ನಾನು ಕಂಡ ಗೌರಮ್ಮ
ಭಾಗ 2
ಗೌರಮ್ಮನವರ ಎಳೆತನದಲ್ಲಿಯೇ ಅವರ ತಾಯಿ ತೀರಿದ್ದರು. ಒಮ್ಮಮ್ಮೆ ಅವರಿಗೆ ಉಂಟಾಗುವ ತಾಯಿಯ ನೆನಪು ಅವರನ್ನು ಬಹಳ ಶೋಕಕ್ಕೀಡು ಮಾಡುತ್ತಿತ್ತು. ನಮ್ಮ ತಾಯಿಯನ್ನು ಕಂಡರೆ ಗೌರಮ್ಮನವರಿಗೆ ಬಹಳ ಇಷ್ಟ. ನಮ್ಮ ತಾಯಿಗೂ ಗೌರಮ್ಮನವರೆಂದರೆ ಅಷ್ಟು ಪ್ರೀತಿ. ‘ನಮ್ಮ ಮನೆಗೆ ಅವ್ವನನ್ನು ಕಳಿಸಿಕೊಡಿ, ಈಗ ಇಲ್ಲಿ ಕಾವೇರಿ ಜಾತ್ರೆ. ಅವರಿಗೆ ಕಾವೇರಿ ಸ್ನಾನ ಮಾಡಿಸಿ ಕೂಡಲೆ ಕಳಿಸುವ ಭಾರ ಹೊತ್ತುಕೊಳ್ಳುತ್ತೇನೆ!’ ಎಂದು ಬರೆದರು. ನಮ್ಮ ತಾಯಿ ಹೋಗಲು ಆತುರಪಟ್ಟರೂ ಬಹಳ ದೂರ ಎಂದು ನಾವು ಕಳಿಸಲಿಲ್ಲ. ‘ಅವ್ವ ಮಗಳ ಮನೆಗೆ ಹೋಗಲು ಹಟ ಹಿಡಿದಿದ್ದಳು’ ಎಂದು ಬರೆದು ಕಳಿಸದಿದ್ದುದಕ್ಕೆ ಏನೇನೋ ಕಾರಣವೊಡ್ಡಿ ಕ್ಷಮೆ ಬೇಡಿಕೊಂಡಿದ್ದೆ.
ಕೂಡಲೆ ಉತ್ತರ ಬಂತು.
ಫೊಟೋ ಕೃಪೆ: ಮನೋಹರ ಗ್ರಂಥಮಾಲೆ ಧಾರವಾಡ
ರಾಮದುರ್ಗ ಸಂಸ್ಥಾನದಲ್ಲಿ ಆಗ ‘ದುರಂತ ಸತ್ಯಾಗ್ರಹ’ ನಡೆದಿತ್ತು.
‘ಅವ್ವ ಮಗಳ ಮನೆಗೆ ಹೋಗಲು ಹಟ ಹಿಡಿದಳು-ಎಂದು ಬರೆದಿದ್ದೀರಿ. ನಿಮಗೆ ನಿಜವನ್ನು ಹೇಳುವುದಾದರೆ ನಾನು ಇಷ್ಟೊಂದು ಬೇಗ ಪ್ರತ್ಯುತ್ತರ ಬರೆಯಲು ಅದೊಂದು ವಾಕ್ಯ ಮುಖ್ಯಕಾರಣವೆಂದು ಹೇಳಬೇಕು. ‘ಅವ್ವ ಮಗಳ ಮನೆಗೆ ಹೋಗಲು ಹಟಹಿಡಿದಳು’ ಎಂಬುದನ್ನು ಓದಿ ನನಗೆ ಎಷ್ಟೊಂದು ಸಂತೋಷವಾಯಿತೆಂಬುದು ನಿಮಗೆ ಹೇಗೆ ತಿಳಿಯಬೇಕು ? ನೀವು ಹುಡುಗಿಯಲ್ಲ-ಸಾಲದುದಕ್ಕೆ ನಿಮ್ಮ ಅವ್ವ ಯಾವಾಗಲೂ ನಿಮ್ಮ ಹತ್ತಿರದಲ್ಲೇ ಇರುತ್ತಾರೆ. ಆದುದರಿಂದಲೇ ಅದರ ಬೆಲೆ ನಿಮಗೆ ತಿಳಿಯಲಾರದು. ನನಗೆ,-ನನಗೆ ಅವ್ವ, ನಾನು ಬೇಬಿ (ಗೌರಮ್ಮನವರ ಆರು ವರ್ಷದ ಮಗು, ವಸಂತ)ಗಿಂತಲೂ ಚಿಕ್ಕವಳಾಗಿರುವಾಗಿನಿಂದಲೂ ಇಲ್ಲ. ಹಾಗವಳು ಇಲ್ಲವೆಂದು ತಿಳಿದುಕೊಳ್ಳುವ ಶಕ್ತಿ ನನಗೆ ಬರುವ ಮೊದಲೇ ನನಗವಳು ಇಲ್ಲವಾಗಿ ಬಿಟ್ಟಿದ್ದಳು. ‘ಮತ್ತೆ ನನಗೂ ಎಲ್ಲರಂತೆ ಅವ್ವನಿಲ್ಲ’ ಎಂದು ತಿಳಿದುಕೊಳ್ಳುವಂತಾಗುವಾಗ ‘ಇಲ್ಲದಿದ್ದರೂ ತೊಂದರೆ ಇಲ್ಲ’ ಎನ್ನುವಂತೆ ಅಭ್ಯಾಸವಾಗಿ ಹೋಗಿತ್ತು. ಆದರೂ-ಆದರೂ ನೋಡಿ, ಎಲ್ಲ ಹುಡುಗಿಯರು ‘ನಮ್ಮವ್ವ-ನಮ್ಮವ್ವ ಹಾಗಿದ್ದಾರೆ-ಹೀಗಿದ್ದಾರೆ ಎಂದಂದುಕೊಳ್ಳುವಾಗ ನನಗೂ ಅವ್ವ ಏಕಿರಬಾರದಿತ್ತು!’ ಎನಿಸದಿರುವುದಿಲ್ಲ.
