ಪ್ರಶಂಸೆ ನಿರ್ದೇಶಕರಿಗೆ ಸಲ್ಲಲಿ: ಪವನ್ ಕುಮಾರ್

Update: 2017-07-19 07:19 GMT

'ಒಂದು ಮೊಟ್ಟೆಯ ಕತೆ' ಚಿತ್ರದ ಬಗ್ಗೆ ಮಾತನಾಡುತ್ತಾ ಎಲ್ಲರೂ ನನ್ನನ್ನು  ಹೊಗಳುತ್ತಿದ್ದಾರೆ. ಆದರೆ ಈ ಚಿತ್ರದ ಪಾಲಿಗೆ ನಾನು ಆಲ್ರೆಡಿ ಪ್ಯಾಕಾಗಿದ್ದ ಒಂದು ಒಳ್ಳೆಯ ಉಡುಗೊರೆಗೆ ಆಕರ್ಷಕ ರ್ಯಾಪರ್ ತರಹವಷ್ಟೇ ಕೆಲಸ ಮಾಡಿದ್ದೇನೆ.

ಎಲ್ಲಾ ಪ್ರಶಂಸೆಗಳು ಚಿತ್ರದ ನಿರ್ದೇಶಕ ಮತ್ತು ವೀಕ್ಷಕರಿಗೆ ಸಲ್ಲಬೇಕು" ಎಂದು ಪವನ್ ಕುಮಾರ್ ಹೇಳಿದ್ದು, ಚಿತ್ರದ ಸಂವಾದದ ಸಂದರ್ಭದಲ್ಲಿ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ಗಾಂಧಿನಗರದ ಮೈನ್ ಥಿಯೇಟರಲ್ಲೊಂದರಲ್ಲಿ ಇದ್ದರೆ ಮಾತ್ರ ಚಿತ್ರ ಯಶಸ್ವಿಯಾಗುತ್ತದೆ ಎಂಬ ಕಾನ್ಸೆಪ್ಟನ್ನು ಮಾತ್ರ ಚಿತ್ರ ಒಡೆದು ಹಾಕಿದೆ. ಈ ವಿಚಾರದಲ್ಲಿ ವಿತರಕ ಜಾಕ್ ಮಂಜು ಅವರು ಕೂಡ ನನ್ನ ಜೊತೆಗೆ ಕೈ ಜೋಡಿಸಿದ್ದಾರೆ "ಎಂದು ಪವನ್ ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ನಾಗ್ತಿಹಳ್ಳಿ‌ಚಂದ್ರಶೇಖರ್ ಮಾತನಾಡಿ, ಸಿನಿಮಾ ಮುಂದೆ ನನ್ನನ್ನೂ ಸೇರಿಸಿ ಎಲ್ಲರೂ ವಿದ್ಯಾರ್ಥಿಗಳು. ಹೊಸದೊಂದು ಕತೆ ಸಿಕ್ಕಾಗ ಅದನ್ನು ಸಿನಿಮಾವಾಗಿಸುವ ಪ್ರಯತ್ನದಲ್ಲಿ ಎಲ್ಲರೂ ಹೊಸಬರಂತೆ. ಸಿದ್ಧಸೂತ್ರಗಳ ಕಮರ್ಷಿಯಲ್ ಚಿತ್ರಗಳ  ನಡುವೆ 'ಒಂದು ಮೊಟ್ಟೆಯ ಕತೆ'ಯಂಥ ಚಿತ್ರಗಳು ಬೇಕು ಎಂದರು.

