ಸಮಕಾಲೀನ

Update: 2017-07-01 16:54 GMT

            ಪೇಜಾವರ ಶ್ರೀ

ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಎಲ್ಲರೂ ಆಗಸದತ್ತ ನೋಡುತ್ತಿರುವಾಗ ಭೂಮಿ ಯಿಂದಲೇ ಮಳೆ ಬಂದಂತೆ ಉಡುಪಿಯ ಮಠಾಧೀಶ ರಾದ ಪೇಜಾವರ ಸ್ವಾಮೀಜಿಯವರು ತಮ್ಮ ಬ್ರಾಹ್ಮಣ ಮಠದೊಳಗೆ ಮುಸಲ್ಮಾನರನ್ನು ಕರೆಸಿ ಇಫ್ತಾರ್ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಹಜವಾಗಿಯೇ ಮತ್ತು ಕೆಲವರ ಬಯಕೆ - ನಿರೀಕ್ಷೆಯಂತೆಯೇ ಈ ಘಟನೆಗೆ ವ್ಯಾಪಕ ಪ್ರಚಾರ ಸಿಕ್ಕಿದೆ.

ಯಾವ ಸಂದರ್ಭದಲ್ಲೂ ಹಿಂದೂಗಳನ್ನೇ ಮಠದೊಳಗೆ ಬಿಟ್ಟುಕೊಳ್ಳದ, ಸಹಪಂಕ್ತಿ ಊಟ ಮಾಡದ ಪೇಜಾವರರು ಹೀಗೆ ಏಕಾಏಕಿ ಮುಸಲ್ಮಾನರ ಬಗ್ಗೆ ಕಾಳಜಿ ತೋರಿರುವುದನ್ನು ಹಲವು ಬೇರೆ ಆಯಾಮಗಳಲ್ಲಿ ನಾವು ನೋಡಬೇಕಾಗಿದೆ. ಅಂತಹ ಒಂದು ಸೂಚನೆಯನ್ನು ವೈದಿಕ ಭಯೋ ತ್ಪಾದಕ ಪ್ರಮೋದ್ ಮುತಾಲಿಕ್ ನೀಡಿದ್ದಾರೆ ಸಹ.

ಪೇಜಾವರರ ನಡೆ ಹಿಂದೂ ಧರ್ಮಕ್ಕಾದ ಅವಮಾನ ಎಂದಿದ್ದಾರೆ ಮುತಾಲಿಕ್. ಅದಕ್ಕೆ ಪ್ರತಿಕ್ರಿಯೆಯಾಗಿ ಪೇಜಾವರರು ‘ನನಗೆ ಸೌಹಾರ್ದತೆ ಮುಖ್ಯ’ ಎಂದಿದ್ದಾರೆ.

ಮುಂಬರಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ನಾವಿದನ್ನು ನೋಡಬೇಕಿದೆ.

ಬಿಜೆಪಿಗೆ ಬ್ರಾಹ್ಮಣರು ಹಾಗೂ ಲಿಂಗಾಯತರಲ್ಲದೆ ಇನ್ನಿತರ ಸಮುದಾಯದವರನ್ನು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಈಗ ಒಳಗೊಳ್ಳಬೇಕೆಂದಿದೆ. ಹಾಗಾಗಿ ಯಡಿಯೂರಪ್ಪನವರು ‘ಬಿಜೆಪಿಯ ನಡಿಗೆ ದಲಿತರ ಕಡೆಗೆ’ ಎಂಬ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಹಿಂದುಳಿದ ವರ್ಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈಶ್ವರಪ್ಪನವರನ್ನು ಛೂ ಬಿಟ್ಟು ಕೆಲ ತಿಂಗಳ ಕಾಲ ರಾಯಣ್ಣ ಬ್ರಿಗೇಡ್‌ನ ಸರ್ಕಸ್ ಮಾಡಿಸಲಾಯಿತು. ಈ ಉದ್ದೇಶಕ್ಕಾಗಿ ಸ್ವತಃ ಸಿದ್ದರಾಮಯ್ಯನವರೊಂದಿಗೆ ಮುಖಾ-ಮುಖಿಯಾಗಲು ಈಶ್ವರಪ್ಪನವರು ಸತತ ಪ್ರಯತ್ನ ನಡೆಸಿದರಾದರೂ ಅವರ ಪ್ರಯತ್ನ ಫಲ ನೀಡಲಿಲ್ಲ. ಸಿದ್ದರಾಮಯ್ಯ ಈಶ್ವರಪ್ಪನವರನ್ನು ನಿರ್ಲಕ್ಷಿಸಿದ್ದು ಒಂದೆಡೆಯಾದರೆ, ಸ್ವತಃ ಅಹಿಂದ ವರ್ಗಗಳ ನಾಯಕರಾಗುವಷ್ಟು ಸಾಮಾಜಿಕ ವ್ಯಕ್ತಿತ್ವ ಈಶ್ವರಪ್ಪಗೆ ಇರದಿದ್ದುದೇ ಈ ವೈಫಲ್ಯಕ್ಕೆ ಕಾರಣವಾಗಿತ್ತು.

