ವನ್ಯ ಲೋಕದ ವಿನ್ಯಾಸಗಾರ:ಲೋಕೇಶ್ ಮೊಸಳೆ

Update: 2017-06-24 14:30 GMT

ಸರ್, ನಿಮ್ಮ ಊರು, ಬಾಲ್ಯ, ಶಿಕ್ಷಣದ ಬಗ್ಗೆ ತಿಳಿಸಿ

- ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ 1966ರಲ್ಲಿ ನಾನು ಜನಿಸಿದ್ದು. ಅಜ್ಜಿ ತೀರಿಕೊಂಡ ನಂತರ ನಾವು ಹಾಸನದ ಮೊಸಳೆ ಎಂಬ ಹಳ್ಳಿಗೆ ಬಂದ್ವಿ. ಶಾಲೆಯ ಗುಣಮಟ್ಟ ಅಷ್ಟೇನೂ ಚೆನ್ನಾಗಿರಲಿಲ್ಲ. ಕಿ.ರಂ. ನಾಗರಾಜ ಕೂಡ ಅದೇ ಶಾಲೆಯಲ್ಲಿ ಕಲಿತವರು. ಮುಂದೆ ಜರ್ನಲಿಸಂ ಮಾಡಬೇಕೆಂದು ಮೈಸೂರಿಗೆ ಪ್ರಯಾಣ ಬೆಳೆಸಿದೆ. ಆಗಿನಿಂದ ಮೈಸೂರೇ ಮನೆಯಾಗಿದೆ. ನಮ್ಮ ಇಡೀ ಕುಟುಂಬವೇ ಟೀಚರ್ಸ್‌ ಕುಟುಂಬ.

 ಛಾಯಾಗ್ರಹಣದ ಆಸಕ್ತಿ ಮೂಡಿದ್ದು?

-ಆರಂಭದಲ್ಲಿ ಸ್ನೇಹಿತ ರಾಜೀವ್ ಪೂರ್ಣಚಂದ್ರ ಸಾಹಿತ್ಯ, ವಿಚಾರವಾದ, ಕಮ್ಯುನಿಸ್ಟ್ ಪುಸ್ತಕಗಳ ಪರಿಚಯ ಮಾಡಿಸಿದ. ಮೈಸೂರು ವಿವಿಯ ಪ್ರಾಧ್ಯಾ ಪಕರು ಬಹಳ ಪ್ರತಿಭಾವಂತರಿದ್ದರು. ಅಲ್ಲಿ ಓದುವವರಿಗೆ, ಕಲಿಯುವವರಿಗೆ ವಿವಿ ಸ್ವರ್ಗವಾಗಿತ್ತು. ಅದೊಂದು ಥರಃ ಮಿನಿ ಜೆ.ಎನ್.ಯು ಇದ್ದಂತಿತ್ತು. ಪೊಟೋಗ್ರಫಿಯನ್ನು ಯಾರೂ ನಿರ್ದಿಷ್ಟವಾಗಿ ಕಲಿಸಿದವರಿಲ್ಲ. ಅಲ್ಲಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ಈ ಹುಚ್ಚು ಅದಾಗಲೇ ಹತ್ತಿತ್ತು. ಒಮ್ಮೆ ಕೃಪಾಕರ - ಸೇನಾನಿಯವರ ಚಿತ್ರ ಪ್ರದರ್ಶನವಿತ್ತು. ಈ ಇಬ್ಬರೂ ತೇಜಸ್ವಿ ಯಂತೆ ಮೈಸೂರು ಬಿಟ್ಟು ಅಣ್ಣಾಮಲೈ ಕಾಡು ಸೇರಿದ್ರು. ನನ್ನನ್ನು ಅತಿಯಾಗಿ ಪ್ರಭಾವಿಸಿದವರೆಂದರೆ ಈ ಇಬ್ಬರೇ. ಪಿ.ಎಸ್.ತಿಪ್ಪೇಸ್ವಾಮಿಯವರ ಮೊಮ್ಮಗ ಎಲೆಕ್ಟ್ರೋ 35 ಕ್ಯಾಮರಾ ಒಮ್ಮೆ ತಂದ. ಅದೇ ನಮಗೆ ಕ್ಯಾಮರಾ ಹಿಡಿಯಲು ಸ್ಫೂರ್ತಿಯಾಯಿತು.