ನಿರ್ದೇಶಕ, ಬಿ ಟಿವಿ ವಾಹಿನಿಯ ಸಿನಿಮಾ ವಿಭಾಗದ ಮುಖ್ಯಸ್ಥ ಸದಾಶಿವ ಶೆಣೈ ಮಾತನಾಡಿ, "ಹೊಸಬರನ್ನು, ಹೊಸ ಪ್ರಯತ್ನಗಳನ್ನು‌ ದೂರವಿಡುವ ಕಾಲವಿತ್ತು. ಆದರೆ ಈಗ ಚಿತ್ರರಂಗ ಅವರನ್ನು  ಸ್ವಾಗತಿಸುವ ರೀತಿಯಲ್ಲೂ ಬದಲಾವಣೆಗಳಾಗಿದೆ. ಅದಕ್ಕಾಗಿ ಖಂಡಿತ ಹೆಮ್ಮೆ ಪಡಬೇಕು. ಪೂರ್ತಿ ಕರ್ನಾಟಕಕ್ಕೆ ಹೊಂದುವಂಥ ಸಬ್ಜೆಕ್ಟ್ ಇಲ್ಲ ಎಂದು ರಿಮೇಕ್ ಮಾಡುವವರಿಗೆ, ಬೆತ್ತಲೆಯಾಗಿ ನಟಿಸುವುದೇ ಬೋಲ್ಡ್ ಎಂದುಕೊಂಡವರಿಗೆ ಅದಕ್ಕಿಂತ ಬೋಲ್ಡ್ ಎನ್ನಬಹುದಾದ ಒಂದು ನೈಜ ಕತೆಯನ್ನು ರಾಜ್ ಬಿ ಶೆಟ್ಟಿ ತಂದುಕೊಟ್ಟಿದ್ದಾರೆ" ಎಂದು ಶೆಣೈ ಹೇಳಿದರು.

ಹಾಫ್ ಬೀಟ್ ಮಾದರಿಯಲ್ಲಿ ಬಂದು ಗಮನ ಸೆಳೆಯುವ, ಒಳ್ಳೆಯ ಹೊಸ ಚಿತ್ರಗಳನ್ನು ಪ್ರದರ್ಶಿಸುವ ಬಗ್ಗೆ ಪತ್ರಕರ್ತರಾದ ಜೋಗಿ ಮತ್ತು ಸದಾಶಿವ ಶೆಣೈ ನೀಡಿದ ಸಲಹೆ ಹಾಗೂ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ನೀಡಿದ ಪ್ರೋತ್ಸಾಹವೇ ಹೀಗೊಂದು ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕ ಎನ್ ಆರ್ ವಿಶು ಕುಮಾರ್ ತಿಳಿಸಿದರು. ಪತ್ರಕರ್ತ, ಸಾಹಿತಿ 
ಜೋಗಿ ಮಾತನಾಡಿ ಇಂಥ ವಾರಾಂತ್ಯದ ಚಿತ್ರ ಪ್ರದರ್ಶನಕ್ಕೆ 'ಸಿನಿಮಾ ಸಂಭ್ರಮ' ಎಂದು ಹೆಸರಿಡೋಣ ಎಂದರು.

ಮೂಲತಃ ಕರಾವಳಿಯವರಾದ ತಮಗೆ, ಇದುವರೆಗಿನ ಇತರ ಕನ್ನಡ ಚಿತ್ರಗಳಂತೆ ತಮ್ಮ ಊರಿನ ಕನ್ನಡವನ್ನು ಹಂಗಿಸದೇ, ಇರುವ ರೀತಿಯಲ್ಲಿಯೇ ನೈಜವಾಗಿ ತೋರಿಸಿರುವುದು 'ಮೊಟ್ಟೆ' ಚಿತ್ರದ ಇಷ್ಟವಾದ ಅಂಶಗಳಲ್ಲಿ ಒಂದು ಎಂದರು. ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಜೊತೆಗೆ ತಾವು ಕೂಡ ಕೆಲಸ ಮಾಡಿರುವುದನ್ನು ಅವರು ಸ್ಮರಿಸಿದರು. 