ಯಡಿಯೂರಪ್ಪ - ಈಶ್ವರಪ್ಪನವರ ನಡುವೆ ಈಗಲೂ ಇರುವ ವೈಮನಸ್ಸನ್ನೇ ಕೆಲಕಾಲ ಬಳಸಿಕೊಂಡು ಅಹಿಂದ ವರ್ಗವನ್ನು ಕನ್ಸಾಲಿಡೇಟ್ ಮಾಡಿಕೊಳ್ಳಬೇಕೆಂಬ ಬಿಜೆಪಿ ಯ ಪ್ಲಾನ್ ಫಲ ನೀಡಲಿಲ್ಲ. ಇವರಿಬ್ಬರ ಕೃತಕ ಜಗಳದಿಂದ ಮುಂದೆ ಬಿಜೆಪಿಗೆ ಹಾನಿಯಾಗಬಹುದೆಂಬ ಆತಂಕದಿಂದ ರಾಯಣ್ಣ ಬ್ರಿಗೇಡ್ ಅನ್ನು ನೇಣಿಗೇರಿಸಲಾಯಿತು. ಈಗದರ ಮುಂದುವರಿದ ಎಪಿಸೋಡ್‌ನಂತೆ ಪೇಜಾವರರ ಮುಸ್ಲಿಂ ಸೌಹಾರ್ದ ಕಾಣಿಸಿಕೊಂಡಿದೆ.

ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ 70 ಲಕ್ಷಕ್ಕಿಂತ ಹೆಚ್ಚಿದೆ. ಕನಿಷ್ಠ 100ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಪ್ರಮಾಣದ ಮುಸ್ಲಿಮರ ಓಟುಗಳಿವೆ. ಇವೆಲ್ಲಾ ಸಾರಾಸಗಟಾದ ಬಿಜೆಪಿಯ ವಿರುದ್ಧ ಚಲಾವಣೆಯಾಗಬಾರದೆಂದರೆ ಅವರನ್ನು ಸ್ವಲ್ಪ ಓಲೈಸಬೇಕಾಗುತ್ತದೆ ಎಂಬ ಸತ್ಯ ‘manipulative politics’

ನಲ್ಲಿ ಪಳಗಿರುವ ಬಿಜೆಪಿಯವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಕೆಲವು ಬಾರಿ ನಮ್ಮಂದಿಗೆ ಬನ್ನಿ ಎನ್ನುವ ಮಾತು ನಮ್ಮನ್ನು ಬಿಟ್ಟದೆ ನಿಮಗೆ ಬೇರೆ ಯಾರೂ ಇಲ್ಲ ಎಂಬ ಮಾತಿನ ಇನ್ನೊಂದರ್ಥ ಆಗಿರುತ್ತದೆ. ಅದೀಗ ಪೇಜಾವರರ ಮೂಲಕ ಕಾಣಿಸುತ್ತಿದೆ ಅಷ್ಟೆ. ಯುದ್ಧವನ್ನು ಘೋಷಿಸಿ ಮೇಲೇರಿ ಬರುವವರು ಶಸ್ತ್ರಗಳನ್ನು ಕೈಗೆತ್ತಿಕೊಂಡರೆ ಒಂದರ್ಥ, ಕೆಲಕಾಲ ಶಸ್ತ್ರ ಕೆಳಗಿಟ್ಟರೆ ಇನ್ನೊಂದರ್ಥ. ಸಂಧಾನಕ್ಕೆ ಬಂದರೆ ಮತ್ತೊಂದರ್ಥ, ವಿನಾಕಾರಣ ಕೈಕುಲುಕಲು ಬಂದರೆ ಮಗದೊಂದರ್ಥ.

