ತಳಸ್ತರದ ಬದುಕಿನ ಸಾಮಾಜಿಕ ಐಡೆಂಟಿಟಿಯ ಹುಡುಕಾಟ
‘ಆಧುನಿಕತೆ, ರಾಷ್ಟ್ರ; ಕಾರಂತ-ಕುವೆಂಪು ಕಥನ’ ಕೃತಿಯ ಮೂಲಕ ಚಿಂತನಾ ಲೋಕಕ್ಕೆ ಪರಿಚಿತರಾಗಿರುವ ಡಾ. ಶ್ರೀನಿವಾಸ್ ಗಿಳಿಯಾರು ಅವರ ಎರಡನೆ ಕೃತಿ ‘ದಲಿತ ಅಭಿವೃದ್ಧಿ: ಸಾಹಿತ್ಯ-ಸಂಸ್ಕೃತಿ’. ವಂಚಿತ ಜನಬದುಕಿನ ನೆಲೆಗಳಲ್ಲಿ ನಿಂತು ನಡೆಸಿರುವ ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಜನಬದುಕಿನ ಓದುಗಳ ಹಲವು ಬಗೆಗಳು ಇಲ್ಲಿವೆ. ತಲಾ ಎಂಟು ಲೇಖನಗಳ ಎರಡು ಭಾಗಗಳು ಈ ಕೃತಿಯಲ್ಲಿವೆ. ಮೊದಲನೆಯ ಭಾಗದ ಲೇಖನಗಳಲ್ಲಿ ಬಹುತೇಕ ವರ್ತಮಾನ ರಾಜಕೀಯ ಬೆಳವಣಿಗೆಗಳ ಚರ್ಚೆಗಳನ್ನು ಒಳಗೊಂಡಿವೆ. ಶಿವರಾಮ ಕಾರಂತ, ನಿಸಾರ್ ಅಹಮದ್‌ರಂತಹ ಹಿರಿಯ ಲೇಖಕರ ಬರಹಗಳನ್ನು ಇಟ್ಟುಕೊಂಡು ವರ್ತಮಾನದ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ. ಶಿವರಾಮ ಕಾರಂತರ ಬರಹಗಳು ಪ್ರತಿನಿಧಿಸುವ ಜ್ಞಾನ ಮೀಮಾಂಸೆಯ ಸ್ವರೂಪ ಲೇಖನದಲ್ಲಿ ಕಾರಂತರ ಬರಹಗಳ ತಾತ್ವಿಕ ಭೂಮಿಕೆಯನ್ನು ಚರ್ಚಿಸುತ್ತಾ, ಸಮಾಜವಾದ, ಅಂಬೇಡ್ಕರ್‌ವಾದ, ಕಮ್ಯುನಿಸಂ ಇತ್ಯಾದಿ ಇಸಂಗಳನ್ನು ಸಾರಾಸಗಟಾಗಿ ನಿರಾಕರಿಸುವ ಕಾರಂತರ ಲಿಬರಲ್ ಹ್ಯೂಮನಿಸಂ ಹೊರಗಿನದ್ದಾಗದೇ ಅದನ್ನು ಅಂತರಂಗೀಕರಿಸಿಕೊಂಡಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ. ಕೆ. ಎಸ್. ನಿಸಾರ್ ಅಹಮದರ ‘ಎಲ್ಲೆಲ್ಲಿಯೂ ಬರಿಯ ಚಿಹ್ನೆ’ ಕವಿತೆಯನ್ನು ಇಟ್ಟುಕೊಂಡು ವೈವಿಧ್ಯ ಐಕ್ಯ ಮತ್ತು ಅಭಿವೃದ್ಧಿಯನ್ನು ಚರ್ಚಿಸುತ್ತಾರೆ. ಲಕ್ಷ್ಮಣ್ ಅವರ ವ್ಯಂಗ್ಯರೇಖೆಗಳಲ್ಲಿ ಭಾರತೀಯ ಶ್ರೀಸಾಮಾನ್ಯ ಹೇಗೆ ಮೂಡಿ ಬಂದಿದ್ದಾನೆ ಎನ್ನುವುದನ್ನು ‘ಲಕ್ಷ್ಮಣ ರೇಖೆ’ಯಲ್ಲಿ ಭಾರತೀಯ ಶ್ರೀಸಾಮಾನ್ಯ ಲೇಖನದಲ್ಲಿ ಬರೆಯುತ್ತಾರೆ. ಲಕ್ಷ್ಮಣ್ ಬಿಡಿಸಿದ ವ್ಯಂಗ್ಯ ಚಿತ್ರಗಳು ವಾಸ್ತವವನ್ನು ಅನಿವಾರ್ಯವೆಂದು ಒಪ್ಪಿಕೊಳ್ಳುವ ತಾತ್ವಿಕ ಆಯಾಮಗಳನ್ನು ಸ್ಥಿರೀಕರಿಸುತ್ತಿವೆಯೇ? ಎಂಬ ಪ್ರಶ್ನೆಯನ್ನು ಲೇಖಕರು ಎತ್ತುತ್ತಾರೆ. ಎರಡನೆ ಭಾಗದಲ್ಲಿರುವ ಬಹುತೇಕ ಲೇಖನಗಳು ಅಸ್ಪಶ್ಯತೆ, ಜಾತಿ ಐಡೆಂಟಿಟಿಗಳ ಕುರಿತಂತೆ ಚರ್ಚಿಸುತ್ತವೆ. ಬೆವರು ಹರಿಸಿ ದುಡಿವ ಜಾತಿ ಗುಂಪುಗಳ ತಳಮಟ್ಟದ ಬದುಕಿನ ಸಾಮಾಜಿಕ ಐಡೆಂಟಿಟಿಯ ಹುಡುಕಾಟದಲ್ಲಿ ತೊಡಗುತ್ತವೆ ಈ ಲೇಖನಗಳು. ಚಿಂತನ ಬಯಲು ಪ್ರಕಾಶನ ಬಂಟ್ವಾಳ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 94497 72651 ದೂರವಾಣಿಯನ್ನು ಸಂಪರ್ಕಿಸಬಹುದು.