ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ...
‘ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ’ ಕೃತಿ ಅಸ್ಪಶ್ಯತೆಯನ್ನು ಕೇಂದ್ರವಾಗಿಟ್ಟು ಡಾ. ಎಸ್. ಬಿ. ಜೋಗುವ ಅವರು ಬರೆದಿರುವ ಕೃತಿ. ಅಸ್ಪಶ್ಯತೆಯ ಉಗಮ-ಬೆಳವಣಿಗೆಯ ಸಮಾಜ ಶಾಸ್ತ್ರೀಯ ನೆಲೆಗಳನ್ನು ಈ ಕೃತಿಯಲ್ಲಿ ಅವರು ಶೋಧಿಸಿದ್ದಾರೆ. ಜಾತಿ ಒಂದು ಸಾಮಾಜಿಕ ಸಂಸ್ಥೆ ಎಂದು ಹೇಳುವ ಜೋಗುರ, ಅದು ಸಾವಿರಾರು ವರ್ಷಗಳಿಂದಲೂ ಒಂದು ಬಗೆಯ ಏಣಿಶ್ರೇಣಿ ವ್ಯವಸ್ಥೆಯನ್ನು ಅನುಸರಿಸಿಯೇ ಸಾಗಿ ಬಂದಿದೆ. ಇಲ್ಲಿ ಪ್ರಜ್ಞಾತೀತವಾಗಿ ನಮ್ಮ ನಮ್ಮ ಜಾತಿಯ ಬಗೆಗಿನ ಪ್ರಜ್ಞೆಗಳು, ಅಂದರೆ ಮೇಲರಿಮೆ ಮತ್ತು ಕೀಳರಿಮೆಯ ಭಾವನೆಗಳು ನಮಗೆ ಅಂತರ್ಗತವಾಗಿವೆ. ಜಾತಿಯ ಸ್ಥಾನಮಾನಗಳ ಬಗೆಗಿನ ತಿಳುವಳಿಕೆ ತಲೆಮಾರುಗಳ ಮೂಲಕ ಸಾಗಿ ಬರುವ ಪರಂಪರೆಯ ಭಾಗವೇ ಆಗಿರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಜಾತಿ ಮತ್ತು ಅದನ್ನು ಸುತ್ತಿಕೊಂಡಿರುವ ಅಸ್ಪಶ್ಯತೆಯನ್ನು ಈ ಹಿನ್ನೆಲೆಯಲ್ಲಿ ಕೃತಿಯುದ್ದಕ್ಕೂ ಅವರು ಚರ್ಚಿಸುತ್ತಾರೆ.
ಈ ಕೃತಿಯಲ್ಲಿ ಒಟ್ಟು 13 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಅಸ್ಪಶ್ಯತೆಯ ಮೂಲ ನೆಲೆಗಳ ಕುರಿತಂತೆ ವಿಶ್ಲೇಷಿಸುತ್ತಾರೆ. ಜಾತಿಯ ಮೂಲಕ ಅಸ್ಪಶ್ಯತೆ ಜನ್ಮ ತಳೆದ ಬಗೆ, ಅದರ ಬೆಳವಣಿಗೆಗಳನ್ನು ಇದು ಚರ್ಚಿಸುತ್ತದೆ. ಜಾತಿ ಎನ್ನುವ ಗರ್ಭದಿಂದಲೇ ಅಸ್ಪಶ್ಯತೆ ಆವಿರ್ಭಸಿರುವುದನ್ನು ಗುರುತಿಸುವ ಅವರು ಬೌದ್ಧ ಧರ್ಮದ ಜೊತೆಗೆ ಅದು ಹೇಗೆ ಒಂದು ಹೊರ ಸಂಬಂಧವನ್ನು ಹೊಂದಿದೆ ಎನ್ನುವುದನ್ನು ಹೇಳುತ್ತಾರೆ. ಎರಡನೆಯ ಅಧ್ಯಾಯದಲ್ಲಿ ಅಸ್ಪಶ್ಯರ ಮೇಲಿನ ದೌರ್ಜನ್ಯಗಳನ್ನು ಅಂಕಿ ಅಂಶಗಳ ಸಮೇತ ನಿರೂಪಿಸುತ್ತಾರೆ. ದೌರ್ಜನ್ಯದ ಬೇರೆ ಬೇರೆ ಸ್ವರೂಪಗಳನ್ನೂ ಅಲ್ಲಿ ವಿವರಿಸುತ್ತಾರೆ. ಮೂರನೆ ಅಧ್ಯಾಯದಲ್ಲಿ ಅಸ್ಪಶ್ಯತೆಯನ್ನು ಅಂಬೇಡ್ಕರ್ ಕಣ್ಣಿನಲ್ಲಿ ನೋಡಿದ್ದಾರೆ. ಅಂಬೇಡ್ಕರ್ ಈ ಸವಾಲನ್ನು ಎದುರಿಸಿದ ರೀತಿಯನ್ನೂ ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. ಹಾಗೆಯೇ ಗಾಂಧಿ, ಲೋಹಿಯಾ ಮತ್ತು ಜೋತಿಭಾ ಫುಲೆ ಅವರು ಅಸ್ಪಶ್ಯತೆಯನ್ನು ಹೇಗೆ ಕಂಡರು ಮತ್ತು ಅದನ್ನು ಯಾವ ದಾರಿಯ ಮೂಲಕ ಎದುರಿಸಿದರು ಎನ್ನುವುದನ್ನು ಮುಂದಿನ ಅಧ್ಯಾಯಗಳಲ್ಲಿ ಬರೆಯುತ್ತಾರೆ. ವರ್ಗ ಮತ್ತು ಜಾತಿಯ ನಡುವಿನ ಅಂತರವನ್ನು ಸ್ಪಷ್ಟಪಡಿಸುವ ಲೇಖಕರು, ಹೇಗೆ ಹಿರಿಯ ರಾಜಕಾರಣಿಗಳೂ ಜಾತೀಯತೆಯಿಂದ ನೋಯಬೇಕಾಯಿತು ಎನ್ನುವುದನ್ನು ಉದಾಹರಣೆ ಸಹಿತ ಈ ಕೃತಿಯಲ್ಲಿ ವಿವರಿಸುತ್ತಾರೆ. ಒಟ್ಟಿನಲ್ಲಿ ಅಸ್ಪಶ್ಯತೆಯನ್ನು ಸುತ್ತುವರಿದಿರುವ ಸಾಮಾಜಿಕ ಮತ್ತು ರಾಜಕೀಯಗಳು ಇಲ್ಲಿ ಬೇರೆ ಬೇರೆ ನೆಲೆಗಳಲ್ಲಿ ಮತ್ತೆ ಮತ್ತೆ ಚರ್ಚೆಗೆ ಬರುತ್ತವೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 90 ರೂ.