ಡ್ರಗ್ಸ್ ಮಾಫಿಯಾದ ಕರಾಳ ಹಸ್ತ
ಒಂದು ಕಾಲದಲ್ಲಿ ಉಡುಪಿ ಜಿಲ್ಲೆಯ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳೆಸಿದ್ದ ಮಣಿಪಾಲ ಹಾಗೂ ನಿಟ್ಟೆಯಂತಹ ಅರೆಪಟ್ಟಣ ಪ್ರದೇಶಕ್ಕೆ ಸೀಮಿತವಾಗಿದ್ದ ಮಾದಕ ದ್ರವ್ಯ ವ್ಯಸನ, ಇಂದು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದೆ. ಅದರಲ್ಲೂ ಈ ಜಾಲ ಬಡ ಯುವಕರನ್ನೇ ಹೆಚ್ಚೆಚ್ಚು ಬಲಿ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದೆ.
ಮಾದಕ ದ್ರವ್ಯಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಮುಖವಾಗಿರುವುದು ಗಾಂಜಾ. ಇದರ ಜೊತೆ ಕೆಮ್ಮುವಿನ ಸಿರಪ್ ಕುಡಿಯುವ ಚಟ ಕೂಡ ಇದೆ. ಇತ್ತೀಚಿನ ದಿನಗಳಲ್ಲಿ ಯುವಕರು ಐಡೆಕ್ಸ್, ಫೆವಿಕಾಲ್, ಪೆಟ್ರೋಲ್‌ಗಳ ಸುವಾಸನೆಯನ್ನು ಮೂಸಿ ನೋಡುವ ಮೂಲಕ ಕಿಕ್ ಪಡೆಯುವುದು ಕೂಡ ಮಾದಕ ವ್ಯಸನದ ಭಾಗವಾಗಿದೆ.
ಪ್ರಸ್ತುತ ಜಿಲ್ಲೆಯ ಕಾಪು ಪ್ರದೇಶದಲ್ಲಿ ಹೆಚ್ಚಾಗಿ ಗಾಂಜಾ ವ್ಯಸನಿಗಳು ಕಂಡುಬರುತ್ತಿದ್ದು, ಯುವಕರ ಪಡೆಯೇ ಇದರಲ್ಲಿ ತೊಡಗಿಸಿಕೊಂಡಿದೆ. ಇದು ಈ ಪ್ರದೇಶದ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಸಾಕಷ್ಟು ಸಂಖ್ಯೆಯ ಯುವಕರು ಇದಕ್ಕೆ ಬಲಿಯಾಗಿದ್ದು, ಇದರ ಸರಬರಾಜು ಮಾಡಲು ನಿರುದ್ಯೋಗಿ ಯುವಕರನ್ನು ಬಳಕೆ ಮಾಡಲಾಗುತ್ತಿದೆ. ಈ ದಂಧೆಯಲ್ಲಿ ಉದ್ಯೋಗ ಅರಸಿ ಬಂದಿರುವ ಜಾರ್ಖಂಡ್, ರಾಜಸ್ಥಾನ, ಬಿಹಾರ ಸೇರಿದಂತೆ ಉತ್ತರ ಭಾರತದ ಯುವಕರು ಕೂಡ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಉತ್ತರ ಭಾರತ ವಿದ್ಯಾರ್ಥಿಗಳು ಕೂಡ ತಮ್ಮ ಊರಿನಿಂದ ಮಾದಕ ವಸ್ತುಗಳನ್ನು ತರಿಸಿ ಉಡುಪಿಯಲ್ಲಿ ಮಾರಾಟ ಮಾಡುವ ಜಾಲ ಕೂಡ ಬೆಳಕಿಗೆ ಬಂದಿದೆ.
