ಸ್ಕಿಜೋಫ್ರೀನಿಯಾವನ್ನು ಗೆದ್ದವನ ಆತ್ಮಕಥೆ
ಮಾನಸಿಕ ಖಿನ್ನತೆ ಆಧುನಿಕ ದಿನಗಳ ದೊಡ್ಡ ಸವಾಲಾಗಿ ಬೆಳೆಯುತ್ತಿದೆ. ದೈಹಿಕ ರೋಗಗಳ ಕುರಿತಂತೆ ಇರುವ ವೌಢ್ಯಗಳು ಇಂದು ಸರಿಯುತ್ತಿವೆಯಾದರೂ, ಮಾನಸಿಕ ಕಾಯಿಲೆಯ ಕುರಿತ ವೌಢ್ಯಗಳು ಇನ್ನೂ ದಟ್ಟವಾಗಿ ಉಳಿದುಕೊಂಡಿವೆ. ಇಂದಿಗೂ ಈ ಕಾಯಿಲೆಯ ಬಗ್ಗೆ ತಪ್ಪುಕಲ್ಪನೆಗಳಿವೆ. ಈ ಕಾಯಿಲೆಯನ್ನು ಒಪ್ಪಿಕೊಳ್ಳಲು, ಪ್ರಕಟಪಡಿಸಲು ಹಿಂಜರಿಯುವ ದೊಡ್ಡ ಸಂಖ್ಯೆ ಇರುವುದರಿಂದಲೇ ಈ ಕಾಯಿಲೆ ಕುಟುಂಬವನ್ನೂ, ಸಮಾಜವನ್ನು ತೀವ್ರವಾಗಿ ಕಾಡತೊಡಗಿದೆ. ಜೊತೆಗೆ ಕಾಯಿಲೆ ಪೀಡಿತನನ್ನು ನೋಡುವ ಸಮಾಜದ ದೃಷ್ಟಿಯೂ ಬದಲಾಗಿಲ್ಲ.
ಈ ಸಂದರ್ಭದಲ್ಲಿ ಒಬ್ಬ ‘ಸ್ಕಿಜೋಫ್ರೀನಿಯಾ’ದಂತಹ ಮಾನಸಿಕ ಕಾಯಿಲೆಗೆ ಸಿಕ್ಕಿ, ಅದರೊಳಗೆ ನರಳಿ, ಅದನ್ನು ಎದುರಿಸಿ ಗೆದ್ದವನು ತನ್ನ ಅನುಭವವನ್ನು ತೋಡಿಕೊಂಡರೆ ಹೇಗಿರುತ್ತದೆ? ಸಾಹುಕಾರ ರೈತ ಕುಟುಂಬದಲ್ಲಿ ಜನಿಸಿದ ಮಲ್ಲಾರೆಡ್ಡಿಯವರು ಬಹುಕಾಲ ಸ್ಕಿಜೋಫ್ರೀನಿಯಾ ಎಂಬ ಮಾನಸಿಕ ರೋಗಕ್ಕೆ ತುತ್ತಾಗಿ ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡವರು. ಕಾನೂನನ್ನು ಅಭ್ಯಸಿಸಿ, ಹಲವು ಪ್ರಾಂತಗಳಲ್ಲಿ ಸಂಚರಿಸುತ್ತಾ ಅಲ್ಜೀರಿಯಾ ದೇಶಕ್ಕೂ ಹೋಗಿ ಇಂಗ್ಲಿಷ್ ಅಧ್ಯಾಪಕರಾಗಿ ಉದ್ಯೋಗ ನಿರ್ವಹಿಸಿದ್ದ ಇವರು ಮಾನಸಿಕ ಕಾಯಿಲೆಯಿಂದ ಹೇಗೆ ಜರ್ಝರಿತರಾಗಿ ವರ್ತಮಾನದಿಂದ ದೂರ ತಳ್ಳಲ್ಪಡುತ್ತಾರೆ ಮತ್ತು ಕೊನೆಗೂ ಅದನ್ನು ಗೆದ್ದು ಹೇಗೆ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಯಿತು ಎನ್ನುವುದನ್ನು ‘ಸೋತು ಗೆದ್ದ ಮನುಷ್ಯ’ ಕೃತಿ ವಿವರಿಸುತ್ತದೆ. ಈ ಕೃತಿ ಮಲ್ಲಾರೆಡ್ಡಿಯವರ ಆತ್ಮಕತೆ. ಕಸ್ತೂರಿ ಎಂದೇ ಪರಿಚಿತರಾಗಿರುವ ಕೆ. ವಿ. ಚಂದ್ರಜ್ಯೋತಿ. ಈ ಕೃತಿ ಯನ್ನು ತೆಲುಗಿನಿಂದ ಕನ್ನಡಕ್ಕಿಳಿಸಿದ್ದಾರೆ.