 ಛಾಯಾಗ್ರಹಣ ನಿಮಗೆ ಏನನ್ನು ನೀಡಿದೆ?

- ವ್ಯಾವಹಾರಿಕವಾಗಿ ಫೊಕೋಗ್ರಫಿ ಎಂಬುದು ನಷ್ಟದ ಬಾಬತ್ತೇ. ಆದರೆ ಅದು ನೀಡುವ ಸಂತೋಷ, ನೆಮ್ಮದಿ ಮುಖ್ಯ. ಕೃಪಾಕರ - ಸೇನಾನಿ ಎಂದೂ ಲಾಭ ನಷ್ಟ ನೋಡುವವರಲ್ಲ. ಅಂತಾರಾಷ್ಟ್ರೀಯ ಮಟ್ಟದ 25 ನಿಮಿಷಗಳ ಸಿನೆಮಾಗಾಗಿ ಅವರು 15 ವರ್ಷ ಶ್ರಮ ಹಾಕಿದ್ದಾರೆ. ಅದಕ್ಕೆ ಬದ್ಧತೆ, ಸಿದ್ಧತೆ, ವೀಕ್ಷಣೆ, ಸಂಶೋಧನೆ ಎಲ್ಲವೂ ಸಾಧ್ಯವಾಗಬೇಕು. ಯಾರು ಸಂತೋಷಕ್ಕೆ ವೈಲ್ಡ್ ಲೈಫ್ ಫೊಕೋಗ್ರಫಿ ಮಾಡ್ತಾರೋ ಅವರೆಲ್ಲ ಹೀಗೇನೆ ಖ್ಯಾತಿಗಳಿ ಸಬಹುದು. ಅಪರೂಪಕ್ಕೊಮ್ಮೆ ಹಣವನ್ನು ಇದು ತಂದುಕೊಡುತ್ತದೆ. ಆದರೆ ಬದುಕು ಇದರಿಂದಲೇ ಕಟ್ಟಿಕೊಳ್ಳಲು ಆಗದು.

 ಛಾಯಾಗ್ರಹಣ ಬೆನ್ನು ಹತ್ತಿ ಹೊರಟಾಗ ನಿಮಗೆ ಸಿಕ್ಕ ಪ್ರೋತ್ಸಾಹ ಎಂಥದು?

-ಎಲ್ಲರಂತೆ ಅಪ್ಪ -ಅಮ್ಮನೂ ಬೈದ್ರು. ಒಮ್ಮೆ 150 ರೂ. ಕೇಳಿದೆ, ಬೈದ್ರು. ಆಮೇಲೆ ನನ್ನ ಚಿತ್ರ ಅಥವಾ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿ 750 ರೂ. ಸಂಭಾವನೆ ಬಂತು. ಎಲ್ಲರೂ ಸಂತೋಷಪಟ್ಟರು. ಊರಿನಲ್ಲಿ ಎಲ್ಲರೂಸಂಭ್ರಮಿಸಿದರು. ನಂತರ ನನ್ನ ಆಯ್ಕೆಗೆ ವಿರೋಧ ಬರಲಿಲ್ಲ.

 ಛಾಯಾಗ್ರಹಣದ ವೇಳೆ ನಿಮಗೆ ಖುಷಿ ಕೊಟ್ಟ ಗಳಿಗೆ ಯಾವುದಾದರೂ ಇದೆಯೇ?

- ವೈಲ್ಡ್ ಲೈಫ್ ಬಗೆಗಿರಲಿ, ನಮ್ಮ ಸ್ವಂತ ಮಕ್ಕಳನ್ನೇ ನಾವು ಸರಿಯಾಗಿ ಅರ್ಥಮಾಡಿಕೊಳ್ಳಲು ಆಗುತ್ತಾ? ನೆರೆ-ಹೊರೆಯವರನ್ನು ಗ್ರಹಿಸಲು ಆಗುತ್ತಾ? ಫೊಕೋಗ್ರಫಿ ಹೀಗೇ ಇರಬೇಕಿತ್ತು ಅಂತ ನಾವು ತಯಾರಾಗಿರಲು ಆಗೋದಿಲ್ಲ. ದಕ್ಕಿದಷ್ಟೇ ನಮ್ಮ ಪುಣ್ಯ. ಆದರೆ ಅವನ್ನು ಸಮಾಜಕ್ಕೆ ಪೂರಕ ವಾಗುವಂತೆ ಪ್ರೆಸೆಂಟ್ ಮಾಡಿಬಿಟ್ಟರೆ ಅದೇ ಸಾರ್ಥಕತೆ.

