ಸ್ಮಾರ್ಟ್‌ಫೋನುಗಳಲ್ಲಿ ಕನ್ನಡ ಬಳಕೆ

Update: 2017-06-18 10:00 GMT

ಈಗ ಬಹುತೇಕ ಹೊಸ ಸ್ಮಾರ್ಟ್‌ಫೋನುಗಳ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಕನ್ನಡ ಭಾಷಾ ಬೆಂಬಲವನ್ನು ಅಳವಡಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಇದ್ದರೂ, ಅದನ್ನು ಬಳಸುವ ವಿಧಿವಿಧಾನಗಳು ತಿಳಿದಿಲ್ಲ.

ನಿಮ್ಮ ಹಳೆಯ ಮೊಬೈಲ್ ಫೋನ್‌ಗೆ ಎಸ್ಸೆಮ್ಮೆಸ್ ಒಂದು ಬಂದಾಗ, ಅಕ್ಷರಗಳಲ್ಲದ, ಕೇವಲ ಡಬ್ಬಿಗಳ ಆಕಾರದ ಚಿಕ್ಕಚೌಕಗಳ ಸಾಲುಗಳು ಕಂಡುಬಂದಿರುವ ಅನುಭವ ನಿಮಗೆ ಆಗಿರಬಹುದು. ಅದು ಇಂಗ್ಲಿಷ್ ಅಲ್ಲದ, ಯಾವುದಾದರೂ ಭಾರತೀಯ ಭಾಷೆಯ ಮೆಸೇಜ್ ಆಗಿರಲಿಕ್ಕೆ ಸಾಕು. ಉದಾಹರಣೆಗೆ ಕನ್ನಡದಲ್ಲಿ ಒಂದು ಎಸ್ಸೆಮ್ಮೆಸ್‌ನ್ನು ನಿಮ್ಮ ಮೊಬೈಲಿಗೆ ಯಾರಾದರೂ ಕಳುಹಿಸಿದ್ದರೆ, ನಿಮ್ಮ ಮೊಬೈಲ್ ಕನ್ನಡ ಭಾಷೆಯನ್ನು ಬೆಂಬಲಿಸದಿದ್ದರೆ, ಅಂತಹ ಚೌಕಗಳ ಸಾಲುಗಳು ಕಂಡುಬರುತ್ತವೆ.

ಅಂದರೆ, ನಿಮ್ಮ ಆ ಮೊಬೈಲ್ ಕಂಪೆನಿಯು ನಿಮ್ಮ ಫೋನ್‌ನಲ್ಲಿ ಕನ್ನಡದ ಸಪೋರ್ಟ್ ನೀಡಿಲ್ಲ ಎನ್ನಬಹುದು. ಫಾಂಟ್ ಸಪೋರ್ಟ್ ಮಾತ್ರವೇ ಇದ್ದ ಕಾರಣ ಕೆಲವೊಂದು ಮೊಬೈಲ್‌ಗಳಲ್ಲಿ ಕನ್ನಡದ ಮೆಸೇಜುಗಳನ್ನು ಓದಬಹುದು. ಆದರೆ, ಕನ್ನಡದಲ್ಲಿ ಮೆಸೇಜುಗಳನ್ನು ಮೂಡಿಸಲು ಸಾಧ್ಯವಾಗುವುದಿಲ್ಲ. ಇದು ಹಳೆಯ ಮೊಬೈಲ್‌ಗಳ ಕಥೆಯಾಯಿತು.

ಈಗ ಬಹುತೇಕ ಹೊಸ ಸ್ಮಾರ್ಟ್‌ಫೋನುಗಳ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಕನ್ನಡ ಭಾಷಾ ಬೆಂಬಲವನ್ನು ಅಳವಡಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಇದ್ದರೂ, ಅದನ್ನು ಬಳಸುವ ವಿಧಿವಿಧಾನಗಳು ತಿಳಿದಿಲ್ಲ. ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ಮತ್ತಷ್ಟು ತಿಳಿಯುವ ಮುನ್ನ ಮೊದಲಿಗೆ ವಿದ್ಯುನ್ಮಾನ ಸಾಧನಗಳ ‘ಯೂಸರ್ ಇಂಟರ್‌ಫೇಸ್’ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಅಗತ್ಯ.