ಈಗೆರಡು ಮೂರು ತಿಂಗಳಾಯಿತು.; ನಾನು ಮಡಿಕೇರಿಗೆ ಹೋಗಿದ್ದಾಗ ನನ್ನಣ್ಣ-ನನಗಿಂತಲೂ ಏಳೆಂಟು ವರ್ಷಗಳಿಗೆ ಹಿರಿಯುವ-ಅವನಿಗೆ ನಮ್ಮ ಅವ್ವನ ನೆನಪು ಚೆನ್ನಾಗಿದೆ-ಆಗ ಏಕೋ ಮಾತಿಗೆ ನೋಡಿ, ಬೇಬಿ ತಂಟೆ ಮಾಡುತ್ತಿದ್ದ. ನಾನು ಅವನನ್ನು ಗದರಿಸಿದೆ. ಅದಕ್ಕೆ ಅಣ್ಣ ‘ನೀನು ನೋಡು ಗೌರಿ, ನೀನು ಚಿಕ್ಕವಳಿರುವಾಗ ಇವನಿಗಿಂತಲೂ ಹೆಚ್ಚು ತಂಟೆಮಾಡಿ ಅಮ್ಮನನ್ನು ಗೋಳಾಡಿಸುತ್ತಿದ್ದೆ. ಈಗ ಮಾತ್ರ ಅವನನ್ನು ಗದರಿಸುತ್ತೀ. ನಿನ್ನಷ್ಟೇ ತುಂಟತನ ಇವನಿಗಿದ್ದಿದ್ದರೆ ನೀನೇನು ಮಾಡುತ್ತಿದ್ದೆಯೋ; ಅಮ್ಮ ಇರಬೇಕಿತ್ತು ಈಗ’ ಎಂದ. ಅಣ್ಣ ನನ್ನನ್ನು ತಮಾಷೆ ಮಾಡುವ ಸಲುವಾಗಿ ಆಡಿದ ಮಾತುಗಳಿವು; ಆದರೂ ‘ಅಮ್ಮ ಇರಬೇಕಿತ್ತು ಈಗ’ ಎಂದು ಅವನೆನ್ನುವಾಗ ‘ಅಮ್ಮನಿಲ್ಲವಲ್ಲಾ’ ಎಂದೂ-‘ಅಮ್ಮ ಇದ್ದಿದ್ದರೆ ನಾನು ಈಗ ಬೇಬಿಯನ್ನು ಪ್ರೀತಿಸುವಷ್ಟೇ ಅವಳೂ ನನ್ನನ್ನು ಪ್ರೀತಿಸುತ್ತಿದ್ದಳಲ್ಲಾ’ ಎಂದೂ-ನೋಡಿ, ಏನೇನೋ ಹುಚ್ಚು ಯೋಚನೆಗಳು ತಲೆತುಂಬ ತುಂಬಿದವು.
ನಿಮಗಿದನ್ನೆಲ್ಲಾ ನಾನೇಕೆ ಬರೆಯುತ್ತೇನೆಂಬುದು ನನಗೇ ತಿಳಿಯದು. ‘ಅವ್ವ ಮಗಳ ಮನೆಗೆ ಹೋಗಲು ಹಟಹಿಡಿದಳು ಎಂದು ಬರೆದಿದ್ದೀರಿ. ಅದನ್ನೋದುವಾಗ ಏಕೋ ಇದೆಲ್ಲಾ ಬಂದು ಹೋಯಿತು. ಅಂತೂ ಅವರು ನನ್ನನ್ನು ಮಗಳೆಂದು ತಿಳಿದು ನಮ್ಮ ಮನೆಗೆ ಬರಲು ಹಟಹಿಡಿದರಲ್ಲ ಎಂಬ ಆನಂದದಲ್ಲಿ....’ ಎಂದೆಲ್ಲಾ ಬರೆದರು.