ಸ್ಕಿಜೋಫ್ರೀನಿಯಾದಂತಹ ರೋಗದ ಸುಳಿಗೆ ಸಿಲುಕಿದರೆ, ಅದು ಅವರನ್ನು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುನ್ನಡೆಸುತ್ತದೆ. ಮಲ್ಲಾರೆಡ್ಡಿ ತನ್ನ ಮಾನಸಿಕ ಕಾಯಿಲೆಯನ್ನು ಆರಂಭದಲ್ಲಿ ಕುಟುಂಬಕ್ಕೆ ಮುಚ್ಚಿಟ್ಟಿರುತ್ತಾರೆ. ಮದುವೆಯ ಮುಂಚೆ ಪತ್ನಿಗೂ ಗೊತ್ತಿರುವುದಿಲ್ಲ. ಮೊದಲ ದಿನ ಪತ್ನಿಯ ಬಳಿ ತನ್ನ ಕಾಯಿಲೆಯನ್ನು ಬಹಿರಂಗಪಡಿಸುತ್ತಾರೆ. ಬಳಿಕ ಪತ್ನಿ ಅವರನ್ನು ಅರ್ಥ ಮಾಡಿಕೊಂಡು, ಸಹನೆ, ತಾಳ್ಮೆಯಿಂದ ಮುನ್ನಡೆಯುತ್ತಾರೆ. ಬರೀ ಔಷಧಿಯಿಂದ ಮಾತ್ರ ಮಾನಸಿಕ ಕಾಯಿಲೆಯನ್ನು ಗೆಲ್ಲಲು ಸಾಧ್ಯವಿಲ್ಲ. ಕುಟುಂಬವೂ ರೋಗಿಗೆ ಒತ್ತಾಸೆಯಾಗಿರಬೇಕು. ತನ್ನ ತಂದೆ ತಾಯಿಯಿಂದ ನಿರ್ಲಕ್ಷಕ್ಕೊಳಗಾದರೂ, ಹೆಂಡತಿ ಮತ್ತು ಮಾವನವರ ಕಾಳಜಿಯಿಂದಾಗಿ ಹಂತ ಹಂತವಾಗಿ ಈ ರೋಗವನ್ನು ಗೆಲ್ಲುವುದಕ್ಕೆ ಮಲ್ಲಾರೆಡ್ಡಿಯವರಿಗೆ ಸಾಧ್ಯವಾಗುತ್ತದೆ.
ಈ ಕಥನದಲ್ಲಿ ವಿವರಗಳನ್ನು ತುಂಬಾ ಮುಗ್ಧವಾಗಿ ಹೇಳಿಕೊಂಡಿದ್ದಲ್ಲದೆ, ಎಲ್ಲಿಯೂ ಯಾರಿಂದಲೂ ಅನುಕಂಪ ಗಿಟ್ಟಿಸುವಂಥ ಹೇಳಿಕೆಗಳಿಲ್ಲ. ಸಹಜವಾಗಿ ನಡೆದ ಘಟನೆಗಳನ್ನಷ್ಟೇ ದಾಖಲಿಸುತ್ತಾ ಹೋಗಿದ್ದಾರೆ. ಸ್ಕಿಜೋಫ್ರೀನಿಯಾ, ಖಿನ್ನತೆಗಳಿಂದ ಮಾನಸಿಕ ಸ್ತಿಮಿತ ಕಳೆದುಕೊಳ್ಳುವ ದುರ್ಬಲ ವ್ಯಕ್ತಿಗಳಿಗೆ ಧೈರ್ಯ-ಸ್ಥೈರ್ಯ ತುಂಬಬಲ್ಲ ಕೃತಿ ಇದು. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 115 ರೂಪಾಯಿ..