ಕಾರು ತನ್ನ ಚಾಲಕನೊಂದಿಗೆ ಮಾತನಾಡು ವುದಿಲ್ಲ. ಆದರೆ, ಚಾಲನೆ ಕಲಿಸುವ ತರಬೇತುದಾರ ಇದು ಬ್ರೇಕು, ಇದು ಸ್ಟಿಯರಿಂಗು, ಇದು ಕ್ಲಚ್ಚು ಎಂದು ಹೇಳುತ್ತಾ ಚಾಲನೆ ಕಲಿಸಲು ವ್ಯಾವಹಾರಿಕ ಭಾಷೆಯನ್ನು ಬಳಸುತ್ತಾನೆ. ಕಂಪ್ಯೂಟರ್, ಸ್ಮಾರ್ಟ್ ಫೋನು, ಐ-ಪ್ಯಾಡ್ ಇತ್ಯಾದಿ ಇಲೆಕ್ಟ್ರಾನಿಕ್ ಸಾಧನಗಳು ನಮ್ಮಾಂದಿಗೆ ಮಾತನಾಡುತ್ತವೆ, ವ್ಯವಹರಿಸುತ್ತವೆ. ಹೀಗಾಗಿ, ಇವುಗಳನ್ನು ‘ಇಂಟರ್ಯಾಕ್ಟಿವ್ ಇಲೆಕ್ಟ್ರಾನಿಕ್ ಡಿವೈಸ್’ಗಳು ಎಂದು ಕರೆಯುತ್ತಾರೆ.

ಬಳಕೆದಾರರೊಂದಿಗೆ ಮಾತನಾಡಲು ಈ ಸಾಧನಗಳು ಬಳಸುವ ಸಹಜ ಭಾಷೆ ಯನ್ನೇ ‘ಸಂವಹನ ಭಾಷೆ’ ಎನ್ನಲಾಗಿದೆ. ಸಾಮಾನ್ಯವಾಗಿ ಈ ಸಂವಹನ ಭಾಷೆಯು ಇಂಗ್ಲಿಷ್ ಆಗಿರುತ್ತದೆ. ಕನ್ನಡವನ್ನೂ ಸಹ ಅವುಗಳ ಸಂವಹನ ಭಾಷೆ ಯನ್ನಾಗಿ ನಿಗದಿಪಡಿ ಸಿಕೊಂಡು ಬಳಸ ಬಹುದು. ಹಿಂದೆ, ಇಂಗ್ಲಿಷ್ ಬಾರದವರು, ನಿರ್ದಿಷ್ಟ ಕೆಲಸಕ್ಕಾಗಿ ಕೆಲವು ಬಟನ್‌ಗಳನ್ನು ನೆನಪಿನ ಸಹಾಯದಿಂದ ಕ್ರಮವಾಗಿ ಒತ್ತುವುದರ ಮೂಲಕ ಸ್ಮಾರ್ಟ್ ಫೋನುಗಳನ್ನು ಬಳಸುತ್ತಿದ್ದರು. ಈಗ ಈ ಕಿರಿಕಿರಿ ಇಲ್ಲ.

ಸ್ಮಾರ್ಟ್ ಫೋನುಗಳಲ್ಲಿ ಕನ್ನಡ ಭಾಷೆಯ ಇಂಟರ್‌ಫೇಸ್‌ನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಂವಹನ ಭಾಷೆಯನ್ನು ಕನ್ನಡಕ್ಕೆ ನಿಗದಿಪಡಿಸಿಕೊಂಡರೆ ಭಾಷಾ ಸಮಸ್ಯೆ ಬಗೆಹರಿಯುತ್ತದೆ. ಬಹುತೇಕ ಆಧುನಿಕ ಸ್ಮಾರ್ಟ್ ಫೋನುಗಳು ಕನ್ನಡದ ಇಂಟರ್‌ಫೇಸ್ ನಿಗದಿಗೆ ಅವಕಾಶ ಒದಗಿಸಿವೆ. ಅಲ್ಲದೆ, ಕನ್ನಡ ಪಠ್ಯವನ್ನು ಮೂಡಿಸುವ ಸೌಲಭ್ಯ ನೀಡಿವೆ. 