ಹೊಸ ಬಗೆಯ ಚಟ
ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಐಡೆಕ್ಸ್, ಫೆವಿಕಾಲ್, ಪೆಟ್ರೋಲ್‌ಗಳನ್ನು ಮೂಸಿ ನೋಡುವ ಚಟ ತುಂಬಾ ಜಾಸ್ತಿಯಾಗುತ್ತಿದೆ. ಇದಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಗ್ರಾಮೀಣ ಭಾಗದ ಬಡ ಯುವಕರು. ಇದಕ್ಕೆ ಕಾರಣ ಇದರಲ್ಲಿರುವ ಕೆಮಿಕಲ್ ಹಸಿವೆಯನ್ನು ಕಡಿಮೆ ಮಾಡುತ್ತದೆ. ಆ ಕಾರಣದಿಂದ ಬೀದಿಬದಿಯಲ್ಲಿರುವ ಹೆಚ್ಚಿನ ಯುವಕರು ಹೊಟ್ಟೆಗೆ ಏನೂ ಸಿಗದಾಗ ಇದರ ಮೊರೆ ಹೋಗುತ್ತಾರೆ. ಆದರೆ ಇದರ ಪರಿಣಾಮ ಮಾತ್ರ ತೀರಾ ಕೆಟ್ಟದ್ದಾಗಿರುತ್ತದೆ. ಈ ವಸ್ತುಗಳನ್ನು ಸೇವನೆ ಮಾಡುತ್ತಿರುವಾಗಲೇ ‘ಬ್ರೈನ್‌ಡೆಡ್’ ಆಗಿ ವ್ಯಸನಿ ಸ್ಥಳದಲ್ಲೇ ಸಾಯಬಹುದು. ಕ್ನಿಡಿ ವೈಫಲ್ಯ ಕೂಡ ಇದರ ಪರಿಣಾಮದಲ್ಲಿ ಒಂದಾಗಿದೆ. ಕೆಲ ವರ್ಷದ ಹಿಂದೆ ಚಿಕ್ಕಮಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ಈ ಡ್ರಗ್ಸ್ ಸೇವನೆ ಸಂದರ್ಭ ಮೃತಪಟ್ಟಿದ್ದಾರೆ. ಇದರಲ್ಲಿರುವ ಟೋಲೆನ್ ಎಂಬ ರಾಸಾಯನಿಕವು ಮತ್ತು ಬರಿಸುವುದರಿಂದ ಯುವಕರು ಅತ್ಯಂತ ಸುಲಭದಲ್ಲಿ ಸಿಗುವ ಈ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.
ಬೆಳಕಿಗೆ ಬಾರದ ಪ್ರಕರಣಗಳು
ಮಾದಕ ದ್ರವ್ಯ ವ್ಯಸನಿಗಳು ಚಿಕಿತ್ಸೆಗೆ ಬರಲು ಹಿಂದೇಟು ಹಾಕುತ್ತಾರೆ. 1000 ಮಂದಿ ಮಾದಕ ದ್ರವ್ಯ ವ್ಯಸನಿಗಳಲ್ಲಿ ಕೇವಲ 10 ಮಂದಿ ಮಾತ್ರ ಚಿಕಿತ್ಸೆಗಾಗಿ ಆಸ್ಪತ್ರೆ ಬರುತ್ತಾರೆ. ಇದರಿಂದ ಜಿಲ್ಲೆಯಲ್ಲಿನ ಮಾದಕ ವ್ಯಸನಿಗಳ ನಿಖರ ಅಂಕಿ ಅಂಶ ಪತ್ತೆ ಹಚ್ಚಲು ಸಾಧ್ಯವಿಲ್ಲ. 2004-05ರಲ್ಲಿ ಈ ವ್ಯಸನಕ್ಕೆ ಜಿಲ್ಲೆಯ ಓರ್ವ ವಿದ್ಯಾರ್ಥಿ ಬಲಿಯಾಗಿರುವ ವಿಚಾರ ಬಿಟ್ಟರೆ ಅದರ ನಂತರ ಯಾವುದೇ ಸಾವು ಪ್ರಕರಣ ಬೆಳಕಿಗೆ ಬಂದಿಲ್ಲ. ಈತ ಇಂಜೆಕ್ಷನ್ ಮೂಲಕ ಡ್ರಗ್ಸ್ ಸೇವಿಸುತ್ತಿದ್ದ ಎನ್ನಲಾಗಿದೆ. ಮಾದಕ ವ್ಯಸನಿಗಳ ಸಾವನ್ನು ಆತನ ಶಿಕ್ಷಣ ಸಂಸ್ಥೆ ಹಾಗೂ ಮನೆಯವರು ಅವರ ಘನತೆಗೆ ಧಕ್ಕೆ ಬರಬಹುದೆಂಬ ಕಾರಣಕ್ಕೆ ಬಹಿರಂಗವಾಗದಂತೆ ಮುಚ್ಚಿ ಹಾಕುತ್ತಾರೆ. ಇದರಿಂದ ಇದರ ಸಾವಿನ ಪ್ರಮಾಣ ಬೆಳಕಿಗೆ ಬರುತ್ತಿಲ್ಲ. ಮಾದಕ ದ್ರವ್ಯವ್ಯಸನಿಗಳು ಬಹುತೇಕ ತಮ್ಮ ಬದುಕನ್ನು ಅಂತ್ಯಗೊಳಿಸುವುದು ಆತ್ಮಹತ್ಯೆಯ ಮೂಲಕ. ಈ ಆತ್ಮಹತ್ಯೆ ಕೂಡ ಹೊರ ಜಗತ್ತಿಗೆ ತಿಳಿಯದಂತೆ ನೋಡಿಕೊಳ್ಳಲಾಗುತ್ತದೆ. ಹಾಗಾಗಿ ಜಿಲ್ಲೆಯ ಮಾದಕ ದ್ರವ್ಯ ವ್ಯಸನಿಗಳ ಆತ್ಮಹತ್ಯೆಯ ನಿಖರ ಅಂಕಿಅಂಶ ಕೂಡ ಲೆಕ್ಕಕ್ಕೆ ಸಿಗುತ್ತಿಲ್ಲ. ಅಲ್ಲದೆ ಕೆಲವು ಪ್ರಕರಣಗಳು ಮದ್ಯವ್ಯಸನದಿಂದ, ಕುಡಿತದ ಚಟದಿಂದ ಸಾವು ಎಂಬಂತೆ ದಾಖಲಾಗುತ್ತಿವೆ.
ಆನ್‌ಲೈನ್ ದಂಧೆ
ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳಿರುವ ಮಣಿಪಾಲದಂತಹ ಪ್ರದೇಶಗಳಲ್ಲಿ ಈಗ ಡ್ರಗ್ಸ್ ದಂಧೆ ಹೊಸ ರೂಪದಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮೊದಲಿನಂತೆ ಬೈಕಿನಲ್ಲಿ ಬಂದು ಡ್ರಗ್ಸ್ ಮಾರಾಟ ಮಾಡುವ ದಂಧೆ ಈಗ ಕಡಿಮೆಯಾಗಿದ್ದು, ಆನ್‌ಲೈನ್ ಮೂಲಕ ಡ್ರಗ್ಸ್ ಖರೀದಿಸಿ ಸೇವಿಸುವ ಹೊಸ ವ್ಯವಸ್ಥೆ ವ್ಯಾಪಕವಾಗಿ ನಡೆಯುತ್ತಿರುವುದು ಗೊತ್ತಾಗಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ ಡ್ರಗ್ಸ್‌ನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ. ಅದು ಕೆಲವೇ ದಿನಗಳಲ್ಲಿ ಕೊರಿಯರ್ ಮೂಲಕ ಅವರ ಮನೆಯ ಬಾಗಿಲಿಗೆ ಬಂದು ತಲುಪುತ್ತದೆ. ಇದರಿಂದ ಡ್ರಗ್ಸ್ ನ ಮೂಲವನ್ನು ಕಂಡು ಹಿಡಿಯಲು ಆಗುವುದಿಲ್ಲ. ಹೀಗೆ ವಿದ್ಯಾರ್ಥಿಗಳು ಸುಲಭ ಹಾಗೂ ಸುರಕ್ಷಿತವಾಗಿ ರುವ ಈ ವ್ಯವಸ್ಥೆಯಿಂದ ಹೆಚ್ಚು ಹೆಚ್ಚು ಮಾದಕದ್ರವ್ಯ ವ್ಯಸನಿಗಳಾಗುತ್ತಿದ್ದಾರೆ.
