ಬ್ಯಾಂಕ್-ಆಧಾರ್ ಜೋಡಣೆ ಕಡ್ಡಾಯವಾಗುವುದು ಹೇಗೆ ಸಾಧ್ಯ?

Update: 2017-06-29 18:26 GMT

ಆಧಾರ್ ಕಾರ್ಡ್ ಪಡೆಯದೆ ಇರಲು ನಿರ್ಧರಿಸಿದವರಿಗೆ ಸುಪ್ರೀಂ ಕೋರ್ಟ್ ಕೆಲವು ರಿಯಾಯಿತಿಗಳನ್ನು ನೀಡಿದ ಮೇಲೆ, ಸರಿಯಾಗಿ ಒಂದು ವಾರದ ಬಳಿಕ ಸರಕಾರವು ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವ ಸುದ್ದಿ ಬಂತು. ಕೇಂದ್ರವಿತ್ತ ಸಚಿವಾಲಯ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಬ್ಯಾಂಕ್‌ಗಳಲ್ಲಿ ಈಗ ಖಾತೆಗಳನ್ನು ಹೊಂದಿರುವವರೆಲ್ಲರೂ 2017 ಡಿಸೆಂಬರ್ 31ರೊಳಗಾಗಿ ಬ್ಯಾಂಕ್‌ಗಳಿಗೆ ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸಬೇಕು. ಸಲ್ಲಿಸದೇ ಇದ್ದಲ್ಲಿ ‘‘ಖಾತೆಗಳು ಕಾರ್ಯವೆಸಗುವುದನ್ನು ನಿಲ್ಲಿಸುತ್ತವೆ.’’ ಆಧಾರ್ ಇಲ್ಲದವರ ಪಾನ್ ನಂಬರ್‌ಗಳನ್ನು ರದ್ದುಗೊಳಿಸಲಾಗುವುದೆಂಬ ಸರಕಾರದ ಕ್ರಮವನ್ನು ತಡೆದ ಸುಪ್ರೀಂ ಕೋರ್ಟ್ ಆಜ್ಞೆಯನ್ನು ವಿಫಲಗೊಳಿಸುವುದೇ ಸರಕಾರದ ಹೊಸ ನಿಯಮಗಳ ಉದ್ದೇಶವೆಂದು ತತ್‌ಕ್ಷಣ ಆನ್‌ಲೈನ್ ಪ್ರತಿಕ್ರಿಯೆಗಳು ಮೂಡಿಬಂದವು. ಹೊಸ ನಿಯಮಗಳು ಸುಪ್ರೀಂ ಕೋರ್ಟ್ ಆಜ್ಞೆಯ ಒಂದು ವಾರದ ಬಳಿಕ ಜೂನ್ 16ರಂದು ಪ್ರಕಟವಾದರೂ, ನಿಯಮಗಳ ಕುರಿತು ಜೂನ್ 1ರಂದೇ ಗಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಂದರೆ, ಪಾನ್-ಆಧಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವ ಒಂದು ವಾರದ ಮೊದಲೇ ಅಧಿಸೂಚನೆ ಪ್ರಕಟವಾಗಿತ್ತು.

ಆದ್ದರಿಂದ, ಸರಕಾರದ ಹೊಸ ನಿಯಮಗಳನ್ನು ಇಷ್ಟವಿಲ್ಲದವರ ಮೇಲೆ ಆಧಾರ್ ಕಾರ್ಡುಗಳನ್ನು ಹೇರುವ ಒಂದು ಸ್ವಾರ್ಥದ ವಿಶ್ವಾಸದ ಪ್ರಯತ್ನವೆಂದು ಪರಿಗಣಿಸಬಹುದಾದರೂ, (ಖಾಸಗಿತನದ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ ವಾದಗಳನ್ನು ಆಲಿಸುತ್ತಿರುವಾಗಲೇ), ಜೂನ್ 9ರಂದು ಬಂದ ತೀರ್ಪನ್ನು ಎಂಟು ದಿನಗಳ ಮೊದಲೇ ಅದು ಹೇಗೆ ಭವಿಷ್ಯ ನುಡಿಯಲು ಸಾಧ್ಯ?

ಹೊಸ ನಿಯಮಗಳನ್ನು ತಂದದ್ದು ಯಾವಾಗ?