ಪೇಜಾವರರು ಹಾಗೂ ಮುತಾಲಿಕ್‌ರ ವಾಗ್ವಾದ ನೀನು ಹೊಡೆದಂತೆ ಮಾಡು, ನಾನು ಅತ್ತಂತೆ ನಟಿಸುತ್ತೇನೆ ಎಂಬುದು ರೆಡಿಮೇಡ್ ಸ್ಕ್ರಿಫ್ಟ್ ರೀತಿ ಭಾಸವಾಗುತ್ತದೆ. ಇಂತಹ ಪ್ರಹಸನಗಳು ನಮ್ಮ ರಾಮಾಯಣ, ಮಹಾಭಾರತಗಳಲ್ಲಿ ಹುಡುಕಿದರೆ ಅನೇಕವು ಸಿಕ್ಕಾವು.

ಅಮೆರಿಕದಲ್ಲಿ ಮೋದಿ ಮತ್ತು ನಾನು

ಮೊದಲಿಗೆ ಓದುಗರ ಕ್ಷಮೆ ಕೇಳಿ ನಂತರ ಮುಂದುವರಿಯುವೆ.

ನನ್ನ ಶಾಲಾ ದಿನಗಳಲ್ಲಿ ಡಾ. ಪ್ರಭುಶಂಕರರವರ ‘ಅಮೆರಿಕದಲ್ಲಿ ನಾನು ಮತ್ತು ಶಾಂತಿ’ ಎಂಬ ಪುಸ್ತಕದಿಂದ ಆಯ್ದ ಭಾಗವೊಂದನ್ನು ಪಠ್ಯವಾಗಿ ಓದಿದ್ದ ನೆನಪಿದೆ. ಈಗ ಇಂಡಿಯಾದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆೆ ಹೋಗಿ ಬಂದಿದ್ದಾರೆ.

ನಮ್ಮ ಮೀಡಿಯಾಗಳೆಲ್ಲಾ ‘ಇದೊಂದು ಅಭೂತಪೂರ್ವ ಯಶಸ್ವಿ ಭೇಟಿ’ ಎಂದು ಬಿಂಬಿಸಿವೆ. ಆದರೆ ಇದರ ನಡುವೆ ಬೆಂಗಳೂರಿನ ಆಫೀಸಿನಲ್ಲಿ ಕುಳಿತೇ ನನಗೆ ಕಂಡದ್ದನ್ನು ವಿವರಿಸುತ್ತೇನೆ.

ಅದಕ್ಕೆ ಇದರ ಶೀರ್ಷಿಕೆ ‘ಅಮೆರಿಕದಲ್ಲಿ ಮೋದಿ ಮತ್ತು ನಾನು’ ಆಗಿದೆ.

ಕಳೆದ ಹತ್ತು ದಿನಗಳಿಂದ ಇಂಡಿಯಾದ ರಾಷ್ಟ್ರೀಯ ನ್ಯೂಸ್ ಚಾನೆಲ್‌ಗಳು ಹಾಗೂ ಪ್ರಾದೇಶಿಕ ಚಾನೆಲ್‌ಗಳು ಒಟ್ಟಾರೆಯಾಗಿ ಅಂದಾಜು ಎರಡು ಸಾವಿರ ಗಂಟೆಗಳಷ್ಟು ಸಮಯವನ್ನು ಮೋದಿಯ ಅಮೆರಿಕ ಭೇಟಿ ಬಗ್ಗೆ ವ್ಯಯಿಸಿವೆ.