ವಿದ್ಯಾರ್ಥಿಗಳು ಟಿಡಿ ಜೆಸಿಕ್ ಎಂಬ ಡ್ರಗ್ಸ್‌ನ್ನು ಆನ್‌ಲೈನ್ ಮೂಲಕ ಖರೀದಿಸಿ ಇಂಜೆಕ್ಷನ್ ಮೂಲಕ ಸೇವನೆ ಮಾಡುತ್ತಾರೆ. ಅದಲ್ಲದೆ ನಾಲಗೆ ಅಡಿಯಲ್ಲಿ ಇಟ್ಟು ಸೇವನೆ ಮಾಡುವ ಮಾತ್ರೆ ಕೂಡ ಮಾರುಕಟ್ಟೆಯಲ್ಲಿದೆ. ಇದರ ಮೂಲ ವಿದೇಶ. ಇದು ಎಲ್ಲಿಂದ ಬರುತ್ತದೆ, ಯಾರಿಗೆ ತಲುಪುತ್ತದೆ ಎಂಬುದು ಪತ್ತೆ ಹಚ್ಚುವುದೇ ದೊಡ್ಡ ಸವಾಲು. ವಿದ್ಯಾರ್ಥಿಗಳು ತಾವು ಖರೀದಿಸಿದ ಡ್ರಗ್ಸ್‌ಗೆ ಹಣವನ್ನು ಬ್ಯಾಂಕ್ ಖಾತೆಯ ಮೂಲಕ ಪಾವತಿ ಮಾಡು ತ್ತಾರೆ. ಆದರೆ ಇವರು ಪಾವತಿಸುವ ಖಾತೆ ಒಂದಾದರೆ, ಅಲ್ಲಿ ಸ್ವೀಕರಿಸುವ ಖಾತೆ ಬೇರೆಯೇ ಆಗಿರುತ್ತದೆ. ಹೀಗಾಗಿ ಬ್ಯಾಂಕ್ ಯಾವುದು ಎಂಬುದನ್ನು ಕೂಡ ಕಂಡು ಹಿಡಿಯಲು ಆಗುವುದಿಲ್ಲ. ಇದೆಲ್ಲವೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.
ಬಡವರ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ
‘ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ ಮಾದಕ ವ್ಯಸನಗಳಲ್ಲಿ ಗಾಂಜಾ ಮತ್ತು ಫೆವಿ ಕಾಲ್ ಸೇವನೆಯೇ ಜಾಸ್ತಿ ಕಂಡುಬರುತ್ತಿದೆ. ಇದಕ್ಕೆ ಬಲಿಯಾಗಿರುವವರು ಅದರಿಂದ ಹೊರ ಬರಲು ಚಿಕಿತ್ಸೆಗೆ ಬರುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡವರಾಗಿದ್ದಾರೆ. ಯುವಕರು ಹೆಚ್ಚಾಗಿ ಗೆಳೆಯರ ಮೂಲಕ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಶಾಲಾ ಕಾಲೇಜುಗಳ ವಠಾರದಲ್ಲಿ ಅತ್ಯಂತ ಸುಲಭವಾಗಿ ಡ್ರಗ್ಸ್ ಸಿಗುತ್ತಿವೆ. ಗ್ರಾಮೀಣ ಪ್ರದೇಶದಲ್ಲೂ ಈ ಜಾಲ ಹೆಚ್ಚಾಗಿದ್ದು, ಬಡವರ ಮಕ್ಕಳು ಇದರ ಬಲಿಪಶುಗಳಾಗುತ್ತಿದ್ದಾರೆ’
-ಡಾ.ಪಿ.ವಿ.ಭಂಡಾರಿ,
ಮನೋವೈದ್ಯ, ಉಡುಪಿ
ತೆರೆಯ ಮರೆಯಲ್ಲಿ...