ಒಮ್ಮೆ ನಾನು ಕೊಡಗಿಗೆ ಹೋಗುವುದನ್ನು ನಿರ್ಧರಿಸಿದೆ. ಹಾಗೆ ಗೌರಮ್ಮನವರಿಗೆ ಕಾಗದ ಬರೆದೆ. ಅವರು ‘‘ಬೇಗ ಬನ್ನಿ’’ ಎಂದು ಬರೆದರು. ನನಗೆ ಬೆಂಗಳೂರು ಮೈಸೂರುಗಳಲ್ಲಿ ಕೆಲಸವಿದ್ದುದರಿಂದ ಹೇಳಿದ ಸಮಯಕ್ಕೆ ಹೋಗಲಾಗಲಿಲ್ಲ. ಅಂತೂ ಒಂದು ದಿನ ಮೈಸೂರಿನಲ್ಲಿ ಕೊಡಗಿನ ಬಸ್ಸು ಹತ್ತಿದೆ. ನಾಲ್ಕು ಗಂಟೆಗೆ ಸುಂಟಿಕೊಪ್ಪಕ್ಕೆ (ಗೌರಮ್ಮನವರ ಊರು) ತಲುಪುತ್ತದೆಂದು ಹೇಳಿದ್ದರು. ದಾರಿಯಲ್ಲಿ ವನಸಿರಿ ಮೈವೆತ್ತು ನಿಂತಿತ್ತು. ಆದರೂ ನನಗೆ ಅತ್ತ ಲಕ್ಷ್ಯವಿದ್ದಿಲ್ಲ. ನನ್ನ ದೃಷ್ಟಿ ನನ್ನ ಹತ್ತಿರ ಕುಳಿತವರ ಕೈಗಡಿಯಾರದಲ್ಲಿಯ ತಾಸಿನ ಮುಳ್ಳಿನ ಕಡೆಗಿತ್ತು. ನಾಲ್ಕು ಆಗಲೊಲ್ಲದು; ಕೊಡಗಿನ ದಾರಿಯೂ ಮುಗಿಯಲೊಲ್ಲದು. ನನಗೆ ಬಹಳ ಬೇಸರವೆನಿಸಿತು.
‘ಈ ಗಡಿಯಾರ ಮೋಟಾರಿನವರದಿರಬೇಕು’ ಎಂದೆ. ಅದಕ್ಕೆ ಪ್ರತಿಯಾಗಿ ಮೋಟರಿನ ಕಂಡಕ್ಟರ್ ‘ನಮ್ಮ ಬಸ್ ನಿಮ್ಮಲ್ಲಿಯ ಬಸ್ಸಿನಂತಲ್ಲ ಸಾರ್’ ಎಂದ.
(Hold on) ನಾನು ಈ ಮೊದಲು ಗೌರಮ್ಮನವರ ಮನೆ ನೋಡಿದ್ದಿಲ್ಲ; ಆದರೂ ತಲೆ ಏನೇನೋ ಚಿಂತಿಸುತ್ತಿತ್ತು: ‘ಒಂದು ಸುಂದರವಾದ ಮನೆ. ಅದರಲ್ಲಿ ಅದರ ಸ್ವಾಮಿನಿ-ಗೌರಮ್ಮ-ತನ್ನ ಪತಿಯೊಡನೆ ಕುಳಿತಿದ್ದಾರೆ. ನಡು-ನಡುವೆ ನಗೆ....’ ಬಸ್ಸಿನವನು ‘ಹೋಲ್‌ಡಾನ್’ ಎಂದ; ‘ಸುಂಟಿಕೊಪ್ಪ ಸಾರ್’ ಎಂದ. ನಾನಿಳಿದೆ. ನಾನು ಬರುವ ದಿವಸ ತಿಳಿಸಿ, ತಪ್ಪಿಸಿ, ಅಂದು ಬರುತ್ತೇನೆಂದು ತಿಳಿಸಿದ್ದಿಲ್ಲವಾದರೂ ಒಬ್ಬನು ಬಂದು ‘ಕುಲಕರ್ಣಿಯವರೇ?’ ಎಂದ ನಾನು ‘ಯಾರು?’ ಎಂದೆ. ‘ಗೌರಮ್ಮನವರು ತಮ್ಮನ್ನು ಕರೆದುಕೊಂಡು ಬರಲು ಕಳಿಸಿದ್ದಾರೆ’ ಎಂದ. ಅವರ ಟಪ್ಪಾಲಿಗೆ ಬರುವ ಹುಡುಗನಾತ. ನಾನು ಅವನೊಡನೆ ಹೊರಟೆ. ‘‘ನಿಮಗೆ ತುಂಬ ಕಾಗದ ಬಂದಿದೆ ಸಾರ್, ಅಮ್ಮಾ ಅವರು ನಿಮ್ಮ ದಾರೀ ನೋಡಿ ಬೇಸತ್ತಿದ್ದಾರೆ ಸಾರ್’’ ಎಂದ. ನನಗೆ ಹಿಗ್ಗು ಉಕ್ಕಿ ಬರುತ್ತಿತ್ತು. ಎಂಥ ಜನ ಇವರು! ಎಂದು ಮೆಚ್ಚಿದೆ; ಕೂಡಿ ಹೊರಟೆವು.
ಅಂತೂ ಅಲ್ಲಿಂದ ಹೊರಟು ಸುಂದರವಾದ ಕಾಫಿತೋಟಗಳನ್ನು ನೋಡುತ್ತ, ಸೀಳಿದ ದಾರಿಗುಂಟ ಸಾಗಿದೆವು. ದಾರಿಯಲ್ಲಿಯ ಗಿಡಗಳು ದಾರಿಕಾರರನ್ನು ಸ್ವಾಗತಿಸಲು ನಿಂತಿವೆ. ಚವರಿ ಗಿಡಗಳು ಚವರಿ ಬೀಸಿದವು. ದಟ್ಟವಾದ ನೆರಳು; ಆಗಾಗ ರಿಟಾಯರ್ (retire) ಆಗಲು ಬಂದ ಸೂರ್ಯನ ಹೊಂಗಿರಣಗಳು ತೂರಿ ಬರುತ್ತಿದ್ದವು. ಎಂತಹ ಸೊಗಸಿನ ನಾಡಿದು! ಆದುದರಿಂದಲೆ ಗೌರಮ್ಮನವರು ಅಷ್ಟು ರಸಿಕರು; ಅಂತಹ ಸೌಂದರ್ಯೋಪಾಸಕರು!
ಒಂದು ಬಯಲಿಗೆ ಬಂದೆವು. ಅಲ್ಲಿಯೇ ಗೌರಮ್ಮನವರ ಪತಿದೈವ ಮ್ಯಾನೇಜರರಾಗಿದ್ದ ಎಸ್ಟೇಟಿನ ಒಡೆಯರ ಮನೆ. ಒಂದೆಡೆಗೆ ಎತ್ತರವಾಗಿ ದೂರದವರೆಗೆ ಹಬ್ಬಿದ ಬೆಟ್ಟವು ಮಂಜಿನ ಕಿರೀಟ ಧರಿಸಿ ನಿಂತಿದೆ. ಇನ್ನೊಂದೆಡೆ ದೂರದವರೆಗೆ ಬಯಲು ಹಸಿರು ಹಾಸಿ ಹೊದ್ದಿದೆ. ಅಂತಹ ರಮಣೀಯ ಸ್ಥಳದಲ್ಲಿ ಶ್ರೀ. ಮಂಜುನಾಥಯ್ಯನವರ ಬಂಗ್ಲೆ. ಅಲ್ಲಿಂದ ಎರಡು ಫರ್ಲಾಂಗು ದೂರ ಗೌರಮ್ಮನವರ ಬಂಗ್ಲೆ. ಅದಕ್ಕೂ ಒಂದು ಕಾಫಿಯ ತೋಟದಲ್ಲಿ ಸೇರಿ ಹೋಗಬೇಕು. ಹೋಗುತ್ತಲೇ ಸ್ವಲ್ಪ ಎತ್ತರದಲ್ಲಿ ಒಂದು ಬಂಗ್ಲೆ. ಅದರ ಸುತ್ತು-ಮುತ್ತು, ಹಿಂದು-ಮುಂದು ಹೂದೋಟ. ನಾನು ಹೋದಾಗ ಗೌರಮ್ಮನವರೇ ‘ಪೂಗಿಡಗಳ್ಗೆ’ ನೀರೆರೆಯುತ್ತಿದ್ದರು. ಒಂದು ನಾಯಿ ‘ವೊವ್’ ಎಂದಿತು. ಗೌರಮ್ಮನವರು ‘ಓ’ ಎಂದು ಓಡಿಬಂದರು. ಅಂದಿನ ಅದೇ ನಗೆ, ಅದೇ ನಿಲುವು, ಅದೇ ಬಟ್ಟೆ, ಅದೇ ವೇಷ-ಭೂಷಣ! ‘ನಮಸ್ಕಾರ ಮಹಾಶಯರೇ, ಅಂತೂ ಒಮ್ಮೆ ಬಂದಿರಾ?’ ಎಂದರು. ಉಕ್ಕಿಬರುವ ನಗೆಗೆ ಸ್ವಾತಂತ್ರ್ಯ ಕೊಟ್ಟುಬಿಟ್ಟೆ. ‘‘ಸ್ವಲ್ಪ ನಿಲ್ಲಿ, ನಿಮ್ಮನ್ನು ಬಯ್ಯಬೇಕಾಗಿದೆ; ಇಲ್ಲ, ಒಳಗೆ ಬನ್ನಿ ; ಅಲ್ಲಿಯೇ ಬಯ್ಯುತ್ತೇನೆ!’’ ಎಂದು ಒಳಗೆ ಕರೆದೊಯ್ದರು.
ಒಂದು ಕೋಚು, ನಾಲ್ಕು ಖುರ್ಚಿ. ನಡುನಡುವೆ ಹೂಪಾತ್ರೆಗಳನ್ನು ಹೊತ್ತ ಚಿಕ್ಕಮೇಜುಗಳು. ಒಂದೆಡೆಗೆ ಚಾಪೆ ಹಾಸಿದೆ. ನಾಲ್ಕು ಮೂಲೆಗೆ ನಾಲ್ಕು ಸಣ್ಣ ಮೇಜುಗಳು ಖಾದಿಯ ಬಟ್ಟೆ ಹೊದ್ದು ಹೂಪಾತ್ರೆಗಳಿಂದ ಅಲಂಕೃತವಾಗಿವೆ. ಸಾಲದುದಕ್ಕೆ ಬೇಬಿಯ ನಾನಾ ಭಂಗಿಯಲ್ಲಿ ನಿಂತ, ಆಡಿದ, ಓಡುತ್ತಿರುವಾಗಿನ ಭಾವಚಿತ್ರಗಳು. ಅಲ್ಲಿ ಗೌರಮ್ಮ ಕೂಡುವುದು ಕಡಿಮೆ. ಅದನ್ನು ದಾಟಿ ಮೊಗಸಾಲೆ; ಮುಂದೆ ಹೂದೋಟ. ತರತರದ ಹೂಗಿಡಗಳು-ಎಲೆಬಳ್ಳಿ; ಅರ್ಧಪರಿಘದಂತೆ ಒಂದು ಕಿತ್ತಳೆಯ ಸಾಲು ಹೂದೋಟವನ್ನಾಕ್ರಮಿಸಿದೆ. ಗೊಂಚಲು-ಗೊಂಚಲಾಗಿ ಕಿತ್ತಳೆಗಳು ಗಿಡಗಳನ್ನು ಬಾಗಿಸಿವೆ. ಅಲ್ಲಿ ಒಂದು ದೊಡ್ಡ ಮೇಜು. ಅದರ ಮೇಲೆ ಲೇಖನ ಸಾಹಿತ್ಯ-ಗೌರಮ್ಮನವರ ಸಾಹಿತ್ಯ-ಇಂಗ್ಲಿಷು ಕನ್ನಡ ಪುಸ್ತಕ-ಪತ್ರಿಕೆಗಳು ಹರಡಿವೆ. ಅಲ್ಲಿ ನಾಲ್ಕು ಕುರ್ಚಿಗಳು ಮೇಜನ್ನು ಸುತ್ತುವರಿದಿವೆ; ಒಂದು ಮುರುಕು ಕುರ್ಚಿ ಒಂದು ಮೂಲೆಗಿದೆ. ಅದರ ಬೆತ್ತದ ಜಾಳಿಗೆ ಹರಿದಿದೆ. ಅದರ ಬುಡದಲ್ಲೊಂದು ಸ್ಟೂಲನ್ನು ಸರಿಸಲಾಗಿದೆ.
