ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನ
‘ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಏಕಿಲ್ಲ?’ ಎಂಬ ಪ್ರಶ್ನೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಚರ್ಚೆಗೆ ಬಂದಿತ್ತು. ಇಂತಹ ಪ್ರಶ್ನೆಯು ಕಳೆದ ಐದಾರು ವರ್ಷಗಳಿಂದ ಅಂತರ್ಜಾಲದಲ್ಲಿ ಅನುರಣಿಸುತ್ತಲೇ ಬಂದಿದೆ. ಈ ಕುರಿತು ಗೂಗಲ್ ಇದುವರೆಗೂ ತಟಿಪಿಟಿಕ್ ಎಂದಿಲ್ಲ. ಮಲಯಾಳಂ, ಗೂಗಲ್ ನ್ಯೂಸ್‌ನಲ್ಲಿ ಸೇರ್ಪಡೆಯಾದ ಮೊದಲ ಭಾರತೀಯ ಭಾಷೆ. ನಂತರದಲ್ಲಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳು ಸೇರಿಕೊಂಡವು. ಹಲವು ವರ್ಷಗಳಿಂದ ಕನ್ನಡವನ್ನು ಸೇರಿಸಲು ಎಲ್ಲೆಡೆಯಿಂದ ಒತ್ತಡ ಬಂದರೂ ಬಹುರಾಷ್ಟ್ರೀಯ ಕಂಪೆನಿಯಾದ ಗೂಗಲ್ ಇಂದಿಗೂ ಒತ್ತಡಕ್ಕೆ ಮಣಿದಿಲ್ಲ. ಬೆಂಗಳೂರಿನಲ್ಲಿಯೇ ತನ್ನ ಶಾಖಾ ಕಚೇರಿಯನ್ನು ಹೊಂದಿರುವ ಗೂಗಲ್, ಕನ್ನಡದ ನೆಲ-ಜಲ ಎಲ್ಲವನ್ನೂ ಬಳಸಿಕೊಂಡು ಕನ್ನಡಕ್ಕೆ ನಿರೀಕ್ಷಿತ ಪ್ರಾಧಾನ್ಯತೆ ನೀಡುತ್ತಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳು ಭಾಷಾಭಿಮಾನದಿಂದ ಕೆಲಸಮಾಡುವುದಿಲ್ಲ. ಅದು ಯಾವುದೇ ಕಂಪೆನಿ ಇರಲಿ, ಹಣವೇ ಅವುಗಳ ವ್ಯವಹಾರದ ಭಾಷೆ. ವ್ಯಾಪಾರೀ ದೃಷ್ಟಿಕೋನವುಳ್ಳ ಅವು ಲಾಭದಾಯಕವಲ್ಲದ ಯಾವುದೇ ಚಟುವಟಿಕೆಗಳನ್ನು ಮಾಡುವುದಿಲ್ಲ. ಲಾಭವಿದ್ದರೆ ಮಾತ್ರವೇ ಭಾಷಾಸವಲತ್ತುಗಳನ್ನು ಸೇರಿಸಿ ಆಯಾಯ ಭಾಷಿಕ ಮಾರುಕಟ್ಟೆಗಳನ್ನು ಆಕ್ರಮಿಸಲು ಅವು ಸಿದ್ಧವಾಗುತ್ತವೆ ಎನ್ನುವುದು ಸುಳ್ಳಲ್ಲ.
ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನಗಳ ಕುರಿತು ನಿರಂತರವಾದ ಚರ್ಚೆ ಅಂತರ್ಜಾಲದಲ್ಲಿ ನಡೆದೇ ಇದೆ. ಹಿಂದೆ, ಡಿಜಿಟಲ್ ಉಪಕರಣಗಳಲ್ಲಿ ಕನ್ನಡದ ಬಳಕೆಯ ಸವಲತ್ತುಗಳನ್ನು ಬಹುತೇಕ ಬಾರಿ ಆಯಾಯ ಕಂಪೆನಿಗಳ ಮೇಲೆ ಒತ್ತಡವನ್ನು ಹೇರಿಯೇ ಪಡೆಯಲಾಗಿದೆ ಎಂಬುದು ಇತಿಹಾಸ. ಭಾರತ ದೇಶದ ಡಿಜಿಟಲ್ ಲೋಕದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹೆಚ್ಚುತ್ತಿದ್ದಂತೆ, ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ, ಕಂಪ್ಯೂಟರ್, ಸ್ಮಾರ್ಟ್ ಫೋನುಗಳು, ಐಪ್ಯಾಡ್ ಇತ್ಯಾದಿಗಳಲ್ಲಿ ಭಾರತೀಯ ಭಾಷಾ ಬಳಕೆಯ ಸವಲತ್ತುಗಳನ್ನು ನೀಡುವುದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನಿವಾರ್ಯವಾಗಿದೆ.
