಯಾದರು. ಕರ್ತವ್ಯದಲ್ಲಿಲ್ಲದ ಎಲ್ಲ ಪೊಲೀಸ್ ಅಧಿಕಾರಿಗಳನ್ನು ಮತ್ತೆ ಸೇವೆಗೆ ಸೇರಿಸಿಕೊಂಡು ಭಡ್ತಿ ನೀಡಲಾಯಿತು. ಅದು ಕೂಡಾ ತೀರಾ ಜವಾಬ್ದಾರಿಯುತ ಹುದ್ದೆಗಳಿಗೆ ನಿಯೋಜಿಸ ಲಾಯಿತು. 2015ರ ಫೆಬ್ರವರಿಯಲ್ಲಿ ಪಿ.ಪಿ.ಪಾಂಡೆ ಜಾಮೀನಿನ ಮೇಲೆ ಬಿಡುಗಡೆಯಾದರು. ಮೂರೇ ದಿನದಲ್ಲಿ ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿಕೊಂಡು, ಸತೀಶ್ ವರ್ಮಾ ಅವರ ವಿರುದ್ಧದ ತನಿಖೆಯ ಹೊಣೆ ವಹಿಸಲಾಯಿತು. ಸತೀಶ್ ವರ್ಮಾ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಪಾಂಡೆ ಪ್ರಥಮ ಅರೋಪಿಯಾಗಿದ್ದರು. 2016ರ ಎಪ್ರಿಲ್‌ನಲ್ಲಿ ಅವರನ್ನು ಗುಜರಾತ್‌ನ ಹಂಗಾಮಿ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಯಿತು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹತ್ಯೆ ಪ್ರಕರಣದ ಆರೋಪಿಯಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ವ್ಯಕ್ತಿಗೆ ಅತ್ಯುನ್ನತ ಹುದ್ದೆಯ ಹೊಣೆಗಾರಿಕೆ ವಹಿಸಲಾಯಿತು.

ಇದಕ್ಕೆ ವಿರುದ್ಧವಾಗಿ ಅಂದಿನ ಗೃಹಸಚಿವರು ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಗೆ ಮತ್ತು ಅವರ ಬಂಧನಕ್ಕೆ ಕಾರಣರಾದ, ಪ್ರಾಮಾಣಿಕ ತನಿಖೆ ನಡೆಸಿದ ಸತೀಶ್ ವರ್ಮಾ ಹಾಗೂ ರಜನೀಶ್ ರಾಯ್ ಅವರನ್ನು ನಿರಂತರವಾಗಿ ಬಲಿಪಶು ಮಾಡಲಾಯಿತು. 2007ರ ತನಿಖೆ ನಡೆಸಿದ ಬಳಿಕ ರಾಯ್ ಅವರನ್ನು ಒಮ್ಮೆಯೂ ಅವರ ಪತ್ನಿ ಕರ್ತವ್ಯದಲ್ಲಿದ್ದ ಸ್ಥಳಕ್ಕೆ ನಿಯೋಜಿಸಲಿಲ್ಲ. ಅವರ ಪತ್ನಿ ಕೂಡಾ ಗುಜರಾತ್‌ನ ಐಎಎಸ್ ಅಧಿಕಾರಿ. ದೂರದ ಶಿಲ್ಲಾಂಗ್‌ಗೆ ರಾಯ್ ಅವರನ್ನು ನಿಯೋಜಿಸಿದರೆ, ವರ್ಮಾ ಅವರನ್ನು ಅಗರ್ತಲಕ್ಕೆ ವರ್ಗಾಯಿಸಲಾಯಿತು. ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಯಿತು. ಅವರ ವೃತ್ತಿ ಕುರಿತ ಗುಪ್ತ ವರದಿಗಳಲ್ಲಿ ಕಳಂಕಿತರನ್ನಾಗಿ ಮಾಡಲಾಗಿತ್ತು. ಅವರ ಭಡ್ತಿ ಅವಕಾಶವನ್ನು ಸೂಪರ್‌ಸೀಡ್ ಮಾಡಲಾಯಿತು.

