'6ನೇ ಮೈಲಿ' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ
ಸಂಚಾರಿ ವಿಜಯ್ ಪ್ರಧಾನ ಪಾತ್ರದಲ್ಲಿ ನಟಿಸಿರುವ 6ನೇ ಮೈಲಿ ಚಿತ್ರದ ಮೋಶನ್ ಪೋಸ್ಟರ್ ಗುರುವಾರ ಸಂಜೆ ಬಿಡುಗಡೆಗೊಳಿಸಲಾಯಿತು.
ಖ್ಯಾತ ಕಲಾವಿದರಾದ ವಸಿಷ್ಠ ಸಿಂಹ ಮತ್ತು ಶ್ರುತಿ ಹರಿಹರನ್ ತಲಾ ಒಂದೊಂದು ಮೋಶನ್ ಪೋಸ್ಟರ್ ಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.
ನಟಿ ಶ್ರುತಿ ಹರಿಹರನ್ ಮಾತನಾಡುತ್ತಾ, "ಇದು ಪ್ರೀತಿಯಿಂದ ಚಿತ್ರ ಮಾಡುವ ಒಂದು ಒಳ್ಳೆಯ ತಂಡ. ಹಾಗೆಯೇ ಮೋಶನ್ ಪೋಸ್ಟರ್ ಕೂಡ ಇಷ್ಟವಾಯಿತು, ತಂಡದ ಶ್ರಮ ಎದ್ದು ಕಾಣ್ಸುತ್ತೆ. ಇನ್ನು ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಟನೆಯ ಬಗ್ಗೆ ಹೇಳುವುದೇ ಬೇಕಿಲ್ಲವಲ್ಲ" ಎಂದು ಸಂಭ್ರಮ ವ್ಯಕ್ತಪಡಿಸಿದರು.
ಮತ್ತೊಂದು ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದ ನಟ ವಸಿಷ್ಠ ಸಿಂಹ, " ನಿರ್ದೇಶಕ ಸೀನಿ ನನ್ನ ಬಹುಕಾಲದ ಗೆಳೆಯ. ಕತೆ ಕೇಳಿದ ತಕ್ಷಣವೇ ಟೀಸರ್ ಗೆ ಧ್ವನಿ ನೀಡಲು ಒಪ್ಪಿದೆ" ಎಂದರು. ತಂಡದ ಎನರ್ಜಿ, ಸಾಯಿ ಕಿರಣ್ ಸಂಗೀತದ ಬಗ್ಗೆಯೂ ಅವರು ಮೆಚ್ಚುಗೆ ಸೂಚಿಸಿದರು.
ಚಿತ್ರದ ನಿರ್ದೇಶಕ ಸೀನಿಯವರು ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಶಿರ್ಸಿ ಪಕ್ಕದ ಕಾಡಲ್ಲಿ 130ಜನ ಏಳು ದಿನ ಚಿತ್ರೀಕರಣವಿತ್ತು. ಅಕ್ಟೋಬರ್ ನಲ್ಲಿ ಬಿಡುಗಡೆ ಯೋಜನೆ ಹಾಕಲಾಗಿದೆ. ಒಂದು ಹಾಡಿನ ರೆಕಾರ್ಡಿಂಗನ್ನು ಲಂಡನ್ನಲ್ಲಿ ಮಾಡಲಿದ್ದೇವೆ. ಬಹುಶಃ ಕನ್ನಡದ ಮಟ್ಟಿಗೆ ಇದುವೇ ಪ್ರಥಮವಿರಬೇಕು ಎಂದರು.
ವೃತ್ತಿಯಲ್ಲಿ ವೈದ್ಯರಾಗಿರುವ ಚಿತ್ರದ ನಿರ್ಮಾಪಕ
ಡಾ. ಬಿಎಸ್ ಶೈಲೇಶ್ ಕುಮಾರ್ ನಿರ್ದೇಶಕರಿಂದ ಪ್ರಥಮ ಬಾರಿಗೆ ಕತೆ ಕೇಳಿ, ಅದರ ಮಧ್ಯಂತರ ತಲುಪುತ್ತಿದ್ದಂತೆ ಚಿತ್ರ ಮಾಡುವುದಾಗಿ ನಿರ್ಧರಿಸಿದ್ದಾಗಿ ತಿಳಿಸಿದರು. ಆರ್ ಜೆ ನೇತ್ರಾ ಮಾತನಾಡಿ, "ಕತೆ, ಪಾತ್ರ ಇಷ್ಟವಾದ ಕಾರಣ ಒಪ್ಪಿದೆ. ಕಾಡಿನಲ್ಲಿನ ಚಿತ್ರೀಕರಣ ನಿಜಕ್ಕೂ ಛಾಲೆಂಜಿಂಗ್ ಆಗಿತ್ತು" ಎಂದು ನೆನಪಿಸಿಕೊಂಡರು. ನಾಯಕ ಸಂಚಾರಿ ವಿಜಯ್ "ಚಿತ್ರದ ಇಂಟರ್ವೆಲ್ ಬಳಿಕ ರಿವರ್ಸ್ ಸ್ಕ್ರೀನ್ ಪ್ಲೇ ಇದೆ. ಅದೇ ಚಿತ್ರದ ಪ್ರಮುಖ ವಿಶೇಷತೆ" ಎಂದು ಅಭಿಪ್ರಾಯಪಟ್ಟರು.
ಸಂಗೀತ ನಿರ್ದೇಶಕ ಸಾಯಿಕಿರಣ್, ಸಂಕಲನಕಾರ ಮಹೇಶ್ ಉಪಸ್ಥಿತರಿದ್ದರು.
ಚಿತ್ರದಲ್ಲೊಂದು ಪಾತ್ರ ನಿರ್ವಹಿಸಿರುವ ರೇಡಿಯೋ ಮಿರ್ಚಿಯ ಆರ್ ಜೆ ಸುಧೇಶ್ ಕಾರ್ಯಕ್ರಮ ನಿರೂಪಿಸಿದರು.