'ಆಪರೇಷನ್ ಅಲಮೇಲಮ್ಮ'ದಲ್ಲಿ ಅಭಿಷೇಕ್ ನ ಅರಂಗೇಟ್ರಂ

Update: 2017-07-19 17:24 GMT

ಸಿನಿಮಾದಲ್ಲಿ ನಿರ್ದೇಶಕ ಗಂಡನಾದರೆ ಛಾಯಾಗ್ರಾಹಕ (D O P) ಹೆಂಡತಿ ಎನ್ನುವ ಮಾತಿದೆ. ಮಾನಿಟರ್ ನಲ್ಲಿ ನೋಡುವ ಅವಕಾಶವಿರದ ದಿನಗಳಲ್ಲಿ 'ನಿರ್ದೇಶಕನ ಕಣ್ಣು ಕ್ಯಾಮೆರಾಮ್ಯಾನು' ಎಂದೇ ಹೇಳಲಾಗುತ್ತಿತ್ತು. ಅಂಥದೊಂದು ಜವಾಬ್ದಾರಿಯುತ ಸ್ಥಾನಕ್ಕೆ ಎಂಟ್ರಿ ನೀಡಿದ್ದಾರೆ ಅಭಿಷೇಕ್ ಜಿ ಕಾಸರಗೋಡು.

ಸುನಿ ನಿರ್ದೇಶಿಸಿರುವ 'ಆಪರೇಷನ್ ಅಲಮೇಲಮ್ಮ' ಚಿತ್ರ ಈಗಾಗಲೇ ಅದರ ಟೀಸರ್, ಟ್ರೇಲರ್ ಗಳ ಮೂಲಕ ವೀಕ್ಷಕರ ಗಮನ ಸೆಳೆದಿದೆ. ಹಾಗಾಗಿ ಚಿತ್ರ ಬಿಡುಗಡೆಗೂ ಮೊದಲೇ ಛಾಯಾಗ್ರಾಹಕರಾಗಿ ನಿರೀಕ್ಷೆ ಮೂಡಿಸಿದ್ದಾರೆ ಅಭಿಷೇಕ್.

ಆದರೆ ಅವರ ಪ್ರಕಾರ ಇದು  ಪ್ರಥಮ ಚಿತ್ರವಲ್ಲ. ಕರಾವಳಿಯ ಕಿನಾರೆಯವರಾದ ಅಭಿ, ಮೊದಲ ಬಾರಿ ಸ್ವತಂತ್ರ ಛಾಯಾಗ್ರಹಣಕ್ಕೆ ಶುರು ಮಾಡಿದ್ದು 'ಕಿನಾರೆ' ಎಂಬ ಚಿತ್ರದ ಮೂಲಕ. ಅದು ಪ್ರಸ್ತುತ ಚಿತ್ರೀಕರಣದ ಕೊನೆಯ ಹಂತ ತಲುಪಿದೆ. ಆದರೆ ಅದರ ಬಳಿಕ ಒಪ್ಪಿಕೊಂಡ 'ಆಪರೇಷನ್ ಅಲಮೇಲಮ್ಮ' ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಕಿನಾರೆ ಚಿತ್ರದ ಟ್ರೇಲರ್ ಈಗಾಗಲೇ ಸಾಕಷ್ಟು ಪ್ರಶಂಸೆಗೊಳಗಾಗಿದೆ. ಆದರೆ ಅದನ್ನು ನೋಡುವ ಮುನ್ನವೇ ನಿರ್ದೇಶಕ ಸುನಿಗೆ ಈತನ ಬಗ್ಗೆ ತಿಳಿದಿತ್ತು. ಅಭಿಷೇಕ್ ಅದಾಗಲೇ ಸುನಿಯ 'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ'ಗೆ ಛಾಯಾಗ್ರಾಹಕ ಮನೋಹರ ಜೋಷಿಗೆ ಸಹಾಯಕರಾಗಿದ್ದರು.

