ಜಾತಿ-ಸಂಸ್ಕೃತಿಯ ಅಂತರ್ ಸಂಬಂಧಗಳನ್ನು ಬಿಡಿಸುತ್ತಾ...

Update: 2017-07-07 18:19 GMT

ಭಾರತೀಯ ಸಂಸ್ಕೃತಿಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ನಮಗೆದುರಾಗುವ ಅತಿ ದೊಡ್ಡ ತೊಡಕು ಜಾತಿ. ಇಲ್ಲಿ ಸಂಸ್ಕೃತಿಯನ್ನು ಜಾತಿಯಿಂದ ವಿಭಜಿಸಿ ನೋಡುವ ಅನಿವಾರ್ಯತೆ ನಮಗೆ ಎದುರಾಗುತ್ತದೆ. ಯಾವುದು ಸಂಸ್ಕೃತಿ? ಜಾತಿ ಪದ್ಧತಿಯ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿಯನ್ನು ಕುರಿತು ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಜಾತೀಯತೆಯು ತುಂಬಿರುವ ದೇಶವು ಜಾತಿ ಪದ್ಧತಿಯ ದುರ್ವಾಸನೆಯಿಂದ ನಾರುತ್ತಿರುವ ಸಂಸ್ಕೃತಿಯನ್ನು ಮಾತ್ರ ಹೊಂದಿರಲು ಸಾಧ್ಯ ಎನ್ನುವುದನ್ನು ಅಭಿಪ್ರಾಯ ಪಡುತ್ತಾರೆ ಡಾ. ವಿ. ಆರ್ ನಾರ್ಲ. ಅವರ ‘ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ’ ಕೃತಿ, ಜಾತಿ ಮತ್ತು ಸಂಸ್ಕೃತಿಯ ಅಂತರ್ ಸಂಬಂಧವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತದೆ. ಇದು ನಾರ್ಲ ಮಾಡಿರುವ ಎರಡು ಉಪನ್ಯಾಸಗಳ ಸಂಗ್ರಹವಾಗಿದೆ. ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಇನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಜಾತಿ ಪದ್ಧತಿಯು ಭಾರತೀಯನ ಬೌದ್ಧಿಕತೆಯನ್ನು ಎಷ್ಟು ನಿಸ್ಸತ್ವಗೊಳಿಸಿದೆಯೆಂದರೆ ಅವನು ಬದುಕಿನ ಯಾವುದೇ ರಂಗದಲ್ಲಿ ಜಾತಿ ಭೇದವನ್ನಲ್ಲದೆ ಮತ್ತೇನನ್ನೂ ನೋಡಲಾಗದ ಕುರುಡನಂತಾಗಿದ್ದಾನೆ. ಹಿಂದೂ ಧರ್ಮೀಯ ಜಗತ್ತಿನ ಜೀವ ನಿರ್ಜೀವ ವಿಭಾಗಗಳೆರಡರಲ್ಲೂ ಜಾತಿ ಭೇದ ಆವರಿಸಿರುವುದನ್ನು ಲೇಖಕರು ಇಲ್ಲಿ ಗುರುತಿಸುತ್ತಾರೆ. ಪ್ರಾಚೀನ ಕಾಲದಿಂದ ಇದುವರೆಗಿನ ಸುದೀರ್ಘ ಕಾಲಾವಧಿಯಲ್ಲಿ ಸಮುದಾಯವಾಗಿ ಏಕತೆಯಲ್ಲಿ ಜೀವನ ಸಾಗಿಸುವ ಬದಲು ಸಾವಿರಾರು ಉಪಜಾತಿಗಳಾಗಿ ಜೀವಿಸುತ್ತಾ ಬಂದಿದ್ದೇವೆ ಎಂಬ ವಾಸ್ತವ ಸತ್ಯವನ್ನು ಮುಂದಿಡುವ ಲೇಖಕರು, ಇದು ವ್ಯಕ್ತಿಗಳ ಮಟ್ಟದಲ್ಲೂ ಸಾಮಾಜಿಕ ಮಟ್ಟದಲ್ಲೂ ನಮ್ಮ ಸಂಸ್ಕೃತಿಯನ್ನು ವಿಕೃತಗೊಳಿಸಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಮನುಷ್ಯನನ್ನು ಸುಸಂಸ್ಕೃತಗೊಳಿಸಲಾಗದ ನಮ್ಮ ಜಾತಿ, ಸಂಸ್ಕೃತಿಯು ಮೂಷಕಗಳ ಹಿಂಡನ್ನು ತಯಾರು ಮಾಡುತ್ತಿದೆ. ಈ ಹೊಲಸನ್ನು ಕ್ರಾಂತಿಯ ಮೂಲಕ ನಿರ್ನಾಮ ಮಾಡಿದಾಗ ಮಾತ್ರ ಸ್ವತಂತ್ರವೂ, ಸಶಕ್ತವೂ, ಪುರೋಗಾಮಿಯೂ, ಸುಸಂಸ್ಕೃತವೂ ಆದ ದೇಶವಾಗಿ ಐಕ್ಯಮತದಿಂದ ನಿಲ್ಲುವುದು ಸಾಧ್ಯವಾದೀತು ಎಂದು ಲೇಖಕರು ಸ್ಪಷ್ಟಪಡಿಸುತ್ತಾರೆ.

ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂಪಾಯಿ. ಆಸಕ್ತರು 97317 15571 ದೂರವಾಣಿಯನ್ನು ಸಂಪಕಿರ್ಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News