 ಕ್ಯಾಲೆಂಡರ್‌ಗಳದ್ದೇ ಒಂದು ವಿಸ್ಮಯ ಲೋಕ. ಅದರೊಂದಿಗಿನ ನಿಮ್ಮ ನಂಟು?

-ಹನ್ನೆರಡು ವರ್ಷಗಳಿಂದ ಕ್ಯಾಲೆಂಡರ್‌ಗಳನ್ನು ಮಾಡುತ್ತಿದ್ದೇನೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಅಲ್ಪಸ್ವಲ್ಪ ಹಣ ಸಿಗುತ್ತೆ ಅನ್ನೋದು. ಎರಡನೆಯದು, ಪ್ರಕೃತಿ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು. ಎಷ್ಟೋ ಮನೆಗಳಲ್ಲಿ ಮಕ್ಕಳು ಕ್ಯಾಲೆಂಡರಿನ ಚಿತ್ರಗಳನ್ನು ನೋಡಿಯೇ ಊಟ ಮಾಡುತ್ತವೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ.

 ಛಾಯಾಗ್ರಹಣಕ್ಕೆ ಸಂದ ಗೌರವ ಪ್ರಶಸ್ತಿಗಳು..?

-ನಾನು ಮೂಲತಃ ವನ್ಯ ಜೀವಿ ಛಾಯಾಗ್ರಾಹಕನಲ್ಲ. ನಾನು ಬೇಸಿಕಲಿ ಪತ್ರಕರ್ತ. ಹಾಗಂತ ಪ್ರಶಸ್ತಿಗಳು ಬಂದಿಲ್ಲವಂತಲ್ಲ. ಹಲವು ಬಾರಿ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಒಂದೇ ಚಿತ್ರ ಹತ್ತು ಕಡೆ ಹೋದ್ರೆ ಐದು ಕಡೆ ಪ್ರಶಸ್ತಿ ಸಿಗುತ್ತೆ. ಐದು ಕಡೆ ಸಿಗಲ್ಲ. ಲಂಕೇಶರು ಬಹುವಾಗಿ ಮೆಚ್ಚಿ ಕೊಂಡ ಡಾಲಿ ಎಂಬ ಚಿತ್ರಕಾರನ ಪೈಂಟಿಂಗ್ಸ್ ಆತನ ಕಾಲದಲ್ಲಿ ಉತ್ತಮ ಚಿತ್ರವೆನಿಸಿಕೊಂಡಿರಲಿಲ್ಲ. ನಂತರ ಅವು ಉತ್ತಮ ಚಿತ್ರಗಳೆನಿಸಿಕೊಂಡವು. ಎಂ.ಎಸ್. ಪ್ರಕಾಶ್‌ಬಾಬುನಂಥವರು ಕನ್ನಡದಲ್ಲಿ ಚಲನಚಿತ್ರ ತೆಗೀತಾರೆ. ಆದ್ರೆ ಅವರು ಈ ಕಾಲಕ್ಕೆ ದಕ್ಕುತ್ತಿಲ್ಲ. ಇನ್ಯಾವತ್ತೋ ಅವು ಅರ್ಥವಾಗಬ ಹುದು. ಆಗದೇ ಇರಬಹುದು ಕೂಡ. ಇಡೀ ಸಮಾಜಕ್ಕೆ ಬೌದ್ಧಿಕ ಬೆಳವಣಿಗೆ ಯಾದಾಗ ಅದಕ್ಕೆಲ್ಲ ಮಾನ್ಯತೆ ಸಿಗುತ್ತೆ. ನನಗೆ ಪರಿಚಯವೇ ಇಲ್ಲದಿದ್ದ ದೊಡ್ಡ ಲೇಖಕ ನಾಗೇಶ ಹೆಗಡೆಯವರು ವಿದ್ಯಾರ್ಥಿಯಾಗಿದ್ದಾಗ ನಾನು ತೆಗೆದ ಚಿತ್ರವೊಂದರ ಬಗ್ಗೆ ತುಂಬ ಮೆಚ್ಚುಗೆಯಿಂದ ಹೇಳಿದ ಈ ಮಾತು ನನಗೆ ಎಲ್ಲ ಪ್ರಶಸ್ತಿಗಳಿಗಿಂತ ದೊಡ್ಡದು. ‘ನನ್ನ ಉಸಿರಿರುವವರೆಗೂ ಈ ಚಿತ್ರ ನನ್ನ ಹೃದಯದಲ್ಲಿ ಅಚ್ಚೊತ್ತಿರುತ್ತದೆ., ಕಣಯ್ಯ’ ಎಂದದ್ದು. ಅವರ ಈ ಮುಕ್ತ ಶ್ಲಾಘನೆಗೆ ನನ್ನ ಕಣ್ಣು ಒದ್ದೆಯಾದದ್ದನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ.