ನನಗೆ ಅದನ್ನು ನೋಡಿ ಆಶ್ಚರ್ಯವಾಯಿತು. ಅದರ ಹತ್ತಿರ ಹಾಯ್ದೆ ; ‘‘ಹಾ! ಅದು ನನ್ನ ಸ್ಫೂರ್ತಿದಾಯಕ ಕುರ್ಚಿ, ನೀವು ಓದಿದ ನನ್ನ ಕತೆಗಳು ಅದರ ವರಗಳು. ನೀವು ಇತ್ತ ಬರಬೇಡಿ. ನನ್ನ ಸ್ಫೂರ್ತಿ ನಿಮ್ಮದಾದೀತು’’ ಎಂದು ಒಂದೇ ಉಸುರಿನಲ್ಲಿ ಹೇಳಿದರು. ನಾನು ಹಟದಿಂದ ಅದರ ಕಡೆಗೆ ಹೋದೆ. ಬುಡದ ಸ್ಟೂಲನ್ನು ಎಳೆದರು. ಜಾಳಿಗೆ ಜೊಳ್ಳುಬಿತ್ತು. ನಾವಿಬ್ಬರೂ ಮೇಜಿನ ಹತ್ತಿರ ಬಂದೆವು. ಒಂದೊಂದು ಆಸನವನ್ನು ಆಕ್ರಮಿಸಿದೆವು. ‘‘ಎಲ್ಲ ಸುದ್ದಿ ಹೇಳಿ’’ ಎಂದರು. ‘‘ನನ್ನ ಕಾಗದಗಳಿವೆಯೇ?’’ ಎಂದೆ. ‘‘ಅದಿರಲಿ-ಮೊದಲು ಸುದ್ದಿ ಹೇಳಿ’’ ಎಂದರು. ನಾನು ಕೈಯಲ್ಲಿದ್ದ ವೃತ್ತಪತ್ರ ಚಾಚಿದೆ. ಅದನ್ನಿಸಿದುಕೊಂಡು ಮೇಜಿನ ಮೇಲೆಸೆದು ‘‘ಎಂಥ ಜನ ನೀವು’’ ಎಂದರು. ‘‘ನನಗೆ ಅಂದು ಬರಲಿಕ್ಕೆ ಆಗಲಿಲ್ಲ’’ ಎಂದೆ. ‘‘ಅದು ನನಗೆ ಗೊತ್ತು-ಯಾಕೆ ಆಗಲಿಲ್ಲ ಹೇಳಿ!.....ಅಯ್ಯೆ, ನಿಮ್ಮನ್ನು ಹಾಗೇ ಕೂರಿಸಿದೆನಲ್ಲಾ ! ಸರಸ್ವತೀ, ಕಾಫಿ ! ರುಕ್ಮಾ, ಹಣ್ಣು !’’ ಎಂದು ಕೂಗಿಕೊಂಡು ತಾವು ಹೋಗಿ ನನ್ನ ಕಾಗದಗಳನ್ನು ತಂದು ಕೊಟ್ಟರು. ನಾನು ಅವುಗಳನ್ನು ಓದಲು ಆತುರನಾಗಿದ್ದೆನಾದರೂ ಅವರೊಡನೆ ಮಾತನಾಡಲು ಅದಕ್ಕೂ ಹೆಚ್ಚು ಆತುರನಾಗಿದ್ದೆ. ‘‘ಮೊದಲು ಕಾಫಿ ಕುಡಿಯಿರಿ, ಕಾಗದ ಆ ಮೇಲೆ ಓದಿದರಾಗದೇ? ಅಯ್ಯೆ ಇವರೆಲ್ಲಿ ಮನೆಗೆ ಜನ ಬಂದಾಗ ಇವರಿರುವುದೇ ಇಲ್ಲ’’ ಎಂದು ಒಂದೆಡೆಗೆ ಓಡಿದರು. ಎರಡು ನಿಮಿಷಗಳಲ್ಲಿ ಮತ್ತೆ ‘ಹೋ’ ಎನ್ನುತ್ತ ತಮ್ಮ ಪತಿ ಶ್ರೀ. ಗೋಪಾಲಕೃಷ್ಣರ ಕೈಹಿಡಿದುಕೊಂಡು ಬರುತ್ತಿರುವುದನ್ನು ಕಂಡೆ. ಎರಡೂ ಒಂದೇ ಬಗೆಯ ಬೆಳಕಿನ ಮುಖ, ಒಂದೇ ಗಾತ್ರ-ಗತಿ. ಇಬ್ಬರೂ ಸಮನಾಗಿ ಹೆಜ್ಜೆ ಹಾಕುತ್ತ ಬರುತ್ತಿದ್ದರು. ಅವರು ನಡೆದು ಬರುತ್ತಿದ್ದ ಆ ನೋಟ ‘ಅವರಿನ್ನೂ ದೂರದಿಂದ ಬರುತ್ತಿರಬೇಕು; ಇಲ್ಲವೇ ನಾನು ಹಿಂದೆ ಸರಿಯುತ್ತಿರಬೇಕು. ಅವರು ಹಾಗೆ ಬರುತ್ತಲೇ ಇರಬೇಕು. ನಾನು ನೋಡುತ್ತಲೇ ಇರಬೇಕು!’ ಎನ್ನಿಸಿತು. ಎಂತಹ ಜೊತೆ ಅದು ! ಸರ್ವಜ್ಞ ಕವಿ ಇಂತಹ ಒಂದು ದಾಂಪತ್ಯ ನೋಡಿಯೇ ‘ಸ್ವರ್ಗಕ್ಕೆ ಕಿಚ್ಚು ಹಚ್ಚು’ ಎಂದಿರಬೇಕು.
