ಅಬ್ರಾಹ್ಮಣ ಚಳವಳಿಯ ಹರಿಕಾರ ಫುಲೆ

Update: 2017-07-08 18:53 GMT

ಇಂದಿನ ಸಂದರ್ಭದಲ್ಲಿ ದಲಿತ ಪ್ರಜ್ಞೆಯ ದನಿ ಜೋತಿಬಾ ಫುಲೆ ಹೆಚ್ಚು ಹೆಚ್ಚು ಪ್ರಸ್ತುತರಾಗುತ್ತಾ ಹೋಗುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿರುವ ಯುವಕರು ಜೋತಿಬಾರನ್ನು ಜೊತೆ ಜೊತೆಗೆ ಓದುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಎಚ್. ಎಸ್. ಅನುಪಮಾ ಅವರು ಬರೆದಿರುವ ‘ದಲಿತ ಪ್ರಜ್ಞೆಯ ದನಿ ಜೋತಿಬಾ ಫುಲೆ’ ಜೀವನ ಚರಿತ್ರೆ, ಪುಲೆಯ ಬದುಕಿನ ಜೊತೆಗೇ ಅಂದಿನ ಕಾಲಘಟ್ಟದ ದಲಿತ ಹೋರಾಟಗಳ ನೆಲೆಗಳನ್ನು ಮರು ನಿರೂಪಿಸುತ್ತದೆ. ಅಬ್ರಾಹ್ಮಣ ಚಳವಳಿಯ ಹರಿಕಾರ ಎಂದೇ ಫುಲೆಯನ್ನು ಗುರುತಿಸುವ ಈ ಕೃತಿ, ಅವರೊಳಗಿರುವ ಶಿಕ್ಷಣ ತಜ್ಞ, ರೈತ ಹೋರಾಟಗಾರ, ಮಹಿಳಾಪರ ಮನಸ್ಸು, ಸಮಾಜ ಸುಧಾರಕರನ್ನು ಗುರುತಿಸುತ್ತದೆ. ಲೇಖಕರೇ ಹೇಳುವಂತೆ, ಫುಲೆಯವರ ಬದುಕನ್ನು ಕಟ್ಟಿಕೊಳ್ಳುವುದು ಸುಲಭ ಮತ್ತು ಕಷ್ಟ ಎರಡೂ ಆಗಿದೆ. ಏಕೆಂದರೆ ಅವರ ಬದುಕನ್ನು ಅರಿತುಕೊಳ್ಳುವಂತಹ, ತಿಳಿದುಕೊಳ್ಳುವಂತಹ ದಾಖಲೆಗಳು ಅತ್ಯಲ್ಪ. ಅವರು ತಮ್ಮ ಡೈರಿ ಬರೆದಿಡಲಿಲ್ಲ. ಜೀವನದ ವಿವರಗಳನ್ನು ದಾಖಲಿಸಿಡಲಿಲ್ಲ. ಆ ಕಾಲದ ಆಗುಹೋಗುಗಳ, ಜೊತೆಗೆ ಅವರ ಪತ್ರ, ಸಂಕಲ್ಪ, ಕಟ್ಟಿದ ಸಂಸ್ಥೆ, ಹೋರಾಟ, ಉಯಿಲು, ಮಾಡಿದ ಕೆಲಸಗಳನ್ನೇ ಗುರುತಿಸಿಕೊಂಡು ಅದನ್ನು ಒಟ್ಟು ಸೇರಿಸುವ ಸವಾಲು ಲೇಖಕರದು. ಇಲ್ಲಿ ಲೇಖಕಿ ಬೇರೆ ಬೇರೆ ಬರಹಗಳನ್ನು ಆಧರಿಸಿ ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಜೋತಿಬಾ ಕಾಲಘಟ್ಟವನ್ನೂ, ಬದುಕನ್ನೂ, ಹೋರಾಟವನ್ನೂ ನಿರೂಪಿಸಿದ್ದಾರೆ. ಜೋತಿಬಾ ಫುಲೆಯ ಕಾಲದಲ್ಲಿ ಅಸ್ಪಶ್ಯತೆಯ ಕ್ರೌರ್ಯ ಹೇಗಿತ್ತು ಎನ್ನುವುದನ್ನು ಆರಂಭದ ಕೆಲವು ಅಧ್ಯಾಯಗಳು ಹೇಳುತ್ತವೆ. ತನ್ನ ಕಾಲಕ್ಕೆ, ಫುಲೆಯವರ ಯೋಜನೆ ಕ್ರಾಂತಿಕಾರಕವಾದುದಾಗಿತ್ತು. ಇಂಗ್ಲಿಷ್ ಶಿಕ್ಷಣ ತಳಸ್ತರದ ಜನರನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಬಹುದು ಎನ್ನುವುದನ್ನು ಅರಿತು ಅವರು ಆ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಿದರು. ಜ್ಯೋತಿಬಾ ಅವರ ಜೊತೆಗೆ ಅವರ ಪತ್ನಿ ಸಾವಿತ್ರಿ ಹೇಗೆ ಕೈಜೋಡಿಸಿದರು ಎನ್ನುವುದನ್ನೂ ಕುತೂಹಲಕರವಾಗಿ ಲೇಖಕಿ ನಿರೂಪಿಸುತ್ತಾರೆ. ಅನುಪಮಾ ಅವರು ಕಥನ ರೂಪದಲ್ಲಿ ಜೋತಿಬಾ ಅವರನ್ನು ಕಟ್ಟಿಕೊಟ್ಟಿದ್ದಾರೆ. ಅವರು ಬರೆಯುವ ಶೈಲಿ ಓದುಗರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಸಂಗ್ರಹಾರ್ಹ ಪುಸ್ತಕ. ಇಂದು ಈ ದೇಶದ ಬಹುಜನರು ಜೋತಿಬಾ ಫುಲೆಯನ್ನು ಮುನ್ನೆಲೆಗೆ ತರುವ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಈ ದೇಶದ ಪಾಲಿನ ಅತ್ಯುತ್ತಮ ಶಿಕ್ಷಕರು ಫುಲೆ ದಂಪತಿ. ಅವರ ಹುಟ್ಟು ದಿನವನ್ನು ದೇಶಾದ್ಯಂತ ಆಚರಿಸುವ ಮೂಲಕ, ಅವರ ಚಿಂತನೆಗಳು ಹೊಸ ತಲೆಮಾರಿಗೂ ತಲುಪುವಂತೆ ಮಾಡುವ ಅಗತ್ಯವಿದೆ. 120 ಪುಟಗಳ ಈ ಕೃತಿಯ ಮುಖಬೆಲೆ 90 ರೂಪಾಯಿ. ಆಸಕ್ತರು. 94802 11320 ದೂರವಾಣಿಯನ್ನು ಸಂಪರ್ಕಿಸಬಹುದು. . 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News