ಬ್ಯಾರಿ ಭಾಷೆಯ ಕುರಿತಂತೆ ಕುತೂಹಲಕಾರಿ ಮಾಹಿತಿಗಳು....
ಬ್ಯಾರಿ ಭಾಷೆ ಇನ್ನೂ ತನ್ನ ಐಡೆಂಟಿಟಿಗಾಗಿ ಒದ್ದಾಡುತ್ತಲೇ ಇರುವ ಕರಾವಳಿ ಭಾಗದ ಜನರು ಆಡುತ್ತಿರುವ ಭಾಷೆ. ಬ್ಯಾರಿ ಸಮುದಾಯದ ಸಾಮಾಜಿಕ ಏಳು ಬೀಳುಗಳ ಜೊತೆಗೆ ಭಾಷೆ ಹೊಂದಿರುವ ಸಂಬಂಧ ಅತ್ಯಂತ ಕುತೂಹಲಕರವಾದುದು. ಒಂದು ಹಂತದಲ್ಲಿ ಕೆಲವು ಭಾಗದಲ್ಲಿ ‘ನಕ್ಕ್ ನಿಕ್ಕ್(ನನಗೆ-ನಿನಗೆ) ಎಂದೇ ಗುರುತಿಸಲ್ಪಡುತ್ತಿದ್ದ ಈ ಭಾಷೆ ಕೆಲವೆಡೆ ಮಲಯಾಳವೆಂದು, ಮಾಪಿಳ್ಳೆ ಭಾಷೆಯೆಂದು ಗುರುತಿಸಲ್ಪಡುತ್ತಾ ಸ್ವತಃ ಬ್ಯಾರಿ ಮುಸ್ಲಿಮರೇ ಆ ಭಾಷೆಯ ಕುರಿತಂತೆ ಕೀಳರಿಮೆ ಪಡುತ್ತಿದ್ದ ಕಾಲವೊಂದಿತ್ತು. ಒಮ್ಮೆ ಉಚ್ಛ್ರಾಯ ಘಟ್ಟದಲ್ಲಿದ್ದ ಸಮು ದಾಯ ನಿಧಾನಕ್ಕೆ ಸಾಮಾಜಿಕವಾಗಿ ಪತನ ಕಾಣುತ್ತಾ ‘ಬ್ಯಾರಿ’ ಎಂದು ಮುಸ್ಲಿಮ ರೊಳಗೇ ಗುರುತಿಸಲು ಅಂಜುತ್ತಿದ್ದ ದಿನಗಳಲ್ಲಿ, ಬ್ಯಾರಿ ಆಂದೋಲನವೊಂದು ಆರಂಭವಾಗಿ, ಸಾಹಿತ್ಯ, ಸಂಸ್ಕೃತಿಯ ಕುರಿತಂತೆ ಈ ಸಮುದಾಯದೊಳಗೆ ಜಾಗೃತಿ ಆರಂಭವಾಯಿತು. ಮುಂದೆ ಬ್ಯಾರಿ ಅಕಾಡಮಿ ಸ್ಥಾಪನೆಯಾಗಿದ್ದು ಮಾತ್ರವಲ್ಲ, ಬ್ಯಾರಿ ಭಾಷೆಯಲ್ಲಿ ಕತೆ, ಕವಿತೆ, ಲೇಖನಗಳು, ಕಾದಂಬರಿಗಳು ಹೊರಬಂದವು. ಅಪಾರ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ‘ಬ್ಯಾರಿ’ ಭಾಷೆಯಲ್ಲೇ ಸಿನೆಮಾ ಒಂದು ಹೊರ ಬಂತಲ್ಲದೆ ಅದಕ್ಕೆ ಸ್ವರ್ಣಕಮಲ ಪ್ರಶಸ್ತಿಯೂ ದೊರಕಿತು. ಆದರೂ ಭಾಷೆಯ ಕುರಿತಂತೆ, ಅದರ ಲಿಪಿಯ ಕುರಿತಂತೆ ವಿದ್ವಾಂಸರ ನಡುವೆ ಗೊಂದಲಗಳು ಇದ್ದೇ ಇವೆ. ಈ ಹಿನ್ನೆಲೆಯಲ್ಲಿ ಹಿರಿಯ ಬ್ಯಾರಿ ಲೇಖಕ ಪ್ರೊ. ಬಿ. ಎಂ. ಇಚ್ಲಂಗೋಡು ಬ್ಯಾರಿ ಭಾಷೆಯ ಬಗ್ಗೆ ಕುತೂಹಲಕಾರಿ ಚರ್ಚೆಗಳನ್ನು ‘ಬ್ಯಾರಿ ಭಾಷೆ-ದ್ರಾವಿಡ ಭಾಷೆಯೇ?’ ಎಂಬ ಕೃತಿಯಲ್ಲಿ ಮಾಡಿದ್ದಾರೆ. ಮುನ್ನುಡಿಯಲ್ಲಿ ಹೇಳುವಂತೆ, ಬ್ಯಾರಿ ಭಾಷೆ ಹಾಗೂ ಅರಬಿ ಮಲಯಾಳ ಲಿಪಿ ಮತ್ತು ಸಾಹಿತ್ಯಗಳ ಸಂಬಂಧಗಳನ್ನು ಈ ಕೃತಿ ತೌಲನಿಕವಾಗಿ ನೋಡುತ್ತದೆ. ಮಲಯಾಳ ಮತ್ತು ತುಳು ಭಾಷೆಗಳನ್ನು ಹೋಲಿಸಿದಾಗ ಬ್ಯಾರಿ ಭಾಷೆಯು ಹೇಗೆ ಪದ ಬಳಕೆ ಮತ್ತು ವ್ಯಾಕರಣಗಳ ನೆಲೆಯಲ್ಲಿ ಭಿನ್ನವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ. ಅದಲ್ಲದೆ ಬ್ಯಾರಿ ಭಾಷೆಯ ದ್ರಾವಿಡ ಮೂಲವನ್ನು ಪ್ರತಿಪಾದಿಸುವ ಲೇಖಕರು ತುಳುನಾಡಿನ ಸಂಸ್ಕೃತಿಯೊಂದಿಗೆ ಆ ಭಾಷೆಗಿದ್ದ ಸಂಬಂಧ ಹಾಗೂ ಅದು ನಡೆಸಿದ ಅನು ಸಂಧಾನಗಳನ್ನು ಚಿಕ್ಕದಾಗಿ, ಚೊಕ್ಕದಾಗಿ ಚರ್ಚಿಸುತ್ತಾರೆ. ಕೃತಿಯಲ್ಲಿ ಲಿಪಿಯ ಕುರಿತಂತೆ ಕೆಲವು ಕುತೂಹಲಕಾರಿ ದಾಖಲೆಗಳನ್ನು ಲೇಖಕರು ನೀಡಿದ್ದಾರೆ.
ಕನ್ನಡ ಸಂಘ, ವಿಜಯನಗರ, ಮೂಡುಬಿದಿರೆ ಈ ಕೃತಿಯನ್ನು ಹೊರತಂದಿದ್ದು, ಮೀಡಿಯಾ ಟೈಮ್ಸ್ ಪಬ್ಲಿಕೇಶನ್ಸ್ ಮಂಗಳೂರು ವಿತರಣೆ ಮಾಡಿದೆ. 84 ಪುಟಗಳ ಈ ಕಿರುಕೃತಿಯ ಮುಖಬೆಲೆ 100 ರೂಪಾಯಿ.