ವಿಶ್ವ ಪ್ಯಾರಾ ಅಥ್ಲೆಟಿಕ್ಸ್ : ಅಮಿತ್ ಕುಮಾರ್‌ಗೆ ಬೆಳ್ಳಿ
ಲಂಡನ್, ಜು.17: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರ ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ ಭಾರತದ ಅಮಿತ್ ಕುಮಾರ್ ಸರೊಹಾ ಬೆಳ್ಳಿ ಜಯಿಸಿದ್ದಾರೆ. ಅಮಿತ್ ಕುಮಾರ್ ಮೂರನೆ ಯತ್ನದಲ್ಲಿ ಕ್ಲಬ್ ಥ್ರೋದಲ್ಲಿ 30.25 ಮೀ. ಸಾಧನೆಯೊಂದಿಗೆ ಬೆಳ್ಳಿ ಪಡೆದರು.
ಸರ್ಬಿಯಾದ ಝಲ್ಕೊ ಡಿಮಿಟ್ರಿಜಿವಿಕ್ (31.99 ಮೀ ) ವಿಶ್ವ ದಾಖಲೆಯ ಸಾಧನೆಯೊಂದಿಗೆ ಚಿನ್ನ ಪಡೆದರು. ಭಾರತದ ಇನ್ನೊಬ್ಬ ಸ್ಪರ್ಧಿ ಧರಮ್‌ಬಿರ್ (22.34 ಮಿ) 10ನೆ ಸ್ಥಾನಕ್ಕೆ ತೃಪ್ತಿಪಟ್ಟರು.
ಹರ್ಯಾಣದ 32ರ ಹರೆಯದ ಅಮಿತ್ ಕುಮಾರ್ 2015ರಲ್ಲಿ ದೋಹಾದಲ್ಲಿ ನಡೆದ ದ್ವೈವಾರ್ಷಿಕ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು. ಇಂಚೋನ್ ನಲ್ಲಿ 2014ರಲ್ಲಿ ನಡೆದ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅಮಿತ್ ಕುಮಾರ್ ಚಿನ್ನ ಬಾಚಿಕೊಂಡಿದ್ದರು.
2012ರಲ್ಲಿ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಅಮಿತ್ ಕುಮಾರ್ ಮಂಗಳವಾರ ಡಿಸ್ಕಸ್ ಎಸೆತ ಎಫ್ 52 ವಿಭಾಗದ ಫೈನಲ್‌ನಲ್ಲಿ ಪದಕದ ಬೇಟೆ ನಡೆಸಲಿದ್ಧಾರೆ.
ಮೊದಲ ದಿನ ಜಾವೆಲಿನ್ ಎಸೆತದಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಚಿನ್ನ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.
ಸುಂದರ್ ಸಿಂಗ್ 60.36 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಗೆಲ್ಲುವ ಮೂಲಕ ಭಾರತದ ಖಾತೆಗೆ ಮೊದಲ ಚಿನ್ನ ಜಮೆ ಮಾಡಿದ್ದರು. ಆದರೆ ಎರಡನೆ ದಿನ ಜಾವೆಲಿನ್‌ನಲ್ಲಿ ಸುನೀಲ್ ಪೋಗಟ್ ಮತ್ತು ಡಿಸ್ಕಸ್‌ನಲ್ಲಿ ಅರವಿಂದ ಪದಕ ಗೆಲುವಲ್ಲಿ ವಿಫಲರಾದರು.
ಪೋಗಟ್ 23.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು 8ನೆ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅರವಿಂದ 44.92 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಎಳನೆ ಸ್ಥಾನ ತನ್ನದಾಗಿಸಿಕೊಂಡಿದ್ದರು.