ಕೇಳಬೇಕಾದ ಮೊತ್ತಮೊದಲ ಪ್ರಶ್ನೆ ನಿಯಮಗಳ ವಿಷಯ ಏನು? ಎಂಬುದಲ್ಲ; ಬದಲಾಗಿ ನಿಯಮಗಳನ್ನು ಯಾವಾಗ ರೂಪಿಸಲಾಯಿತು? ಎಂಬುದು.

ಭಾರತದ ಸರಕಾರ ಜೂನ್ ಒಂದರಂದು ಹೊರಡಿಸಿದ ಅಧಿಸೂಚನೆಯಲ್ಲಿರುವ ನಿಯಮಗಳು 15ದಿನಗಳ ಬಳಿಕ ನಾಗರಿಕರ ಗಮನಕ್ಕೆ ಬರುತ್ತದೆ ಎಂಬುದು ತುಂಬ ವಿಚಿತ್ರವಾಗಿ ಕಾಣಿಸುತ್ತದೆ, ಹಾಗಿದ್ದರೆ ಇದು ಸರಕಾರವು ಜನರಿಗೆ ಸಂದೇಶಗಳನ್ನು ಕಳುಹಿಸುವ ರೀತಿಯಲ್ಲಿ ಏನೋ ತಂತ್ರವಿದೆ ಎಂಬುದನ್ನು ಸೂಚಿಸುತ್ತದೆಯೆ? ಅಥವಾ ಇದು ಉದ್ದೇಶಪೂರ್ವಕವೇ? ಎಂದು ಕೂಡ ನಾವು ಕೇಳ ಬಹುದಾಗಿದೆ. ಜೂನ್ 1ರಂದು ಹೊರಡಿಸಲಾದ ಹೊಸ ನಿಯಮಗಳ ಕುರಿತಾದ ಸುದ್ದಿ ಸುಪ್ರೀಂ ಕೋರ್ಟ್‌ನ ತೀರ್ಪು ಬಂದು ಸರಿಯಾಗಿ ಒಂದು ವಾರದ ವರೆಗೂ ಹೊರಬರಲಿಲ್ಲ. ಇಷ್ಟು ದೀರ್ಘ ಸಮಯದ ವರೆಗೆ ಸರಕಾರ ಯಾಕೆ ಕಾಯಬೇಕಾಯಿತು? ಈ ಕಾಯುವಿಕೆಯ ಹಿಂದಿನ ಮರ್ಮವೇನು?

ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ?

 ಆಧಾರ್-ಪಾನ್ ಲಿಂಕ್ ಮಾಡದವರ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವ ಅಪಾಯವನ್ನು ಲೆಕ್ಕಿಸದೆ, ಆಧಾರ್ ಮಾಡಿಸದೆ ಇರುವವರಿಗೆ ಅದನ್ನು ಸರಕಾರ ಕಡ್ಡಾಯಗೊಳಿಸಬಹುದೆ? ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತ್ತು. ಎರಡನ್ನೂ ಲಿಂಕ್ ಮಾಡಬೇಕೆಂದು ಹೇಳುವ ಹಕ್ಕು ಸರಕಾರಕ್ಕಿದೆಯಾದರೂ, ಲಿಂಕ್ ಮಾಡದವರ ಪಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಪ್ರಸ್ತಾವಿತ ಶಿಕ್ಷೆ ತೀರಾ ಕಠಿಣವೆಂದು ಕೋರ್ಟ್ ನಿರ್ಧರಿಸಿತು. ಪಾನ್ ಕಾರ್ಡ್‌ನ ರದ್ದುಪಡಿಸುವಿಕೆಯು ಯಾವುದೇ ವೃತ್ತಿಯನ್ನು ಮಾಡಲು ನಮಗಿರುವ ಸ್ವಾತಂತ್ರವನ್ನು ರಕ್ಷಿಸುವ ಮೂಲಭೂತ ಹಕ್ಕಿನ ಉಲ್ಲಂಘಣೆಯಾಗುತ್ತದೆಯೇ? ಎಂಬ ಪ್ರಶ್ನೆಯು ಸೇರಿದಂತೆ, ಹಲವಾರು ಪ್ರಶ್ನೆಗಳ ನೆಲೆಯಲ್ಲಿ, ಆಧಾರ್-ಪಾನ್ ಜೋಡಣೆಯನ್ನು ವಿರೋದಿಸಲಾಗಿತ್ತು.

ಪಾನ್ ಕಾರ್ಡ್ ಇಲ್ಲದೆ ಯಾವುದೇ ವ್ಯವಹಾರ ನಡೆಸುವುದು ಕಷ್ಟವಾದ್ದರಿಂದ, ಅದನ್ನು ರದ್ದುಪಡಿಸುವಂಥ ಯಾವುದೇ ಶಿಕ್ಷೆಯು ಸಂವಿಧಾನ 19(1)(ಜಿ) ಪರಿಚ್ಛೇದದಲ್ಲಿ ಬರುವ ಮೂಲಭೂತ ಹಕ್ಕಿನ ಉಲ್ಲಂಘನೆಯಗುತ್ತದೆಂದು ಸುಪ್ರೀಂಕೋರ್ಟ್ ತೀರ್ಮಾನಿಸಿತು.

 ಹಾಗಾಗಿ ಅದು ಆಧಾರ ಹೊಂದಿರದವರಿಗೆ ಹಾಗೂ ಹೊಂದ ಬಯಸುವವರಿಗೆ ಪಾನ್-ಆಧಾರ್ ಜೋಡಣೆ ಮಾಡಲೇಬೇಕೆಂಬ ಸರಕಾರದ ನಿಯಮಕ್ಕೆ ತಡೆ ನೀಡಿತು. ಪಾನ್ ರದ್ದು ಪಡಿಸುವುದು ‘ನಾಗರಿಕ ಸಾವಿಗೆ’ ಸಮಾನವೆಂಬ ವಾದವನ್ನು ಅದು ಒಪ್ಪಿಕೊಂಡಿತು.

ಈಗ, ಪಾನ್ ರದ್ದುಪಡಿಸುವಿಕೆ ನಾಗರಿಕ ಸಾವಿಗೆ ಸಮಾನ ಮತ್ತು ಸಂವಿಧಾನದ 19(1)(ಜಿ) ಪರಿಚ್ಚೇದದ ಉಲ್ಲಂಘನೆ ಎಂದಾದಲ್ಲಿ, ಆಧಾರ್ ಇಲ್ಲವೆಂಬ ಕಾರಣಕ್ಕಾಗಿ ಬ್ಯಾಂಕ್ ಖಾತೆಯೊಂದನ್ನು ಅನೂರ್ಜಿತಗೊಳಿಸುವುದು ಕೂಡ ಇವೆರಡರ ಸಮಾನವಾಗುವುದಿಲ್ಲವೇ

ಅಂತಿಮವಾಗಿ ಏನು?

ಪಾನ್-ಆಧಾರ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಖೋಟಾ ಪಾನ್ ಕಾರ್ಡ್‌ಗಳನ್ನು ನಿರ್ಮೂಲನ ಮಾಡಲಿಕ್ಕಾಗಿ ಮೂಲಭೂತ ಹಕ್ಕೊಂದನ್ನು ರದ್ದು ಪಡಿಸುವುದು ಒಂದು ಪ್ರಬಲ ಕಾರಣ ಎಂದು ಒಪ್ಪಿಕೊಂಡಿತು.

ಹೊಸ ಆಧಾರ್ ಅಧಿಸೂಚನೆಗಳು ಕಪ್ಪುಹಣದ ವಿರುದ್ದ ಹೋರಾಡಲು ಹಣದ ಸಾಗಾಟವನ್ನು ತಡೆಯಲು ಪ್ರಯೋಜನಕಾರಿ ಎಂದು ಸರಕಾರ ತಿಳಿದಿದೆ.

ಖಾಸಗಿತನದ ವಿಷಯವನ್ನು ಬದಿಗಿಡೋಣ. ಸರಕಾರದ ಈ ಅಧಿಸೂಚನೆಗಳಿಂದ ಏಳುವ ಪ್ರಶ್ನೆ ಮತ್ತು ಪಾನ್ ಮತ್ತು ಆಧಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಜವಾಗಿ ಉತ್ತರಿಸದ ಪ್ರಶ್ನೆ ಒಂದೇ ಆಗಿದೆ: ಆಧಾರ್-ಬ್ಯಾಂಕ್ ಜೋಡಣೆಯ ಮೂಲಕ ಆಗುತ್ತದೆ ಎನ್ನಲಾಗಿರುವ ಲಾಭ ಹಾಗೂ ಉಪಯೋಗಗಳನ್ನು ಸಾಧಿಸಲು ನೀಡಲಾಗುವ ಶಿಕ್ಷೆ (ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸುವುದು) ಅಪರಾಧಕ್ಕೆ ನೀಡಬಹುದಾದ ಪ್ರಮಾಣದ ಶಿಕ್ಷೆಯೇ? ವಿಶೇಷವಾಗಿ ಒಂದು ಮೂಲಭೂತ ಹಕ್ಕು ಒಳಗೊಂಡಿರುವಾಗ ಈ ಪ್ರಮಾಣದ ಶಿಕ್ಷೆ ಸರಿಯೇ?