ಸತ್ಯ ಹೆಗಡೆ ಪ್ರಥಮ ಗುರು

ತಂದೆ ಗಣೇಶ ಕಾಸರಗೋಡು ಕನ್ನಡ ಸಿನಿ ಪತ್ರಿಕೋದ್ಯಮದಲ್ಲಿ ಹೆಸರು ಪಡೆದವರಾದರೂ ಹಿರಿಯಪುತ್ರ ಅಭಿಷೇಕ್ ಆಕಾಂಕ್ಷೆಗಳೇ ಬೇರೆಯಿತ್ತು. ಸಿನಿಮಾ ಛಾಯಾಗ್ರಹಣದೆಡೆಗಿನ ಅವರ ಒಲವನ್ನು ಕಂಡು ಸರ್ಕಾರಿ ಫಿಲಂ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನಲ್ಲಿ ಮೂರು ವರ್ಷ ತರಬೇತಿಗೆ ಕಳಿಸಲಾಗಿತ್ತು. ಅದರ ಬಳಿಕ ಸತ್ಯ ಹೆಗಡೆಯವರ ಬಳಿ ಸಹಾಯಕರಾಗಿ ಮೂರು ವರ್ಷ ದುಡಿದ ಅಭಿಷೇಕ್,  'ಜಂಗ್ಲಿ', 'ಅಂಬಾರಿ', 'ಗಜಕೇಸರಿ'ಯಿಂದ 'ಕೆಂಡ ಸಂಪಿಗೆ'ಗಳಿಗೆ ಕೆಲಸ ಮಾಡಿದರು. ಮಾತ್ರವಲ್ಲ ಖ್ಯಾತ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್, ಪಿ ರಾಜನ್, ಕೃಷ್ಣಕುಮಾರ್ ಮೊದಲಾದ ಶ್ರೇಷ್ಠ ಛಾಯಾಗ್ರಾಹಕರೊಂದಿಗೆ ಸೇರಿ ವೈವಿಧ್ಯತೆ ಅರಿತರು.  ಸಹಾಯಕನಾಗಿದ್ದಾಗ ಸಾಕಷ್ಟು ಸಮಯ ಕೆಲಸವಿಲ್ಲದೆ ಹೋದಾಗ ಕಿರುಚಿತ್ರಗಳತ್ತ ಗಮನ ಕೇಂದ್ರೀಕರಿಸಿದರು.

ಕಿರುಚಿತ್ರಗಳಿಂದ ಹೆಸರು

ಸ್ವತಃ ಆಸಕ್ತಿಗಾಗಿ ಶುರು ಮಾಡಿದ ಕಿರುಚಿತ್ರಗಳ ಪಯಣ ದೊಡ್ಡ ಮಟ್ಟಿನ ಗುರುತಿಸುವಿಕೆ ನೀಡಿತೆನ್ನುವುದು ವಿಶೇಷ. 'ಕುಕ್ಕ', 'ರೀ ಫಿಲ್ಲು', 'ಸೇವ್ ಪುರಿ', 'ದಿ ಎಂಡ್'.. ಹೀಗೆ ಅವುಗಳ ಪಟ್ಟಿ ಮುಂದುವರಿಯುತ್ತದೆ.ಅವುಗಳಲ್ಲಿ 'ಕುಕ್ಕ' ಚಿತ್ರವು ಗೋವಾ ಕಿರುಚಿತ್ರೋತ್ಸವಕ್ಕೂ ಆಯ್ಕೆಯಾಗಿತ್ತು. 'ಸಿಂಪಲ್ಲಾಗಿ..' ಕಾಲದಿಂದಲೇ ಆತ್ಮೀಯರಾಗಿದ್ದ ರಕ್ಷಿತ್ ಶೆಟ್ಟಿ ಇವರ ಕಿರುಚಿತ್ರಗಳ ಬಗ್ಗೆ ತಿಳಿದು ಪ್ರೋತ್ಸಾಹ ನೀಡುತ್ತಿದ್ದರಂತೆ. ಹಾಗೆ 'ರೀಫಿಲ್' ಇಬ್ಬರು ಕಲಾವಿದರನ್ನು ಕಂಡು ಅವರಿಗೆ ತಮ್ಮ 'ಕಿರಿಕ್ ಪಾರ್ಟಿ'ಯಲ್ಲಿ ಅವಕಾಶ ನೀಡಿದ್ದಾರೆ.

