ಕುಕ್ಕರ ಹಳ್ಳಿ ಕಥಾ ಲೋಕಕ್ಕೆ ತೆರೆದ ದಾರಿ...
ಗಂಭೀರ ವಿಮರ್ಶೆಗಳೇ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿವೆ. ಸಣ್ಣ ಪರಿಚಯವನ್ನೇ ಪುಸ್ತಕ ವಿಮರ್ಶೆ ಎಂದು ಓದಿ ತೃಪ್ತಿ ಪಟ್ಟುಕೊಳ್ಳಬೇಕಾದ ದಿನಗಳಲ್ಲಿ ಕನ್ನಡ ಸಾಹಿತ್ಯ ಬಂದು ನಿಂತಿದೆ. ಸುದೀರ್ಘವಾಗಿ ಓದಿ, ಅಧ್ಯಯನ ಮಾಡಿ ಅದರ ಕುರಿತಂತೆ ಬರೆಯುವ ತಾಳ್ಮೆ ಇಂದಿನ ಬರಹಗಾರರಲ್ಲಿ ಇಲ್ಲ. ಜೊತೆಗೆ ಅದಕ್ಕೆ ಪೂರಕವಾದ ಓದುಗರೂ ಇಂದು ಇಲ್ಲ. ಇಂತಹ ಹೊತ್ತಿನಲ್ಲಿ ಒಬ್ಬ ಕತೆಗಾರನ ಒಟ್ಟು ಕತೆಗಳನ್ನು ಓದಿ, ಅಧ್ಯಯನ ಮಾಡಿ ಅವುಗಳ ಕುರಿತಂತೆ ವಿಮರ್ಶಾ ಲೇಖನಗಳನ್ನು ಪ್ರಕಟಿಸುವುದು ಸಣ್ಣ ವಿಷಯವಲ್ಲ. ‘ಬಸವರಾಜು ಕುಕ್ಕರ ಹಳ್ಳಿ ಕಥಾಲೋಕ-ವಿಮರ್ಶಾ ಲೇಖನಗಳ ಸಂಕಲನ’ ಈ ಕಾರಣಕ್ಕಾಗಿ ಇಂದು ಮುಖ್ಯವಾಗುತ್ತದೆ. ಬಸವರಾಜು ಕುಕ್ಕರಹಳ್ಳಿ ಅವರ ಕಥಾಲೋಕದ ಕುರಿತಂತೆ ಈ ಕೃತಿಯಲ್ಲಿ ಒಟ್ಟು 29 ಬರಹಗಳಿವೆ. ಡಾ. ನೀಲಗಿರಿ ತಳವಾರ ಮತ್ತು ಡಾ. ಯೋಗೇಶ ಎನ್. ಇವರು ಜಂಟಿಯಾಗಿ ಈ ಕೃತಿಯನ್ನು ಸಂಪಾದಿಸಿದ್ದಾರೆ. ಕೇಶವ ಮಳಗಿ, ಆರ್. ವಿಜಯರಾಘವನ್, ಡಾ. ಕವಿತಾ ರೈ, ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ, ಡಾ. ಸಬಿತಾ ಬನ್ನಾಡಿ, ಡಾ. ವಿಜಯ ಕುಮಾರಿ ಎಸ್. ಕರಿಕಲ್, ಡಾ. ಪ್ರಹ್ಲಾದ ಅಗಸನಕಟ್ಟೆ, ಡಾ. ನಟರಾಜ ಬೂದಾಳು, ವಿ. ಎನ್. ವೆಂಕಟಲಕ್ಷ್ಮೀ, ಡಾ. ಭಾರತೀ ದೇವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಮೊದಲಾದ ಖ್ಯಾತ ಬರಹಗಾರರು ಇಲ್ಲಿ ಬರೆದಿದ್ದಾರೆ. ‘‘ಕುಕ್ಕರಹಳ್ಳಿಯವರ ಕಥಾಲೋಕ ಈವರೆಗೆ ಕಂಡುಕೊಳ್ಳಲು ಯತ್ನಿಸಿರುವ ಸೂಜಿಗಾತ್ರದ ಬೆಳಕಿನ ಪ್ರಮಾಣವೇ ಇರಲಿ, ಅದು ಒಂದು ಸಮುದಾಯದ ಬದುಕಿನ ಬ್ರಹ್ಮಾಂಡ ಸತ್ಯವನ್ನು ತೆರೆದಿಡುತ್ತದೆ’’ ಎಂದು ಖ್ಯಾತ ಕತೆಗಾರ ಕೇಶವ ಮಳಗಿ ಅಭಿಪ್ರಾಯ ಪಡುತ್ತಾರೆ. ಬಾಳಾಟ ಕಥಾ ಸಂಕಲನದ ಕುರಿತಂತೆ ಆರ್. ವಿಜಯರಾಘವನ್ ಬರೆಯುತ್ತಾ, ‘‘ಇಲ್ಲಿ ಅವರ ಭಾಷೆ ಬದಲಾಗಿದೆ. ಬರಹದ ತೀವ್ರತೆಯೂ ಕಡಿಮೆಯಾಗಿದೆ. ಆಯ್ಕೆ ಎಲ್ಲದರಲ್ಲೂ ಕಂಡು ಬರುತ್ತದೆ. ಉದ್ದೇಶವೇ ಮುಖ್ಯವಾಗಿ ಹಾದಿಯ ಬಗ್ಗೆ ಆಸಕ್ತಿ ಕಡಿಮೆಯಾಗಿ ರುವಂತೆ ತೋರುತ್ತದೆ’’ ಎಂದು ಹೇಳುತ್ತಾರೆ. ಕವಿತಾ ರೈ ಅವರು ಬರೆಯುತ್ತಾ ‘‘ಲೋಕಗ್ರಹಿಕೆಯ ಸಂಘರ್ಷ ಇಲ್ಲಿನ ಕತೆಗಳ ಚೌಕಟ್ಟು’’ ಎಂದು ಅಭಿಪ್ರಾಯ ಪಡುತ್ತಾರೆ. ಪುನುಗ ಕಥಾ ಸಂಕಲನದ ಬಗ್ಗೆ ಓ. ಎಲ್. ನಾಗಭೂಷಣ ಸ್ವಾಮಿ ಬರೆಯುತ್ತಾ, ‘‘ದಿನದಿನವೂ ಹೊಸಕಿ ಹೋಗುತ್ತಿರುವ ಇರುವೆಗಳಂಥ ಜನರ ಮಾತನ್ನು ಓದುಗರ ಕಿವಿಗೆ ತಲುಪಿಸಿರುವುದು ಬಸವರಾಜು ಅವರ ಕಥೆಗಳ ಹೆಚ್ಚುಗಾರಿಕೆ’’ ಎನ್ನುತ್ತಾರೆ. ಡಾ. ಸವಿತಾ ಬನ್ನಾಡಿಯವರು, ಕುಕ್ಕರ ಹಳ್ಳಿಯವರದೇ ಸ್ವಂತದ ದಾರಿಯೊಂದು ಕಥಾಲೋಕದಲ್ಲಿ ತೆರೆದಿರುವುದನ್ನು ಗುರುತಿಸುತ್ತಾರೆ. ಕಥಾಸಂಕಲನದ ಮುನ್ನುಡಿಯೊಂದರಲ್ಲಿ ಜಯಂತ ಕಾಯ್ಕಿಣಿಯವರು ಹೀಗೆ ಹೇಳುತ್ತಾರೆ ‘‘ಭಂಗಿಗಳಲ್ಲೇ ದಣಿಯುತ್ತಿರುವ, ಮಾತಿನಲ್ಲೇ ಒಣಗುತ್ತಿರುವ ಕನ್ನಡ ಕಥನಕ್ಕೆ ಬಸವರಾಜು ಕುಕ್ಕರಹಳ್ಳಿಯವರ ಕಥೆಗಳು ಹೊಸ ರಕ್ತ ಸಂಚಾರ ತರುವಂತಿದೆ. ಜಿಟಿಜಿಟಿ ಮಳೆಯಲ್ಲಿ ತನ್ನ ಮಣ್ಣಿನ ಬೊಂಬೆಗಳನ್ನೇ ನೋಡುತ್ತಾ, ಆಡುತ್ತಾ, ಅವುಗಳಿಗೆ ಅನ್ನ ಉಣಿಸುತ್ತಾ ಮೈ ಮರೆತವರಂತೆ ಬಸವರಾಜು ಭಾಸವಾಗುತ್ತಾರೆ’’ ಎಂದು ಸೋಜಿಗಗೊಳ್ಳುತ್ತಾರೆ. ವಿಜಯಲಕ್ಷ್ಮಿ ಪ್ರಕಾಶನ ಮೈಸೂರು ಇವರು ಹೊರತಂದಿರುವ ಕೃತಿಯ ಮುಖಬೆಲೆ 210 ರೂ. ಆಸಕ್ತರು 94483 50932 ದೂರವಾಣಿಯನ್ನು ಸಂಪರ್ಕಿಸಬಹುದು.