ಸಮಕಾಲೀನ

Update: 2017-07-08 18:20 GMT

ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರದ ಆಡಳಿತ ಶುದ್ಧ ಬ್ಯುರೋಕ್ರಟಿಕ್ ಶೈಲಿಯದ್ದು. ಇನ್ನು ಸಾರ್ವಜನಿಕವಾಗಿ ಅವರದು ಹಳೆಯ ಗಾಂಭೀರ್ಯದ ನಡವಳಿಕೆ. ಯುವ ಪೀಳಿಗೆಯ ಗ್ರಹಿಕೆಗೆ ನಿಲುಕದ ವ್ಯಕ್ತಿತ್ವ. ಇನ್ನು ಬಹುತೇಕ ವಯಸ್ಕರ ಜಗತ್ತು ಜಾತಿ, ಧರ್ಮಗಳ ಪೂರ್ವಾ ಗ್ರಹಗಳಲ್ಲಿ ಇರುತ್ತಾದ್ದರಿಂದ ಅಂತವರಿಗೆ ಸಿದ್ದರಾಮಯ್ಯನವರ ಸರಳ ನಡವಳಿಕೆ, ಹೊಣೆಯರಿತ ಆಡಳಿತದ ಮಹತ್ವವನ್ನು ಮೆಚ್ಚಬೇಕೆಂಬ ಇರಾದೆ ಇರುವುದಿಲ್ಲ.

ಇನ್ನು ಆರೆಂಟು ತಿಂಗಳಲ್ಲಿ ಬರಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳಬೇಕೆಂದರೆ ಕರ್ನಾಟಕ ಕಾಂಗ್ರೆಸ್ ನಿದ್ರೆಯಿಂದ ಎದ್ದಂತೆ ಕಾಣುವುದಿಲ್ಲ. ನೂರು ವರ್ಷಗಳಷ್ಟು ಹಳೆಯದಾದ, ಒಟ್ಟಾರೆಯಾಗಿ ನೂರಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸೆಣೆಸಾಡಿರುವ ರಾಜಕೀಯ ಪಕ್ಷವೊಂದು ದುರ್ಬಲವಾಗಿರುವ ಈ ಕಾಲಘಟ್ಟದಲ್ಲಿ, ತನ್ನನ್ನು ತಾನು ಕಾಪಾಡಿಕೊಳ್ಳಲು ಮಾಡಿಕೊಳ್ಳಬೇಕಾದ ತಯಾರಿಯ ಬಗ್ಗೆಯೂ ಕಾಂಗ್ರೆಸ್‌ಗೆ ಎಚ್ಚರವಿದ್ದಂತಿಲ್ಲ.

ಸಿದ್ದರಾಮಯ್ಯ ಇರುವುದರಲ್ಲಿ ಉತ್ತಮವೆಂದು ಭಾಸವಾಗುತ್ತಿರುವುದು ಇನ್ನಿತರ ರಾಜಕೀಯ ವಿರೋಧಿ ನಾಯಕರ ದುರ್ಬಲ ವ್ಯಕ್ತಿತ್ವದಿಂದ. ಈ ಮಾತು ಏಕೆಂದರೆ ರಾಜ್ಯದ ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರ ಪ್ರಜ್ಞೆಯಲ್ಲಿ ಕಾಂಗ್ರೆಸ್ ಪಕ್ಷದ ಆಶಯಗಳಾಗಲಿ ಅಥವಾ ಸಿದ್ದರಾಮಯ್ಯನವರ ವ್ಯಕ್ತಿತ್ವ ಮತ್ತು ಆಡಳಿತ ಶೈಲಿಯಾಗಲಿ ಒಂದು ಛಾಪು ಮೂಡಿಸಿದೆಯಾ ಎಂದು ಗಮನಿಸಿದರೆ ಕೊಂಚ ನಿರಾಶೆಯಾಗುವಂತಿದೆ. ಇದು ಮೊನ್ನೆ ಒನ್ ಡೇ ಕ್ರಿಕೆಟ್‌ನಲ್ಲಿ ಧೋನಿ ನೂರಾ ಹದಿನೈದು ಬಾಲ್ ಎದುರಿಸಿ ಐವತ್ತು ರನ್ ಹೊಡೆದಂತೆ ಅನಿಸುತ್ತದೆ.