 ಇತ್ತೀಚೆಗೆ ತಾವು ಚಲನಚಿತ್ರ ಕ್ಷೇತ್ರಕ್ಕೂ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದ್ದೀರಿ ?

-ನನ್ನ ಸ್ನೇಹಿತರ ಬಳಗ ಸೇರಿ ‘ಪಲ್ಲಟ’ ಎಂಬ ಚಿತ್ರ ನಿರ್ಮಾಣ ಮಾಡಿದೆ. ಅಲ್ಲಿ ದಲಿತ ಲೋಕದ ಚಿತ್ರಣ ದಾಖಲಿಸುವುದು ನನ್ನ ಪಾಲಿನ ಕೆಲಸ. ಅದನ್ನು ಅಚ್ಚುಕಟ್ಟಾಗಿ ಮಾಡಿದ ಸಾರ್ಥಕತೆ ಇದೆ. ನನ್ನನ್ನು ಅತಿಯಾಗಿ ಪ್ರಭಾವಿಸಿದ ನನ್ನ ಬಾಲ್ಯದ ಚಿತ್ರಣ, ಕುಳವಾಡಿಕೆ ಕೂಗುವುದು, ತಮಟೆ ಬಡಿಯುವ ಹಳೆಯ ಗ್ರಾಮೀಣ ಬದುಕಿನ ಚಿತ್ರಣವದು. ಚಿತ್ರದ ಒಂದು ದೃಶ್ಯದಲ್ಲಿ ತಮಟೆ ಬಡಿಯು ತ್ತಿದ್ದ ತಂದೆಯ ಸಾವಿಗೆ ಬಂದ ಮಗಳ ದಾರುಣ ಚಿತ್ರ ಮೂಡಿಸಬೇಕಿತ್ತು. ಒಂದೇ ಶಾಟ್‌ನಲ್ಲಿ ತಮಟೆ ಯನ್ನು ಅಸ್ಪಷ್ಟವಾಗಿ ತೋರಿಸುತ್ತ ಹಿಂದೆ ಸರಿವ ಕ್ಯಾಮರಾ ದೀಪವನ್ನು, ಮಗಳ ಕೈ ಕಾಲುಗಳನ್ನು ದಾಟಿ ಮುಖ ದಲ್ಲಿ ಉಕ್ಕಿಬರುವ ದುಃಖವನ್ನು ಕಾವ್ಯದ ರೀತಿ ಚಿತ್ರಿಸಿದ್ದೇವೆ. ಇದು ಅಸ್ಪಷ್ಟತೆಯಿಂದ ಸ್ಪಷ್ಟವಾಸ್ತವವನ್ನು ಶೂನ್ಯದ ಮೂಲಕ ಗ್ರಹಿಸಲು ಮಾಡಿಕೊಂಡ ಐಡಿಯಾ.

 ತಾವು ಪತ್ರಕರ್ತರೆಂದು ಹೇಳಿಕೊಂಡಿದ್ದೀರಿ. ಈ ಪಯಣ ಆರಂಭಗೊಂಡಿದ್ದು ಹೇಗೆ ?

