ಭಾಷೆಯ ಮೂಲಕವೇ ಕಟ್ಟಿಕೊಡುವ ತಳಸ್ತರದ ಬದುಕು
ದಿಲೀಪ್ ಎನ್‌ಕೆ ಅವರ ‘ಬಲಿಷ್ಠ’ ಕಥಾಸಂಕಲನ ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಯೋಗ ರೂಪವಾಗಿದೆ. ಈ ಹಿಂದೆ ಹಿರಿಯ ಕತೆಗಾರರಾದ ದೇವನೂರ ಮಹಾದೇವ ಅವರು ‘ಕುಸುಮಬಾಲೆ’ ಬರೆದಾಗ ಕನ್ನಡ ಸಾಹಿತ್ಯದ ದಿಗ್ಗಜರೇ ಹಲವು ಗೊಂದಲಗಳ ಜೊತೆಗೆ ಅದನ್ನು ಸ್ವೀಕರಿಸಿದ್ದರು. ಇದನ್ನು ಕನ್ನಡ ಕಾವ್ಯವೆಂದು ಕರೆಯಬೇಕೇ? ಕನ್ನಡದ ಈ ಭಾಷೆಯನ್ನು ಯಾವ ನೆಲೆಯಲ್ಲಿ ಸ್ವೀಕರಿಸಬೇಕು ಎಂಬುದರ ಕುರಿತಂತೆ ಸಾಹಿತ್ಯ ವಿಮರ್ಶಕರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಚಂದ್ರಶೇಖರ ಪಾಟೀಲರಂತೂ ‘ಕುಸುಮಬಾಲೆ’ ಕನ್ನಡಕ್ಕೆ ಅನುವಾದ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಅದೇನೇ ಇರಲಿ, ತಳಸ್ತರದ ಬೀಜರೂಪದ ಭಾಷೆಯನ್ನು ಕನ್ನಡ ಸಾಹಿತ್ಯದ ಮುಖ್ಯವಾಹಿನಿಗೆ ತಂದು ನಿಲ್ಲಿಸುವ ಮೂಲಕವೇ ದೇವನೂರ ಮಹಾದೇವ ಇಂದು ವಿಭಿನ್ನವಾಗಿ ನಿಲ್ಲುತ್ತಾರೆ. ದೇವನೂರ ಮಹಾದೇವರ ಭಾಷೆಯ ದಟ್ಟ ಪ್ರಭಾವದೊಂದಿಗೆ ದಿಲೀಪ್ ಎನ್ಕೆ ಅವರು ತಮ್ಮ ಕತೆಗಳನ್ನು ಬರೆದಿದ್ದಾರೆ. ರಂಜಾನ್ ದರ್ಗಾ ಅವರು ಹೇಳುವಂತೆ, ಒಂದು ಸಮುದಾಯದ ಭಾಷೆಯನ್ನು ಅರಿಯದೇ ಆ ಜನರ ನೋವಿನ ಮೂಲವನ್ನು ಅರ್ಥೈಸಿಕೊಳ್ಳಲಿಕ್ಕಾಗದು. ಶಿಷ್ಟರು ಪರಿಶಿಷ್ಟರ ಭಾಷಾ ಪ್ರಭೇದದ ಮೂಲಕವೇ ಅವರನ್ನು ಅರ್ಥೈಸಿಕೊಳ್ಳಬೇಕು. ಆ ಭಾಷೆಯನ್ನು ಕಳಚಿಬಿಟ್ಟರೆ ಅವರ ಬದುಕಿನ ಸೂಕ್ಷ್ಮತೆಯನ್ನು ಹಿಡಿದಿಡಲಿಕ್ಕಾಗುವುದಿಲ್ಲ ಎಂಬ ಕಾಳಜಿಯನ್ನು ದಿಲೀಪ ಹೊಂದಿದ್ದಾರೆ.
‘ಬಲಿಷ್ಠ’ ಕಥಾಸಂಕಲನದಲ್ಲಿ ಒಟ್ಟು ಏಳು ಕತೆಗಳಿವೆ. ಎಲ್ಲ ಕತೆಗಳೂ ತಳಸ್ತರ ಜಾತಿ ವ್ಯವಸ್ಥೆ ಮತ್ತು ಬವಣೆಗಳನ್ನು ತೆರೆದಿಡುವಲ್ಲಿ ಆಸಕ್ತಿಯನ್ನು ವಹಿಸುತ್ತವೆ. ‘ಎಳೆ ಇಲ್ಲದೆ ಎಳೆದದ್ದು’ ತೇರು ಎಳೆಯುವ ಘಟನೆಯನ್ನು ಇಟ್ಟುಕೊಂಡು ಸಾಮಾಜಿಕ ಪ್ರತಿಷ್ಠೆಯನ್ನು ಪ್ರಶ್ನಿಸುತ್ತಾರೆ. ‘ಕೊರಳೊಡ್ಡುವ ಮುನ್ನ’ ಜಾತಿ ತಾಕಲಾಟಗಳ ನಡುವೆಯೇ ಹೆಣ್ಣೊಬ್ಬಳ ತುಮುಲವನ್ನು ಕಟ್ಟಿಕೊಡುತ್ತದೆ. ‘ಬಾಳ ಸಿವುರು’ ಯುವಕನೊಬ್ಬನ ತುಮುಲಗಳನ್ನು ಕಟ್ಟಿಕೊಡುತ್ತದೆ. ‘ಗವ್ಗತ್ಲು’ ಹೆಣವೊಂದನ್ನು ಮುಂದಿಟ್ಟುಕೊಂಡು ತಳಸ್ತರದ ಬದುಕಿನ ತಳಮಳಗಳನ್ನು ಕಟ್ಟಿಕೊಡುತ್ತದೆ. ‘ಕಸಿ’ ಮರ್ಯಾದೆ ರಹಿತ ಹತ್ಯೆಯ ಕ್ರೌರ್ಯವನ್ನು ತೆರೆದಿಡುವಂಥದ್ದು.
ಇಲ್ಲಿರುವ ಕತೆಗಳ ಪಾತ್ರಗಳನ್ನು, ಬದುಕನ್ನು ನಾವು ತಲುಪಬೇಕಾದರೆ ಭಾಷೆಯ ನುಡಿಗಟ್ಟುಗಳನ್ನು ಒಡೆಯುವುದಕ್ಕೆ ಗೊತ್ತಿರಬೇಕು. ಭಾಷೆ ಮತ್ತು ಬದುಕು ಒಂದನ್ನೊಂದು ಬಿಡದೇ ಬೆಸೆದಿರುವ ಕಾರಣ ದಿಂದಲೇ ಇಲ್ಲಿ ಭಾಷೆಯ ಗೆಲುವೂ ಹೌದು. ಅನೇಕ ಸಂದರ್ಭದಲ್ಲಿ ತೊಡಕೂ ಹೌದು. ವಿಜಯಲಕ್ಷ್ಮಿ ಪ್ರಕಾಶನ ಮೈಸೂರು ಹೊರತಂದಿರುವ ಕೃತಿಯ ಮುಖಬೆಲೆ 60 ರೂಪಾಯಿ. ಆಸಕ್ತರು 94483 50923 ದೂರವಾಣಿಯನ್ನು ಸಂಪರ್ಕಿಸಬಹುದು.