ಕೈಗೆ ಅಧಿಕಾರ ಸಿಕ್ಕಾಗ ಅದನ್ನು ರಚನಾತ್ಮಕವಾಗಿ ಬಳಸಿ, ಜನ ತಮ್ಮತ್ತ ಮೆಚ್ಚುಗೆಯಿಂದ, ಇನ್ನಷ್ಟು ನಿರೀಕ್ಷೆಯಿಂದ ನೋಡುವಂತೆ ಮಾಡುವವರು ಯಶಸ್ವಿ ನಾಯಕರೆನಿಸಿಕೊಳ್ಳುತ್ತಾರೆ.

ಯಾವುದೇ ಹಗರಣಗಳಿಲ್ಲದೆ ಸರಕಾರ ನಡೆಸುತ್ತಿದ್ದಾರೆಂಬುದು ಮೆಚ್ಚತಕ್ಕ ವಿಚಾರವಾದರೂ ಚುನಾವಣೆಯಲ್ಲಿ ಗೆಲ್ಲಲು ಅಷ್ಟು ಮಾತ್ರ ಸಾಕಾಗುವುದಿಲ್ಲ. ವಿರೋಧ ಪಕ್ಷಗಳು ಹಸಿದ ತೋಳಗಳಂತೆ ಹೂಂಕರಿಸುತ್ತಿರುವಾಗ, ಬಹುತೇಕ ಮಾಧ್ಯಮಗಳು ಬಿಜೆಪಿಯ ಪರವಾಗಿರುವ, ಕಾರ್ಪೊರೇಟ್ ವಲಯದ ಬೆಂಬಲವೂ ಸಿಗದಂತಹ ಒಂದು ಪ್ರತಿಕೂಲ ಸನ್ನಿವೇಶದಲ್ಲಿ ಕರ್ನಾಟಕ ಕಾಂಗ್ರೆಸ್ ಇದೆ.

Face Lift ಇಂತಹ ಸನ್ನಿವೇಶದಲ್ಲಿ ಸರಕಾರದ ನಾಯಕರ ವ್ಯಕ್ತಿತ್ವ, ಆಡಳಿತದ ಶೈಲಿ, ಆಕ್ರಮಣಕಾರಿ ಧೋರಣೆಗಳೆಲ್ಲಾ ಬೇಕಾಗುತ್ತವೆ. ಅಂತದ್ದೆಲ್ಲಾ ಸಾರ್ವಜನಿಕರ ಪ್ರಜ್ಞೆಯೊಳಗೆ ಇಳಿಯುತ್ತಾ, ದಾಖಲಾಗುತ್ತಾ ಹೋದಂತೆ ಪಕ್ಷಕ್ಕೊಂದು ಸಿಗುತ್ತದೆ. ಇನ್ನು ಉಳಿದಿರುವುದು ಕೇವಲ ಇನ್ನೂರು ದಿನಗಳು ಮಾತ್ರ, ಕಾಂಗ್ರೆಸ್ ಸೆಂಚುರಿ ಬಾರಿಸುವಂತೆ ನೋಡಿಕೊಳ್ಳುವುದು ಸಿದ್ದರಾಮಯ್ಯನವರ ಕೈಲೇ ಇದೆ.

ಅಲ್ ಜಝೀರಾ ಚಾನೆಲ್

ಸುದ್ದಿ ಮಾಧ್ಯಮಗಳಿಗಿದು ಕಷ್ಟಕಾಲ. ನಿಜ ಹೇಳುವವರಿಗೆ ಮಾತ್ರವಲ್ಲ, ಸುಳ್ಳು ಸುದ್ದಿ ಪ್ರಸಾರ ಮಾಡುವವರಿಗೂ..!

ಕತರ್ ದೇಶದ ದೋಹಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಲ್ ಜಝೀರಾ ಚಾನೆಲ್ ವಿರುದ್ಧ ಈಗ ಸೌದಿ ಅರೇಬಿಯಾ, ಯುಎಇ, ಈಜಿಪ್ಟ್, ಬಹರೈನ್ ದೇಶಗಳು ತಿರುಗಿ ಬಿದ್ದಿದ್ದು ಈ ಚಾನೆಲ್‌ಗೆ ಆಶ್ರಯ ನೀಡಿರುವ ಕತರ್ ದೇಶದ ವಿರುದ್ಧ ಜಗಳಕ್ಕಿಳಿದಿವೆ.

