ಶ್ರಮಿಕರ ಸಂಗಾತಿಯ ತೆರೆದ ಬದುಕು
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗುವ ಅವಕಾಶವನ್ನೂ ನಿರಾಕರಿಸಿ ಕಾರ್ಮಿಕರ ಪರ ನ್ಯಾಯವಾದಿಯಾಗಿಯೇ ಜೀವನ ಪೂರ್ತಿ ದುಡಿದ ಎಂ. ಸಿ. ನರಸಿಂಹನ್ ‘ಶ್ರಮಿಕ ಸಂಗಾತಿ’ಯೆಂದೇ ಹೆಸರು ಪಡೆದವರು. ನರಸಿಂಹನ್ ಅವರ ಬಹುಮುಖಿ ವ್ಯಕ್ತಿತ್ವವನ್ನು ಅವರ ವಿವಿಧ ಆತ್ಮೀಯರು, ಸಂಗಾತಿಗಳು ‘ಶ್ರಮಿಕರ ಸಂಗಾತಿ-ಎಂ. ಸಿ. ನರಸಿಂಹನ್’ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಎಂ. ಎಸ್. ಕೃಷ್ಣನ್ ಸ್ಮರಣೆ ಸಂಸ್ಥೆ ಹೊರತಂದಿರುವ ಈ ಕೃತಿಯಲ್ಲಿ ಎ. ಜ್ಯೋತಿ, ಸಿ. ಆರ್. ಕೃಷ್ಣರಾವ್, ಡಾ. ಜಿ. ರಾಮಕೃಷ್ಣ, ಎಚ್. ಎಸ್. ದೊರೆಸ್ವಾಮಿ, ಮುರಳೀಧರ ಚಿಕ್ಕಮಗಳೂರು, ಎಚ್. ವಿ. ಅನಂತಸುಬ್ಬರಾವ್, ಕೆ. ಬಿ. ನಾರಾಯಣ ಸ್ವಾಮಿ, ಡಾ. ಸಿದ್ದನಗೌಡ ಪಾಟೀಲ್, ಕೆ. ಎಸ್. ಪಾರ್ಥಸಾರಥಿ, ಇಂದಿರಾ ಮೊದಲಾದವವರು ಬರೆದಿದ್ದಾರೆ. ಕನ್ನಡ ಮಾತ್ರವಲ್ಲ, ಇಂಗ್ಲಿಷ್ ಬರಹಗಳನ್ನೂ ಈ ಕೃತಿ ಒಳಗೊಂಡಿದೆ. ಶತಾಯುಷಿಯಾಗಲಿರುವ ನರಸಿಂಹನ್ ಅವರಿಗೆ ಸನ್ಮಾನಗ್ರಂಥದ ರೂಪದಲ್ಲಿ ಇದನ್ನು ಹೊರತರಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರಿದ ಕುಟುಂಬದಲ್ಲಿ ಜನಿಸಿದರೂ, ಶೋಷಿತ ಜನಸಮುದಾಯಗಳಿಗಾಗಿ ಅತೀವ ಕಾಳಜಿಯಿಂದ ಶ್ರಮಿಸಿದವರು ಕಾ ಎಂ.ಸಿ.ಎನ್. ಹಿರಿಯ ಮಗ ಇಂಜಿನಿಯರ್ ಆಗಲೆಂಬ ಸಹಜ ಆಸೆಯಿಂದ ವ್ಯಾಸಂಗಕ್ಕೆ ಕಳುಹಿಸಿದರೆ, ಪೋಷಕರ ಆಶಯಗಳನ್ನು ಧಿಕ್ಕರಿಸಿ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಮತ್ತು ಚಳವಳಿಯ ಆಕರ್ಷಣೆಗೆ ಒಳಗಾಗಿ ಕೆಂಬಾವುಟದ ಹಾದಿ ಹಿಡಿದವರು. ಗಣಿ ಕಾರ್ಮಿಕರೊಡನೆ ಬೆರೆತು ಬಳಿಕ ಚುನಾವಣೆಯಲ್ಲಿ ನಿಂತು ಶಾಸಕರೂ ಆದರು. ನ್ಯಾಯವಾದಿ ಎನ್ನುವ ಸ್ಥಾನವನ್ನು ಅರ್ಥಪೂರ್ಣವಾಗಿ ನಿರ್ವಹಿಸಿದವರು ಇವರು. ಆ ಹುದ್ದೆಗೆ ಘನತೆ ತಂದುಕೊಟ್ಟವರು. ಇಲ್ಲಿರುವ ಬಹುತೇಕ ಲೇಖಕರು ಎಡಪಂಥೀಯ ಹಿನ್ನೆಲೆಯಿಂದ ಬಂದವರು. ಮತ್ತು ಎಂಸಿಎನ್ ಬದುಕನ್ನು ಹತ್ತಿರದಿಂದ ಕಂಡವರು. ಅವರ ಊರು, ಕುಟುಂಬ, ಬಾಲ್ಯ, ಕಾಲೇಜು ಬದುಕು, ಹೋರಾಟ, ನ್ಯಾಯಾಲಯ ವೃತ್ತಿ ಹೀಗೆ ಅವರ ಬೇರೆ ಬೇರೆ ಮಗ್ಗುಲುಗಳನ್ನು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಎಂಸಿಎನ್ ಕೇವಲ ಕಮ್ಯುನಿಸ್ಟರಿಗೆ ಮಾತ್ರವಲ್ಲ, ಎಲ್ಲ ಶೋಷಿತ ಸಮುದಾಯದ ಜನರ ಪ್ರತಿನಿಧಿಯಾಗಿ ಈ ಕೃತಿಯ ಮೂಲಕ ವ್ಯಕ್ತವಾಗುತ್ತಾರೆ. ಹಾಗೆಯೇ ಅವರ ಕುರಿತಂತೆ ಅವರ ಕುಟುಂಬದ ಸದಸ್ಯರೂ ಬರೆದ ಆತ್ಮೀಯ ಬರಹಗಳಿವೆ. ಕೃತಿಯ ಮುಖಬೆಲೆ 125 ರೂ. ಇದರ ವಿತರಣೆಯ ಹೊಣೆಯನ್ನು ನವಕರ್ನಾಟಕ ಪ್ರಕಾಶನ ಹೊತ್ತಿದೆ.