Golden TreasuryGolden Treasuryನಾವು ಅಲ್ಲಿ ಕೂಡಿ ಆಡಿದ ಮಾತಿಗೆ ತುದಿಮೊದಲಿರಲಿಲ್ಲ. ಸಾಮಾನ್ಯವಾಗಿ ಸಾಹಿತ್ಯದ ಮಾತುಗಳೇ ಹೆಚ್ಚು. ನಾನು, ಪ್ರೊ.ಗೋಕಾಕರು ಇಂಗ್ಲೆಂಡಿನಿಂದ ಬಂದ ಮೇಲೆ ಧಾರವಾಡಕ್ಕೆ ಮೊದಲು ಬಂದಾಗಿನ ನಮ್ಮ ಉತ್ಸಾಹವನ್ನು ಹೇಳಿದೆ. ಅದನ್ನು ಕೇಳಿ ಅವರು ‘‘ಇನ್ನಿಷ್ಟು ಹೇಳಿ ಇನ್ನಿಷ್ಟು!’’ ಎಂದರು. ಶ್ರೀ. ಬೇಂದ್ರೆ ಮಾಸ್ತಿ ಎಂದರೆ ಅವರಿಗೆ ಬಹಳ ಭಕ್ತಿ. ಅವರನ್ನೊಮ್ಮೆ ಕೂಡಿಯೆ ತಮ್ಮ ಮನೆಗೆ ಕರೆಯಬೇಕೆನ್ನುತ್ತಿದ್ದರು. ಬೇಂದ್ರೆಯವರ,-‘ರತ್ನ’ರ ಕವಿತೆಗಳು, ಮಾಸ್ತಿಯವರ ಕತೆಗಳು ಆಗಿನ ನಮ್ಮ ಮಾತಿನಲ್ಲಿ ಹಾಸು-ಹೊಕ್ಕಾಗಿದ್ದವು. ಏನಾದರೂ ಮಾತು ಬಂದಾಗ ಅದರೊಡನೆ ಒಂದು ಕವಿತೆಯ ನುಡಿಯೊ, ಕತೆಯ ಒಂದು ಮಾತೊ ಬರುತ್ತಲೇ ಇತ್ತು. ಈ ಮೊದಲ ವರ್ಣಿಸಿದ ಹಾಲಿನಲ್ಲಿ ಒಂದು ಸಣ್ಣ ಮೇಜಿನ ಮೇಲೆ , ಅದರೊಂದಿಗೆ ‘ಶ್ರೀ’ ಅವರ ‘ಇಂಗ್ಲಿಷ್ ಗೀತಗಳು’; ಅಲ್ಲಿಯೇ ‘ಉಮರನ ಒಸಗೆ’. ಒಂದು ಬದಿಗೆ ಓದಿ ಓದಿ ಜೀರ್ಣವಾದ, ಗರಿ-ಗರಿಯಾದ ‘ಗರಿ’ಯೊಂದು. ಯ ಹೊಟ್ಟೆಯಲ್ಲಿ ವಿ.ಸೀ. ಅವರ ‘ಮನೆತುಂಬಿಸುವುದು’ ಕವಿತೆಯದೊಂದು ಕಾಗದವಿತ್ತು. ಇವುಗಳನ್ನಿಟ್ಟ ಚಿಕ್ಕ ಮೇಜಿಗೆ ಹೊದಿಸಿದ ಬಟ್ಟೆಯ ಮರೆಗೆ-ಬುಡದಲ್ಲಿ, ಶ್ರೀ. ಗೋಪಾಲಕೃಷ್ಣರು ಓದುವ ಪಂಪಭಾರತ, ಜೈಮಿನಿಭಾರತ ಇರುತ್ತಿದ್ದವು. ಇವರ ಒಬ್ಬ ಗೆಳತಿಯ ತಾಯಿ ಮಕ್ಕಳ ‘ಕಾಟ’ದಿಂದ ರೇಗಿದಾಗ ‘ಯಾಕೋ ಕಾಣೆ’ ಎನ್ನುತ್ತಿದ್ದರಂತೆ. ಹಿಂದಿನಿಂದ ಗೌರಮ್ಮನವರು ‘ರುದ್ರವೀಣೆ’ ಮಿಡಿಯುತ್ತಿರುವುದು ಎಂದು ಗೆಳತಿಯ ಕಿವಿಯಲ್ಲಿ ನುಡಿಯುತ್ತಿದ್ದರಂತೆ.