- ಆಗೆಲ್ಲ ಕೈಯಲ್ಲಿ ಸ್ವಂತ ಕ್ಯಾಮರಾ ಇರಲಿಲ್ಲ. ಆಗ ಇದ್ದ ಮೀಡಿಯಾ ಎಂದರೆ ಪತ್ರಿಕೋದ್ಯಮ ಮಾತ್ರ. ಮೊದಲು ಫ್ರೀ ಲ್ಯಾನ್ಸ್ ಆಗಿ ಬರೀತಿದ್ದೆ. ನಂತರ ಲಂಕೇಶ್ ಪತ್ರಿಕೆಗೆ ಸೇರುವ ಅವಕಾಶ ಒದಗಿತು. ಲಂಕೇಶ್‌ರಂಥ ಅತ್ಯುತ್ತಮ ಸಂಪಾದಕರ ಜೊತೆ ಬೆಳೆಯಲು ಸಾಧ್ಯವಾಯಿತು.

 ನಿಮ್ಮ ಮನೆಗೆ ‘ಗೆಳೆಯರ ಮನೆ’ ಎಂಬ ನಾಮಕರಣವೇಕೇ?

-ಸ್ನೇಹಿತರೇ ನನ್ನ ಬಹು ದೊಡ್ಡ ಆಸ್ತಿ. ನನ್ನ ಬಗ್ಗೆ ಪ್ರೀತಿ, ಕಾಳಜಿ ತೋರು ತ್ತಾರೆ. ಗೆಳೆಯರು ಮಾಡಿದ ಸಹಾಯದಿಂದ ನನ್ನ ಬದುಕಿಗೆ ಎಲ್ಲಿಲ್ಲದ ತಿರುವು ಗಳು ಬಂದಿವೆ. ಅಂಥ ನೂರಾರು ಸ್ನೇಹಿತರು ನನ್ನೊಂದಿಗೆ ಪರಿಸರದ ಕೆಲಸಗಳಿಗೆ ಕೈ ಜೋಡಿಸಿದ್ದಾರೆ.

 ಪರಿಣಿತ ಪತ್ರಕರ್ತರಾದ ನೀವು ಈಗ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿ ರುವಿರಿ. ಹೊಸ ತಲೆಮಾರಿನ ಪತ್ರಕರ್ತ ಆಕಾಂಕ್ಷಿಗಳು ಹೇಗಿದ್ದಾರೆ?

- ಬಹುತೇಕ ಮಾಧ್ಯಮಗಳು ಈಗ ಪತ್ರಿಕಾ ಧರ್ಮಕ್ಕೆ ತಿಲಾಂಜಲಿ ಇಟ್ಟಿರುವುದು ನೋಡುತ್ತಿದ್ದೇವೆ. ಬಹುತೇಕ ವಿದ್ಯಾರ್ಥಿ ಮಿತ್ರರು ಮಾನವತೆಯ ಮೂಲ ಸೆಲೆಗಳಾ ಗಿರುವ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯಂಥ ವರನ್ನು ಓದಿಕೊಂಡಿರುವುದೇ ಇಲ್ಲ. ನನ್ನ ಕ್ಲಾಸಿನಶೇ. 80 ರಷ್ಟು ವಿದ್ಯಾರ್ಥಿಗಳಿಗೆ ಅಂಬೇ ಡ್ಕರ್ ಹೆಸರಷ್ಟೇ ಪರಿಚಯ. ಉಳಿದಂತೆ ಏನೂ ಇಲ್ಲ. ದುರಂತ ವೆಂದರೆ ದಲಿತ ಸಮುದಾ ಯದ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಪತ್ರಿಕಾಧರ್ಮದ ಮಿನಿ ಮಮ್ ಸೆನ್ಸ್ ಕೂಡ ಇಲ್ಲದಿರು ವಷ್ಟು ಅಜ್ಞಾನಿಗಳಿದ್ದಾರೆ. ದಲಿತ ವಿದ್ಯಾ ರ್ಥಿಗಳು ಪ್ರಚಲಿತ ವಿದ್ಯಮಾನಗಳನ್ನು ಪರಿಶೀಲಿಸುವ ಗೋಜಿಗೇ ಹೋಗುತ್ತಿಲ್ಲ. ಯಾವುದೇ ಹಟ, ಛಲ ಏನೂ ಇಲ್ಲದೆ ಜರ್ನಲಿಸಂ ಡಿಗ್ರಿ ಪಡೆದು ಹೋಗುವವರೇ ಹೆಚ್ಚು ಮಂದಿ. ಹಸಿವು, ಅವಮಾ ನಗಳು ಇವರನ್ನು ಬಡಿದೆಚ್ಚರಿಸುವುದೇ ಇಲ್ಲ.