ಕತರ್‌ಗೆ ದಿಗ್ಭಂಧನ ವಿಧಿಸುವುದಾಗಿ ಬೆದರಿಸಿರುವ ಈ ತೈಲ ಉತ್ಪಾದಕ ದೇಶಗಳು ಮುಸ್ಲಿಂ ಬ್ರದರ್ ಹುಡ್ ಅನ್ನು ನಿಷೇಧಿಸುವಂತೆಯೂ ಹಾಗೂ ಭಯೋತ್ಪಾದನೆಗೆ ನೆರವು ನೀಡದಂತೆಯೂ ಒತ್ತಾಯಿಸುತ್ತಿವೆೆ.

ಒಂದು ಕಾಲದಲ್ಲಿ ನಮಗೆಲ್ಲಾ ವಿಶ್ವವಿದ್ಯಮಾನಗಳನ್ನು ತಿಳಿಯಲು ಬಿಬಿಸಿ ಹಾಗೂ ಸಿಎನ್‌ಎನ್ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಇವೆರಡೂ ಚಾನೆಲ್‌ಗಳು ಮಾಧ್ಯಮ ನೀತಿ ಸಂಹಿತೆಯಿಂದ ದೂರ ಇರುವ ಅಭ್ಯಾಸವಿದ್ದಂತಹವು. ಅರೆ ಸತ್ಯ ಅಥವಾ ಪಕ್ಷಪಾತದ ಸುದ್ದಿಗಳನ್ನೇ ಆಯ್ಕೆ ಮಾಡಿ ಜನರಿಗೆ ಅಫೀಮಿನಂತೆ ತಿನ್ನಿಸುವ ಧೋರಣೆ ಇವರಿಗಿತ್ತು.

ಬಿಬಿಸಿ ಹಾಗೂ ಸಿಎನ್‌ಎನ್‌ಗೆ ಸವಾಲೊಡ್ಡುವಂತೆ ಮೇಲೆದ್ದು ಬಂದು ವಸ್ತು ಸ್ಥಿತಿಯನ್ನು ಜಗತ್ತಿಗೆ ಹೇಳಲು ಪ್ರಾರಂಭಿಸಿದ್ದು ಅಲ್ ಜಝೀರಾ ಟಿವಿ. ಈಗ ಅದರೊಂದಿಗೆ ರಶ್ಯಾ ಟುಡೆ, ಚೀನಾದ ಸಿಜಿಟಿಎನ್ ಚಾನೆಲ್‌ಗಳೂ ಇವೆ.

ಈ ನಡುವೆ ಅಮೆರಿಕದ ಹಿತಾಸಕ್ತಿಗಳನ್ನು ಕಾಪಾಡುವಂತೆ ಧೋರಣೆಯ ಸುದ್ದಿಗಳನ್ನಷ್ಟೇ ಪ್ರಸಾರ ಮಾಡುತ್ತಿದ್ದ ಸಿಎನ್‌ಎನ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಸಿಎನ್‌ಎನ್ ಒಂದು ಸುಳ್ಳು ಸುದ್ದಿಗಳ ಚಾನೆಲ್’ ಎಂದು ಜರೆಯುತ್ತಿದ್ದಾರೆ. ಇದರರ್ಥ ಟ್ರಂಪ್ ನ್ಯಾಯ ಪಕ್ಷಪಾತಿ ಎಂದಲ್ಲ.

ಸಿಎನ್‌ಎನ್‌ನ ಅಮೆರಿಕನ್ ನಿಷ್ಠೆ ಸಾಕಷ್ಟಿಲ್ಲ ಎಂದು!

ಅದಿರಲಿ, ಕತರ್‌ನ ವಿಷಯಕ್ಕೆ ಮತ್ತೆ ಬರುವುದಾದರೆ, ಮುಸ್ಲಿಂ ಬ್ರದರ್ ಹುಡ್ 2012ರ ಈಜಿಪ್ಟ್ ಚುನಾವಣೆಯಲ್ಲಿ ಗೆದ್ದಿತ್ತು. ಅದರ ನಾಯಕ ಮುಹಮ್ಮದ್ ಮುರ್ಸಿ ದೇಶದ ಅಧ್ಯಕ್ಷರಾಗುವಷ್ಟರಲ್ಲಿ ಅಮೆರಿಕ ಅದನ್ನು ಬುಡಮೇಲುಗೊಳಿಸಿತು. ರಕ್ಷಣಾ ಸಚಿವ ಅಲ್ ಸಿಸಿಯನ್ನು ಎತ್ತಿಕಟ್ಟಿ ಮುರ್ಸಿಯನ್ನು ಜೈಲಿಗೆ ಹಾಕಿಸಿತು. ಅಲ್ ಸಿಸಿ ಈಗ ಈಜಿಪ್ಟಿನ ಮಿಲಿಟರಿ ಸರ್ವಾಧಿಕಾರಿ.

