ಕೊಡಗಿನ ಪಕ್ಷಿ ಸಂಪತ್ತಿನ ಕಡೆಗೆ ಪಕ್ಷಿ ನೋಟ....
ಡಾ. ಎಸ್. ವಿ. ನರಸಿಂಹನ್ ಅವರು ಬರೆದಿರುವ ‘ಕೊಡಗಿನ ಖಗರತ್ನಗಳು’ ಕೊಡಗಿನ ಪಕ್ಷಿ ಸಂಕುಲದ ಮಾಹಿತಿಯ ಕೈ ಪಿಡಿಯಾಗಿದೆ. 310 ಪ್ರಭೇದಗಳ ಸಚಿತ್ರ ವಿವರಣೆ ಇಲ್ಲಿದೆ. ಈ ಕೃತಿಯ ವಿಶೇಷವೆಂದರೆ, ಪಕ್ಷಿಗಳ ಕುರಿತಂತೆ ಇಲ್ಲಿ ಇಂಗ್ಲಿಷ್‌ನಲ್ಲೂ, ಕನ್ನಡ ದಲ್ಲೂ ಏಕಕಾಲದಲ್ಲಿ ಮಾಹಿತಿಯನ್ನು ನೀಡಲಾ ಗಿದೆ. ಇದು ಕೃತಿಯ ಎರಡನೆ ಪರಿಷ್ಕೃತ ವಿಸ್ತೃತ ಆವೃತ್ತಿಯಾಗಿದೆ. ಬರೀ 4,100 ಚದರ ಕಿ.ಮೀ. ವಿಸ್ತೀರ್ಣವುಳ್ಳ ಜಿಲ್ಲೆಯಾದ ಕೊಡಗು ಪ್ರಪಂಚದಲ್ಲಿಯೇ ಜೀವ ವೈವಿಧ್ಯಕ್ಕೆ ಹೆಸರಾದ ಪಶ್ಚಿಮಘಟ್ಟಗಳಿಂದಾವೃತವಾಗಿದೆ. ಕೊಡಗಿನ ಹಕ್ಕಿಗಳ ಕುರಿತಂತೆ ನೀವು ಪಡೆಯುವ ವಿವರಗಳು, ಆ ಪ್ರದೇಶದ ವೈವಿಧ್ಯವನ್ನೂ ಸಂಕೇತಿಸುತ್ತದೆ. ಎಲ್ಲ ಪಕ್ಷಿಗಳೂ ಎಲ್ಲ ಕಡೆಗಳಲ್ಲೂ ನೆಲೆಯೂರುವುದಿಲ್ಲ. ಒಂದು ಹಕ್ಕಿಯ ಬದುಕು, ಆಹಾರ ಕ್ರಮದ ಜೊತೆಗೆ ಆ ಪ್ರದೇಶ ಸಂಬಂಧವನ್ನು ಹೊಂದಿದೆ. ಆದುದರಿಂದ, ಯಾವ ಪ್ರದೇಶದಲ್ಲಿ ಯಾವ ಪ್ರಾಣಿ ಪಕ್ಷಿಗಳು ಹೆಚ್ಚಾಗಿವೆ ಎನ್ನುವುದರ ಆಧಾರದಲ್ಲಿ ಆ ಪರಿಸರದ ವೈಶಿಷ್ಟವನ್ನು ನಾವು ಗುರುತಿಸಬಹುದು.
ಕೊಡಗಿನ ಒಟ್ಟು 310 ಪಕ್ಷಿ ಪ್ರಭೇದಗಳ ಚಿತ್ರಗಳು ಮತ್ತು ಮಾಹಿತಿಗಳನ್ನು, ಜೊತೆ ಜೊತೆಯಲ್ಲಿ ಒತ್ತಟ್ಟಿಗೆ ಕಾಣಬಹುದು. ಇದು ಆಯಾ ಕುಟುಂಬದ ಹಕ್ಕಿಗಳನ್ನು ಹೋಲಿಸಿ ನೋಡಲು ಮತ್ತು ಹೆಚ್ಚು ಶ್ರಮವಿಲ್ಲದೆ ಓದಲು ಅನುಕೂಲವಾಗುತ್ತದೆ. ಪ್ರತಿಯೊಂದು ಹಕ್ಕಿಯ ಆಕಾರ, ರೂಪುರೇಷೆ, ಆವಾಸಸ್ಥಾನ, ನಡವಳಿಕೆ, ಆಹಾರ, ಗೂಡಿನ ರಚನೆ, ಮೊಟ್ಟೆಗಳ ವಿವರಗಳನ್ನು ಇಂಗ್ಲಿಷ್‌ನಲ್ಲಿ ಬರೆಯ ಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಈ ಎರಡೂ ಭಾಷೆಗಳಲ್ಲಿ ಪಠ್ಯವಿದ್ದರೂ, ಅದು ಭಾಷಾಂತರವಲ್ಲ. ಸ್ವಾರಸ್ಯಕರ, ಮುಖ್ಯ ಹಾಗೂ ವಿಶಿಷ್ಟ ವಿಚಾರಗಳನ್ನು ಕನ್ನಡದಲ್ಲಿ ಎತ್ತಿ ಕೊಡಲಾಗಿದೆ. ಹಕ್ಕಿಗಳ ಕೊಡವ ಹೆಸರನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಕೊಡಗಿನಲ್ಲಿ ವಾಸವಿರುವ ಸಕಲ ಪಕ್ಷಿಗಳ ಬಗ್ಗೆ ಸಪ್ರಮಾಣವಾದ, ವಿಶ್ವಾಸಾರ್ಹವಾದ ಮಾಹಿತಿ ಯನ್ನೂ ಒಂದೇ ಹೊತ್ತಗೆಯಲ್ಲಿ ಕ್ರೋಡಿಕರಿಸುವ ಪ್ರಯತ್ನ ಇಲ್ಲಿ ನಡೆದಿದೆ. ಆದುದರಿಂದ ಪಕ್ಷಿಗಳ ಬಗ್ಗೆ ಕುತೂಹಲ, ಅಭಿರುಚಿ, ಕಳಕಳಿಯಿರುವ ವಿದ್ಯಾರ್ಥಿಗಳಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಈ ಪುಸ್ತಕ ಒಂದು ನಿಧಿಯೇ ಸರಿ.
ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ ಈ ಕೃತಿಯನ್ನು ಹೊರತಂದಿದೆ. ಕೃತಿಯ ಮುಖಬೆಲೆ 250 ರೂ. ಆಸಕ್ತರು 08274-257484 ದೂರವಾಣಿಯನ್ನು ಸಂಪರ್ಕಿಸಬಹುದು.