ನಿಮ್ಮ ಸ್ಮಾರ್ಟ್‌ಫೋನಿನ ಸೆಟ್ಟಿಂಗ್ಸ್ ಐಕಾನ್ ಒತ್ತುವ ಮೂಲಕ ‘ಲ್ಯಾಂಗ್ವೇಜ್ ಆ್ಯಂಡ್ ಇನ್‌ಪುಟ್’ ಆಯ್ದುಕೊಂಡು ಕನ್ನಡ ಭಾಷೆಯ ನಿಗದಿಯನ್ನು ಮಾಡಿಕೊಳ್ಳಬಹುದು. ಹಾಗೆ ನಿಗದಿಸಿದ ನಂತರ, ಫೋನ್ ಸ್ಕ್ರೀನ್‌ನ ಮೇಲಿರುವ ಐಕಾನ್‌ಗಳ ಕೆಳಗಿನ ಇಂಗ್ಲಿಷ್ ಪದಗಳು ಕನ್ನಡಕ್ಕೆ ಪರಿವರ್ತನೆಗೊಳ್ಳುತ್ತವೆ. ಅಷ್ಟೇ ಅಲ್ಲದೆ, ಮುಂದೆ ಈ ಸ್ಮಾರ್ಟ್‌ಫೋನು ತನ್ನ ಬಳಕೆದಾರನಿಗೆ ಹೇಳಬೇಕಾದ ವಿಷಯಗಳೆಲ್ಲವೂ ಸಹ ಕನ್ನಡದಲ್ಲಿಯೇ ಪ್ರಕಟಗೊಳ್ಳತೊಡಗುತ್ತದೆ. ತನ್ನ ಸ್ಮಾರ್ಟ್ ಫೋನ್ ತನ್ನೊಂದಿಗೆ ತನ್ನದೇ ಭಾಷೆಯಲ್ಲಿ ಸಂವಹಿಸುವುದನ್ನು ಕಂಡು ಬಳಕೆದಾರ ಖುಷಿಯಾಗುವುದರಲ್ಲಿ ಸಂಶಯವೇ ಇಲ್ಲ!. tools, security, messages, wether, music, notes ಎಂಬ ಪದಗಳು, ಕ್ರಮವಾಗಿ, ಉಪಕರಣಗಳು, ಭದ್ರತೆ, ಸಂದೇಶಗಳು, ಸಂಗೀತ, ಟಿಪ್ಪಣಿಗಳು ಎಂದು ಬದಲಾಗುತ್ತವೆ. ಫೋನು, ಬ್ರೌಸರ್, ಕ್ಯಾಮರಾ, ಕ್ಯಾಲೆಂಡರ್ ಇತ್ಯಾದಿ ಕನ್ನಡಕ್ಕೆ ಅನುವಾದ ಮಾಡಿರದ ಇಂಗ್ಲಿಷ್ ಪದಗಳು ಹಾಗೆಯೇ ಕನ್ನಡ ಲಿಪಿಯಲ್ಲಿ ಪ್ರಕಟಗೊಳ್ಳುತ್ತವೆ. ಅಲ್ಲದೆ, ಕನ್ನಡದಲ್ಲಿ ಮೆಸೇಜುಗಳನ್ನು ಮೂಡಿಸಲು ಆ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯು ಅಳವಡಿಸಿರುವ ಕೀ ಬೋರ್ಡ್ ಸಕ್ರಿಯಗೊಂಡು ನಿಮ್ಮ ಬಳಕೆಗೆ ಸಿಗುತ್ತದೆ.

Writer - ಸತ್ಯನಾರಾಯಣ .ಕೆ.

contributor

Editor - ಸತ್ಯನಾರಾಯಣ .ಕೆ.

contributor

Similar News