ಈಗಿನ ಹೊಸ ಆನ್‌ಲೈನ್ ಡ್ರಗ್ಸ್ ಜಾಲದಿಂದ ಮೂಲ ಪತ್ತೆ ಹಚ್ಚುವುದು ಕಷ್ಟ. ಹಿಂದೆ ನಡೆಯುತ್ತಿದ್ದ ರೀತಿಯಲ್ಲಿ ಈಗ ಹೆಚ್ಚು ದಂಧೆ ನಡೆಯುತ್ತಿಲ್ಲ. ವ್ಯಕ್ತಿಯೊಬ್ಬ ಡ್ರಗ್ಸ್ ಸೇವನೆ ಮಾಡುತ್ತಿರುವಾಗ ಮಾತ್ರ ಪತ್ತೆ ಹಚ್ಚುವ ಸ್ಥಿತಿಯಲ್ಲಿದ್ದೇವೆ. ಅದು ಬಿಟ್ಟು ಅದು ಎಲ್ಲಿಂದ ಬರುತ್ತದೆ, ಯಾರಿಗೆ ಹೋಗುತ್ತದೆ ಎಂಬುದು ಎಲ್ಲವೂ ತೆರೆಯ ಹಿಂದೆ ನಡೆಯುತ್ತಿರುತ್ತದೆ. ಆದರೂ ನಾವು ಪ್ರತಿಯೊಂದನ್ನು ಫಾಲೋ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲೂ ಸಣ್ಣ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದು, ಈ ಸಂಬಂಧ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದೇವೆ.
-ಕೆ.ಟಿ.ಬಾಲಕೃಷ್ಣ,
ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ.
ಎಲ್ಲೆಲ್ಲಿ ... ಎಷ್ಟೆಷ್ಟು?
♦ 2013ರಲ್ಲಿ ಮಲ್ಪೆ, ಮಣಿಪಾಲ, ಕಾರ್ಕಳ, ಉಡುಪಿ, ಕುಂದಾಪುರ, ಪಡುಬಿದ್ರೆ, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 11 ಪ್ರಕರಣಗಳಲ್ಲಿ 25 ಮಂದಿ ಬಂಧನ 8.707 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
♦ 2014ರಲ್ಲಿ ಕುಂದಾಪುರ, ಉಡುಪಿ, ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳಲ್ಲಿ 7ಮಂದಿಯನ್ನು ಬಂಧಿಸಿ 1.220 ಕೆ.ಜಿ. ಗಾಂಜಾ ಮತ್ತು 1.950 ಕೆ.ಜಿ. ಬ್ರೌನ್‌ಶುಗರ್ ವಶಪಡಿಸಿಕೊಳ್ಳಲಾಗಿದೆ.
♦ 2015ರಲ್ಲಿ ಮಣಿಪಾಲ, ಕಾಪು, ಉಡುಪಿ, ಹಿರಿಯಡ್ಕ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಪ್ರಕರಣಗಳಲ್ಲಿ 17 ಮಂದಿಯನ್ನು ಬಂಧಿಸಿ, 300 ಗ್ರಾಂ ಅಫೀಮು ಮತ್ತು 11.490 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
♦ 2016ರಲ್ಲಿ ಮಣಿಪಾಲ, ಕಾರ್ಕಳ ಗ್ರಾಮಾಂತರ, ಕಾಪು, ಕೋಟ, ಮಲ್ಪೆ, ಉಡುಪಿ, ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 11 ಪ್ರಕರಣಗಳಲ್ಲಿ 9.658 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.