ಬದಲಾವಣೆ ತರಲು ಬಯಸಿದ್ದ ಬ್ರದರ್ ಹುಡ್‌ನ ಸಾವಿರಾರು ಜನ ಈಗ ಜೈಲು ಪಾಲಾಗಿದ್ದಾರೆ. ಹಲವು ನೂರು ಜನ ಮೃತ್ಯು ದಂಡನೆಗೂ ಗುರಿಯಾಗಿದ್ದಾರೆ. ಅಲ್ ಜಝೀರಾ ಟಿವಿ ಸಿಸಿಯ ದೌರ್ಜನ್ಯ ಗಳನ್ನು ನಿರ್ಭೀತಿಯಿಂದ ಹೇಳಿದ್ದಕ್ಕೆ ಅದರ ಇಬ್ಬರು ವರದಿಗಾರರನ್ನು ಸಿಸಿ ಬಂಧಿಸಿ ಜೈಲಿನಲ್ಲಿಟ್ಟಿದ್ದಾನೆ.

ಈ ನಡುವೆ ಬ್ರದರ್‌ಹುಡ್ ಒಂದು ರಾಜಕೀಯ ಪಕ್ಷವಾಗಿ ಜೋರ್ಡಾನ್, ಇಸ್ರೆಲ್, ಕುವೈತ್, ಸೌದಿ ಅರೇಬಿಯಾ, ಬಹರೈನ್, ಸಂಯುಕ್ತ ಅರಬ್ ಸಂಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ ಅಲ್ಲಿನ ಸಂಸತ್‌ಗಳಿಗೂ ಆಯ್ಕೆಯಾಗುತ್ತಿದೆ.

ಇದೊಂದು ಅಪಾಯಕಾರಿ ಟ್ರೆಂಡ್‌ನಂತೆ ಅಮೆರಿಕಕ್ಕೆೆ ಮತ್ತದರ ಬಾಲಂಗೋಚಿ ಅರಬ್ ದೇಶಗಳ ದಲ್ಲಾಳಿ ನಾಯಕರಿಗೆ ಭೀತಿ ಉಂಟಾ ಗಿದೆ. ಮುಸ್ಲಿಂ ಬ್ರದರ್‌ಹುಡ್ ಅಲ್ ಖಾಯಿದ ತರದ ಉಗ್ರಗಾಮಿ ಸಂಘಟನೆಯಲ್ಲ, ಅದು ಅಮೆರಿಕದ ದಬ್ಬಾಳಿಕೆಯನ್ನು ವಿರೋಧಿಸುತ್ತಾದರೂ ಜನಸಾಮಾನ್ಯರಲ್ಲಿ ಆ ಕುರಿತಂತೆ ರಾಜಕೀಯ ಪ್ರಜ್ಞೆ ಬೆಳೆಸಲು ಪ್ರಯತ್ನಿಸುತ್ತಿದೆ.

ಅರಬ್ ದೇಶಗಳಲ್ಲೀಗ ಯಾವುದೇ ಸರಕಾರಗಳೇ ಇರಲಿ ಜನ ಪ್ರಜ್ಞಾವಂತರಾಗು ವುದನ್ನು ಬಯಸುವುದಿಲ್ಲ. ಬಹುತೇಕ ಸರ್ವಾಧಿಕಾರಿಗಳು ಹಾಗೂ ಪಾಳೇಗಾರಿಕೆ ಕುಟುಂಬಗಳ ಆಳ್ವಿಕೆ ಇರುವ ಈ ದೇಶಗಳಲ್ಲಿ ಬ್ರದರ್ ಹುಡ್-ಅಲ್ ಜಝೀರಾ ಟಿವಿಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿರುವುದು ಅನಿರೀಕ್ಷಿತವಲ್ಲ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News