ನಿರೀಕ್ಷೆಯ ದಿನಗಳು

ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ಛಾಯಾಗ್ರಹಣಕ್ಕಿಂತ ಕತೆ ಮತ್ತು ಸಂದರ್ಭಗಳೇ ಮುಖ್ಯವೆನಿಸುತ್ತದೆ. ಅದೇ ಕಾರಣದಿಂದಲೇ ಚಿತ್ರ ಯಶಸ್ವಿಯಾದರೂ ಅದು ತಮ್ಮ ಚೊಚ್ಚಲ ವಿಜಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಅಭಿಷೇಕ್ ಈಗಾಗಲೇ ಮತ್ತೊಂದು ಹೊಸ ಚಿತ್ರ ತಂಡದೊಂದಿಗೆ ಸೇರಿಕೊಂಡಾಗಿದೆ. 'ಕಹಿ' ಫೇಮ್ ನಿರ್ದೇಶಕ ಅರವಿಂದ ಶಾಸ್ತ್ರಿಯ ಹೊಸ ಚಿತ್ರಕ್ಕೆ ಇವರೇ ಛಾಯಾಗ್ರಾಹಕರು. ಜೊತೆಗೆ ಅರಸು ಅಂತಾರೆಯ 'ಸೆಕೆಂಡ್ ಬಕೆಟ್ ಬಾಲ್ಕನಿ' ಚಿತ್ರವೂ ಇದೆ.

'ಸಹಾಯಕನಾಗಿ ದುಡಿದಾಗ ಮನೆಗೆ ಕೊಡುವಷ್ಟು ವೇತನ ದೊರಕುತ್ತಿರಲಿಲ್ಲ. ಆದರೆ ಆ ಬಗ್ಗೆ ವಿಚಾರಿಸದೇ ಇಷ್ಟು ವರ್ಷ ಪ್ರೋತ್ಸಾಹಿಸಿದ ತಂದೆಯ ಬಗ್ಗೆ ಅಭಿಮಾನವಿದೆ. ಸ್ವತಂತ್ರ ಛಾಯಾಗ್ರಾಹಕನಾಗಿಯಾದರೂ ಅವರ ಭರವಸೆಯನ್ನು ಈಡೇರಿಸುವ ಕನಸಿದೆ ಎನ್ನುತ್ತಾರೆ ಅಭಿಷೇಕ್.

ತಂದೆಯ ಹಾರೈಕೆ

"ಬಾಲ್ಯದಲ್ಲಿ ಅಭಿಷೇಕ್ ಕ್ರಿಕೆಟ್ ಪ್ಲೇಯರ್ ಆಗಬೇಕು ಎಂದುಕೊಂಡಿದ್ದ. ಕೋಚಿಂಗ್ ಗೆ ಕಳಿಸುವಷ್ಟು ಆರ್ಥಿಕ ಸದೃಢತೆ ನನಗಿರಲಿಲ್ಲ. ಆದರೆ ಈಗ ಛಾಯಾಗ್ರಾಹಕನಾಗಿದ್ದಾನೆ. ಕ್ರಿಕೆಟಲ್ಲಿ ಮುಂದುವರಿದಿದ್ದರೆ ಬಹುಶಃ ಫೋರ್ ಹೊಡೆಯುತ್ತಿದ್ದನೇನೋ, ಆದರೆ ಈಗ ಡಿಒಪಿಯಾಗಿ ಸಿಕ್ಸರನ್ನೇ ಬಾರಿಸಲೆಂದು ಹಾರೈಸುತ್ತೇನೆ" ಎನ್ನುತ್ತಾರೆ ತಂದೆ ಗಣೇಶ್ ಕಾಸರಗೋಡು.

ಕರಾವಳಿಯ ಈ ಹುಡುಗನ ಸಿನಿಮಾ ಪಯಣ ಯಶಸ್ವಿಯಾಗಲೆಂದು ಚಂದನವನದ ಎಲ್ಲ ಮಂದಿ ಹಾರೈಸುತ್ತಿದ್ದಾರೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News