ಮತ್ತೊಂದೆಡೆ... ಅಮೆರಿಕದಾದಲ್ಲೇನಾಯಿತೆಂಬುದನ್ನು ನೋಡೋಣ. ಅಲ್ಲಿನ ಪ್ರಮುಖ ದಿನಪತ್ರಿಕೆಗಳಾದ ವಾಷಿಂಗ್‌ಟನ್ ಪೋಸ್ಟ್, ದಿ ನ್ಯೂಯಾರ್ಕ್ ಟೈಮ್ಸ್‌ಗಳಲ್ಲಿ ಮೋದಿ ಭೇಟಿ ಒಂದು ಸಣ್ಣ ಸುದ್ದಿಯಾಗಿತ್ತಷ್ಟೆ.

ವಾಷಿಂಗ್‌ಟನ್ ಪೋಸ್ಟ್‌ನಲ್ಲಿ ಭಾರತೀಯ ಪತ್ರಕರ್ತೆ ಬರ್ಖಾ ದತ್ ಬರೆದ ಒಂದು ಲೇಖನ ಹಾಗೂ ಮೋದಿ ಭೇಟಿಯ ನಂತರ ಕೇಟಿ ಡಯಾಗ್ಸ್ ಎಂಬವರು ಬರೆದ ತುಸು ವ್ಯಂಗ್ಯ ಭರಿತ ಒಂದು ಲೇಖನ ಬಿಟ್ಟರೆ ಉಳಿದದ್ದೆಲ್ಲಾ ಸಾಧಾರಣ ಸುದ್ದಿಯಾಗಿ ಬಂದು ಮರೆಯಾದವು.

ಇನ್ನು ಸಿಎನ್‌ಎನ್ ಚಾನೆಲ್ ಮೋದಿ ಅಲ್ಲಿದ್ದಾಗಲೂ ಹಗಲೂ ರಾತ್ರಿ, ಅಮೆರಿಕದ ಹೊಸ ಹೆಲ್ತ್ ಪಾಲಿಸಿ, ಟ್ರಂಪ್‌ಗಿರುವ ರಶ್ಯಾ ಸಂಪರ್ಕಗಳ ಸುತ್ತಲೇ ವಿವಾದದ ಸುದ್ದಿ ಹಾಗೂ ಚರ್ಚೆ ನಡೆಸುತ್ತಿತ್ತು. ಉಳಿದ ಸಮಯ ಯೂರೋಪಿಯನ್ ಯೂನಿಯನ್ ಗೂಗಲ್‌ಗೆ 18 ಸಾವಿರ ಕೋಟಿ ರೂ. ದಂಡ ವಿಧಿಸಿದ ಸುದ್ದಿಗೆ ಖರ್ಚಾಯಿತು. ಮೋದಿಯ ಭೇಟಿ ಅಮೆರಿಕನ್ ಟಿವಿ ಚಾನಲ್‌ಗಳಲ್ಲಿ ಅಷ್ಟು ಮಹತ್ವ ಪಡೆಯಲಿಲ್ಲ.

ಸದ್ಯಕ್ಕೆ ಇದನ್ನು ಬದಿಗಿರಿಸಿ ಮೋದಿಯವರ ಅಮೆರಿಕ ಭೇಟಿಯಿಂದ ಭಾರತಕ್ಕಾದ ಲಾಭವೇನೆಂದು ನೋಡೋಣ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ‘ಅಮೆರಿಕ ಮೊದಲು’ ಎಂಬ ಪಾಲಿಸಿ ತೀವ್ರರೂಪ ಪಡೆಯುತ್ತಿದೆ. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ‘ಹವಾಮಾನ ಬದಲಾವಣೆ’ಯ ಶೃಂಗಸಭೆಯಲ್ಲೂ ಇದು ವ್ಯಕ್ತವಾಯಿತು. ಆ ಒಪ್ಪಂದದಿಂದ ಹಿಂದೆ ಸರಿದ ಟ್ರಂಪ್ ‘ಭಾರತ ಹಾಗೂ ಚೀನಾಗಳು’ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿವೆ’ ಎಂದು ಆರೋಪಿಸಿ ದೂಷಿಸಿದ್ದರು.

