ಪುಸ್ತಕ ಆಂದೋಲನದ ರೂವಾರಿ ರಾಜಾರಾಮ್
ಆರ್. ಎಸ್. ರಾಜಾರಾಮ್ ಎಂದಾಗ ನೆನಪಾಗುವುದು ‘ನವಕರ್ನಾಟಕ ಪ್ರಕಾಶನ’. ಪುಸ್ತಕ ಮಾರಾಟವನ್ನು ಒಂದು ಆಂದೋಲನವಾಗಿ ರೂಪಿಸಿದ ಹೆಗ್ಗಳಿಕೆ ಆರ್. ಎಸ್. ರಾಜಾರಾಮ್ ಅವರದು. ಎಡಪಂಥೀಯ ಪಕ್ಷವೊಂದರ ಹಿನ್ನೆಲೆಯಿರುವ ಪ್ರಕಾಶನವಾದರೂ, ಮುಂದೆ ಸಾಹಿತ್ಯ, ಚಿಂತನೆಯ ವಿವಿಧ ಧಾರೆಗಳನ್ನು ತನ್ನೊಳಗಿಟ್ಟು ಇದು ವಿಸ್ತಾರ ವಾಯಿತು. ನಾಡಿನ ಅಪಾರ ಸಂಖ್ಯೆಯ ಲೇಖಕರನ್ನು ಬೆಳೆಸಿದ ಪ್ರಕಾಶನ ಇದು. ಪ್ರಗತಿಪರ ಚಿಂತನೆಯನ್ನು ನಾಡಿನಗಲಕ್ಕೆ ತಲುಪಿಸಿದ ಹೆಗ್ಗಳಿಕೆ ನವಕರ್ನಾಟಕ ಪ್ರಕಾಶನದ ರಾಜಾರಾಮ್ ಅವರದು. ಒಂದು ಪುಸ್ತಕವೆಂದರೆ ಬಿಳಿಯ ಹಾಳೆಯ ಮೇಲೆ ಅಚ್ಚು ಮಾಡಿದ ಅಕ್ಷರಗಳು ಮಾತ್ರವಲ್ಲ, ಪುಸ್ತಕಕ್ಕೆ ಒಂದು ಹೃದಯವಿದೆ. ಪುಸ್ತಕ ಮನುಷ್ಯನ ಅತ್ಯುತ್ತಮ ಸಂಗಾತಿಯಾಗಬಲ್ಲ್ಲುದು, ಜ್ಞಾನ ಪ್ರಸಾರದ ಪರಿಣಾಮಕಾರಿ ಸಾಧನವೂ ಆಗಬಲ್ಲದು ಎಂಬ ತಿಳುವಳಿಕೆಯನ್ನು ಹೊಂದಿರುವ ರಾಜಾರಾಮ್ ಅವರು ನಡೆಸಿದ ವಿವಿಧ ಚಟುವಟಿಕೆಗಳ, ಎದುರಿಸಿದ ವಿವಿಧ ತೊಡಕುಗಳ ಮತ್ತು ಮಾಡಿದ ಸಾಧನೆಗಳ ಸ್ಥೂಲ ಪರಿಚಯ ನೀಡುವ ಕೃತಿ ‘ಸೃಷ್ಟಿಯ ಸೆಲೆ’. ಈ ಕೃತಿ ರಾಜಾರಾಮ್ ಅವರ ಬದುಕು ಮತ್ತು ಸಾಧನೆಯನ್ನು ಹೇಳುತ್ತದೆ. ಪರಂಜ್ಯೋತಿಯವರು ರಾಜಾರಾಮ್ ಆತ್ಮಕಥನವನ್ನು ನಿರೂಪಿಸಿದ್ದಾರೆ. ಮುನ್ನುಡಿಯಲ್ಲಿ ಜಿ. ರಾಮಕೃಷ್ಣ ಅವರು ಹೇಳುವಂತೆ, ‘ಸೃಷ್ಟಿಯ ಸೆಲೆ’ ರಾಜಾರಾಮ್ ಅವರ ಪೂರ್ಣ ಕ್ರಿಯಾ ಯೋಗವನ್ನು ವಿಸ್ತರಿಸಿ ಹೇಳುವ ಗ್ರಂಥವಲ್ಲ. ಕೆಲವು ತುಣುಕುಗಳನ್ನು ನಮ್ಮ ಮುಂದಿರಿಸಿ ರಾಜಾರಾಮ್ ಅವರ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಸಂಕ್ಷಿಪ್ತವಾಗಿ ಮತ್ತು ಸೊಗಸಾಗಿ ನಿರೂಪಿಸುವ ಹೊತ್ತಿಗೆ ಇದು. ಇಲ್ಲಿ ರಾಜಾರಾಮ್ ಕುರಿತಂತೆ ಅವರ ಕುಟುಂಬದ ವಿವಿಧ ಸದಸ್ಯರು ಬರೆದಿರುವ ವಿವಿಧ ಆತ್ಮೀಯ ಬರಹಗಳೂ ಇವೆ. ಜೊತೆಗೆ ಅವರ ಬದುಕನ್ನು ಕಟ್ಟಿಕೊಡುವ ಕೆಲವು ವರ್ಣಮಯ ಛಾಯಚಿತ್ರಗಳನ್ನೂ ಕೃತಿ ಹೊಂದಿದೆ. ತಮ್ಮ ಬಾಲ್ಯ, ಕಾಲೇಜು ಬದುಕು ಇತ್ಯಾದಿಗಳ ಜೊತೆಗೆ ನವಕರ್ನಾಟಕ ಪ್ರಕಾಶನ ಸ್ಥಾಪನೆಯ ಸವಾಲುಗಳು, ಅದು ಬೆಳೆದ ರೀತಿ ಎಲ್ಲವನ್ನು ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ರಾಜಾರಾಮ್ ಕಟ್ಟಿಕೊಟ್ಟಿದ್ದಾರೆ. ಅವರ ಬರಹ, ಚಿಂತನೆಗಳೂ ಈ ಕೃತಿಯಲ್ಲಿವೆ. ಪುಸ್ತಕ ಪ್ರಕಾಶನ, ಮಾರಾಟ ಮೊದಲಾದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರಿಗೆ ಈ ಕೃತಿ ಸ್ಫೂರ್ತಿಯಾಗಿದೆ. ಎಂ. ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಬೆಂಗಳೂರು ಹೊರತಂದಿರುವ ಕೃತಿಯ ಮುಖಬೆಲೆ 175 ರೂ. ಆಸಕ್ತರು 080- 22161911 ದೂರವಾಣಿಯನ್ನು ಸಂಪರ್ಕಿಸಬಹುದು.