ಒಂದು ಒಳ್ಳೆಯ ಸಿನಿಮಾಗೆ 'ಪವನ್ ಕುಮಾರ್' ಅನಿವಾರ್ಯವಾಗಿದ್ದಾರೆ. ಕಳೆದವಾರ ಬಿಡುಗಡೆಯಾದ ಚಿತ್ರಗಳಲ್ಲಿ 'ಹೊಂಬಣ್ಣ', 'ಕಥಾವಿಚಿತ್ರ' ಕೂಡ ಚೆನ್ನಾಗಿತ್ತು. ಆದರೆ ಪವನ್ ಕುಮಾರ್ ರಂಥ ಪ್ರಮುಖರು ಆ ಚಿತ್ರವನ್ನು ನಿರ್ಮಿಸಿರದ ಕಾರಣ ಸುದ್ದಿಯೇ ಆಗಲಿಲ್ಲ ಎಂದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಅವರಿಗೆ ಚಿತ್ರವನ್ನು ನೋಡುವಂತೆ ಅವರ ತಂಗಿ ವಿಜಯಲಕ್ಷ್ಮೀ ಸಿಂಗ್ ಶಿಫಾರಸ್ಸು ಮಾಡಿದ್ದರಂತೆ. ಆದರೆ ಟಿಕೆಟ್ ಸಿಗದ ಕಾರಣ ಎರಡು ದಿನಗಳ ಬಳಿಕ ಚಿತ್ರ ನೋಡಿದ ಅವರಿಗೂ ಚಿತ್ರ ತುಂಬ ಹಿಡಿಸಿತಂತೆ. ಪರದೆಯ ಮೇಲೆ 'ಪವನ್ ಕುಮಾರ್' ಮೂವೀಸ್ ಹೆಸರು ಬರುತ್ತಿದ್ದಂತೆ ಚಪ್ಪಾಳೆ ಕೇಳಿ ಬಂದಾಗ ಖುಷಿಗೊಂಡರಂತೆ. ಪವನ್ ಕುಮಾರ್ ಚಿತ್ರವನ್ನು ಹೇಗೆ ಬಿಡುಗಡೆಗೊಳಿಸಬೇಕು ಎಂದು ಅರಿತಿದ್ದಾರೆ. ನಾವು 
ಟಿವಿಯವರಿಗೆ ಮೂರುವರೆ ಲಕ್ಷ ಕೊಟ್ಟು, ಮೊದಲ ದಿನವೇ ಎಂಟೂವರೆ ಕೋಟಿ ಕಲೆಕ್ಷನ್ ಆಗಿದೆ ಎಂದು ಹೇಳಿಸುತ್ತೇವೆ. ಆದರೆ ಅವರು ಕೊನೆಯಲ್ಲಿ, 'ಈ ಚಿತ್ರ ಸೋಮವಾರ ಥಿಯೇಟರಲ್ಲಿ ಇರುತ್ತೋ ಇಲ್ವೋ' ಎಂಬುದನ್ನು ಕೂಡ ಹೇಳಿಬಿಡುತ್ತಾರೆ ಎಂದು ನಕ್ಕರು ಬಾಬು. ಹಾಗಾಗಿ ನಾನು ಕೂಡ ಮುಂದಿನ ಚಿತ್ರಗಳನ್ನು ಪವನ್ ನ ಸಲಹೆ ಕೇಳಿಯೇ  ಬಿಡುಗಡೆ ಮಾಡಬೇಕೆಂದು ನಿರ್ಧರಿಸಿರುವುದಾಗಿ ಅವರು ಹೇಳಿದರು. ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ರಾಜ್ ಶೆಟ್ಟಿ ತಮ್ಮನ್ನು ಆರಂಭದಿಂದಲೇ ಬೆಂಬಲಿಸಿದ ಮೊದಲ ನಿರ್ಮಾಪಕ ಸುಹಾನ್ ಪ್ರಸಾದ್ ಮತ್ತು ಒಟ್ಟು ಚಿತ್ರತಂಡಕ್ಕೆ ಎಲ್ಲ ಕ್ರೆಡಿಟ್ ಸಲ್ಲಬೇಕು ಎಂದರು. ಪತ್ರಕರ್ತ ಗಣಪತಿ, ಕಲಾವಿದೆ ಉಷಾ ಭಂಡಾರಿ ಮೊದಲಾದವರು ವೇದಿಕೆಯಲ್ಲಿದ್ದರು. ರಿಜಿಸ್ಟ್ರಾರ್ ದಿನೇಶ್ ಸ್ವಾಗತಿಸಿದರು. ಶ್ರೀನಿವಾಸಮೂರ್ತಿ ನಿರೂಪಿಸಿದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News