ಭಾರತೀಯ ಕುಶಲ ನೌಕರರು ಅಮೆರಿಕಕ್ಕೆ ಹೋಗಲು ಬೇಕಾದ ಹೆಚ್1ಬಿ ವೀಸಾ ಸವಲತ್ತುಗಳನ್ನು ಮೊದಲಿನಂತೆ ಅಡೆತಡೆ ಇರದೆ ಪಡೆಯಲು ಈಗ ಆಗುತ್ತಿಲ್ಲ.

ಆದರೆ ಇವೆರಡೂ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮೋದಿಯವರಿಗೆ ಟ್ರಂಪ್ ಆಸ್ಪದವನ್ನೇ ನೀಡಲಿಲ್ಲ.

ಕಾಶ್ಮೀರದ ಉಗ್ರಗಾಮಿ ಸೈಯದ್ ಸಲಾಹುದ್ದೀನ್‌ನನ್ನು ‘ಜಾಗತಿಕ ಭಯೋತ್ಪಾದಕ’ನೆಂದು ಘೋಷಿಸಲು ಅಮೆರಿಕ ಅಧ್ಯಕ್ಷರ ಸೀಲು-ಸೈನು ಹಾಕಿಸಿಕೊಂಡು ಬಂದಿರುವುದೇ ನಮ್ಮ ಪ್ರಧಾನಿಯ ಪ್ರವಾಸದ ಮಹತ್ಸಾದನೆಯಾಗಿದೆ. ಇಂತಹ ಘೋಷಣೆ ಹಾಗೂ ಹೇಳಿಕೆಗಳ ಪರಿಣಾಮ ಅಷ್ಟಿರುವುದಿಲ್ಲ ಎಂಬುದು ಬಹುತೇಕರಿಗೆ ತಿಳಿದಿದೆ.

ಪಾಕಿಸ್ತಾನ ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿ ‘ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ಬದಿಗೆ ಸರಿಸುವ ಈ ಘೋಷಣೆಯನ್ನು ತಾನು ಮಾನ್ಯ ಮಾಡುವುದಿಲ್ಲ’ ಎಂದು ಹೇಳಿದೆ.

ಡೊನಾಲ್ಡ್ ಟ್ರಂಪ್‌ರ ಒಟ್ಟಾರೆ ನಡವಳಿಕೆ ಚಕ್ರವರ್ತಿಯೊಬ್ಬ ತನ್ನ ಸಾಮಂತನನ್ನು ಬರಮಾಡಿಕೊಂಡಂತೆ ಭಾಸವಾಗುತ್ತಿತ್ತು.

ಮೋದಿಯನ್ನು ಭೇಟಿಯಾದ ದಿನವೇ ಮಾಂಟೆನಿಗ್ರೋ ಅಧ್ಯಕ್ಷರ ಭೇಟಿಯ ಕಾರ್ಯಕ್ರಮವೂ ಟ್ರಂಪ್‌ರಿಗಿತ್ತು. ಜೊತೆಗೆ ಉತ್ತರ ಕೊರಿಯಾವನ್ನು ನಿಯಂತ್ರಿಸಲು ಚೀನಾದೊಂದಿಗೆ ಹೇಗೆ ಸಂಬಂಧ ಸುಧಾರಿಸಿಕೊಳ್ಳಬೇಕೆಂಬ ಮಹತ್ವದ ಮೀಟಿಂಗ್‌ಗಳು ಒಂದರ ಹಿಂದೆ ಒಂದರಂತೆ ಅವರಿಗಿದ್ದವು. ಟ್ರಂಪ್‌ರಿಗೆ ರಶ್ಯಾದೊಂದಿಗಿರುವ ವ್ಯಾವಹಾರಿಕ ಹಾಗೂ ಅನಧಿಕೃತ ರಾಜತಾಂತ್ರಿಕ ಸಂಪರ್ಕಗಳ ಬಗ್ಗೆ ಈಗ ಅಮೆರಿಕದಾದ್ಯಂತ ಹುಯಿಲೆದ್ದಿದೆ.

ಟ್ರಂಪ್‌ಗೆ ಇವೆಲ್ಲಾ ದೊಡ್ಡ ತಲೆ ನೋವಾಗಿದೆ.