ಮೈಕ್ರೋಸಾಫ್ಟ್ ಕಂಪೆನಿಯು ಈಗಾಗಲೇ ತನ್ನ ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡದ ತಂತ್ರಜ್ಞಾನವನ್ನು ಅಳವಡಿಸಿ ನೀಡಿದೆ. ತನ್ನದೇ ಒ.ಎಸ್. ಇರುವ ವಿಂಡೋಸ್ ಸ್ಮಾರ್ಟ್‌ಫೋನ್‌ಗೆ ಕನ್ನಡವನ್ನು ಅಳವಡಿಸುವುದು ಅದಕ್ಕೆ ಕಷ್ಟವಾಗಲಿಲ್ಲ. ಹೀಗಾಗಿ, ದುಬಾರಿ ಬೆಲೆಯ ವಿಂಡೋಸ್ ಫೋನ್‌ಗಳಲ್ಲಿ ಕನ್ನಡದ ಸವಲತ್ತುಗಳು ಚೆನ್ನಾಗಿಯೇ ಇವೆ. ಗೂಗಲ್ ಕಂಪೆನಿಯ ನಿಯಂತ್ರಣದಲ್ಲಿರುವ ಆ್ಯಂಡ್ರಾಯ್ಡಾ ಒ.ಎಸ್. ಬಳಸುವ, ಗಣನೀಯವಾಗಿ ಕಡಿಮೆ ಬೆಲೆಯ, ಸ್ಮಾರ್ಟ್ ಫೋನ್‌ಗಳನ್ನು ಬಹುತೇಕ ಜನಸಾಮಾನ್ಯರು ಬಳಸುತ್ತಾರೆ. ಅವುಗಳಲ್ಲಿ ಕನ್ನಡದ ಸವಲತ್ತುಗಳು ಲಭ್ಯವಾಗಿ ದಶಕಗಳೇ ಸಂದಿವೆ. ಆದರೆ, ಶ್ರೀಮಂತರು ಬಳಸುವ ಐಫೋನ್‌ನಲ್ಲಿ ಕನ್ನಡದ ಸವಲತ್ತನ್ನು ನೀಡಲು ಆ್ಯಪಲ್ ಕಂಪೆನಿಯು ಮೀನಮೇಷ ಎಣಿಸುತ್ತಿತ್ತು.
ಐಫೋನ್ ಬಳಸುತ್ತಿದ್ದ ಕನ್ನಡಿಗರು ಕಳೆದ ಐದು ವರ್ಷಗಳಿಂದ ಕನ್ನಡದ ಕೀಬೋರ್ಡ್ ಗಾಗಿ ಮನವಿಮಾಡುತ್ತಲೇ ಬಂದಿದ್ದರು. ಐಫೋನ್‌ನಲ್ಲಿ ಕನ್ನಡದ ಕೀಬೋರ್ಡ್ ಗಾಗಿ ‘ಗ್ರಾಹಕ ಹಕ್ಕನ್ನು ಪ್ರತಿಪಾದಿಸಿ ‘ಕನ್ನಡ ಗ್ರಾಹಕರ ಕೂಟ’ವು ನೂರಾರು ಇ-ಮೇಲ್‌ಗಳನ್ನು ಕಳುಹಿಸಿ ಆಂದೋಲನವನ್ನೇ ನಡೆಸಿತು. ಆ್ಯಪಲ್ ಇದೀಗ ಉತ್ತಮವಾದ ಕೀಬೋರ್ಡ್‌ಅನ್ನು ಬಿಡುಗಡೆಮಾಡಿದೆ. ತಡವಾಗಿಯಾದರೂ ಆ್ಯಪಲ್ ಕನ್ನಡಕ್ಕೆ ಉತ್ತಮ ಸವಲತ್ತನ್ನು ನೀಡಿದೆ ಎಂದು ಸಮಾಧಾನಪಟ್ಟು ಕೊಳ್ಳಬಹುದು. ಭಾರತದಲ್ಲಿ ಹೊಸದಾಗಿ ಅಂತರ್ಜಾಲ ಬಳಸಲಾರಂಭಿಸಿರು ವವರು ತಮ್ಮ ತಮ್ಮ ಭಾಷೆಗಳಿಗಾಗಿ ‘ಗೂಗಲ್ ಹುಡುಕಾಟ’ ಮಾಡುತ್ತಿರುವುದನ್ನು ಮನಗಂಡ ಗೂಗಲ್ ಕಂಪೆನಿಯು ಭಾರತ ದೇಶದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ಕೈಗೊಂಡಿತು.