ಸಂಸತ್ ವರ್ಸಸ್ ಕಾರ್ಯಾಂಗ

ಸುಪ್ರೀಂ ಕೋರ್ಟ್ ತೀರ್ಪಿನ ನೆಲೆಯಲ್ಲಿ ಏಳುವ ಇನ್ನೊಂದು ಪ್ರಶ್ನೆ: ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯಾಂಗಕ್ಕೆ ಅಧಿಕಾರವಿದೆಯೇ? ನಾಗರಿಕರಿಗೆ ಆಧಾರ್ ಐಚ್ಚಿಕವೆಂದು ಸರಕಾರ ಹೇಳುತ್ತಾ ಬಂದಿದೆ; ಆಧಾರ್ ಕಾಯ್ದೆ ಕೂಡ ಹಾಗೆಯೇ ಹೇಳುತ್ತದೆ. ಆದರೆ ಈ ವರ್ಷದ ಮೊದಲ ಭಾಗದಲ್ಲಿ ವಿತ್ತಮಸೂದೆಗೆ ಸೇರಿಸಲಾದ ಆದಾಯತೆರಿಗೆ ನಿಯಮಗಳು ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಡ್ಡಾಯವೆಂದು ಹೇಳಿದೆ. ಅಂದರೆ, ಆಧಾರ್ ಕೆಲವರಿಗೆ ಐಚ್ಚಿಕ ಮತ್ತು ಇನ್ನು ಕೆಲವರಿಗೆ ಕಡ್ಡಾಯ ಎಂದಾಯಿತು.

ಇದೊಂದು ವಿರೋಧಾಭಾಸವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿತು; ಭಾಗಶಃ ಯಾಕೆಂದರೆ ವಿಭಿನ್ನ ವಿಷಯಗಳನ್ನು ನಿಯಂತ್ರಿ ಸುವ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿದೆ, ಆಧಾರ್ ಮಸೂದೆಯಲ್ಲಿ, ಕಲ್ಯಾಣಕ್ಕಾಗಿ ಆಧಾರ್ ಐಚ್ಚಿಕವೆಂಬುದು ಸ್ಪಷ್ಟವಾಗಿಯೆ ಇದೆ. ಆದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಡ್ಡಾಯವೆಂದು ಆದಾಯ ತೆರಿಗೆ ನಿಯಮಗಳು ಹೇಳುತ್ತವೆ. ಈ ಪ್ರಕರಣದಲ್ಲಿ, ಅದೇನಿದ್ದರೂ, ಸಂಸತ್ ಮಾಡಿದ ಒಂದು ಕಾನೂನನ್ನು ಆಧರಿಸಿ ಕಾರ್ಯಾಂಗವು ನಿಯಮಗಳನ್ನು ಜಾರಿಗೊಳಿಸುತ್ತಿದೆ. ಸಂಸತ್‌ನಲ್ಲಿ ಅನುಮೋದನೆಗೊಂಡ ಕಾನೂನಿನ ಪಠ್ಯದಲ್ಲಿ ಆಧಾರ್ ಕಡ್ಡಾಯ ವೆಂದು ಹೇಳಿಲ್ಲ, ಹಾಗಾದರೆ, ಈ ರೀತಿಯಾಗಿ ಶಾಸಕಾಂಗವನ್ನು ಉಪೇಕ್ಷಿಸಿ ಬದಿಗೆ ತಳ್ಳುವ ಅಧಿಕಾರ ಕಾರ್ಯಾಂಗಕ್ಕಿದೆಯೇ?

Writer - ರೋಹನ್ ವೆಂಕಟರಾಮಕೃಷ್ಣನ್

contributor

Editor - ರೋಹನ್ ವೆಂಕಟರಾಮಕೃಷ್ಣನ್

contributor

Similar News

ಜಗದಗಲ
ಜಗ ದಗಲ