 ಆಗಾಗ್ಗೆ ನೀವು ಛಾಯಾಗ್ರಹಣ ತರಬೇತಿಯನ್ನು ನೀಡುತ್ತಿರುವಿರಿ. ಅದು ಉಪಯೋಗವಾಗುತ್ತಿದೆಯೇ ?

- ನಾನು ಮತ್ತು ಗೌರೀಶ ಕಪನಿ ಎಂಬ ಮತ್ತೋರ್ವ ಹವ್ಯಾಸಿ ಛಾಯಾ ಗ್ರಾಹಕ ಸೇರಿ ಈ ತರಬೇತಿ ನೀಡುತ್ತೇವೆ. ನಮ್ಮದು ಅಪರೂಪಕ್ಕೊಮ್ಮೆ ನೀಡುವ ತರಬೇತಿ. ಇದರ ಮೂಲಕ ನಾವು ಕಲಿತಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುವುದು, ಅದರ ಮೂಲಕ ಇನ್ನಷ್ಟು ನಾವೂ ಕಲಿಯುವುದು. ನಮ್ಮಲ್ಲಿನ ಪ್ರತಿಭೆಯನ್ನು ಗುಪ್ತವಾಗಿಟ್ಟುಕೊಂಡರೆ ನಾವು ಸತ್ತಂತೆ. ಹೀಗೆ ಗುಂಪು ಬೆಳೆಸಿದ್ದೀವಿ. ಹೀಗೆ ಪರಿಚಿತರಾದವರಲ್ಲಿ ಗೌರೀಶ ಕಪನಿ, ಬಿ.ಎನ್. ಉಷಾ, ಜಿ. ಶಾಂತಕುಮಾರ್, ಕೆ. ಶಿವಸುಬ್ರಮಣ್ಯ, ಹರ್ಷದ್ ಉದಯ ಕಾಮತ್‌ನಂಥವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ನಮ್ಮ ಒಳಗೆ ಇನ್ನೂರನ್ನು ಮೀರಬಹುದು.

ಛಾಯಾ ಚಿತ್ರವು ಸಾವಿರ ಪದಗಳಿಗೆ ಸಮ ಎಂಬ ಮಾತೊಂದಿದೆ. ಅದು ಹೃದಯಕ್ಕೆ ತಟ್ಟುವಂತಿರಬೇಕು. ಚಿತ್ರವೊಂದರ ಮೇಲೆ ಕಣ್ಣು ಚಲಿಸುವಂತಿರಬೇಕು, ಕ್ಯಾಮರಾವನ್ನು ಆತ್ಮದಂತೆ ಹಿಡಿದು ಪ್ರಕೃತಿಯ ಅಂತಃಕರಣ ಕಟ್ಟಿಕೊಟ್ಟ ಅಪರೂಪದ ಚಿತ್ರಕಾರರೆಂದರೆ ಲೋಕೇಶ್ ಮೊಸಳೆಯವರು. ತಮ್ಮದೇ ವಿನೂತನ ದೃಷ್ಟಿಕೋನದಿಂದ ಅವರು ಸೆರೆಹಿಡಿದ ಚಿತ್ರಗಳು ನೋಡುಗರ ಮನದಲ್ಲಿ ಪುಳಕ ಮೂಡಿಸುತ್ತವೆ. ಈ ವನ್ಯಲೋಕದ ವಿನ್ಯಾಸಗಾರರೊಂದಿಗೆ ಒಂದಿಷ್ಟು ಮಾತು.

Writer - ನೂರ್ ಅಹಮದ್

contributor

Editor - ನೂರ್ ಅಹಮದ್

contributor

Similar News