ಜಿಎಸ್‌ಟಿ ಜಾರಿಯಿಂದ ಗೋವಾ ಪ್ರವೇಶ ಶುಲ್ಕ ರದ್ದು
ಕಾರವಾರ, ಜು.4: ದೇಶದಲ್ಲಿ ಏಕಪದ್ಧತಿಯ ತೆರಿಗೆ (ಜಿಎಸ್‌ಟಿ) ಜಾರಿಯಾದ ಹಿನ್ನೆಲೆಯಲ್ಲಿ ಗೋವಾ ಸರಕಾರ ಇತರ ರಾಜ್ಯದ ವಾಹನಗಳ ಮೇಲೆ ವಿಧಿಸುತ್ತಿದ್ದ ಪ್ರವೇಶ ತೆರಿಗೆಯನ್ನು ಸ್ಥಗಿತಗೊಳಿಸಿದೆ.
ಇದರಿಂದ ಗೋವಾ ರಾಜ್ಯಕ್ಕೆ ತೆರಳುತ್ತಿದ್ದ ಸಾರ್ವಜ ನಿಕರು, ಪ್ರವಾಸಿಗರು, ವಿವಿಧ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳುವವರು ಸೇರಿದಂತೆ ಸಾವಿರಾರು ಜನರಿಗೆ ವಾಹದ ಮೇಲಿನ ಆರ್ಥಿಕ ಹೊರೆ ತಪ್ಪಿದ್ದು ನಿಟ್ಟುಸಿರು ಬಿಡುವಂತಾಗಿದೆ. ಲಾರಿ, ಕಾರು, ಪ್ರವಾಸಿ ವಾಹನಗಳು ಸೇರಿ ದಂತೆ ವಾಹನಗಳ ವರ್ಗದ ಆಧಾರದ ಮೇಲೆ 250 ರೂ. ರಿಂದ 150 ರೂ. ವರೆಗೆ ಪ್ರವೇಶ ಶುಲ್ಕವನ್ನು ಗೋವಾ ರಾಜ್ಯ ಕಳೆದ ಕೆಲವು ವರ್ಷ ಗಳಿಂದ ವಿಧಿಸುತ್ತಿತ್ತು.
ಬಹುತೇಕ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯ ನಿರ್ವಹಣೆ ಮಾಡುತ್ತದೆ. ಆದರೆ, ಗೋವಾದ ಲೋಕೋಪ ಯೋಗಿ ಇಲಾಖೆಯೂ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ ಮಾಡುತ್ತಿದೆ. ಜೊತೆಗೆ ಗೋವಾ ರಾಜ್ಯ ಹೆದ್ದಾರಿಯನ್ನೂ ನಿರ್ವಹಣೆ ಮಾಡುವ ಸಲುವಾಗಿ ಗೋವಾ ಗಡಿಯೊಳಗೆ ಪ್ರವೇಶಿಸುವ ವಾಹನಗಳಿಗೆ ವಿವಿಧ ಪ್ರವೇಶ ಶುಲ್ಕವನ್ನು ವಿಧಿಸಲಾಗಿತ್ತು. ಗೋವಾ ಗಡಿಗೆ ಹೊಂದಿಕೊಂಡಿರುವ ಇತರ ರಾಜ್ಯಗಳ ಆರ್‌ಟಿಒ ನೋಂದಣಿ ಸಂಖ್ಯೆಗಳ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತಿತ್ತು. ಹಿಂದಿನ ಅವಧಿಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದ ಮನೋ ಹರ ಪಾರಿಕ್ಕರ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಚುನಾವಣೆಯಲ್ಲಿ ಪ್ರಾಣಿಕೆಯಲ್ಲಿ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಪೆಟ್ರೋಲ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದರು. ಆ ಸಂದರ್ಭದಲ್ಲಿ ಗೋವಾ ಸರಕಾರಕ್ಕೆ ಆದಾಯದ ಕೊರತೆ ಉಂಟಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಗೋವಾಕ್ಕೆ ಪ್ರವೇಶಿಸುವ ಹೊರ ರಾಜ್ಯದ ದ್ವಿಚಕ್ರ ವಾಹನ ಹೊರತು ಪಡಿಸಿ ಉಳಿದ ಎಲ್ಲ ವಾಹನಗಳಿಗೆ ಭಾರೀ ಪ್ರಮಾಣದ ತೆರಿಗೆ ಶುಲ್ಕವನ್ನು ನಿಗದಿಪಡಿಸಿತ್ತು. ಇದಾದ ಬಳಿಕ ರಾಜ್ಯದಿಂದ ಗೋವಾಕ್ಕೆ ತೆರಳುವ ಪ್ರವಾಸಿಗರು, ಇನ್ನಿತರ ಕಾರ್ಯಗಳಿಗೆ ತೆರಳುವವರು ಹೆಚ್ಚಿನ ಶುಲ್ಕವನ್ನು ತುಂಬಿಯೇ ಗೋವಾಕ್ಕೆ ಪ್ರವೇಶಿಸಬೇಕಾಗಿತ್ತು. ಆ ಸಂದಭರ್ದಲ್ಲಿ ಗೋವಾ ಸರಕಾರದ ಈ ನಿರ್ಧಾರಕ್ಕೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು. ಆದರೂ ಗೋವಾ ಸರಕಾರ ತೆರಿಗೆ ವಿಧಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿರಲಿಲ್ಲ. ತೆರಿಗೆ ಸಂಗ್ರಹಿುವ ಸಲುವಾಗಿಯೇ ಗೋವಾದ ಗಡಿ ಭಾಗದ ಪೋಳೆಂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಬೆಳಗಾವಿ, ರಾಮನಗರ ಪ್ರದೇಶದಲ್ಲೂ ತೆರಿಗೆ ಸಂಗ್ರಹಿಸುವ ಗೇಟ್ ಪ್ರಾರಂಭಿಸಿತ್ತು.
ಆ ಸಂದರ್ಭದಲ್ಲಿ ಗೋವಾ ಸರಕಾರ ಈ ಶುಲ್ಕ ನೀತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಕಾರವಾರದ ಮಾಜಾಳಿಯ ಗಡಿ ಭಾಗಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಹೋರಾಟ ನಡೆಸಿ ತೆರಿಗೆ ನಿರ್ಧಾರ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು. ಆದರೆ, ಯಾವುದಕ್ಕೂ ಬಗ್ಗದ ಗೋವಾ ಸರಕಾರ ಕಳೆದ ಆರೇಳು ವರ್ಷಗಳಿಂದ ಗೋವಾ ಪ್ರವೇಶ ಶುಲ್ಕ ಸಂಗ್ರಹಿಸುವ ಕಾರ್ಯವನ್ನು ನಿಲ್ಲಿಸಿರಲಿಲ್ಲ. ಪ್ರಾರಂಭದ ಅವಧಿಯಲ್ಲಿ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ವಿಧಿಸಲಾಗಿತ್ತಾದರೂ, ನಂತರದ ದಿನದಲ್ಲಿ ತೆರಿಗೆ ಶುಲ್ಕ ಕೊಂಚ ಕಡಿಮೆಗೊಳಿಸಿತ್ತು.
ಗೋವಾ ಪ್ರಸಿದ್ಧ ಪ್ರಾಸಿ ತಾಣವಾಗಿರುವುದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಈ ಶುಲ್ಕ ಹೊರೆಯಾಗಿ ಪರಿಣಮಿಸಿತ್ತು. ಇಷ್ಟರೊಳಗೆ ಗೋವಾ ಕೋಟ್ಯಂತರ ರೂ. ಪ್ರವೇಶ ಶುಲ್ಕವನ್ನು ವಸೂಲಿ ಮಾಡಿದೆ ಎನ್ನಲಾಗಿದೆ. ಇದೀಗ ದೇಶಾದ್ಯಂತ ಏಕರೂಪದ ತೆರಿಗೆ ಜಾರಿಯಲ್ಲಿ ಬಂದಿರುವುದರಿಂದ ಗೋವಾ ಸರಕಾರ ಗೋವಾ ಪ್ರವೇಶ ಶುಲ್ಕವನ್ನು ಅನಿವಾರ್ಯವಾಗಿ ಹಿಂಪಡೆಯುವಂತಾಗಿದೆ. ಇದರಿಂದ ವಾಹನ ಮಾಲಕರು, ಪ್ರವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.