ಭಾರತದಲ್ಲಿ 20 ಕೋಟಿ ಅಂತರ್ಜಾಲ ಬಳಕೆದಾರರಿದ್ದು ಅವರಲ್ಲಿ ಶೇ.90ರಷ್ಟು ಜನರು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಅಂತರ್ಜಾಲವನ್ನು ಬಳಸುತ್ತಿರುವುದು ಈ ಅಧ್ಯಯನದಿಂದ ಕಂಡುಬಂದಿದೆ. ಪ್ರಾದೇಶಿಕ ಭಾಷೆಯಲ್ಲಿ ಅಂತರ್ಜಾಲ ಬಳಸುವವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಭಾರತೀಯ ಭಾಷಾ ಬಳಕೆದಾರರ ಪೈಕಿ ತಮಿಳು ಮೊದಲ ಸ್ಥಾನದಲ್ಲಿದೆ (ಶೇ.42). ನಂತರದ ಸ್ಥಾನದಲ್ಲಿ ಹಿಂದಿ (ಶೇ.39) ತದನಂತರದ ಸ್ಥಾನದಲ್ಲಿ ಕನ್ನಡ ಇದೆ (ಶೇ.37) ಎಂಬ ಅಂಶಗಳು ಅಧ್ಯಯನದಿಂದ ತಿಳಿದುಬಂದಿದೆ.
ಉತ್ತಮ ಸವಲತ್ತುಗಳುಳ್ಳ ಸ್ಮಾರ್ಟ್ ಫೋನುಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪೆನಿಗಳು ವ್ಯಾವಹಾರಿಕ ಲಾಭಕ್ಕಾಗಿ ಈಗ ಭಾಷಾ ಸವಲತ್ತುಗಳನ್ನು ನೀಡಲಾರಂಭಿಸಿವೆಯೇ ಹೊರತು, ಭಾಷಾಭಿಮಾನಕ್ಕಾಗಿ ಅಲ್ಲ ಎಂಬುದು ವ್ಯಾವಹಾರಿಕ ಸತ್ಯವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬಳಕೆಯು ಇಡೀ ದೇಶದಲ್ಲಿಯೇ ಮೂರನೆಯ ಸ್ಥಾನವನ್ನು ಹೊಂದಿರುವುದರಿಂದ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯ ಬಳಕೆಯ ಸವಲತ್ತುಗಳಿಗಾಗಿ ನಾವು ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ಒತ್ತಡ ಹೇರುವುದು ಇನ್ನು ಮುಂದೆ ಅಗತ್ಯವಿಲ್ಲ ಎನಿಸುತ್ತದೆ. ಬಳಕೆಯ ಅಂಕಿಸಂಖ್ಯೆಗಳೇ ಮಾರುಕಟ್ಟೆಯ ವ್ಯಾಖ್ಯಾನ ಮಾಡುವುದರಿಂದ ಮಾರುಕಟ್ಟೆಯ ಟ್ರೆಂಡ್ ಗಮನಿಸಿ ಕಂಪೆನಿಗಳೇ ಕನ್ನಡದ ಸವಲತ್ತುಗಳನ್ನು ನೀಡುತ್ತವೆ ಎಂದು ಭಾವಿಸಬಹುದು.