ಅಮೆರಿಕೆಯ ಲಾಕ್‌ಹಿಡ್ ಮಾರ್ಟಿನ್ ಕಂಪೆನಿಯಿಂದ ಎರಡು ಡಝನ್ ಗಾರ್ಡಿಯನ್ ಡ್ರೋನ್ ವಿಮಾನಗಳನ್ನು ಹನ್ನೆರಡು ಸಾವಿರ ಕೋಟಿ ರೂ.ನೀಡಿ ಖರೀದಿಸಲು ಭಾರತಕ್ಕೆ ಅವಕಾಶ ಸಿಕ್ಕಿದೆ. ನ್ಯಾಟೊ ಸದಸ್ಯರಲ್ಲದ ದೇಶವೊಂದಕ್ಕೆ ಈ ವಿಮಾನ ಲಭಿಸುತ್ತಿರುವುದು ಇದೇ ಮೊದಲು. ಆದರೂ ಬೇರೊಂದು ದೇಶಕ್ಕೆ ಹೋಗಿ ನಮ್ಮ ಹಣ ಖರ್ಚು ಮಾಡಿಕೊಂಡು ಒಂದು ವಸ್ತುವನ್ನು ಕೊಂಡು ತರುವುದನ್ನು ಮಹೋನ್ನತ ರಾಜತಾಂತ್ರಿಕ ವಿಜಯವೆಂದು ನಾವು ಭಾವಿಸಬೇಕೇ?

ಬೇರೆ ದೇಶಗಳ ಮುಖ್ಯಸ್ಥರನ್ನು ಭೇಟಿಯಾದಾಗ ಮಾಡುವಂತೆ ನಮ್ಮ ಪ್ರಧಾನಿಯವರು ಅಮೆರಿಕೆಯ ಅಧ್ಯಕ್ಷರೊಂದಿಗೂ ನಡೆದುಕೊಂಡರು. ಅಂದರೆ ಮೋದಿಯವರು ಟ್ರಂಪ್‌ರನ್ನು ಮೂರ್ನಾಲ್ಕು ಬಾರಿ ಅಪ್ಪಿಕೊಂಡರು. ಇದನ್ನ ಟ್ರಂಪ್ ನಿರೀಕ್ಷಿಸಿರಲಿಲ್ಲವೆಂಬುದು ಅವರ ಮುಖಭಾವದಲ್ಲೇ ಗೊತ್ತಾಗುತ್ತಿತ್ತು.

ಮೋದಿಯವರ ಈ ಅಸಾಂಪ್ರದಾಯಿಕ ವರ್ತನೆಯ ಬಗ್ಗೆ ಕೆಲ ಅಮೆರಿಕನ್ ಪತ್ರಕರ್ತರು ತುಸು ಗೇಲಿಯ ಮಾತುಗಳಲ್ಲಿ ಬರೆದಿದ್ದಾರೆ.

ಕೊನೆಯದಾಗಿ,

ನರೇಂದ್ರ ಮೋದಿಯವರ ಕಾರ್ ಶ್ವೇತ ಭವನದ ಬಳಿ ಬಂದು ನಿಂತಾಗ ಅವರ ಕಾರಿನ ಎರಡೂ ಬದಿಯ ಬಾಗಿಲುಗಳನ್ನು ಸೇವಕರು ತೆರೆದರು...

ಮೋದಿಯೊಂದಿಗೆ ಅವರ ಪತ್ನಿಯೂ ಇರುತ್ತಾರೆಂಬ ನಿರೀಕ್ಷೆಯಲ್ಲಿ!

ಕಾರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಇರುತ್ತಾರೆಂಬ ಕನಿಷ್ಠ ಮಾಹಿತಿಯೂ ಅಮೆರಿಕದ ಶ್ವೇತ ಭವನದ ಸಿಬ್ಬಂದಿಗೆ ಇರಲಿಲ್ಲವೆಂಬುದು ಅಮೆರಿಕನ್ನರು ನಮ್ಮ ಪ್ರಧಾನಿಯ ಈ ಭೇಟಿಗೆ ಅದೆಷ್ಟು ಪ್ರಾಮುಖ್ಯತೆ ನೀಡಿದ್ದರೆಂಬುದಕ್ಕೆ ಸಾಕ್ಷಿಯಾಗಿದೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News