ಆದರೆ ಈ ಇಬ್ಬರೂ ಅಧಿಕಾರಿಗಳು ಎಂದೂ ಧೃತಿಗೆಡಲಿಲ್ಲ, ಎಲ್ಲ ವೈಯಕ್ತಿಕ ಹಾಗೂ ವೃತ್ತಿಸಂಬಂಧಿ ವಿಷಯಗಳಲ್ಲಿ ಬೆಲೆ ತೆತ್ತಾದರೂ, ತಮಗೆ ಸರಿ ಎನ್ನಿಸಿದ್ದನ್ನು ಮಾಡುತ್ತಲೇ ಬಂದರು. ತಾವು ಹಾಗೂ ಸತೀಶ್ ವರ್ಮಾ ಕೈಗೊಂಡ ತನಿಖೆಗಳು ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಸಮಾಧಾನ ತಂದ ಘಟನೆಗಳು ಎಂದು ರಜನೀಶ್ ನನ್ನಲ್ಲಿ ಹೇಳಿದ್ದರು. 2002ರಿಂದ 2005ರ ಅವಧಿಯಲ್ಲಿ ಗುಜರಾತ್‌ನಲ್ಲಿ ಮಾಮೂಲಿಯಾಗಿದ್ದ ನ್ಯಾಯಬಾಹಿರ ನಕಲಿ ಎನ್‌ಕೌಂಟರ್‌ಗಳ ಪ್ರಹಸನಕ್ಕೆ ಈ ತನಿಖೆಯ ಬಳಿಕ ತೆರೆ ಬಿದ್ದದ್ದು ಅತ್ಯಂತ ಸಮಾಧಾನ ತರುವ ವಿಚಾರ ಎಂದು ಬಣ್ಣಿಸಿದ್ದರು. ಹೀಗೆ ನಕಲಿ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾದ ಪ್ರತಿಯೊಬ್ಬರೂ, ಮುಖ್ಯಮಂತ್ರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಸಮರ್ಥಿಸಿಕೊಳ್ಳಲಾಗುತ್ತಿತ್ತು. ಪೊಲೀಸ್ ಅಧಿಕಾರಿಗಳು ನಡೆಸುವ ಯಾವುದೇ ಕಸ್ಟಡಿ ಹತ್ಯೆಗಳಿಗೆ ಕಾನೂನು ಸುರಕ್ಷೆ ಪಡೆಯುತ್ತಿದ್ದ ಪರಿಪಾಠವನ್ನು ಈ ಇಬ್ಬರು ಅಧಿಕಾರಿಗಳು ಧ್ವಂಸಗೊಳಿಸದಿದ್ದರೆ, ಇಂಥ ಎನ್‌ಕೌಂಟರ್‌ಗಳು ಇಂದಿಗೂ ಕೊನೆಗೊಳ್ಳುತ್ತಿರಲಿಲ್ಲ. ಈ ಒಂದೇ ಅಂಶ, ಅವರು ತಮ್ಮ ವೃತ್ತಿಯಲ್ಲಿ ಹಾಗೂ ವೈಯಕ್ತಿಕವಾಗಿ ಅನುಭವಿಸಿದ ಕಷ್ಟ- ನಷ್ಟಗಳು ಸಾರ್ಥಕ ಎನಿಸಿಕೊಳ್ಳಲು ನೆರವಾಗಿದೆ.

 ರಾಯ್ ಅವರ ಈ ಹೊಸ ಸ್ಫೋಟಕ ವರದಿಗೆ ಸರಕಾರ ಪ್ರಾಮಾಣಿಕವಾಗಿಯೇ ಸ್ಪಂದಿಸಿ ಅವರನ್ನು ಶಿಕ್ಷೆಯ ರೂಪದಲ್ಲಿ ಶಿಲ್ಲಾಂಗ್‌ನಿಂದ ಆಂಧ್ರಪ್ರದೇಶಕ್ಕೆ ವರ್ಗಾಯಿಸಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಭಾರತದ ಈಶಾನ್ಯ ರಾಜ್ಯಗಳಲ್ಲಿ ದೀರ್ಘಕಾಲದಿಂದ ಇರುವ ಕಸ್ಟಡಿ ಹತ್ಯೆಗಳ ಸುದೀರ್ಘ ಸಂಪ್ರದಾಯವನ್ನು ಬಯಲುಗೊಳಿಸಿರುವ ರಾಯ್ ವರದಿ, ಅವರ ಕೆಚ್ಚು, ಕರ್ತವ್ಯ ಪ್ರಜ್ಞೆ ಇನ್ನೂ ಮಬ್ಬಾಗದೇ ಪ್ರಖರವಾಗಿಯೇ ಉಳಿದಿದೆ ಎನ್ನುವುದನ್ನು ಎತ್ತಿತೋರಿಸುತ್ತದೆ.

Writer - ಹರ್ಷ ಮಂದರ್

contributor

Editor - ಹರ್ಷ ಮಂದರ್

contributor

Similar News

ಜಗದಗಲ
ಜಗ ದಗಲ