‘Great Stories of the world’ ಇವರಿಗೆ ಇಂಗ್ಲಿಷ್ ಕತೆಗಳನ್ನೋದುವುದು ಬಹಳ ಮೆಚ್ಚುಗೆ. ಒಮ್ಮೆ ಒಂದು ಕಾಗದದಲ್ಲಿ - ‘‘ಮೊನ್ನೆ ಮೊನ್ನೆ ಎಂಬ ಪುಸ್ತಕವನ್ನು ಓದಿದೆ. ಬಹಳ ಚೆನ್ನಾಗಿದ್ದ ಕತೆಗಳಿದ್ದವು. ಓದಿ ಎನಿಸಿತು: ‘ಅಯ್ಯೋ, ಈ ಕತೆಗಳ ಮುಂದೆ ನಮ್ಮ ಪ್ರಯತ್ನವೇ’ ಎಂದು. ಮತ್ತೆ ಅವನ್ನು ಅನುವಾದಿಸಲೇ- ಎಂದುಕೊಂಡೆ. ಬೇಡ, ಇಷ್ಟೊಂದು ಸುಂದರವಾದವುಗಳನ್ನು ನನ್ನ ಬರಹದ ಮೂಲಕ ವಿರೂಪಗೊಳಿಸಬೇಕೆಂದು ಸುಮ್ಮನಾದೆ’’ ಎಂದು ಬರೆದಿದ್ದರು. ಅನುವಾದಗಳು ಚೆನ್ನಾಗಿರದಿದ್ದರೆ ಅವರಿಗೆ ತುಂಬ ಬೇಸರವಾಗುತ್ತಿತ್ತು. ಒಮ್ಮೆ ನಾನು ಕಳಿಸಿದ ಒಂದು ಅನುವಾದಿತ ಪುಸ್ತಕ ಓದಿ ‘‘ನಿನ್ನೆ ರಾತ್ರಿ ‘...................’ ಓದಿದೆ. ಚೆನ್ನಾಗಿಲ್ಲದ ಅನುವಾದಗಳನ್ನು ಓದುವುದಕ್ಕಿಂತಲೂ ಓದದಿದ್ದರೆ ಒಳ್ಳೆಯದೆನಿಸುವುದು. ಮುದ್ರಾರಾಕ್ಷಸಗಳು ತುಂಬಿಹೋಗಿವೆ. ಸಾಲದುದಕ್ಕೆ ಅನುವಾದವೂ ಅಷ್ಟು ಚೆಂದ!’’ ಎಂದು ಬರೆದರು.
ಅಲ್ಲಲ್ಲಿಯ ಸಾಹಿತ್ಯದ ಚಟುವಟಿಕೆಗಳನ್ನವರು ಬಹಳ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ‘‘ಬಳ್ಳಾರಿ ಸಮ್ಮೇಳನಕ್ಕೆ ಬನ್ನಿ’’ ಎಂದು ಬರೆದಿದ್ದೆ. ಅವರಿಗೆ ಬರಲಿಕ್ಕಾಗಲಿಲ್ಲ ನಾನು ತಿರುಗಿ ಬಂದ ಕೂಡಲೇ ಪತ್ರ ಬರೆಯಲಿಲ್ಲ. ಆಗ ಬಂದ ಗೌರಮ್ಮನವರ ಕಾಗದ ಹೀಗಿದೆ :
‘‘ಸಾಹಿತ್ಯ ಸಮ್ಮೇಳನವಾಗಿ ಒಂದು ವಾರ ಕಳೆದರೂ ನಿಮ್ಮ ಪತ್ರವೇ ಇಲ್ಲ. ನನಗಂತೂ ನಿಮ್ಮ ಪತ್ರದ ಹಾದಿ ನೋಡಿ ನೋಡಿ ಕಣ್ಣು ನೋವು ಬಂದು ಹೋಗಿದೆ. ಸಾಹಿತ್ಯ ಸಮ್ಮೇಳನದ ವಿಷಯ ಪೇಪರ್‌ಗಳಲ್ಲಿ ಓದುವುದಕ್ಕಿಂತಲೂ ನಿಮ್ಮ ಪತ್ರದಲ್ಲಿ ಓದಿದರೆ ಹೆಚ್ಚು ಚೆಂದವೆಂದು ನನ್ನ ಭಾವನೆ. ಆದರೆ ನೀವು ಎಲ್ಲವನ್ನೂ-ಒಂದೂ ಬಿಡದೆ-ನನ್ನ ಗೆಳತಿ ಕುಮಾರಿ ಪದ್ಮಾವತಿಯ ವಿಷಯ ಸಹ-ಬರೆಯಬೇಕೆಂದು ಆಸೆ ನನಗೆ. ಪತ್ರಿಕೆಗಳಲ್ಲಿ ಕೇವಲ ಣ-ನ* ದ (ಕರ್ಣಾಟಕ - ಕರ್ನಾಟಕ) ಜಗಳಗಳಲ್ಲದೆ ಬೇರೇನೂ ಇಲ್ಲ. ಹೇಗೆ ? ಬರೆಯುವಿರೋ ಇಲ್ಲವೊ ?....’’
ಮುಂದುವರಿಯುವುದು...
ರೂಪದರ್ಶಿಗಳು
ಆಯ್ಕೆ:ಪುಸ್ತಕಮನೆ ಹರಿಹರಪ್ರಿಯ