ಹಿಂದುತ್ವ ರಾಜಕಾರಣಕ್ಕೆ ಬಲಿಯಾಗುತ್ತಿರುವ ದಲಿತರು
‘ಹಿಂದುತ್ವ ಮತ್ತು ದಲಿತರು-ಕೋಮುವಾದಿ ರಾಜಕಾರಣ ಒಂದು ತಾತ್ವಿಕ ಪರಾಮರ್ಶೆ’ ಆನಂದ್ ತೇಲ್‌ತುಂಬ್ಡೆ ಅವರು ಇಂಗ್ಲಿಷ್‌ನಲ್ಲಿ ಸಂಪಾದಿಸಿದ ಕೃತಿಯ ಕನ್ನಡಾನುವಾದ. ಕನ್ನಡದಲ್ಲಿ ಇದನ್ನು ಪ್ರೊ. ಬಿ. ಗಂಗಾಧರ ಮೂರ್ತಿ ಅವರು ವಿವಿಧ ಲೇಖಕರ ಮೂಲಕ ಅನುವಾದಿಸಿ ಸಂಯೋಜನೆ ಮಾಡಿದ್ದಾರೆ. 2009ರಲ್ಲಿ ಹೊರಬಂದಿರುವ ಈ ಕೃತಿ ಇದೀಗ ಎರಡನೆ ಮುದ್ರಣವನ್ನು ಕಾಣುತ್ತಿದೆ. ಶತಮಾನಗಳುದ್ದಕ್ಕೂ ತಮ್ಮ ಸಾಂಪ್ರದಾಯಿಕ ವೈರಿಗಳಾಗಿ ನಡೆದುಕೊಂಡ ಹಿಂದುತ್ವ ಶಕ್ತಿಗಳು ಬೀಸುತ್ತಿರುವ ಬಲೆಗೆ ದಲಿತರು ಏಕೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ? ಹಿಂದುತ್ವವು ಪ್ರಬಲವಾಗುತ್ತಿರುವುದರ ಜೊತೆ ಜೊತೆಯಲ್ಲೇ ಅದು ಒಡ್ಡುತ್ತಿರುವ ಆಮಿಷಗಳಿಗೆ ದಲಿತರು ಬಲಿಪಶುಗಳಾಗುತ್ತಿರುವುದರ ಈ ವಿದ್ಯಮಾನಕ್ಕೆ ಇರುವ ಕಾರಣಗಳಾದರೂ ಏನು? ಇದಕ್ಕಿರುವ ವಾಸ್ತವಿಕ ನೆಲೆಗಟ್ಟೇನು? ಈ ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಈ ಕೃತಿ ಹೊರ ಬಂದಿದೆ. ಆನಂದ್ ತೇಲ್‌ತುಂಬ್ಡೆ, ಶಂಸುಲ್ ಇಸ್ಲಾಂ, ರಾಮ್ ಪುನಿಯಾನಿ, ಮೀನಾ ಕಂದಸ್ವಾಮಿ, ಪ್ರಕಾಶ್ ಲೂಯಿಸ್, ಗೋಪಾಲ್ ಗುರು, ರಮೇಶ್ ಕಾಂಬ್ಲೆ ಮೊದಲಾದ ರಾಷ್ಟ್ರಮಟ್ಟದ ಚಿಂತಕರ ಲೇಖನಗಳು ಇಲ್ಲಿವೆ. ಪ್ರೊ. ಬಿ. ಗಂಗಾಧರ ಮೂರ್ತಿ, ಪ್ರೊ. ಆರ್. ಕೆ. ಹಡಗಿ, ಟಿ.ವಿ ಮಾಗಳದ, ಬಿ. ಎಂ. ಬಶೀರ್, ಕೆ. ಫಣಿರಾಜ್, ಎಸ್. ಬಾಗೇಶ್ರೀ, ನಗರಗೆರೆ ರಮೇಶ್, ಶಿವಾನಂದ ಸಾಸ್ವೆಹಳ್ಳಿ, ನಾ. ದಿವಾಕರ, ಆರ್. ಶೋಭಾ ಇಲ್ಲಿರುವ ಲೇಖನಗಳನ್ನು ಕನ್ನಡಕ್ಕಿಳಿಸಿದ್ದಾರೆ.
ಹಿಂದುತ್ವದ ಸಿದ್ಧಾಂತ ಮತ್ತು ಸಾಮಾಜಿಕ ಆಚರಣೆ- ದಲಿತರ ಅತಂತ್ರ ಸ್ಥಿತಿಯ ಕುರಿತಂತೆ ಶುಂಸುಲ್ ಇಸ್ಲಾಮ್ ಬರೆದಿದ್ದಾರೆ. ಹಿಂದುತ್ವ, ನವಉದಾರವಾದಿ ವ್ಯವಸ್ಥೆಯ ನಡುವೆ ಸಿಲುಕಿಕೊಂಡಿರುವ ದಲಿತರ ಸಂಕಷ್ಟವನ್ನು ತೇಲ್‌ತುಂಬ್ಡೆ ವಿಶ್ಲೇಷಿಸಿದರೆ, ಹಿಂದುತ್ವ ತನ್ನ ಅಜೆಂಡಾ ಸಾಧಿಸಲು ದಲಿತರನ್ನು ಬಳಸಿಕೊಳ್ಳುತ್ತಿರುವ ಮತ್ತು ಇದರ ಲಾಭ ನಷ್ಟಗಳನ್ನು ಸಂದೀಪ್ ಪೆಂಡ್ಸೆ ಚರ್ಚಿಸಿದ್ದಾರೆ. 2002ರ ಗುಜರಾತಿನ ಮುಸ್ಲಿಮರ ಹತ್ಯಾಕಾಂಡದಲ್ಲಿ ದಲಿತರ ಪಾತ್ರ ಮತ್ತು ಹಿಂದುತ್ವದ ಸಾಮಾಜಿಕ ಕಾರ್ಯವ್ಯೆಹವನ್ನು ರಾಮ್ ಪುನಿಯಾನಿ ಬಯಲುಗೊಳಿಸಿದ್ದಾರೆ. ಹಿಂದುತ್ವದ ಸಿಕ್ಕುಗಳಲ್ಲಿ ಸಿಕ್ಕಿಕೊಳ್ಳುತ್ತಿರುವ ದಲಿತ ಮಹಿಳೆಯರ ಬಗ್ಗೆ ಮೀನಾ ಕಂದಸ್ವಾಮಿ, ಹಿಂದುತ್ವ-ದಲಿತ ಸಂಪರ್ಕದ ಇತಿಹಾಸವನ್ನು ಪ್ರಕಾಶ್ ಲೂಯಿಸ್ ಗುರುತಿಸುತ್ತಾರೆ. ದಲಿತರು ಎದುರಿಸುತ್ತಿರುವ ಒಳಗಿನ ಮತ್ತು ಹೊರಗಿನ ಸಾಂಸ್ಕೃತಿಕ ಅಪಾಯಗಳನ್ನು ಗೋಪಾಲ್‌ಗುರು, ದಲಿತ-ಹಿಂದುತ್ವ ಮೈತ್ರಿ ಮತ್ತು ದಲಿತ ರಾಜಕಾರಣದ ಪ್ರಕ್ರಿಯೆಯನ್ನು ರಮೇಶ್ ಕಾಂಬ್ಳೆ ದಾಖಲಿಸುತ್ತಾರೆ. ಈ ಕೃತಿಯಲ್ಲಿರುವ ಲೇಖನಗಳಲ್ಲಿ ದಲಿತರ ಸಾಮಾ ಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇವೆ.