ಬ್ಯಾಟರಿ ಕಿರಿಕಿರಿ ಇಲ್ಲ, ಏಕೆಂದರೆ ಈ ಮೊಬೈಲ್ ನಲ್ಲಿ ಬ್ಯಾಟರಿಯೇ ಇಲ್ಲ !
ಅಮೆರಿಕ, ಜು.6: ಇಂದಿನ ದಿನಗಳಲ್ಲಿ ಮನುಷ್ಯನಿಗೆ ಮೊಬೈಲ್ ಎನ್ನುವುದು ಪ್ರಾಥಮಿಕ ಅಗತ್ಯದಂತೆಯೇ ಆಗಿದೆ. ಮನೆಯಲ್ಲಿ ಯಾವ ವಸ್ತುಗಳು ಇದೆಯೋ, ಇಲ್ಲವೋ ಮೊಬೈಲ್ ಚಾರ್ಜರಂತು ಬೇಕೇ ಬೇಕು. ಒಂದು ವೇಳೆ ಮೊಬೈಲ್ ಚಾರ್ಜರ್ ಇಲ್ಲದಿದ್ದಲ್ಲಿ ನಾವು ಅನುಭವಿಸುವ ಕಿರಿಕಿರಿ ಅಷ್ಟಿಷ್ಟಲ್ಲ. ಈ ಸಮಸ್ಯೆಗೆ ಪರಿಹಾರವೆಂಬಂತೆ ಬ್ಯಾಟರಿಯಿಲ್ಲದ ಮೊಬೈಲ್ ಫೋನೊಂದನ್ನು ಯುನಿವರ್ಸಿಟಿ ಆಫ್ ವಾಷಿಂಗ್ಟನ್ ನ ಸಂಶೋಧಕರು ಕಂಡುಹಿಡಿದಿದ್ದಾರೆ.
ವಿದ್ಯುತ್ ಶಕ್ತಿಗೆ ಬದಲಾಗಿ ರೆಡಿಯೋ ಸಿಗ್ನಲ್ ಗಳು ಹಾಗೂ ಬೆಳಕಿನಿಂದ ಅಗತ್ಯವಿರುವ ಮೈಕ್ರೋವ್ಯಾಟ್ ಗಳಷ್ಟು ಶಕ್ತಿಯನ್ನು ಈ ಮೊಬೈಲ್ ಬಳಸಿಕೊಳ್ಳಲಿದೆ. ಇದೇ ಬ್ಯಾಟರಿ ರಹಿತ ಫೋನ್ ನಿಂದ ಸಂಶೋಧಕರ ತಂಡ ಸ್ಕೈಪ್ ಕರೆಗಳನ್ನು ಮಾಡಿ ಸಫಲವಾಗಿದೆ.
“ಶೂನ್ಯ ಶಕ್ತಿಯನ್ನು ಉಪಯೋಗಿಸಿ ಬಳಸಬಹುದಾದ ಮೊಬೈಲೊಂದನ್ನು ನಾವು ಕಂಡು ಹಿಡಿದಿದ್ದೇವೆ. ಪ್ರಕೃತಿದತ್ತವಾದ ಶಕ್ತಿಯನ್ನು ಉಪಯೋಗಿಸಿ ಬಳಸಬಹುದಾದ ಈ ಮೊಬೈಲ್ ನ ವಿನ್ಯಾಸವನ್ನು ಹೇಗೆ ಮಾಡಬಹುದು ಎನ್ನುವುದನ್ನು ನಾವು ಪುನರ್ವಿಮರ್ಶಿಸಬೇಕಾಗಿದೆ” ಎಂದು ಸಂಶೋಧಕರಲ್ಲೋರ್ವರು ಹೇಳಿದ್ದಾರೆ.